ಸದ್ಯಕ್ಕೆ ಮೈಸೂರು ಕೊರೊನಾ ಮುಕ್ತ
ಮೈಸೂರು

ಸದ್ಯಕ್ಕೆ ಮೈಸೂರು ಕೊರೊನಾ ಮುಕ್ತ

May 16, 2020

ಮೈಸೂರು,ಮೇ 15-ಮೈಸೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಕೊರೊನಾ ಸೋಂಕಿತರು ಶುಕ್ರವಾರ ಸಂಜೆ ಗುಣ ಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಈ ಮೂಲಕ ಮೈಸೂರು ಜಿಲ್ಲೆ ಕೊರೊನಾ ಮುಕ್ತವಾಗಿದೆ. ರಾಜ್ಯದ ಕೊರೊನಾ ಸೋಂಕಿತ ರಲ್ಲಿ 2ನೇ ಸ್ಥಾನ ಹಾಗೂ ಸಕ್ರಿಯ ಸೋಂಕಿತ ರಲ್ಲಿ ಮೊದಲನೇ ಸ್ಥಾನದಲ್ಲಿದ್ದ ಮೈಸೂರಿನಲ್ಲಿ ಹೊಸ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಇಳಿಮುಖವಾಗಿದ್ದಲ್ಲದೇ ಸೋಂಕಿತರು ಗುಣಮುಖ ರಾಗುತ್ತಾ ಹಂತ ಹಂತವಾಗಿ ಕೊರೊನಾ ಮಹಾ ಮಾರಿಯ ಹಿಡಿತ ಸಡಿಲವಾಗುತ್ತಾ ಹೋಯಿತು. ಬರೋಬ್ಬರಿ 90 ಕೊರೊನಾ ಪ್ರಕರಣಗಳು ಮೈಸೂರಲ್ಲಿ ದಾಖಲಾಗಿತ್ತಾದರೂ, ಕೇವಲ 56 ದಿನಗಳಲ್ಲಿ ಎಲ್ಲರೂ ಗುಣಮುಖರಾಗಿ ಇದೀಗ ಮೈಸೂರು ಕೊರೊನಾ ಮುಕ್ತ ಜಿಲ್ಲೆಯಾಗಿ ಹೊರಹೊಮ್ಮಿದೆ.

ಏ.29ರಂದು 90ನೇ ಸೋಂಕಿತ ಪತ್ತೆಯಾದ ನಂತರ ಕಳೆದ 17 ದಿನಗಳಿಂದ ಯಾವುದೇ ಪ್ರಕರಣ ಮೈಸೂರಿನಲ್ಲಿ ಪತ್ತೆಯಾಗಿಲ್ಲ ಎಂಬುದು ಗಮನಾರ್ಹ. ದುಬೈನಿಂದ ಮೈಸೂರಿಗೆ ಬಂದಿದ್ದ ವ್ಯಕ್ತಿಯಲ್ಲಿ ಕಳೆದ ಮಾ.21ರಂದು ಸೋಂಕು ದೃಢಪಡುವ ಮೂಲಕ ಮೈಸೂರಲ್ಲಿ ಕೊರೊನಾ ಖಾತೆ ಆರಂಭವಾಗಿತ್ತು. ಅದಾದ ನಂತರ ವಿದೇಶದಿಂದ ಬಂದ ಕೇರಳ ವ್ಯಕ್ತಿಯೋರ್ವನಿಗೆ ಮೈಸೂರಲ್ಲಿ ಕೊರೊನಾ ಪತ್ತೆಯಾಗಿ ಸೋಂಕಿತರ ಸಂಖ್ಯೆ ಎರಡಕ್ಕೇರಿತ್ತು. ನಂತರ ಕೆಲವೇ ದಿನಗಳಲ್ಲಿ ಮೈಸೂರಿನ ಸರ್ದಾರ್ ವಲ್ಲಭಬಾಯ್ ಪಟೇಲ್ ನಗರ 2ನೇ ಹಂತದಲ್ಲಿ ವಾಸವಿದ್ದ ನಂಜನಗೂಡಿನ ಜುಬಿಲಂಟ್ ಕಾರ್ಖಾನೆ ನೌಕರನಿಗೆ ಸೋಂಕು ಕಾಣಿಸಿಕೊಂಡಾಗ ಸಹಜವಾಗಿಯೇ ಜಿಲ್ಲೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಈತನಿಗೆ ಟ್ರಾವಲ್ ಹಿಸ್ಟರಿಯೇ ಇಲ್ಲದೇ ಇದ್ದದ್ದು ಮತ್ತಷ್ಟು ಚಿಂತೆಗೀಡು ಮಾಡಿತ್ತು.

ತಕ್ಷಣವೇ ಕಾರ್ಯಪ್ರವೃತ್ತರಾದ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಮತ್ತು ಜಿಲ್ಲಾ ಎಸ್ಪಿ ರಿಷ್ಯಂತ್ ಅವರು ಆರೋಗ್ಯ ಇಲಾಖೆಯ ತಂಡದೊಂದಿಗೆ ಜುಬಿಲಂಟ್ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 1300 ನೌಕರರನ್ನು ಹೋಂ ಕ್ವಾರಂಟೈನ್ ಮಾಡಿ ಎಲ್ಲರ ಗಂಟಲ ದ್ರವವನ್ನು ಪರೀಕ್ಷೆಗಾಗಿ ವಿಧಿ-ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

ಜುಬಿಲಂಟ್ ಕಾರ್ಖಾನೆ ನೌಕರನಿಗೆ ಸೋಂಕು ಹ್ಯಾಗೆ ತಗುಲಿತು ಎಂಬುದು ಈವರೆಗೆ ಪತ್ತೆಯಾಗಲಿಲ್ಲ. ಆದರೆ ಈತನಿಂದ ಮೈಸೂರು ಜಿಲ್ಲೆಯಲ್ಲಿ 76 ಮಂದಿಗೆ ಸೋಂಕು ಹರಡಿತ್ತು. (ಮಂಡ್ಯ ಜಿಲ್ಲೆಯಲ್ಲಿ ಜುಬಿಲಂಟ್ ಸಂಬಂಧಿತ ಇಬ್ಬರು ಸೋಂಕಿಗೆ ಒಳಗಾಗಿದ್ದರು.) ಒಂದೆಡೆ ಜುಬಿಲಂಟ್ ನೌಕರರಲ್ಲಿ ದಿನೇ ದಿನೆ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದಾಗ ಮೈಸೂರು ನಗರ ಮತ್ತು ಜಿಲ್ಲಾ ಪೊಲೀಸರು ಸಂಪೂರ್ಣ ಸನ್ನದ್ಧರಾಗಿ ಮೈಸೂರು ನಗರ ಹಾಗೂ ಜಿಲ್ಲಾ ಪ್ರವೇಶಿಸುವ ರಸ್ತೆಗಳಲ್ಲಿ ಚೆಕ್‍ಪೋಸ್ಟ್ ನಿರ್ಮಿಸಿ, ಆರೋಗ್ಯ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ನೆರವಿನೊಂದಿಗೆ ಎಲ್ಲಾ ವಾಹನಗಳು ಹಾಗೂ ಅದರಲ್ಲಿ ಪ್ರಯಾಣಿಸುವವರ ತಪಾಸಣೆಗಿಳಿದರು. ಮತ್ತೊಂದೆಡೆ ನಂಜನಗೂಡು ಪಟ್ಟಣದ ಬಹುತೇಕ ಪ್ರದೇಶಗಳನ್ನು ಕಂಟೇನ್ಮೆಂಟ್ ಜೋನ್ ಎಂದು ಗುರುತಿಸಿ ಸೀಲ್ಡ್ ಡೌನ್ ಮಾಡಲಾಗಿತ್ತು. ಆ ಪ್ರದೇಶಗಳಲ್ಲಿ ಯಾರೂ ಮನೆ ಬಿಟ್ಟು ಹೊರ ಬಾರದಂತೆ ಹಾಗೂ ಆ ಪ್ರದೇಶಗಳಿಗೆ ಹೊರಗಿನವರು ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿತ್ತು. ಮಾತ್ರವಲ್ಲದೇ ನಂಜನಗೂಡು ಪಟ್ಟಣದಿಂದಲೇ ಅತ್ಯವಶ್ಯಕ ಕೆಲಸ ಕಾರ್ಯಗಳಿಗೆ ಹೊರತುಪಡಿಸಿ ಯಾರೂ ಹೊರ ಬಾರದಂತೆ ಹಾಗೂ ಹೊರಗಿನವರು ಪಟ್ಟಣ ಪ್ರವೇಶಿಸದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರು.

ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೋಂಕು ಹರಡದಂತೆ ತೀವ್ರ ನಿಗಾ ವಹಿಸಿದ್ದ ವೇಳೆ ತಬ್ಲಿಘಿ ಜಮಾತ್‍ಗೆ ಹೋಗಿ ಬಂದಿದ್ದ 10 ಮಂದಿ ಮಳವಳ್ಳಿಯಿಂದ ಮೈಸೂರು ಪ್ರವೇಶಿಸುವ ವೇಳೆ ಬನ್ನೂರು ಚೆಕ್‍ಪೋಸ್ಟ್‍ನಲ್ಲಿ ಕಾರ್ಯನಿರತರಾಗಿದ್ದ ಪೊಲೀಸ್ ಸಿಬ್ಬಂದಿ ಅವರನ್ನು ಹಿಡಿದು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಎಲ್ಲಾ 10 ಮಂದಿಯನ್ನು ಆಸ್ಪತ್ರೆಯ ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು. ಅವರಲ್ಲಿ 5 ಮಂದಿಗೆ ಏ.4ರಂದು ಸೋಂಕು ದೃಢಪಟ್ಟಿತ್ತು. ಮತ್ತೆ ಒಂದೆರಡು ದಿನದಲ್ಲೇ ಇನ್ನುಳಿದ ಐವರಿಗೂ ಸೋಂಕು ಪತ್ತೆಯಾಗಿತ್ತು. ಈ 10 ಮಂದಿ ನಾಗಮಂಗಲದಲ್ಲಿ 13 ದಿನ ಹಾಗೂ ಮಳವಳ್ಳಿಯಲ್ಲಿ 5 ದಿನ ಇದ್ದು ಬಂದಿದ್ದರು. ಇವರ ಸಂಪರ್ಕದಿಂದ ಮಳವಳ್ಳಿಯಲ್ಲಿ 16 ಮಂದಿಗೆ ಸೋಂಕು ತಗುಲಿದೆ. ಬನ್ನೂರು ಚೆಕ್‍ಪೋಸ್ಟ್‍ನಲ್ಲಿ ಇವರನ್ನು ಹಿಡಿಯದೇ ಇದ್ದಿದ್ದರೆ ಮೈಸೂರು ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುವ ಅಪಾಯವಿತ್ತು. ಅದರೆ ಅಲ್ಲಿನ ಸಿಬ್ಬಂದಿಯ ಸಮಯೋಚಿತ ನಿರ್ಧಾರದಿಂದಾಗಿ ಮತ್ತಷ್ಟು ಸೋಂಕು ಹರಡುವುದನ್ನು ತಪ್ಪಿಸಲಾಗಿತ್ತು. ಅಷ್ಟರಲ್ಲೇ ಮೈಸೂರು ಜಿಲ್ಲೆ ರೆಡ್ ಜೋನ್ ಎಂದು ಗುರುತಿಸಲಾಗಿತ್ತು.

ಏ.16ರಂದು ಮೈಸೂರಿನ ವಿಜಯನಗರ 1 ಮತ್ತು 2ನೇ ಹಂತ, ನಜರ್‍ಬಾದ್, ಜನತಾ ನಗರ, ಕುವೆಂಪುನಗರ, ಜೆ.ಪಿ.ನಗರ, ಶ್ರೀರಾಂಪುರ 2ನೇ ಹಂತ, ಸರ್ದಾರ್ ವಲ್ಲಭಬಾಯ್ ಪಟೇಲ್ ನಗರ 2ನೇ ಹಂತವನ್ನು ಕಂಟೇನ್ಮೆಂಟ್ ಪ್ರದೇಶಗಳೆಂದು ಘೋಷಿಸಲಾಯಿತು. ಏ.22ರಂದು ಇದರ ಜೊತೆಗೆ ಮೀನಾ ಬಜಾರ್, ಗೋಕುಲಂ ಬಡಾವಣೆ ಮತ್ತು ಟೀಚರ್ಸ್ ಲೇಔಟ್ ಅನ್ನು ಕಂಟೇನ್ಮೆಂಟ್ ಪ್ರದೇಶಗಳೆಂದು ಘೋಷಿಸಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಯಿತು.

ಮೈಸೂರು ಜಿಲ್ಲೆಯಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಹಲವಾರು ಇಲಾಖೆಗಳು ಕೊರೊನಾ ಹರಡುವುದನ್ನು ತಡೆಗಟ್ಟಲು ಅವಿರತವಾಗಿ ಶ್ರಮಿಸಲಾರಂಭಿಸಿದವು. ಮೈಸೂರು ನಗರ ಪಾಲಿಕೆಯು ಇಡೀ ನಗರದ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿತ್ತು. ಪೌರ ಕಾರ್ಮಿಕರು ಹಗಲು-ರಾತ್ರಿ ಶ್ರಮಿಸಲಾರಂಭಿಸಿದರು. ಆಶಾ ಕಾರ್ಯಕರ್ತೆಯರು ಕ್ವಾರಂಟೈನ್ ಮನೆಗಳಿಗೆ ಪ್ರತೀ ದಿನ ಭೇಟಿ ನೀಡಿ, ಅಲ್ಲಿದ್ದವರ ತಪಾಸಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಜಿಲ್ಲಾ ಎಸ್ಪಿ ರಿಷ್ಯಂತ್, ನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ನಗರ ಪೊಲೀಸ್ ಆಯುಕ್ತ ಡಾ ಚಂದ್ರಗುಪ್ತ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಅವರುಗಳು ಸಮನ್ವಯತೆಯಿಂದ ಚರ್ಚೆಗಳನ್ನು ನಡೆಸಿ ವೈರಸ್ ಹರಡದಂತೆ ಕ್ರಮಗಳನ್ನು ಕೈಗೊಳ್ಳಲಾರಂಭಿಸಿದರು.

ಇದರ ಫಲವಾಗಿ ಏ.6ರಂದು ಮೈಸೂರಿನ ಮೊದಲ ಕೊರೊನಾ ಸೋಂಕಿತ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರೆ, ಏ.10ರಂದು ಜುಬಿಲಂಟ್ ನೌಕರ ಗುಣಮುಖನಾಗಿ ಬಿಡುಗಡೆ ಹೊಂದಿದ. ಹಂತ ಹಂತವಾಗಿ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಲೇ ಇದ್ದರು. ಆದರೂ ಹೊಸ ಪ್ರಕರಣಗಳೂ ಕೂಡ ದಾಖಲಾಗುತ್ತಿತ್ತು. ಏ.29ರಂದು 90ನೇ ಸೋಂಕಿತ ಪತ್ತೆಯಾಗಿದ್ದೇ ಕೊನೆ. ಆನಂತರ ಮೈಸೂರು ಜಿಲ್ಲೆಯಲ್ಲಿ ಸೋಂಕು ಪತ್ತೆಯಾಗಲೇ ಇಲ್ಲ. ಹಂತ ಹಂತವಾಗಿ ಸಕ್ರೀಯ ಸೋಂಕಿತರ ಸಂಖ್ಯೆ ಕುಸಿತ ಕಾಣುತ್ತಿತ್ತು. ಮೇ 5ರಂದು ಮೂವರು ಸೋಂಕಿತರು ಗುಣಮುಖರಾದಾಗ ಸಕ್ರೀಯ ಸೋಂಕಿತರ ಸಂಖ್ಯೆ ಒಂದಂಕಿಗೆ ಇಳಿದಿತ್ತು. ಅಂದರೆ ಅಂದು ಸೋಂಕಿತರ ಸಂಖ್ಯೆ 8 ಮಾತ್ರ. ಮೇ 13ರಂದು ಇಬ್ಬರು ಸೋಂಕಿತರು ಗುಣಮುಖರಾಗಿ ಕೇವಲ ಇಬ್ಬರು ಮಾತ್ರ ಸಕ್ರೀಯ ಸೋಂಕಿತರಾಗಿದ್ದರು. ಅವರಿಬ್ಬರೂ ಕೂಡ ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಮೈಸೂರು ಕೊರೊನಾ ಮುಕ್ತವಾಗಿದೆ.

ಮತ್ತೊಂದು ವಿಶೇಷವೆಂದರೆ ಎಲ್ಲಾ 90 ಸೋಂಕಿತರ ಸಂಪರ್ಕದಲ್ಲಿದ್ದು, ಕ್ವಾರಂಟೈನ್‍ಗೆ ಒಳಪಟ್ಟಿದ್ದವರೆಲ್ಲರ ಗಂಟಲ ದ್ರವ ಪರೀಕ್ಷಿಸಲಾಗಿದ್ದು, ಅವರೆಲ್ಲರಿಗೂ ನೆಗೆಟೀವ್ ಬಂದಿದ್ದಲ್ಲದೇ ಎಲ್ಲರೂ ಕ್ವಾರಂಟೈನ್ ಅವಧಿಯನ್ನು ಮುಕ್ತಾಯಗೊಳಿಸಿದ್ದಾರೆ. ಮೈಸೂರು ನಗರದಲ್ಲಿದ್ದ ಎಲ್ಲಾ ಕಂಟೇನ್ಮೆಂಟ್ ಪ್ರದೇಶಗಳು ಕಂಟೇನ್ಮೆಂಟ್ ಮುಕ್ತವಾಗಿವೆ. ಇದೀಗ ಸರ್ಕಾರವು ಬೇರೆ ರಾಜ್ಯ ಹಾಗೂ ಜಿಲ್ಲೆಯಿಂದ ಜನರು ಬರುವುದಕ್ಕೆ ಅನುಮತಿ ನೀಡಿದ್ದು, ಹಾಗೆ ಜಿಲ್ಲೆಗೆ ಬಂದ 623 ಮಂದಿಯನ್ನು ಕ್ವಾರಂಟೈನ್‍ನಲ್ಲಿದ್ದಾರೆ.

ಕೊರೊನಾ ಸೋಂಕು ಮೈಸೂರು ಜಿಲ್ಲೆಗೆ ಪ್ರವೇಶಿಸಿದ ಆರಂಭ ದಲ್ಲಿ ಕೆ.ಆರ್.ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡಲಾಗು ತ್ತಿತ್ತು. ದಿನೇದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದ ಕಾರಣ ಕೆ.ಆರ್. ಆಸ್ಪತ್ರೆಯಲ್ಲಿದ್ದ ಇತರ ರೋಗಿಗಳಿಗೆ ತೊಂದರೆ ಆಗಬಾರದು ಎಂಬ ಮುನ್ನೆಚ್ಚರಿಕಾ ಕ್ರಮವಾಗಿ ಕೆ.ಆರ್.ಎಸ್. ರಸ್ತೆ ಯಲ್ಲಿರುವ ನೂತನ ಜಿಲ್ಲಾಸ್ಪತ್ರೆಗಳು ಕೋವಿಡ್ ಆಸ್ಪತ್ರೆಯಾಗಿ ಪರಿ ವರ್ತಿಸಿ ಸೋಂಕಿತರನ್ನು ಅಲ್ಲಿಗೆ ಸ್ಥಳಾಂತರಿಸಲಾಗಿತ್ತು.

Translate »