ಮೈಸೂರಲ್ಲೂ ಮಳೆ ಅವಾಂತರ ತಡೆಗೆ ಮುನ್ನೆಚ್ಚರಿಕಾ ಕ್ರಮ ಐತಿಹಾಸಿಕ ದಿವಾನ್ ಪೂರ್ಣಯ್ಯ ನಾಲೆ ಒತ್ತುವರಿ ತೆರವಿಗೆ ಜಿಲ್ಲಾಡಳಿತ ಕ್ರಮ
ಮೈಸೂರು

ಮೈಸೂರಲ್ಲೂ ಮಳೆ ಅವಾಂತರ ತಡೆಗೆ ಮುನ್ನೆಚ್ಚರಿಕಾ ಕ್ರಮ ಐತಿಹಾಸಿಕ ದಿವಾನ್ ಪೂರ್ಣಯ್ಯ ನಾಲೆ ಒತ್ತುವರಿ ತೆರವಿಗೆ ಜಿಲ್ಲಾಡಳಿತ ಕ್ರಮ

September 4, 2022

ಮೈಸೂರು, ಸೆ.3(ಆರ್‍ಕೆ)-ಮಳೆ ನೀರು ಸರಾಗ ವಾಗಿ ಹರಿದು ಹೋಗಲು ಅನುವಾಗುವಂತೆ ಐತಿ ಹಾಸಿಕ ದಿವಾನ್ ಪೂರ್ಣಯ್ಯ ನಾಲೆ ಒತ್ತುವರಿ ತೆರವಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಈ ಸಂಬಂಧ ತಿಳಿಸಿದ್ದಾರೆ. ಮೈಸೂರು ಗ್ರಾಹಕರ ಪರಿಷತ್ (ಎಂಜಿಪಿ) ಸದಸ್ಯರು ಜಿಲ್ಲಾಧಿಕಾರಿಗಳನ್ನು ಇಂದು ಅವರ ಕಚೇರಿಯಲ್ಲಿ ಭೇಟಿ ಮಾಡಿ, ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ನಂತರ ಮಾತನಾಡಿದ ಡಿಸಿ ಅವರು, ಬೋಗಾದಿ ಮತ್ತು ಸುತ್ತಮುತ್ತಲಿನ ಕೆರೆ ಗಳಿಂದ ಹೆಚ್ಚುವರಿ ಮಳೆ ನೀರು ಹರಿಯಲು ಹಾಗೂ ಕುಕ್ಕರಹಳ್ಳಿ ಕೆರೆಗೆ ಶುದ್ಧ ನೀರು ತಲುಪಲು ಅನು ವಾಗುವಂತೆ ನಿರ್ಮಿಸಿರುವ ಪೂರ್ಣಯ್ಯ ಕಾಲುವೆ (ರಾಜಕಾಲುವೆ) ಒತ್ತುವರಿಯಾಗಿರುವುದರಿಂದ, ಭಾರೀ ಮಳೆ ಬಂದಾಗ ಕೆರೆಗಳು ತುಂಬಿ, ಕೋಡಿ ಬಿದ್ದು, ನೀರು ಸರಾಗವಾಗಿ ಹರಿದು ಹೋಗಲು ಅಡೆತಡೆ ಉಂಟಾಗಿರುವುದರಿಂದ ಸುತ್ತಲಿನ ವಸತಿ ಬಡಾವಣೆಗಳು ಜಲಾವೃತಗೊಳ್ಳುತ್ತಿವೆ.

ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಹುಯಿ ಲಾಳು ಬಳಿಯ ಎರಡು ಕೆರೆಗಳು ಕೋಡಿ ಬಿದ್ದು ಕೆ. ಹೆಮ್ಮನಹಳ್ಳಿ ಬಳಿಯ ವಸತಿ ಬಡಾವಣೆ ಜಲಾ ವೃತಗೊಂಡಿತ್ತು. ಇಲ್ಲಿರುವ ಮೇಜರ್ ಜನರಲ್ (ನಿವೃತ್ತ) ಸಿ.ಕೆ.ಕರುಂಬಯ್ಯ ಅವರ ತೋಟದ ಮನೆ ಸೇರಿದಂತೆ ಸುತ್ತಲಿನ ಪ್ರದೇಶವೂ ಜಲಮಯವಾಗಿ ತೀವ್ರ ತೊಂದರೆ ಉಂಟಾಗಿತ್ತು ಎಂಬುದನ್ನು ಎಂಜಿಪಿ ಸದಸ್ಯರು ಇದೇ ವೇಳೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಡಾ.ಬಗಾದಿ ಗೌತಮ್, ಅಲ್ಲಿಂದಲೇ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ, ಗ್ರಾಮ ಪಂಚಾಯ್ತಿ ವತಿಯಿಂದ ತಕ್ಷಣವೇ ಹುಯಿಲಾಳು ಕೆರೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಬೇಕು ಹಾಗೂ ನರೇಗಾ ಯೋಜನೆಯಡಿ ಖಾಯಂ ಕಾಮಗಾರಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುಷ್ಠಾನಗೊಳಿಸುವಂತೆ ಸೂಚಿಸಿದರು. ಬೋಗಾದಿ, ಕೆ.ಹೆಮ್ಮನಹಳ್ಳಿ, ಆನಂದ ನಗರ, ಪರಸಯ್ಯನಹುಂಡಿ ಬಳಿಯ ಅರ್ಪಿತಾ ನಗರ, ಹುಯಿಲಾಳು, ಮಾಣಿಕ್ಯಪುರ, ಸಾಹುಕಾರ್ ಹುಂಡಿ, ಮೂಗನಹುಂಡಿ ಸೇರಿದಂತೆ ಸುತ್ತಲಿನ ಜನವಸತಿ ಪ್ರದೇಶ, ತೋಟಗಳು ಸೇರಿದಂತೆ ಇನ್ನಿ ತರೆ ಕೃಷಿ ಭೂಮಿಯಲ್ಲಿ ನೀರು ತುಂಬಿಕೊಳ್ಳುವು ದನ್ನು ತಡೆಯಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಎಂಜಿಎನ್‍ಆರ್‍ಇಜಿ) ಯೋಜನೆಯಡಿ ಕಾಮಗಾರಿ ಕೈಗೊಳ್ಳುವಂತೆಯೂ ಅವರು ಜಿಲ್ಲಾ ಪಂಚಾಯ್ತಿ ಸಿಇಓ ತಿಳಿಸಿದರು. ದಿವಾನ್ ಪೂರ್ಣಯ್ಯ ನಾಲೆ ಒತ್ತುವರಿ ತೆರವಿಗೆ ಉನ್ನತ ಮಟ್ಟದ ಸಮಿತಿ ರಚಿಸಬೇಕೆಂದು ಕೋರಿಕೊಂಡಿರುವ ಎಂಜಿಪಿ ಸದಸ್ಯರು, ಪ್ರವಾಹ ಹಾನಿ ತಪ್ಪಿಸುವಂತೆ ಮನವಿ ಮಾಡಿದರು. ಮೂಲ ಪೂರ್ಣಯ್ಯ ನಾಲೆ ಹಾದು ಹೋಗಿರುವ ಬಗ್ಗೆ ಮೂಲ ನಕ್ಷೆ ಹಾಜರುಪಡಿಸಿ ವಿವರಿಸಿದ ಅವರು, ಪ್ರಸ್ತುತ ಆ ಜಾಗ ಒತ್ತುವರಿಯಾಗಿ ಅದರ ಮೇಲೆ ಕಟ್ಟಡ ನಿರ್ಮಿಸಿರುವುದರಿಂದ ಮಳೆ ನೀರು ಹರಿದು ಹೋಗಲು ಅಡ್ಡಿಯಾಗಿ ವಸತಿ ಬಡಾವಣೆಗಳು ಜಲಾವೃತಗೊಳ್ಳುತ್ತಿವೆ ಎಂಬುದನ್ನು ಪುರಾವೆ ಸಹಿತ ಅವರು ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ದಿವಾನ್ ಪೂರ್ಣಯ್ಯ ನಾಲೆ ಒಟ್ಟು 22 ಕಿ.ಮೀ. ಇತ್ತು. ಈಗ ಕೇವಲ 4 ಕಿ.ಮೀ. ಮಾತ್ರ ಕಾಣಸಿಗುತ್ತದೆ. ಈ ನಾಲೆ ಜಾಗವನ್ನು ಒತ್ತುವರಿ ಮಾಡಿ ವಸತಿ ಕಟ್ಟಡ, ವಾಣಿಜ್ಯ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಅದರಿಂದ ಮಳೆಗಾಲದಲ್ಲಿ ಬೆಳವಾಡಿ, ಕೆ. ಹೆಮ್ಮನಹಳ್ಳಿ, ಸಾಹುಕಾರ್‍ಹುಂಡಿ, ಹುಯಿಲಾಳು ಸೇರಿದಂತೆ ಇತರ ಗ್ರಾಮಗಳ ಕೆರೆಗಳು ಉಕ್ಕಿ ಹರಿದು, ಸುತ್ತಲಿನ ವಸತಿ ಬಡಾವಣೆಗಳು ಮುಳುಗಡೆಯಾಗುತ್ತಿವೆ ಎಂದು ಎಂಜಿಪಿ ಸದಸ್ಯರು, ಜಿಲ್ಲಾಧಿಕಾರಿಗಳಿಗೆ ವಸ್ತುಸ್ಥಿತಿ ವಿವರಿಸಿದರು. ಆ ವೇಳೆ ಪ್ರತಿಕ್ರಿಯಿಸಿದ ಡಿಸಿ ಡಾ. ಬಗಾದಿ ಗೌತಮ್, ಕೆರೆಗಳ ಸಂರಕ್ಷಣೆಗಾಗಿ ಜಿಲ್ಲಾ ಮಟ್ಟದಲ್ಲಿ ಸಮಿತಿ ಅಸ್ತಿತ್ವದಲ್ಲಿದೆ. ಕುಕ್ಕರಹಳ್ಳಿ ಕೆರೆ ಸೇರಿದಂತೆ ಎಲ್ಲಾ ಕೆರೆಗಳ ಹೂಳೆತ್ತುವುದು, ಸಂರಕ್ಷಣೆಯ ಅಧಿಕಾರ ಸಮಿತಿಗೆ ನೀಡಿರುವುದರಿಂದ ಅಗತ್ಯ ಕ್ರಮ ವಹಿಸುವುದಾಗಿ ಭರವಸೆ ನೀಡಿದರು. ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ನಿಯೋಗದಲ್ಲಿ ಎಂಜಿಪಿಯ ಶೋಬನಾ ಸಾಂಬಶಿವನ್, ಅಶ್ವಿನಿ ರಂಜನ್, ಎಸ್. ಶೈಲಜೇಶ್, ಮೇಜರ್ ಜನರಲ್ (ನಿವೃತ್ತ) ಎಸ್.ಜಿ. ಒಂಬತ್ಕೆರೆ, ಜಲಸಂರಕ್ಷಕ ಯು.ಎನ್. ರವಿಕುಮಾರ್ ಹಾಗೂ ಮೇಜರ್ ಜನರಲ್ (ನಿವೃತ್ತ) ಸಿ.ಕೆ. ಕರುಂಬಯ್ಯ ಅವರ ಪತ್ನಿ ದೇಚು ಕರುಂಬಯ್ಯ ಉಪಸ್ಥಿತರಿದ್ದರು.

Translate »