ಮೈಸೂರು: ಸವಿತಾ ಸಮಾಜದ ಸದಸ್ಯರು ಎನ್‍ಜಿಒ ಸಂಸ್ಥೆ ಗಳನ್ನು ಸ್ಥಾಪಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೌಲಭ್ಯ ಪಡೆದುಕೊಳ್ಳಿ ಎಂದು ಮಾಜಿ ಲೋಕಸಭಾ ಸದಸ್ಯ ಸಿ.ಹೆಚ್. ವಿಜಯಶಂಕರ್ ಸಲಹೆ ನೀಡಿದರು.
ನಗರದ ಜಗನ್ಮೋಹನ ಅರಮನೆಯಲ್ಲಿ ನಡೆದ ಸವಿತಾ ಕೇಶಾಲಂಕಾರಿಗಳ ಸಂಘದ 25ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಸೌಲಭ್ಯ ಗಳು ಎನ್‍ಜಿಒ ಸಂಸ್ಥೆಗಳ ಮೂಲಕ ದೊರೆಯಲಿದ್ದು, ಸವಿತಾ ಸಮಾಜದವರು ಎನ್‍ಜಿಒ ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ಸರ್ಕಾರಿ ಸೌಲಭ್ಯಗಳನ್ನು ಪಡೆದು ಆರ್ಥಿಕ ಸ್ವಾವಲಂಬಿಗಳಾಗಿ ಎಂದು ತಿಳಿಸಿದರು.
ಸವಿತಾ ಸಮಾಜದಲ್ಲಿ ಆರ್ಥಿಕ ಬಡತನ ವಿದೆ. ಆದರೆ ಪ್ರೀತಿ, ನಂಬಿಕೆ, ವಿಶ್ವಾಸ, ಮಾನವೀ ಯತೆ ಮೌಲ್ಯಗಳಿಗೆ ಬಡತನವಿಲ್ಲ. ಎಲ್ಲರನ್ನೂ ಪ್ರೀತಿಸುವ ಎಲ್ಲರೊಂದಿಗೂ ಬಾಳುವ ಸಮಾಜ ಇದಾಗಿದೆ. ಈ ಸಮಾಜಕ್ಕೆ ಅಪಾರ ಗೌರವ ವಿದ್ದು, ಅದನ್ನು ಕಾಪಾಡಿಕೊಂಡು ಬರಬೇಕಾ ದರೆ ಸಂಘಟನೆ ಅಗತ್ಯ. ಆರ್ಥಿಕ ಸಮಾನತೆ, ಸಾಮಾಜಿಕ ಸಂಘಟನೆ ಹಾಗೂ ಶೈಕ್ಷಣಿಕ ವಾಗಿ ಮುಂದುವರಿಯಬೇಕು ಎಂದರು.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಹಿಂದುಳಿದ ಸಮಾಜಗಳು ಸಂಘಟನೆಯಿಂದ ಮಾತ್ರ ಮೇಲೆ ಬರಲು ಸಾಧ್ಯ. ಇಲ್ಲದಿದ್ದರೆ ನಾಶವಾಗುತ್ತವೆ. ಪ್ರಜಾ ಪ್ರಭುತ್ವದಲ್ಲಿ ಸಂಘಟಿತರಾಗಿ ತೋರಿಸಿದರೆ ಎಲ್ಲಾ ಮಂತ್ರಿಗಳು ನಿಮ್ಮ ಬಳಿಗೆ ಬರು ತ್ತಾರೆ. ಸಂಘಟಿತರಾಗದಿದ್ದರೆ ಬಹಳ ಕಷ್ಟ ಅನುಭವಿಸಬೇಕಾಗುತ್ತದೆ ಎಂದರು.
ಸರ್ಕಾರ ಹಡಪದ ಅಪ್ಪಣ್ಣ ಜಯಂತಿ ಆಚರಣೆಗೆ ತಂದಿರುವುದು ಎಲ್ಲರೂ ಸಂಘ ಟಿತರಾಗಲಿ, ಒಂದಾಗಿ ಬಾಳಲಿ ಎಂಬ ಆಶಯ ದಿಂದ. ನೀವೇ ಸಂಘಟಿತರಾಗದಿದ್ದಲ್ಲಿ ಸರ್ಕಾರದ ಯೋಜನೆಗಳು ವ್ಯರ್ಥವಾಗು ತ್ತವೆ. ನಿಮ್ಮ ಮಕ್ಕಳನ್ನು ಅಂಗಡಿಗಳಿಗೆ ಕಳಿಸುವ ಬದಲು ವಿದ್ಯಾಭ್ಯಾಸ ನೀಡಿ. ಜತೆಗೆ ಹೆಣ್ಣು ಮಕ್ಕಳಿಗೂ ಉನ್ನತ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಚಿಂತಿಸಬೇಕು. ಹಾಗೆಯೇ ನೀವು ಬೆಳಕಿಗೆ ಬರಬೇಕಾದರೆ ಮಾಧ್ಯಮಗಳೊಂದಿಗೂ ಬೆರೆಯ ಬೇಕು ಎಂದು ಕಿವಿಮಾತು ಹೇಳಿದರು.
ಶಾಸಕ ಎಲ್.ನಾಗೇಂದ್ರ ಮಾತನಾಡಿ, ತುಳಿತಕ್ಕೆ ಒಳಗಾದ ಸಮಾಜ ಸಂಘಟಿತ ರಾಗದಿದ್ದರೆ ಮುಂದೆ ಬರಲು ಸಾಧ್ಯವಿಲ್ಲ. ಸವಿತಾ ಸಮಾಜಕ್ಕೆ ಒಳಿತಾಗಬೇಕಾದರೆ ಒಗ್ಗಟ್ಟಾಗಬೇಕು. ರಾಜ್ಯ ಸರ್ಕಾರ ಅಲ್ಪ ಸಂಖ್ಯಾತರಿಗೆ ಕೋಟಿಗಟ್ಟಲೇ ಅನುದಾನ ನೀಡುತ್ತಿದೆ. ಆದರೆ, ಸವಿತಾ ಸಮಾಜಕ್ಕೆ ಯಾವುದೇ ಅನುದಾನವನ್ನು ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮೇಯರ್ ಪುಷ್ಪಲತಾ ಜಗನ್ನಾಥ್, ಸವಿತಾ ಜನಾಂಗದ ಶ್ರೀಕರ ಬಸವಾನಂದ ಸ್ವಾಮೀಜಿ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಎನ್.ಆರ್. ನಾಗೇಶ್, ನಗರಾಧ್ಯಕ್ಷ ರಾಜ ಕುಮಾರ್, ಸವಿತಾ ಕೇಶಾಲಂಕಾರಿಗಳ ಸಂಘದ ಗೌರವಾಧ್ಯಕ್ಷ ಎಂ. ರಾಜಣ್ಣ, ಅಧ್ಯಕ್ಷ ವಿ. ಮಂಜುನಾಥ, ಪದಾಧಿಕಾರಿಗಳಾದ ರಾಮಪ್ರಕಾಶ್, ಎಂ.ರಮೇಶ್, ಸಿ.ಶಂಕರ್, ಎಂ. ಮಂಜುನಾಥ್, ಎನ್.ವೆಂಕಟೇಶ್, ಡಿ.ಮಹೇಂದ್ರ, ಎಂ.ರಮೇಶ್, ಎ. ಶ್ರೀಧರ್, ಎನ್. ನಾರಾಯಣ್, ಆರ್. ರಮೇಶ್ ಕುಮಾರ್, ನಾಗೇಶ್, ಜಗನ್ನಾಥ್, ಆರ್.ಮಂಜುನಾಥ್, ವಿ.ಮುರಳೀಧರ್, ಸಂತೋಷ್, ಶಶಿಧರ್, ಮಹೇಶ್, ಮೈಕ್ ಪ್ರಕಾಶ್ ಉಪಸ್ಥಿತರಿದ್ದರು.