ಬನ್ನಿಕುಪ್ಪೆ ಗ್ರಾಪಂನಲ್ಲಿ ಗ್ರಾಮ ಸಭೆ
ಮೈಸೂರು ಗ್ರಾಮಾಂತರ

ಬನ್ನಿಕುಪ್ಪೆ ಗ್ರಾಪಂನಲ್ಲಿ ಗ್ರಾಮ ಸಭೆ

May 17, 2020

ಹುಣಸೂರು, ಮೇ16(ಕೆಕೆ)-ತಾಲೂಕಿನ ಬನ್ನಿಕುಪ್ಪೆ ಗ್ರಾಪಂ ಆವರಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ತೋಟಗಾರಿಕೆ, ಕೃಷಿ, ಕಂದಾಯ, ಅರಣ್ಯ ಮತ್ತು ಪಶುಪಾಲನಾ ಇಲಾಖೆಗಳಿಂದ ಮ-ನರೇಗಾ ಯೋಜನೆಯಡಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿ ಯೋಜನೆಯಡಿ ದೊರೆಯವ ಸೌಲಭ್ಯಗಳನ್ನು ಕುರಿತು ಇಲಾಖಾಧಿಕಾರಿಗಳು ಮಾಹಿತಿ ನೀಡಿದರಲ್ಲದೆ ಇದರ ಸದುಪಯೋಗ ಪಡಿಸಿಕೊಳ್ಳಲು ಜನತೆಗೆ ಕರೆ ನೀಡಿದರು.

ಪಿಡಿಓ ಎಂ.ಕೆ.ಗಣೇಶ್‍ಮೂರ್ತಿ ಮಾತನಾಡಿ, ಸರ್ಕಾರದ ಮ-ನರೇಗಾ ಯೋಜನೆಯಡಿ ಸೌಲಭ್ಯ ಪಡೆಯಲು ಗ್ರಾಮ ಪಂಚಾಯಿತಿಗೆ ಸೂಕ್ತ ದಾಖಲಾತಿ ಒದಗಿಸಿ, ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. 14ನೇ ಹಣಕಾಸು ಯೋಜನೆಯಡಿ ರಸ್ತೆ, ಕಟ್ಟಡ, ಚರಂಡಿ, ಬೀದಿ ದೀಪ, ಸ್ವಚ್ಛತೆ, ಕುಡಿಯುವ ನೀರು ಹಾಗೂ ಪ.ಜಾತಿ ಹಾಗೂ ಪಂಗಡದ ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರದ ಸಹಾಯ ಧನವನ್ನು ನಿಯಮಾನುಸಾರ ನೀಡಲಾಗುತ್ತದೆ. ಕೊಟ್ಟಿಗೆ ನಿರ್ಮಾಣ ಮಾಡುವವರು ಸೂಕ್ತ ಜಾಗ ಹಾಗೂ ದಾಖಲಾತಿಗಳು ಮತ್ತು ಪಶು, ಮೇಕೆ. ಕುರಿಗಳನ್ನು ಹೊಂದಿರಬೇಕು ಎಂದು ತಿಳಿಸಿದರು.

ಸಾರ್ವಜನಿಕರು ಮನೆ ಮತ್ತು ನೀರಿನ ತೆರಿಗೆಯನ್ನು ಹಂತ-ಹಂತವಾಗಿ ಪಾವತಿಸಬೇಕು. ಸಾರ್ವಜನಿಕರು ಕೊರೊನಾ ವೈರಸ್ಸ್‍ನಿಂದ ದೂರವಿರಲು ಸಾರ್ವಜನಿಕ ಸ್ಥಳಗಳಾದ ಹಾಲಿನ ಡೈರಿ, ಪಡಿತರ ವಿತರಣಾ ಕೇಂದ್ರ, ಬ್ಯಾಂಕ್ ಮತ್ತು ಆರೋಗ್ಯ ಕೇಂದ್ರದಲ್ಲಿ ಅಂತರ ಕಾಯ್ದುಕೊಳ್ಳಬೇಕು ಎಂದು ಇದೇ ವೇಳೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ತಾಪಂ ಸದಸ್ಯ ಕೆಂಗಯ್ಯ, ಗ್ರಾಪಂ ಉಸ್ತುವಾರಿ ಅಧಿಕಾರಿ ಎನ್.ಸಿ.ಸಿದ್ದರಾಜು, ಪಂಚಾಯತ್‍ರಾಜ್ ನೀರಾವರಿ ಇಲಾಖೆಯ ಎಇಇ ರಮೇಶ್, ಸಹಾಯಕ ಅಧಿಕಾರಿ ಗೀತಾ, ಪಿಡಿಓ ಗಣೇಶ್ ಮೂರ್ತಿ ಎಂ.ಕೆ, ಕಾರ್ಯದರ್ಶಿ ಚಂದ್ರು, ಕಂದಾಯ ಇಲಾಖೆಯ ವಿ.ಎ.ಮಂಜುನಾಥ್, ವಿ.ಎ.ಕೃಷ್ಣಬಾಯಿ, ಪಶು ಇಲಾಖೆ ಮಹದೇವಪ್ಪ ಹಾಗೂ ಅಂಗನವಾಡಿ ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮಸ್ಥರಿದ್ದರು.

Translate »