ಸಾಂಸ್ಕೃತಿಕ ನಗರಿ ಮೌನ; ಸಭಾಂಗಣ ಭಣಭಣ, ಕಲಾವಿದರಲ್ಲಿ ತಲ್ಲಣ
ಮೈಸೂರು

ಸಾಂಸ್ಕೃತಿಕ ನಗರಿ ಮೌನ; ಸಭಾಂಗಣ ಭಣಭಣ, ಕಲಾವಿದರಲ್ಲಿ ತಲ್ಲಣ

April 20, 2020

ಮೈಸೂರು, ಏ.19- ಕೊರೊನಾ ಸೋಂಕು ಹರಡದಂತೆ ತಡೆಯಲು ಮೊದಲಿಗೆ `ಜನತಾ ಕಫ್ರ್ಯೂ’ ವಿಧಿಸಿ, ನಂತರ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ಮೈಸೂರು ಸಾಂಸ್ಕೃತಿಕ ಚಟುವಟಿಕೆಗಳಿಲ್ಲದೆ ಸ್ತಬ್ಧವಾಗಿದೆ. ಒಂದೆಡೆ ಸಭಾಂಗಣಗಳು ಬಣಗುಡುತ್ತಿದ್ದರೆ, ಮತ್ತೊಂದೆಡೆ ಕಲೆಯನ್ನೇ ನಂಬಿದ್ದ ಕಲಾವಿದರನ್ನು ಕಟ್ಟಿಹಾಕಿದಂತಾಗಿದೆ.

ಸದಾ ಒಂದಲ್ಲ ಒಂದು ರೀತಿಯ ಸಾಂಸ್ಕೃತಿಕ ಚಟುವಟಿಕೆಗಳಿಂದ ತುಂಬಿರು ತ್ತಿದ್ದ ಸಾಂಸ್ಕೃತಿಕ ನಗರ ಇಂದು ಕೊರೊನಾ ವೈರಸ್‍ನಿಂದಾಗಿ ನಿಶ್ಯಬ್ದವಾಗಿದೆ. ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಎನ್ನದೇ ಕಲಾಭಿಮಾನಿಗಳಿಂದಲೇ ತುಂಬಿರುತ್ತಿದ್ದ ಸಭಾಂಗಣಗಳು ಖಾಲಿ ಖಾಲಿ ಇವೆ. ಭರತನಾಟ್ಯ, ಸಂಗೀತ, ನಾಟಕ, ಯಕ್ಷಗಾನ, ನೃತ್ಯ ಕಾರ್ಯಕ್ರಮಗಳಿಗೆ ಸಾಕ್ಷಿಯಾಗು ತ್ತಿದ್ದ ಸಭಾಂಗಣಗಳು ಈಗ ಜನರಿಲ್ಲದೆ ಬಣಗುಡುತ್ತಿವೆ. ಸಂಜೆಯಾದರೆ ಮನಸ್ಸಿನ ನೆಮ್ಮದಿಗಾಗಿ ಸಂಗೀತ ಆಲಿಸಲು ಸಭಾಂ ಗಣಗಳತ್ತ ಧಾವಿಸುತ್ತಿದ್ದ ಕಲಾರಸಿಕರು, ಹಿರಿಯ ನಾಗರಿಕರು `ಇನ್ನೆಷ್ಟು ದಿನ ಲಾಕ್‍ಡೌನ್?’ ಎನ್ನುತ್ತಿದ್ದಾರೆ.

ಮೈಸೂರಿನಲ್ಲಿರುವ ಕಲಾಮಂದಿರ ಸಭಾಂಗಣ, ಕಿರುರಂಗ ಮಂದಿರ, ಮನೆ ಯಂಗಳ, ರಂಗಾಯಣ ಆವರಣದ ಭೂಮಿ ಗೀತ, ಶ್ರೀರಂಗ, ವನರಂಗ, ನಾದ ಬ್ರಹ್ಮ ಸಂಗೀತ ಸಭಾ, ವೀಣೆ ಶೇಷಣ್ಣ ಗಾನ ಭಾರತಿ ಸಂಗೀತ ಸಭಾ, ಜಗನ್ಮೋಹನ ಅರಮನೆ, ಟೌನ್‍ಹಾಲ್, ರೋಟರಿ ಸಭಾಂಗಣ, ಇಂಜಿನಿಯರ್ಸ್ ಸಂಸ್ಥೆ ಸಭಾಂ ಗಣ, ಶಾರದಾ ವಿಲಾಸ ಸಭಾಂಗಣ, ಸೆನೆಟ್ ಹಾಲ್, ಮುಕ್ತ ಗಂಗೋತ್ರಿ ಸಭಾಂಗಣ, ಮಾಧವ ಕೃಪ ಸೇರಿದಂತೆ ಹಲವಾರು ಸಭಾಂ ಗಣಗಳು ಮೌನ ತಾಳಿವೆ. ಕಲೆಯನ್ನೇ ನಂಬಿದ್ದ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಏಪ್ರಿಲ್, ಮೇ ತಿಂಗಳಿನಲ್ಲಿ ವಿವಿಧೆಡೆ ಜಾತ್ರೆ, ರಥಯಾತ್ರೆ ನಡೆಯುತ್ತಿದ್ದವು. ಈ ವೇಳೆ ಕಲಾವಿದರ ಆದಾಯವು ಚೆನ್ನಾಗಿ ರುತ್ತಿತ್ತು. ಆದರೆ ಲಾಕ್‍ಡೌನ್‍ನಿಂದಾಗಿ ಕಲಾವಿದರ ಅದಾಯಕ್ಕೂ ಕುತ್ತು ಬಿದ್ದಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹನೂರು ಚೆನ್ನಪ್ಪ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಮೈಸೂರಿನಲ್ಲಿ 700 ಕಲಾವಿದರಿದ್ದು, ಸಂಪಾದನೆ ಇಲ್ಲದೇ ಕಂಗಾಲಾಗಿದ್ದಾರೆ. ಸಂಪೂರ್ಣ ಕಲೆಯನ್ನೇ ಅವಲಂಬಿಸಿದ್ದ ವರಂತೂ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದೆಡೆ ಸಂಪಾದನೆಯೂ ಇಲ್ಲ, ಮತ್ತೊಂ ದೆಡೆ ಸದಾ ಮನೆಯಲ್ಲಿಯೇ ಕುಳಿತಿರಬೇಕು ಎಂಬ ಕಾರಣಕ್ಕೆ ಕಲಾವಿದರ ಆತ್ಮಸ್ಥೈರ್ಯ ಕುಸಿಯುತ್ತಿದೆ ಎಂದು ಕಲಾ ಸಂಘಟಕ ಹಿಮಾಂಶು ಕಳವಳ ವ್ಯಕ್ತಪಡಿಸಿದರು.

ಆನ್‍ಲೈನ್‍ನತ್ತ: ಲಾಕ್‍ಡೌನ್‍ನಿಂದ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮ ಗಳ ಜೊತೆಗೆ ತರಬೇತಿ ಶಾಲೆಗಳೂ ಬಂದ್ ಆಗಿವೆ. ಇದ್ದುದರಲ್ಲಿ ಆನ್‍ಲೈನ್ ಮೂಲಕ ಸ್ವಲ್ಪಮಟ್ಟಿಗಿನ ತರಬೇತಿ ನಡೆಯುತ್ತಿದೆ. ಮೈಸೂರಿನಲ್ಲಿ 100ಕ್ಕೂ ಹೆಚ್ಚು ಮಂದಿ ನೃತ್ಯ ತರಬೇತಿ ಶಿಕ್ಷಕರಿದ್ದಾರೆ. ಕೆಲವೊಂದು ಶಾಲೆಗಳಲ್ಲಿ 150ರಿಂದ 200 ವಿದ್ಯಾರ್ಥಿ ಗಳಿದ್ದು, ಮನೆಯಿಂದಲೇ ಆನ್‍ಲೈನ್ ಮೂಲಕ ಯೋಗ ಶಿಕ್ಷಣದ ಜೊತೆಗೆ ಭರತನಾಟ್ಯ ತರಬೇತಿಯನ್ನು ನೀಡಲಾಗು ತ್ತಿದೆ ಎಂದು ಖ್ಯಾತ ಭರತನಾಟ್ಯ ಕಲಾವಿದೆ ವಸುಂದರ ದೊರೆಸ್ವಾಮಿ ತಿಳಿಸಿದರು.

`ಸಾಂಸ್ಕೃತಿಕ ತಲ್ಲಣ, ಜೀವ ಮುಖ್ಯ’

ಕೊರೊನಾ ಸೋಂಕಿನ ಭೀತಿ ಸಾಂಸ್ಕೃತಿಕ ರಾಯಬಾರಿ ಗಳನ್ನು ತಲ್ಲಣಗೊಳಿಸಿದೆ. ಸದ್ಯ ಜೀವ ಮುಖ್ಯ. ಅದಕ್ಕಾಗಿ ಸರ್ಕಾರದ ಸಲಹೆ-ಸೂಚನೆ ತಪ್ಪದೇ ಪಾಲಿಸಬೇಕು. ಅಮೆರಿಕದಂತಹ ದೊಡ್ಡ ದೇಶವೇ ಕೊರೊನಾ ಮುಂದೆ ಸೋತಿದೆ. ಅಂತಹ ದರಲ್ಲಿ 130 ಕೋಟಿ ಜನರಿರುವ ನಮ್ಮ ದೇಶದಲ್ಲಿ ಸೋಂಕು ಹರಡದಂತೆ ನಿಯಂತ್ರಿಸಿ ರುವುದು ಶ್ಲಾಘನೀಯ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಹೇಳಿದರು.

ಜೀವಕ್ಕಿಂತ ದೊಡ್ಡದು ಯಾವುದೂ ಇಲ್ಲ. ಒಬ್ಬ ಕಲಾವಿದ ಸತ್ತರೆ ಸಾಂಸ್ಕೃತಿಕ ನಷ್ಟ. ಆತನ ಜೀವ ಉಳಿದರೆ ನಾಳೆ ಹಲವು ಸಾಧನೆಗಳನ್ನು ಮಾಡುತ್ತಾನೆ. ನಾಟ ಕೋತ್ಸವ, ಚಿಣ್ಣರ ಮೇಳ ನಡೆಯಲಿಲ್ಲ ಎನ್ನುವುದು ನಿಜ. ಆದರೆ ಮೊದಲು ಜೀವ ಉಳಿಯಬೇಕು. ಈ ನಿಟ್ಟಿನಲ್ಲಿ ಕೊರೊನಾ ನಿಯಂತ್ರಣಕ್ಕೆ ನಾಗರಿಕ ಪ್ರಜ್ಞೆಯನ್ನು ಬೆಳೆಸಿಕೊಂಡು, ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಟೀಕೆಯೇ ಪರಿಹಾರವಲ್ಲ: ಒಂದರ್ಥದಲ್ಲಿ ಸಾವಿನ ಮನೆಯಲ್ಲಿದ್ದೇವೆ. ಕೊರೊನಾದಿಂದ ಪಾರಾಗಬೇಕಾದರೆ, ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೇ ಹೊರತು ಟೀಕೆ ಮಾಡುವುದಲ್ಲ. ಇನ್ನೊಬ್ಬರ ನೈತಿಕ ಶಕ್ತಿ ಕುಂದಿಸುವ ಕೆಲಸ ಮಾಡಬಾರದು. ಕೊರೊನಾ ಎಲ್ಲರನ್ನು ಆತಂಕಕ್ಕೆ ದೂಡಿದ್ದರೂ ಸಮಾನತೆ ಕಲಿಸಿದೆ. ವಿದೇಶಿ ವ್ಯಾಮೋಹ ದೂರ ಮಾಡಿದೆ. ಜಾತಿಗಳ ನಡುವಿನ ಕಂದಕ ಇಲ್ಲವಾಗಿಸಿದೆ. ದೇಶಿ ಸಂಸ್ಕೃತಿಯ ಮಹತ್ವವನ್ನು ತಿಳಿಸಿದೆ ಎಂದು ತಿಳಿಸಿದರು.

ಕಲಾವಿದರಿಗೆ ಸಹಕಾರ: ರಂಗಾಯಣ ಕಲಾ ವಿದರು ಕೊರೊನಾ ವಿರುದ್ಧದ ಹೋರಾಟದ ಬೆಂಬಲಕ್ಕೆ 1 ದಿನದ ವೇತನ ನೀಡಿದ್ದಾರೆ. ಸಂಕಷ್ಟದಲ್ಲಿರುವ ಕಲಾವಿದರಿಗೆ ರಂಗಾಯಣದ ವತಿಯಿಂದ ಅಗತ್ಯ ವಸ್ತುಗಳ ಕಿಟ್ ವಿತರಿಸಲು ಚಿಂತಿಸಲಾಗಿದ್ದು, ಪಟ್ಟಿ ತಯಾರಿಸಲಾಗುತ್ತಿದೆ. ಹಿರಿಯ ನಟ, ನಿರ್ದೇಶಕ ಟಿ.ಎಸ್.ನಾಗಾಭರಣ, ಸದ್ಯ ಕಷ್ಟದಲ್ಲಿರುವ ಕಲಾವಿದರಿಗೆ ಜೀವನಾವಶ್ಯಕ ವಸ್ತುಗಳನ್ನು ನೀಡುವ ಮೂಲಕ ಸಹಾಯ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

ಕಲಾವಿದರು ಅಸಂಘಟಿತ ಕಾರ್ಮಿಕರಾಗಿದ್ದು, ರಂಗಭೂಮಿ ಯನ್ನೇ ನಂಬಿದ್ದಾರೆ. ಮನೆ ಬಿಟ್ಟು ಬದುಕು ನಡೆಸುವವರಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸಂಕಷ್ಟದಲ್ಲಿ ರುವ ಕಲಾವಿದರಿಗೆ ನೆರವಾಗಬೇಕು ಎಂದು ಒತ್ತಾಯಿಸಿದರು.

ಹೊಸ ಯೋಜನೆಗಳಿದ್ದವು: ಈ ಬಾರಿ ಚಿಣ್ಣರ ಮೇಳವನ್ನು ‘ಅವ್ವ’ ಎಂಬ ಪರಿಕಲ್ಪನೆಯಲ್ಲಿ ನಡೆಸಬೇಕೆಂಬ ಯೋಜನೆ ಹಾಕಿಕೊಂಡಿದ್ದೆವು. ವಿಶೇಷ ನಾಟಕಗಳನ್ನು ಏರ್ಪಡಿಸಲಾಗಿತ್ತು. ಆದರೆ, ಎಲ್ಲದಕ್ಕೂ ಕೊರೊನಾ ಅಡ್ಡಿಯಾಯಿತು. ಚಿಂತಿಸುವ ಅಗತ್ಯವಿಲ್ಲ. ಲಾಕ್‍ಡೌನ್ ಮುಗಿದ ಬಳಿಕ ಮತ್ತಷ್ಟು ಆತ್ಮವಿಶ್ವಾಸ ದಿಂದ ಕೆಲಸ ಮಾಡಬೇಕು ಎಂದರು.

– ಮೋಹನ್ ಕಾಯಕ

Translate »