ಲಯ ತಪ್ಪುತ್ತಿರುವ ಸಂಗೀತ ವಿವಿ ವಿದ್ಯಾರ್ಥಿಗಳ ಶಿಕ್ಷಣ ವಿಧಾನ ಯಾರಿಗೆ ಹೇಳಿದರೂ ಪಾಪ, ವಿದ್ಯಾರ್ಥಿಗಳ ಸಮಸ್ಯೆಗಿಲ್ಲ ಪರಿಹಾರ!
ಮೈಸೂರು

ಲಯ ತಪ್ಪುತ್ತಿರುವ ಸಂಗೀತ ವಿವಿ ವಿದ್ಯಾರ್ಥಿಗಳ ಶಿಕ್ಷಣ ವಿಧಾನ ಯಾರಿಗೆ ಹೇಳಿದರೂ ಪಾಪ, ವಿದ್ಯಾರ್ಥಿಗಳ ಸಮಸ್ಯೆಗಿಲ್ಲ ಪರಿಹಾರ!

December 5, 2018

ಮೈಸೂರು:  ಬೆಳಿಗ್ಗೆಯಿಂದ ಸಂಜೆವರೆಗೆ ಕಾದರೂ 1 ಕ್ಲಾಸ್ ನಡೆಯುವುದು ಡೌಟು. ಪರೀಕ್ಷಾ ದಿನಾಂಕ ನಿಗದಿಯಾದ ಮೇಲೂ ಸಿಲಬಸ್ ಚೇಂಜ್ ಮಾಡುತ್ತಿದ್ದಾರೆ. ವಿವಿ ಆಡಳಿತ ಮಂಡಳಿ ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ… ಇವು ಸಂಗೀತ ವಿವಿಯ ವಿದ್ಯಾರ್ಥಿಗಳ ಅಳಲು.

ಈ ವೇಳೆ ವಿದ್ಯಾರ್ಥಿಯೋರ್ವ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ವಿಶ್ವವಿದ್ಯಾನಿಲಯದ ಹಳೇ ಕಟ್ಟಡದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿದೆ ಎಂದು ವಿದ್ಯಾರ್ಥಿಗಳು ನಿರಂತರ ಪ್ರತಿಭಟಿಸಿದೆವು. ಈ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳ ಹಿಂದಷ್ಟೆ ಉನ್ನತ ಶಿಕ್ಷಣ ಸಚಿವರ ನಿರ್ದೇಶನದಂತೆ ಮಂಡಕಳ್ಳಿಯಲ್ಲಿರುವ ಮುಕ್ತ ವಿವಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ವಿವಿಯ ಶೈಕ್ಷಣಿಕ ಚಟುವಟಿಕೆಗಳು ಅರಂಭಗೊಂಡಿ ದ್ದವು. ಆದರೆ, ಆಲ್ಲಿಯೂ ಕುಡಿಯಲು ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ವಿವಿಯ ಹಂಗಾಮಿ ಕುಲಪತಿಗಳು ನಿರ್ಲಕ್ಷ್ಯ ವಹಿಸಿದರು. ಈ ಕುರಿತು ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಆದರೆ, ಡಿ.1ರಿಂದ ಮತ್ತೆ ಲಕ್ಷ್ಮೀಪುರಂನ ಹಳೇ ಕಟ್ಟಡಕ್ಕೆ ಸ್ಥಳಾಂತರಿಸಿದ್ದಾರೆ. ಇಲ್ಲಿಯೂ ಕುಡಿಯಲು ನೀರು ಸೇರಿದಂತೆ ಮತ್ತಿತರೆ ಸೌಲಭ್ಯಗಳಿಲ್ಲ. ಈ ಕುರಿತು ಹಂಗಾಮಿ ಕುಲಪತಿ ಪ್ರೊ.ರಾಜೇಶ್ ಅವರನ್ನು ಪ್ರಶ್ನಿಸಿದರೆ ಸರಿಯಾದ ಉತ್ತರ ನೀಡುತ್ತಿಲ್ಲ ಎಂದು ಆರೋಪಿಸಿದರು.

ಹಳೇ ಕಟ್ಟಡದಲ್ಲಿ ಕೇವಲ 8 ಕೊಠಡಿಗಳಿದ್ದು, ಅದರಲ್ಲಿ 2 ಕೊಠಡಿಗಳನ್ನು ಹಾಸ್ಟೆಲ್‍ಗೆ ಬಿಟ್ಟು ಕೊಟ್ಟಿದ್ದಾರೆ. ಇನ್ನು 6 ಕೊಠಡಿಗಳಿದ್ದು, ಎಂಎ ತರಗತಿಗಳು ನಡೆಯುವಾಗ ಬಿಎ ವಿದ್ಯಾರ್ಥಿಗಳು ಹೊರಾಂಗಣದಲ್ಲಿ ನಿಂತು ಕಾಯುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಒಂದೊಂದು ದಿನ ಬೆಳಿಗ್ಗೆಯಿಂದ ಸಂಜೆವರೆಗೂ ಕಾದರೂ 1 ಕ್ಲಾಸ್ ನಡೆಯು ವುದು ಡೌಟು. ನಾವೇನು ಮಂಡಕಳ್ಳಿಯಲ್ಲಿರುವ ಮುಕ್ತ ವಿವಿ ಕಟ್ಟಡಕ್ಕೆ ಸ್ಥಳಾಂತರಿಸಿ ಎಂದು ಹೇಳುತ್ತಿಲ್ಲ. ಬದಲಾಗಿ ಹಳೇ ಕಟ್ಟಡದಲ್ಲೇ ಮತ್ತಷ್ಟು ಕೊಠಡಿಗಳನ್ನು ನಿರ್ಮಿಸಿದರೆ ಅನುಕೂಲವಾಗುತ್ತದೆ ಎಂದರು. ಈ ಕುರಿತು ಸಿಂಡಿಕೇಟ್ ಸದಸ್ಯರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ನಂತರದಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರನ್ನು ಭೇಟಿ ಮಾಡಿ ಈ ಕುರಿತು ಪ್ರಸ್ತಾಪಿಸಿದೆವು. ಆಗ ಸಚಿವರು ಇನ್ನು 15 ದಿನಗಳಲ್ಲಿ ನೂತನ ಕುಲಪತಿಗಳನ್ನು ನೇಮಕ ಮಾಡುತ್ತಿದ್ದು, ಅಲ್ಲಿವರೆಗೆ ಸುಮ್ಮನಿರುವಂತೆ ಹೇಳಿದ್ದಾರೆ. ಪರೀಕ್ಷಾ ದಿನಾಂಕ ಪ್ರಕಟಿಸಿದ್ದು, ಡಿ.10ರಿಂದ ಪರೀಕ್ಷೆಗಳು ನಡೆಯಲಿವೆ. ಆದರೆ, ಪರೀಕ್ಷಾ ದಿನಾಂಕ ನಿಗದಿಯಾದ ಮೇಲೂ ಸಿಲಬಸ್ ಚೇಂಜ್ ಮಾಡಲು ಹೊರಟಿದ್ದಾರೆ. ಒಟ್ಟಾರೆ ವಿವಿ ಆಡಳಿತ ಮಂಡಳಿ ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಅಳಲು ತೋಡಿಕೊಂಡರು.

Translate »