ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಸಂಚಾರ ದಸರಾಗೆ ಮುಕ್ತ
ಮೈಸೂರು

ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಸಂಚಾರ ದಸರಾಗೆ ಮುಕ್ತ

January 18, 2022

ಬೆಂಗಳೂರು,ಜ.17(ಕೆಎಂಶಿ)-ವಿಶ್ವದರ್ಜೆಯ ಗುಣ ಮಟ್ಟದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಮುಂಬ ರುವ ದಸರೆಯ ವೇಳೆಗೆ ಸಂಚಾರಕ್ಕೆ ಮುಕ್ತವಾಗಲಿದೆ.

ಇತ್ತೀಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದಸರಾಗೂ ಮುನ್ನವೇ ರಾಷ್ಟ್ರಕ್ಕೆ ಸಮರ್ಪಣೆ ಮಾಡಲು ತೀರ್ಮಾನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಂದ ರಸ್ತೆಯನ್ನು ಉದ್ಘಾಟಿಸಲು ತೀರ್ಮಾನಿಸಿರುವುದಲ್ಲದೆ, ಶೀಘ್ರವೇ ಪ್ರಧಾನಿಯವರಿಗೆ ಆಹ್ವಾನ ನೀಡಲು ನಿರ್ಧರಿಸಲಾಗಿದೆ. 117 ಕಿಲೋಮೀಟರ್ ಉದ್ದದ ರಸ್ತೆ ಕಾಮಗಾರಿ ಈ ವರ್ಷದ ಅಂತ್ಯದ ವೇಳೆಗೆ ಮುಕ್ತಾಯವಾಗುವ ನಿರೀಕ್ಷೆ ಇತ್ತು. ಆದರೆ ದಸರಾಗೆ ರಸ್ತೆಯನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಲು ತ್ವರಿತಗತಿಯಲ್ಲಿ ಕಾಮಗಾರಿ ಪೂರೈಸುವಂತೆ ಸಂಬಂಧ ಪಟ್ಟ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಆದೇಶ ಮಾಡಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಕೆಲ ಕಾಲ ಯೋಜನೆಯ ಕಾಮಗಾರಿ ವಿಳಂಬವಾದರೂ ರಾಜ್ಯ ಸರ್ಕಾರದ ಒತ್ತಡದ ಹಿನ್ನೆಲೆಯಲ್ಲಿ ಕಾಮಗಾರಿ ಕಾರ್ಯ ಚುರುಕು ಗತಿಯಿಂದ ನಡೆಯುತ್ತಿದೆ. ಬೆಂಗಳೂರು-ಮೈಸೂರು ನಡು ವಣ ಬಹುತೇಕ ನಗರಗಳನ್ನು ಪ್ರವೇಶಿಸದೆ ಸಂಚರಿಸಲು ಈ ರಸ್ತೆಯಿಂದ ಸಾಧ್ಯವಾಗಲಿದ್ದು ಒಂದೂವರೆ ಗಂಟೆಯಲ್ಲಿ ಉಭಯ ನಗರಗಳನ್ನು ಸಂಪರ್ಕಿಸಬಹುದು. ಬೆಂಗಳೂರಿನಿಂದ ಪ್ರಯಾಣಿಸುವವರು ಬಿಡದಿ, ರಾಮನಗರ, ಚನ್ನಪಟ್ಟಣಗಳನ್ನು ಪ್ರವೇಶಿಸದೆ, ಮದ್ದೂರು, ಮಂಡ್ಯ ನಗರಗಳನ್ನು ಬೈಪಾಸ್ ಹಾಗೂ ಮೇಲ್ಸೇತುವೆ ಮೂಲಕ ಹಾದು ಹೋಗಲಿದೆ. ಒಂದೂವರೆ ಗಂಟೆಯಲ್ಲಿ ಉಭಯ ನಗರಗಳನ್ನು ಸಂಪರ್ಕಿಸಲು ಸಾಧ್ಯವಾಗುವ ಈ ದಶಪಥ ಹೆದ್ದಾರಿಯಲ್ಲಿ ನಿರ್ದಿಷ್ಟ ಪ್ರಮಾಣದ ಆರ್ಥಿಕ ಚಟುವಟಿಕೆಗಳು ಮಾತ್ರ ಸಾಧ್ಯವಾಗಲಿದೆ.

ಎರಡು ಹಂತದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ಬಹುತೇಕ 70 ರಷ್ಟು ಕಾಮಗಾರಿ ಮುಗಿದಿದೆ. ಅದರಲ್ಲೂ ಬೈಪಾಸ್ ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಮೇಲ್ಸೇತುವೆ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ.

ಉಳಿದಿರುವ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಆದೇಶ ಮಾಡಿದ್ದಾರೆ. ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಮನಮೋಹನ್‍ಸಿಂಗ್ ಸರ್ಕಾರ ಅನುಮತಿ ನೀಡಿತ್ತು. ನಂತರ ಬಂದ ಪ್ರಧಾನಿ ಮೋದಿ ಸರ್ಕಾರ ಇದನ್ನು ವಿಶ್ವ ದರ್ಜೆಮಟ್ಟಕ್ಕೆ ಹೆಚ್ಚಿಸಲು ಹಾಗೂ 24 ತಿಂಗಳೊಳಗೆ ಪೂರ್ಣಗೊಳಿಸುವ ಗಡುವು ನೀಡಿ, ಉತ್ತರ ಭಾರತದ ಮೂಲದ ಗುತ್ತಿಗೆದಾರರಿಗೆ ಕಾಮಗಾರಿ ನೀಡಲಾಗಿತ್ತು. ಎಷ್ಟೇ ಅಡೆತಡೆಗಳು ಬಂದರೂ, ಗುತ್ತಿಗೆದಾರರು ಕಾಮಗಾರಿಯನ್ನು ನಿರ್ಧಿಷ್ಟ ಸಮಯದಲ್ಲಿ ಪೂರ್ಣ ಗೊಳಿಸಲು ಮುಂದಾಗಿದ್ದಾರೆ. ಇದಕ್ಕೆ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಒತ್ತಡವೂ ಇದೆ. ಯೋಜನೆಯ ಕಾಮಗಾರಿಗೆ ಶುರುವಿನಲ್ಲಿ ಭೂ ಸ್ವಾಧೀನ ಕಾರ್ಯ ತೊಡಕಾಗಿ ಪರಿಣಮಿಸಿತ್ತಲ್ಲದೆ ಇದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿತ್ತು

Translate »