ಅಕ್ಟೋಬರ್ 3ರಂದು ಪ್ರಧಾನ ಕವಿಗೋಷ್ಠಿ; ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರರಿಂದ ಚಾಲನೆ
ಮೈಸೂರು

ಅಕ್ಟೋಬರ್ 3ರಂದು ಪ್ರಧಾನ ಕವಿಗೋಷ್ಠಿ; ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರರಿಂದ ಚಾಲನೆ

September 4, 2022

ಮೈಸೂರು,ಸೆ.3(ಪಿಎಂ)- ದಸರಾ ಮಹೋತ್ಸವದ ಅಂಗವಾಗಿ ಈ ಬಾರಿಯ ದಸರಾ ಕವಿಗೋಷ್ಠಿ `ದಸರಾ ಕಾವ್ಯ ಸಂಭ್ರಮ’ ಶೀರ್ಷಿಕೆಯಡಿ ಸೆ.28ರಿಂದ ಅ.3ರವರೆಗೆ ನಡೆಯಲಿದ್ದು, ದಸರಾ ಕವಿಗೋಷ್ಠಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರೆ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅ.3ರಂದು ನಡೆಯುವ ಪ್ರಧಾನ ಕವಿಗೋಷ್ಠಿ ಉದ್ಘಾಟಿಸಲಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಸರಾ ಕವಿಗೋಷ್ಠಿ ಉಪಸಮಿತಿ ಉಪ ವಿಶೇಷಾಧಿಕಾರಿಯೂ ಆದ ಮೈಸೂರು ಮಹಾನಗರ ಪಾಲಿಕೆ ಉಪ ಆಯುಕ್ತ (ಕಂದಾಯ) ಡಾ.ಎಂ.ದಾಸೇ ಗೌಡ, ಸೆ.28ರಂದು ಕಲಾಮಂದಿರದಲ್ಲಿ ಬೆಳಗ್ಗೆ 10.30ಕ್ಕೆ ದಸರಾ ಕಾವ್ಯ ಸಂಭ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ಕವಿ ಡಾ.ದೊಡ್ಡರಂಗೇಗೌಡ ಪಾಲ್ಗೊ ಳ್ಳಲಿದ್ದಾರೆ ಎಂದು ತಿಳಿಸಿದರು. ಮಧ್ಯಾಹ್ನ 12ಕ್ಕೆ `ಹಾಸ್ಯ ಕವಿಗೋಷ್ಠಿ’ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಚಾಲನೆ ನೀಡಿಲಿದ್ದು, ಬಿ.ಆರ್.ಲಕ್ಷ್ಮಣರಾವ್, ದುಂಡಿರಾಜ್ ಹಾಗೂ ಈರಪ್ಪ ಕಂಬಳಿ ಸೇರಿದಂತೆ 20 ಮಂದಿ ಹಾಸ್ಯ ಕವಿಗಳು ಭಾಗವಹಿಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ನಡೆಯುವ `ಜನಪದ ಕಾವ್ಯ ಸಂಭ್ರಮ’ದಲ್ಲಿ ಜಾನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್, ಜಾನಪದ ಕಲಾವಿದ ಡಾ.ಮಳವಳ್ಳಿ ಮಹದೇವಸ್ವಾಮಿ ಮತ್ತು ಅವರ ತಂಡದವರಿಂದ ಕಾರ್ಯಕ್ರಮ ನಡೆಯಲಿವೆ ಎಂದರು.

ಯುವ ಕವಿಗೋಷ್ಠಿ: ಸೆ.30ರಂದು ಮೈಸೂರು ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ `ಯುವ ಕವಿಗೋಷ್ಠಿ’ ಆಯೋಜಿಸಲಾಗಿದೆ. ಇದರಲ್ಲಿ ಮುಖ್ಯ ಅತಿಥಿಗಳಾಗಿ ಡಾ.ದೊಡ್ಡರಂಗೇಗೌಡ ಪಾಲ್ಗೊಳ್ಳಲಿ ದ್ದಾರೆ. ಉದ್ಘಾಟಕರು ಹಾಗೂ ಅಧ್ಯಕ್ಷತೆ ವಹಿಸುವವರ ಸಂಬಂಧ ಚಿಂತನೆಯಲ್ಲಿದ್ದು, ಮುಂದೆ ತಿಳಿಸಲಾಗುವುದು. ನಾಡಿನಾದ್ಯಂತ 40 ಯುವ ಕವಿಗಳು ತಮ್ಮ ಕವಿತೆ ವಾಚಿಸಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಚಿಗುರು ಕವಿಗೋಷ್ಠಿ: ಅ.1ರಂದು ರಾಣಿ ಬಹದ್ದೂರ್ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ `ಚಿಗುರು ಕವಿಗೋಷ್ಠಿ’ ಹಮ್ಮಿಕೊಳ್ಳಲಾಗುವುದು. 40 ಮಂದಿ ಉದಯೋನ್ಮುಖ ಪ್ರತಿಭೆಗಳಿಗೆ ಇದರಲ್ಲಿ ಅವಕಾಶ ಕಲ್ಪಿಸಲಾಗುವುದು. ಯುವ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದವರಿಗೆ ಚಿಗುರು ಕವಿಗೋಷ್ಠಿಯಲ್ಲಿ ಅವಕಾಶ ಇರುವುದಿಲ್ಲ ಎಂದರಲ್ಲದೆ, ವಯೋಮಿತಿ ನಿಗದಿ ಮಾಡಿಲ್ಲ. ಒಟ್ಟಾರೆ ನಾಡಿನ ವಿದ್ಯಾರ್ಥಿಗಳು ಹಾಗೂ ಉದಯೋನ್ಮುಖ ಕವಿಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಧಾನ ಕವಿಗೋಷ್ಠಿ: ಅ.3ರಂದು ಜಗನ್ಮೋಹನ ಅರಮನೆ ಅಥವಾ ಮಾನಸ ಗಂಗೋತ್ರಿಯ ಸೆನೆಟ್ ಸಭಾಂಗಣದಲ್ಲಿ ಪ್ರಧಾನ ಕವಿಗೋಷ್ಠಿ ನಡೆಯಲಿದೆ. ಉದ್ಘಾಟನೆಯನ್ನು ಡಾ.ಚಂದ್ರಶೇಖರ ಕಂಬಾರ ಮಾಡಲಿದ್ದು, ಅಧ್ಯಕ್ಷತೆಯನ್ನು ಪ್ರಸಿದ್ಧ ಕವಿ ಡಾ.ಹೆಚ್.ಎಸ್.ಶಿವಪ್ರಕಾಶ್ ವಹಿಸಲಿದ್ದಾರೆ. ಇದು ಬಹುಭಾಷಾ ಕವಿಗೋಷ್ಠಿ ಆಗಿರುವುದು ವಿಶೇಷ. ಕನ್ನಡ ನಾಡಿನ ತುಳು, ಕೊಡವ, ಅರೆಭಾಷೆ, ಸಂಸ್ಕøತ, ಕೊಂಕಣಿ ಮೊದಲಾದ ಭಾಷೆಗಳ ಪ್ರಸಿದ್ಧ ಕವಿಗಳಿಗೆ ಆಹ್ವಾನ ನೀಡಲಾಗುವುದು. 40 ಮಂದಿ ಕವಿಗಳನ್ನು ಆಹ್ವಾನಿಸುವ ಸಂಬಂಧ ಪ್ರಕ್ರಿಯೆ ಪ್ರಗತಿಯಲ್ಲಿದೆ. ಎಲ್ಲಾ ನಾಲ್ಕು ಕಾರ್ಯಕ್ರಮಗಳಲ್ಲೂ ಕವಯತ್ರಿಯರಿಗೂ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ದಸರಾ ಕವಿಗೋಷ್ಠಿ ಉಪಸಮಿತಿಯ ಕಾರ್ಯಾಧ್ಯಕ್ಷ ಡಾ.ಎಂ.ಜಿ.ಮಂಜುನಾಥ್ ಗೋಷ್ಠಿಯಲ್ಲಿದ್ದರು.

Translate »