ಸ್ಕೂಟರ್‍ನಲ್ಲಿ ಮೈಸೂರು  ಮೇಯರ್ ನಗರ ಪರ್ಯಟನೆ
ಮೈಸೂರು

ಸ್ಕೂಟರ್‍ನಲ್ಲಿ ಮೈಸೂರು ಮೇಯರ್ ನಗರ ಪರ್ಯಟನೆ

September 10, 2022

ಮೈಸೂರು, ಸೆ. 9(ಆರ್‍ಕೆ)- ನೂತನ ಮೇಯರ್ ಶಿವಕುಮಾರ್ ಶುಕ್ರವಾರ ಮೈಸೂರು ನಗರ ಪರ್ಯಟನೆ ನಡೆಸಿದರು.
ನಾಲ್ಕು ದಿನಗಳ ಹಿಂದಷ್ಟೇ 24ನೇ ಮೈಸೂರು ಮೇಯರ್ ಆಗಿ ಪದಗ್ರಹಣ ಮಾಡಿದ್ದ ಅವರು, ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗುಂಡಿ ಬಿದ್ದಿರುವ ರಸ್ತೆಗಳನ್ನು ರಿಪೇರಿ ಮಾಡಿಸಿ ಸಾರ್ವ ಜನಿಕರು ಮತ್ತು ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ದಿಂದ ಇಂದು ಸ್ಕೂಟರ್‍ನಲ್ಲಿ ಒಂದು ಸುತ್ತು ಹಾಕಿ, ಪರಿಶೀಲಿಸಿದರು.

ತಮ್ಮ ಸಂಬಂಧಿಕ ಎಲ್.ನಾಗೇಶ್ ಅವರ ಹೋಂಡಾ ಆಕ್ಟೀವಾ ಸ್ಕೂಟರ್ ನಲ್ಲಿ ಕುಳಿತು ಮೈಸೂರಿನ ಹೃದಯಭಾಗದ ಅರಮನೆ ಸುತ್ತಲಿನ ರಸ್ತೆಗಳ ಫುಟ್‍ಪಾತ್, ಕಲ್ಲಿನ ಬ್ಯಾರಿಕೇಡ್, ಬೀದಿ ದೀಪಗಳ ದುಸ್ಥಿತಿಯನ್ನು ಪರಿ ಶೀಲಿಸಿದ ಶಿವಕುಮಾರ್, ಕೆ.ಆರ್. ಸರ್ಕಲ್‍ನಲ್ಲಿ ಫುಟ್‍ಪಾತ್‍ಗೆ ಹಾಸಿರುವ ಟೈಲ್ಸ್‍ಗಳು ಅಲ್ಲಲ್ಲಿ ಕುಸಿದಿರುವುದನ್ನು ವೀಕ್ಷಿಸಿದರು. ಅಲ್ಲಲ್ಲಿ ಕಲ್ಲಿನ ಬ್ಯಾರಿಕೇಡ್ ಗಳು ತುಂಡಾಗಿರುವುದು, ಸಂಚಾರಕ್ಕೆ ಅಡ್ಡಿಯುಂಟಾಗಿರುವ ಕಂಬಗಳು, ಸರ್ಕಲ್‍ಗಳಲ್ಲಿ ಗುಂಡಿ ಬಿದ್ದಿರುವುದು, ಮೇಯರ್ ಕಣ್ಣಿಗೆ ಬಿತ್ತು. ಪುರಭವನದ ಆವರಣ ದಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ಲಾಟ್, ಬಯಲು ರಂಗಮಂದಿರ ಕಾಮಗಾರಿ ಅರ್ಧಕ್ಕೇ ನಿಂತು ಸೆಲ್ಲರ್‍ನಲ್ಲಿ ನೀರು ನಿಂತಿರುವುದನ್ನು ಪರಿಶೀಲಿ ಸಿದರು. ಹಾರ್ಡಿಂಜ್ ಸರ್ಕಲ್‍ನಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಪ್ರತಿಮೆ ಸುತ್ತ ಸಂಚಾರ ಪೊಲೀಸರು ಹಾಕಿರುವ ಬ್ಯಾರಿಕೇಡ್‍ನಿಂದ ಅಪ ಘಾತಗಳು ನಿಯಂತ್ರಣವಾಗುತ್ತಿರುವ ವಿಷಯ ತಿಳಿದು ಸಮಾಧಾನಪಟ್ಟರು.

ಮುಂದೆ ಗನ್‍ಹೌಸ್ ಸರ್ಕಲ್, ಸರ್ಕಾರಿ ಸಂಸ್ಕøತ ಪಾಠಶಾಲೆ ಸರ್ಕಲ್, ಪಾಲಿಕೆ ಕಚೇರಿ ಬಳಿಯ ಸರ್ಕಲ್ ಹಾಗೂ ಅರಮನೆ ದಕ್ಷಿಣ ದ್ವಾರದ ಸುತ್ತಮುತ್ತಲ ರಸ್ತೆಗಳಲ್ಲಿನ ವಾಹನ ಸಂಚಾರ ದಟ್ಟಣೆ, ಅರಮನೆಗೆ ಬರುವ ಪ್ರವಾಸಿಗರ ವಾಹನ ನಿಲುಗಡೆ ಸಮಸ್ಯೆಗಳ ಬಗ್ಗೆಯೂ ಮೇಯರ್ ಮನವರಿಕೆ ಮಾಡಿಕೊಂಡು, ಯೋಜನೆ ರೂಪಿಸಲು ಮುಂದಾಗಿದ್ದಾರೆ.ಈ ಕುರಿತಂತೆ ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿದ ಮೇಯರ್ ಶಿವಕುಮಾರ್, ದಸರಾ ಮಹೋತ್ಸವ ಸಮೀಪಿಸುತ್ತಿದೆ.

ದೇಶ-ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ನಿರೀಕ್ಷೆ ಇರುವುದರಿಂದ ಮೈಸೂರಿನ ರಸ್ತೆ, ಜಂಕ್ಷನ್‍ಗಳನ್ನು ಸುಸ್ಥಿತಿಯಲ್ಲಿರಿಸಿ ಸುರಕ್ಷಿತ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು, ಕುಡಿಯುವ ನೀರು, ಸ್ವಚ್ಛತೆ, ಒಳಚರಂಡಿ, ಬೀದಿ ದೀಪ ಸೇರಿದಂತೆ ಪ್ರವಾಸಿಸ್ನೇಹಿ ವ್ಯವಸ್ಥೆ ಮಾಡಬೇಕಿರುವುದು ಮಹಾನಗರ ಪಾಲಿಕೆ ಜವಾಬ್ದಾರಿಯಾಗಿದೆ ಎಂದರು.

ಈಗಾಗಲೇ ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ, ಸುಮಾರು 300 ಕೋಟಿ ರೂ. ಅನುದಾನ ತಂದು ರಸ್ತೆ, ಒಳಚರಂಡಿ, ಮಳೆ ನೀರು ಚರಂಡಿಯಂತಹ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಇನ್ನೂ ಹಲವು ಕೆಲಸಗಳಿಗೆ ವರ್ಕ್ ಆರ್ಡರ್ ಕೊಡಲಾಗಿದೆ. ಮಳೆ ಕಾರಣದಿಂದಾಗಿ ಕಾಮಗಾರಿ ಆರಂಭವಾಗಿಲ್ಲ ಎಂದು ಅವರು ತಿಳಿಸಿದರು.

ಅದೇ ರೀತಿ ಕೆ.ಆರ್. ಕ್ಷೇತ್ರದ ಶಾಸಕ ರಾಮದಾಸ್ ಸುಮಾರು 200 ಕೋಟಿ ರೂ. ಅನುದಾನ ತಂದಿದ್ದಾರೆ. ಮೈಸೂರು ಮಹಾನಗರ ವ್ಯಾಪ್ತಿಯ ಎನ್.ಆರ್., ಚಾಮುಂಡೇಶ್ವರಿ ಕ್ಷೇತ್ರದ ಬಡಾವಣೆಗಳಲ್ಲೂ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಮಳೆ ನಿಂತ ಮೇಲೆ ಉಳಿದ ಎಲ್ಲಾ ಕೆಲಸ ಆರಂಭಿಸಿ ದಸರಾ ಒಳಗಾಗಿ ಪೂರ್ಣಗೊಳಿಸಲಾಗುವುದು ಎಂದರು.

ಮತ್ತೊಮ್ಮೆ ಮೈಸೂರು ನಗರ ಪ್ರದಕ್ಷಿಣೆ ಹಾಕಿ ಗುಂಡಿ ಬಿದ್ದಿರುವ ರಸ್ತೆಗಳನ್ನು ಆಸ್ಪಾಲ್ಟ್ ಮಾಡುವುದಲ್ಲದೆ, ಚರಂಡಿ ಒಳಚರಂಡಿ, ಸೇತುವೆಗಳು, ಬೀದಿ ದೀಪ ಮುಂತಾದ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಹಂತ ಹಂತವಾಗಿ ಅಭಿವೃದ್ಧಿಗೊಳಿಸಲು ಇಷ್ಟರಲ್ಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಕಾರ್ಯಪ್ರವೃತ್ತರಾಗುತ್ತೇವೆ ಎಂದು ತಿಳಿಸಿದರು.

ಸರ್ಕಲ್‍ಗಳ ಅಭಿವೃದ್ಧಿ, ಸೌಂದರ್ಯೀಕರಣ, ಮುಖ್ಯ ರಸ್ತೆಗಳ ಕರ್ಬ್ ಸ್ಟೋನ್‍ಗಳಿಗೆ ಬಣ್ಣ ಬಳಿಯುವುದು, ಮರಗಳ ರಂಬೆ ಟ್ರಿಮ್ ಮಾಡಿಸುವುದು ಸೇರಿದಂತೆ ಮೈಸೂರು ನಗರದಾದ್ಯಂತ ಸ್ವಚ್ಛತೆ ಕಾಪಾಡಲು ಆದ್ಯತೆ ಮೇಲೆ ದಸರಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ಶಿವಕುಮಾರ್ ನುಡಿದರು.ಮೇಯರ್ ಸ್ಕೂಟರ್ ಯಾತ್ರೆ ವೇಳೆ ಕಾರ್ಪೊರೇಟರ್ ಪ್ರಮೀಳಾ ಭರತ್, ಪಾಲಿಕೆ ಸಿಬ್ಬಂದಿ ಉಪಸ್ಥಿತರಿದ್ದರು. ಬೃಂದಾವನ ಬಡಾವಣೆಯ ಗುರುದ್ವಾರ ಬಳಿಯ ರಸ್ತೆ, ಹೆಬ್ಬಾಳಿನ ಮಹದೇಶ್ವರ ಬಡಾವಣೆಯ ತ್ರಿನೇತ್ರ ಸರ್ಕಲ್‍ನಿಂದ ವಿಜಯನಗರ ವಾಟರ್ ಟ್ಯಾಂಕ್ ಸರ್ಕಲ್‍ವರೆಗಿನ ರಸ್ತೆ, ಹೈಟೆನ್ಷನ್ ರಸ್ತೆ, ವಿವಿ ಮೊಹಲ್ಲಾ, ಪಡುವಾರಹಳ್ಳಿ ಸೇರಿದಂತೆ ಮೈಸೂರಿನ ಹಲವು ರಸ್ತೆಗಳು ಮಳೆಯಿಂದಾಗಿ ಹಾಳಾಗಿದ್ದು, ವಾಹನ ಸವಾರರು ಪರಿತಪಿಸುವಂತಾಗಿದೆ.

Translate »