3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಸಜ್ಜಾಗುತ್ತಿದೆ ಮೈಸೂರು
ಮೈಸೂರು

3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಸಜ್ಜಾಗುತ್ತಿದೆ ಮೈಸೂರು

July 12, 2021

ಮೈಸೂರು, ಜು.11-ಕೊರೊನಾ ಎರಡನೇ ಅಲೆಯ ತೀವ್ರತೆಗೆ ತತ್ತರಿಸಿದ್ದ ಮೈಸೂರಲ್ಲಿ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸುವುದರೊಂದಿಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಭವನೀಯ ಮೂರನೇ ಅಲೆಯಿಂದ ಮಕ್ಕಳು ಮತ್ತು ಜನರನ್ನು ರಕ್ಷಿಸಲು 10.26 ಕೋಟಿ ರೂ.ಗಳ ಕ್ರಿಯಾ ಯೋಜನೆ ಸಿದ್ಧಪಡಿಸಿ, ಸದ್ದಿಲ್ಲದೆ ಸಿದ್ಧತೆ ಮಾಡಿಕೊಳ್ಳುವಲ್ಲಿ ಮುಂದಾಗಿದೆ.
ಎರಡನೇ ಅಲೆಯಲ್ಲಿಯೇ 0-18 ವರ್ಷದೊಳಗಿನವರ ಸಾವಿ ರಾರು ಮಕ್ಕಳಲ್ಲಿ ಸೋಂಕು ಕಂಡು ಬಂದಿತ್ತು. 3ನೇ ಅಲೆಯ ಮುನ್ಸೂಚನೆ 2ನೇ ಅಲೆಯಲ್ಲಿಯೇ ದೊರೆತಿತ್ತು. ಈ ನಡುವೆ ತಜ್ಞ ವೈದ್ಯರು 3ನೇ ಅಲೆ ಮಕ್ಕಳನ್ನು ಕಾಡುವುದು ಖಚಿತ ಎಂದು ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಮೈಸೂರು ಜಿಲ್ಲಾಡಳಿತ ಮೂರನೆ ಅಲೆಯಲ್ಲಿ ಮಕ್ಕಳನ್ನು ಸೋಂಕಿನ ದವಡೆಯಿಂದ ಪಾರು ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ರೂಪುರೇಷೆ ಮಾಡಿ ಕೊಂಡಿದ್ದು, ಮೈಸೂರಿನ ನಾಲ್ಕು ಆಸ್ಪತ್ರೆಗಳಲ್ಲಿ ಮಕ್ಕಳಿಗಾಗಿ ಆಕ್ಸಿಜûóನ್ ಬೆಡ್, ವೆಂಟಿಲೇಟರ್, ಐಸಿಯು ಹಾಗೂ ಜನರಲ್ ಬೆಡ್ ವ್ಯವಸ್ಥೆ ಕಾಯ್ದಿರಿಸಲು ಕ್ರಮ ಕೈಗೊಳ್ಳಲಾಗಿದೆ.

ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದೆ: ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿರುವ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಕೊರೊನಾ ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಲು ಮುಂದಾ ಗಿದೆ. ಸೋಂಕು ಹರಡುವಿಕೆ ತಡೆಗಟ್ಟಲು ಕಟ್ಟೆಚ್ಚರ ವಹಿಸಲಾಗು ವುದು. 0-18 ವರ್ಷ ವಯಸ್ಸಿನ ಮಕ್ಕಳ ಮೇಲೆ ಗಮನ ಹರಿಸಲಾಗು ವುದು. ಮಕ್ಕಳನ್ನು ಸೋಂಕಿನಿಂದ ರಕ್ಷಿಸಲು ವೈದ್ಯರಿಗೆ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಕಾರ್ಯಾಗಾರಗಳ ಮೂಲಕ ಎಲ್ಲಾ ವೈದ್ಯರಿಗೂ ಶಿಶು ವೈದ್ಯರು ಮತ್ತು ತಜ್ಞ ವೈದ್ಯರು ಮಕ್ಕಳಿಗೆ ಚಿಕಿತ್ಸೆ ನೀಡುವ ತರಬೇತಿ ನೀಡಲಿದ್ದಾರೆ. ವೈದ್ಯರು ಮಾತ್ರವಲ್ಲದೆ, ಶುಶ್ರೂಷಾ ಸಿಬ್ಬಂದಿ ಮತ್ತು ಗ್ರೂಪ್-ಡಿ ಕಾರ್ಮಿಕರಿಗೂ ಮಕ್ಕಳ ಆರೈಕೆಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುವುದು ಎಂದರು.
ವಾರಕ್ಕೊಮ್ಮೆ ಪ್ರಗತಿ ಪರಿಶೀಲನಾ ಸಭೆ: ಮಕ್ಕಳ ರಕ್ಷಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಈಗಾಗಲೇ ಮೈಸೂರಿನ ನಜóóರ್‍ಬಾದ್‍ನಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾ ಣಾಧಿಕಾರಿ ಕಚೇರಿಯಲ್ಲಿ ಡಿಹೆಚ್‍ಓ ಡಾ.ಕೆ.ಹೆಚ್.ಪ್ರಸಾದ್ ನೇತೃತ್ವ ದಲ್ಲಿ ಕಳೆದ 10 ದಿನದ ಹಿಂದೆ ಮೊದಲ ಸಭೆ ನಡೆದು, 3ನೇ ಅಲೆಗೆ ಮಾಡಿಕೊಳ್ಳಬೇಕಾದ ಸಿದ್ಧತೆ ಬಗ್ಗೆ ಹಾಗೂ ಮಕ್ಕಳನ್ನು ಸೋಂಕಿನ ದವಡೆಯಿಂದ ಪಾರು ಮಾಡುವ ಬಗ್ಗೆ ಮಕ್ಕಳ ತಜ್ಞರಿಂದ ಅಗತ್ಯ ಸಲಹೆ, ಸೂಚನೆ ಪಡೆದು ಕ್ರಿಯಾ ಯೋಜನೆಯ ಕರಡನ್ನು ತಯಾರಿಸಲಾಗಿತ್ತು. ಕಳೆದ 2 ದಿನದ ಹಿಂದೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಸಿ ಡಾ.ಬಗಾದಿ ಗೌತಮ್ ಅಧ್ಯಕ್ಷತೆಯಲ್ಲಿ ನಡೆದ ಪೀಡಿಯಾಟ್ರಿಕ್ ಕೋವಿಡ್ ಮ್ಯಾನೇಜ್ಮೆಂಟ್ ಕುರಿತ ಮಕ್ಕಳ ತಜ್ಞರ ಉನ್ನತ ಮಟ್ಟದ ಸಭೆಯಲ್ಲಿ ತಜ್ಞ ವೈದ್ಯರು ಹಾಗೂ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಹಲವು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೆ ತುರ್ತು ಸಂದರ್ಭ ಎದುರಾದರೆ, ಅದನ್ನು ಎದುರಿಸಲು ಸನ್ನದ್ಧರಾಗಲು ಬೇಕಾದ ವ್ಯವಸ್ಥೆ ಬಗ್ಗೆ ಕೂಲಂಕುಶವಾಗಿ
ಚರ್ಚಿಸಲಾಗಿದ್ದು, ಅಂತಿಮಾವಾಗಿ 10.26 ಕೋಟಿ ರೂ. ಅಂದಾಜು ವೆಚ್ಚದ ಕ್ರಿಯಾ ಯೋಜನೆ ಸಿದ್ಧಪಡಿಸಿಕೊಂಡು ಸಮ್ಮತಿ ನೀಡಲಾಗಿದೆ. ಅಲ್ಲದೆ ಪ್ರತಿ ವಾರವೂ ಈ ಯೋಜನೆಯ ಪ್ರಗತಿ ಸಂಬಂಧ ಮೇಲ್ವಿಚಾರಣೆ ಮಾಡಲು ಸಭೆ ಸೇರುವಂತೆ ಡಿಸಿ ಸೂಚಿಸಿದ್ದಾರೆ.

ಶೇಕಡಾವಾರು ಅಂಕಿ ಅಂಶದೊಂದಿಗೆ ಕ್ರಮ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ.ಕೆ.ಹೆಚ್.ಪ್ರಸಾದ್ ಮಾತನಾಡಿ, ಮೊದಲ ಮತ್ತು ಎರಡನೆಯ ಅಲೆಗಳಲ್ಲಿನ ಗರಿಷ್ಠ ದೈನಂದಿನ ಪ್ರಕರಣಗಳ ಆಧಾರದ ಮೇಲೆ 3ನೇ ಅಲೆಯಲ್ಲಿ ಮಕ್ಕಳ ರಕ್ಷಣೆ ಮತ್ತು ಆರೈಕೆಗಾಗಿ ಹೆಚ್ಚುವರಿ ಹಾಸಿಗೆ ಕಾಯ್ದರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಶೇಕಡಾವಾರು ಪ್ರಮಾಣದಿಂದ ಹಾಸಿಗೆ ವ್ಯವಸ್ಥೆ ಕಾಯ್ದರಿಸಿದಾಗ ಮೈಸೂರಲ್ಲಿ 3ನೆ ಅಲೆಯನ್ನು ಸಮರ್ಥವಾಗಿ ನಿಭಾಯಿಸಬಹುದು. ಈಗಾಗಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ ಎಂದರು.

ಮಿಸ್-ಸಿ ಚಿಕಿತ್ಸೆ: ಸೋಂಕಿಗೆ ತುತ್ತಾಗುವ ಮಕ್ಕಳೊಂದಿಗೆ ಮಿಸ್-ಸಿ (ಮಲ್ಟಿಸಿಸ್ಟಮ್ ಇನ್ಫ್ಲಾಮೇಟರಿ ಸಿಂಡ್ರೋಮ್)ಗೆ ತುತ್ತಾಗಬಹುದಾದ ಮಕ್ಕಳ ಆರೈಕೆಗೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವೈದ್ಯರಿಗೆ ತರಬೇತಿ: ಮೂರನೆ ಅಲೆಯಲ್ಲಿ ವೈದ್ಯರು ಹಾಗೂ ಶ್ರುಶೂಷಕಿಯರ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ. ಕಡ್ಡಾಯವಾದ ಒಂದು ವರ್ಷದ ಗ್ರಾಮೀಣ ಸೇವೆ ಮಾಡಬೇಕಾದ 175ಕ್ಕೂ ಹೆಚ್ಚು ವೈದ್ಯರು (ವೈದ್ಯಕೀಯ ವಿದ್ಯಾರ್ಥಿಗಳು) ಮೈಸೂರಿನಲ್ಲಿ ಸೇವೆ ಸಲ್ಲಿಸಲು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಈ ವೈದ್ಯರಿಗೆ ತಜ್ಞ ವೈದ್ಯರು ಮಕ್ಕಳಿಗೆ ಚಿಕಿತ್ಸೆ ನೀಡುವ ವಿಧಾನ, ವೆಂಟಿಲೇಟರ್ ಬಳಕೆ, ಎನ್‍ಡಬ್ಲ್ಯೂ, ಸಿಪಿಎಪಿ ಕುರಿತು ತರಬೇತಿ ನೀಡಲಾಗುತ್ತದೆ. ಅಲ್ಲದೆ ಅಂತಿಮ ವರ್ಷದ ನರ್ಸಿಂಗ್ ವಿದ್ಯಾರ್ಥಿ ಗಳನ್ನು ಸೇವೆಗೆ ಬಳಸಿಕೊಳ್ಳಲಾಗುತತದೆ ಎಂದು ವಿವರಿಸಿದರು. ಸಭೆಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸುಧೀರ್ ನಾಯಕ್, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ರಾಜೇಶ್ವರಿ, ಪೀಡಿಯಾ ಟ್ರಿಕ್ ಕೋವಿಡ್ ನೋಡಲ್ ಅಧಿಕಾರಿ ಡಾ.ರಾಜೇಂದ್ರಪ್ರಸಾದ್, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಎಂಎಂಸಿ ಮತ್ತು ಆರ್‍ಐ) ಪ್ರಾಧ್ಯಾಪಕ ಡಾ.ಸವಿತಾ, ಜಿಲ್ಲಾ ಸರ್ವಲನ್ಸ್ ಅಧಿಕಾರಿ ಡಾ.ಟಿ.ಶಿವಪ್ರಸಾದ್, ಆರ್‍ಸಿಎಚ್‍ಒ) ಡಾ. ಎಲ್.ರವಿ, ಮಕ್ಕಳ ತಜ್ಞ ಡಾ.ಸಂಪತ್‍ಕುಮಾರ್, ಮಕ್ಕಳ ತಜ್ಞರ ಸಂಘದ ಅಧ್ಯಕ್ಷ ಡಾ.ಭುವನ್, ಕಾರ್ಯದರ್ಶಿ ಡಾ.ಶಶಿಕಿರಣ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

 

Translate »