ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಐದು ಕೋಟಿ ರೂ. ದುರ್ಬಳಕೆ ಪ್ರಕರಣ ಕಾಂಗ್ರೆಸ್ ಮುಖಂಡ ಸೇರಿ ಐವರಿಗೆ ಜೈಲು ಶಿಕ್ಷೆ
ಮಂಡ್ಯ

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಐದು ಕೋಟಿ ರೂ. ದುರ್ಬಳಕೆ ಪ್ರಕರಣ ಕಾಂಗ್ರೆಸ್ ಮುಖಂಡ ಸೇರಿ ಐವರಿಗೆ ಜೈಲು ಶಿಕ್ಷೆ

September 10, 2022

ಮಂಡ್ಯ, ಸೆ.9- ಮಂಡ್ಯ ನಗರಾಭಿವೃದ್ಧಿ ಪ್ರಾಧಿ ಕಾರದ (ಮುಡಾ) ಐದು ಕೋಟಿ ರೂ.ಗಳನ್ನು ದುರುಪಯೋಗ ಪಡಿಸಿಕೊಂಡ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಕೆಬ್ಬಳ್ಳಿ ಆನಂದ್ ಸೇರಿದಂತೆ ಐವರಿಗೆ 7 ವರ್ಷ ಜೈಲು ಹಾಗೂ ಒಟ್ಟು 5,02,75000 ರೂ. ದಂಡ ವಿಧಿಸಿ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಈ ಹಿಂದೆ ಮಂಡ್ಯ ಜಿಲ್ಲಾ ಕಾಂಗ್ರೆಸ್‍ನ ಕಿಸಾನ್ ವಿಭಾಗದ ಅಧ್ಯಕ್ಷನಾಗಿದ್ದ ಕೆ.ಆನಂದ್ ಅಲಿಯಾಸ್ ಕೆಬ್ಬಳ್ಳಿ ಆನಂದ್, ಮೂಲತಃ ಮಳ ವಳ್ಳಿ ತಾಲೂಕು ಡಿ.ಹಲಸಹಳ್ಳಿ ಗ್ರಾಮದವನಾ ಗಿದ್ದು, ಬೆಂಗಳೂರಿನ ಫ್ಯೂಚರ್ ವೇಲ್ ಫಾರ್ಮಾ ಅಂಡ್ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್‍ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ ಹೆಚ್.ಎಸ್. ನಾಗಲಿಂಗಸ್ವಾಮಿ, ಮದ್ದೂರು ತಾಲೂಕು ಹೆಮ್ಮನ ಹಳ್ಳಿ ಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಆಕಾಶ್ ಎಂಟರ್‍ಪ್ರೈಸಸ್ ಮಾಲೀಕ ಚಂದ್ರಶೇಖರ್ ಅಲಿಯಾಸ್ ಪೂಜಾರಿ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಥಮ ದರ್ಜೆ ಸಹಾಯಕನಾಗಿದ್ದ ಹೆಚ್.ಕೆ.ನಾಗರಾಜು ಮತ್ತು ಕೆ.ಬಿ.ಹರ್ಷನ್ ಶಿಕ್ಷೆಗೆ ಗುರಿಯಾದವರು.

ವಿವರ: ಮಂಡ್ಯ ವಿವೇಕಾನಂದ ನಗರದ ಒಳ ಚರಂಡಿ ಕಾಮಗಾರಿಗಾಗಿ ಸರ್ಕಾರದಿಂದ ಮುಡಾಗೆ ಬಿಡುಗಡೆಯಾಗಿದ್ದ 5 ಕೋಟಿ ರೂ.ಗಳನ್ನು ಅಲಹಾಬಾದ್ ಬ್ಯಾಂಕ್‍ನಲ್ಲಿ ಠೇವಣಿ ಇಡಲಾಗಿತ್ತು. ತಮ್ಮ ಬ್ಯಾಂಕ್‍ನಲ್ಲೂ ಮುಡಾ ಹಣವನ್ನು ಠೇವಣಿ ಇಡುವಂತೆ 2013ರಲ್ಲಿ ಇಂಡಿಯನ್ ಬ್ಯಾಂಕ್‍ನ ಮ್ಯಾನೇಜರ್ ಮುಡಾಗೆ ಪತ್ರ ಬರೆದಿದ್ದರು. ಈ ಪತ್ರದ ಆಧಾರದ ಮೇರೆಗೆ ಮುಡಾದ ಅಂದಿನ ಅಯುಕ್ತ ಡಾ.ಹೆಚ್.ಹೆಚ್. ಶಿವರಾಮು 5 ಚೆಕ್‍ಗಳ ಮೂಲಕ ಇಂಡಿಯನ್ ಬ್ಯಾಂಕ್‍ಗೆ 5 ಕೋಟಿ ರೂ. ಗಳನ್ನು ವರ್ಗಾವಣೆ ಮಾಡಿದ್ದರು. ಆದರೆ, ಈ ಹಣವು ಕಾಂಗ್ರೆಸ್ ಮುಖಂಡ ಕೆಬ್ಬಳ್ಳಿ ಆನಂದ್ ತಂಡದ ಖಾತೆಗಳಿಗೆ ವರ್ಗಾವಣೆಯಾಗಿತ್ತು. ಅದೇ ವೇಳೆ ವಿವೇಕಾನಂದ ನಗರದ ಒಳ ಚರಂಡಿ ಕಾಮಗಾರಿಗೆ ಬಿಡುಗಡೆಯಾಗಿದ್ದ 5 ಕೋಟಿ ರೂ.ಗಳನ್ನು ಇಂಡಿಯನ್ ಬ್ಯಾಂಕ್‍ನಲ್ಲಿ ಠೇವಣಿ ಇಟ್ಟಿರುವುದಾಗಿ ನಕಲಿ ಬಾಂಡ್‍ಗಳನ್ನು ಮುಡಾ ದಾಖಲೆಗಳಲ್ಲಿ ಲಗತ್ತಿಸಲಾಗಿತ್ತು ಎಂದು ಹೇಳಲಾ ಗಿದೆ. ಹಣ ಬಿಡುಗಡೆಯಾಗಿ ಬಹಳ ದಿನಗಳಾ ದರೂ ಒಳ ಚರಂಡಿ ಕಾಮಗಾರಿ ಆರಂಭವಾಗದ ಕಾರಣ ಮುಡಾ ಸಭೆಗಳಲ್ಲಿ ಜನಪ್ರತಿನಿಧಿಗಳು ಗಲಾಟೆ ಮಾಡುತ್ತಿದ್ದರು. ಆಗ ಸಭೆಯ ಅಧ್ಯಕ್ಷತೆ ವಹಿಸಿದ್ದ ಅಂದಿನ ಜಿಲ್ಲಾಧಿಕಾರಿಗಳು ಒಳಚರಂಡಿ ಕಾಮಗಾರಿಗಾಗಿ ಇಂಡಿಯನ್ ಬ್ಯಾಂಕ್‍ನಲ್ಲಿ ಠೇವಣಿ ಇಟ್ಟಿರುವ ಹಣವನ್ನು ಕರ್ನಾಟಕ ಒಳ ಚರಂಡಿ ಮಂಡಳಿಗೆ ವರ್ಗಾಯಿಸುವಂತೆ ಮುಡಾ ಆಯುಕ್ತರಿಗೆ ಆದೇಶ ನೀಡಿದ್ದರು.

ಬ್ಯಾಂಕ್‍ನಲ್ಲಿ ಹಣವೇ ಇರಲಿಲ್ಲ: ಕರ್ನಾಟಕ ಒಳಚರಂಡಿ ಮಂಡಳಿಗೆ ಹಣ ವರ್ಗಾವಣೆ ಮಾಡಲು ಮುಡಾ ಆಯುಕ್ತರು ಮುಂದಾದರೆ ಇಂಡಿಯನ್ ಬ್ಯಾಂಕ್‍ನಲ್ಲಿದ್ದ ಮುಡಾ ಖಾತೆಯಲ್ಲಿ ಹಣವೇ ಇರಲಿಲ್ಲ. ಬ್ಯಾಂಕ್‍ನಿಂದ ಮುಡಾಗೆ ನೀಡಿದ್ದ ಎಫ್‍ಡಿ ಬಾಂಡ್‍ಗಳು ನಕಲಿ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಹಣ ದುರುಪಯೋಗಪಡಿಸಿಕೊಂಡು ನಕಲಿ ಬಾಂಡ್‍ಗಳನ್ನು ಮುಡಾಗೆ ನೀಡಲಾಗಿದೆ ಎಂದು ಮುಡಾ ಆಯುಕ್ತರಾಗಿದ್ದ ಡಾ. ಎಚ್.ಎಸ್. ಶಿವರಾಮು ಅವರು 2013ರ ಜುಲೈ 5ರಂದು ಇಂಡಿಯನ್ ಬ್ಯಾಂಕ್‍ನ ನಿವೃತ್ತ ಮ್ಯಾನೇಜರ್ ರಾಮಸ್ವಾಮಿ ಮತ್ತು ಆಗ ಮ್ಯಾನೇಜರ್ ಆಗಿದ್ದ ಕುಮಾರ ನಾಯಕ್ ವಿರುದ್ಧ ಮಂಡ್ಯ ಪಶ್ಚಿಮ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮುಡಾ ಆಯುಕ್ತರ ಬಂಧನ: ಈ ಪ್ರಕರಣವನ್ನು ತನಿಖೆ ನಡೆಸಿದ ಅಂದಿನ ಮಂಡ್ಯ ಡಿವೈಎಸ್ಪಿ ಡಾ. ವಿ.ಜೆ. ಶೋಭಾರಾಣಿ ಅವರು ದೂರು ನೀಡಿದ್ದ ಮುಡಾ ಆಯುಕ್ತರು, ಕಾಂಗ್ರೆಸ್ ಮುಖಂಡ ಕೆಬ್ಬಳ್ಳಿ ಆನಂದ್ ಸೇರಿದಂತೆ 8 ಮಂದಿ ವಿರುದ್ಧ ಮಂಡ್ಯ ಜೆಎಂಎಫ್‍ಸಿ ನ್ಯಾಯಾಲಯಕ್ಕೆ 2013ರ ಸೆ.10ರಂದು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇಂಡಿಯನ್ ಬ್ಯಾಂಕ್, ಬ್ಯಾಂಕ್‍ನ ನಿವೃತ್ತ ಮ್ಯಾನೇಜರ್ ಆರ್. ರಾಮಸ್ವಾಮಿ, ಆಗ ಮ್ಯಾನೇಜರ್ ಆಗಿದ್ದ ಎನ್. ಕುಮಾರನಾಯಕ್ ಅವರನ್ನು ಆರೋಪ ಪಟ್ಟಿಯಿಂದ ಕೈಬಿಟ್ಟಿದ್ದರು. ಮುಡಾ ಆಯುಕ್ತರು ಬ್ಯಾಂಕ್ ಮತ್ತು ಬ್ಯಾಂಕ್ ಅಧಿಕಾರಿಗಳ ವಿರುದ್ಧವೇ ದೂರು ಸಲ್ಲಿಸಿದ್ದರೂ ಕೂಡ ತನಿಖೆ ನಡೆಸಿದ ಡಿವೈಎಸ್ಪಿ ಶೋಭಾರಾಣಿ ಬ್ಯಾಂಕ್ ಮತ್ತು ಬ್ಯಾಂಕ್‍ನ ಅಧಿಕಾರಿಗಳ ಪಾತ್ರ ಈ ಪ್ರಕರಣದಲ್ಲಿ ಕಂಡು ಬರುತ್ತಿಲ್ಲ ಎಂದು ಆರೋಪ ಪಟ್ಟಿಯಲ್ಲಿ ತಿಳಿಸಿದ್ದರಲ್ಲದೆ, ದೂರುದಾರರಾದ ಮುಡಾ ಆಯುಕ್ತರನ್ನೂ ಕೂಡ ಆರೋಪಿ ಮಾಡಿದ್ದರು. ಅದು ಮಾತ್ರವಲ್ಲದೆ ಮುಡಾ ಆಯುಕ್ತ ಡಾ. ಎಚ್.ಎಸ್. ಶಿವರಾಮು, ಕಾಂಗ್ರೆಸ್ ಮುಖಂಡರ ಕೆಬ್ಬಳ್ಳಿ ಆನಂದ್ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದರು. ಇಬ್ಬರು ಆಗ ತಲೆಮರೆಸಿಕೊಂಡಿದ್ದರು. ಡಿವೈಎಸ್ಪಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ ವೇಳೆ ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದಿಂದ ಕೈಬರಹ ತಜ್ಞರ ವರದಿ ಬಂದಿರಲಿಲ್ಲ.

ಸಿಬಿಐಗೆ ವರ್ಗಾವಣೆ: ಈ ಪ್ರಕರಣ ಮಂಡ್ಯ ರಾಜಕೀಯ ವಲಯದಲ್ಲಿ ಭಾರೀ ತಲ್ಲಣವನ್ನೇ ಸೃಷ್ಟಿಸಿತ್ತು. ಅದೇ ವೇಳೆ ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದಲ್ಲೂ ಕೆಬ್ಬಳ್ಳಿ ಆನಂದ್ ತಂಡ ಇಂತಹದ್ದೇ ಕೃತ್ಯ ಎಸಗಿದೆ ಎಂಬ ಆರೋಪಗಳು ಕೇಳಿಬಂದಿದ್ದು, ರಾಜಕೀಯ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳು ಕೇಳಿಬರುತ್ತಿದ್ದವು. ಆ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು ಪ್ರಕರಣವನ್ನು ಸಿಬಿಐಗೆ ವಹಿಸಲು ಆದೇಶ ನೀಡಿದ್ದರು. ಈ ಪ್ರಕರಣ 2014ರ ಮಾರ್ಚ್ 18ರಂದು ಸಿಬಿಐನಲ್ಲಿ ದಾಖಲಾಯಿತು. ಸಿಬಿಐನ ಅಂದಿನ ಡಿವೈಎಸ್ಪಿ ಕೆ.ವೈ. ಗುರುಪ್ರಸಾದ್ ಅವರು ತನಿಖೆ ನಡೆಸಿ, ಕೆಬ್ಬಳ್ಳಿ ಆನಂದ್, ಹೆಚ್.ಎಸ್. ನಾಗಲಿಂಗಸ್ವಾಮಿ, ಚಂದ್ರಶೇಖರ್, ಹೆಚ್.ಕೆ. ನಾಗರಾಜ ಮತ್ತು ಕೆ.ಬಿ.ಹರ್ಷನ್ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ 2015ರ ಜೂನ್ 27ರಂದು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

Translate »