ಸರಳ ದಸರೆಗೆ ಸಜ್ಜಾಗುತ್ತಿದೆ `ಮೈಸೂರು ಅರಮನೆ’
ಮೈಸೂರು

ಸರಳ ದಸರೆಗೆ ಸಜ್ಜಾಗುತ್ತಿದೆ `ಮೈಸೂರು ಅರಮನೆ’

October 14, 2020

ಮೈಸೂರು, ಅ.13(ಎಂಟಿವೈ)- ದಸರಾ ಮಹೋ ತ್ಸವದ ಆರಂಭಕ್ಕೆ 4 ದಿನವಷ್ಟೇ ಬಾಕಿ ಇದ್ದು, ಮೈಸೂರು ಅರಮನೆಯಲ್ಲಿ ಅಂತಿಮ ಹಂತದ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ. ಈ ನಡುವೆ ಕೊರೊನಾ ಸೋಂಕಿನ ಭಯದಿಂದ ನವರಾತ್ರಿಯ ಧಾರ್ಮಿಕ ಕಾರ್ಯಗಳಲ್ಲಿ ಕೆಲವು ಮಾರ್ಪಾಡು ಮಾಡುವ ಚಿಂತನೆ ರಾಜಮನೆತನದಲ್ಲಿ ನಡೆದಿದೆ ಎನ್ನಲಾಗಿದೆ.

ದಸರಾ ಮಹೋತ್ಸವ ವೇಳೆ 10 ದಿನ ನವವಧು ವಿನಂತೆ ಕಂಗೊಳಿಸುವ ಮೈಸೂರು ಅರಮನೆಯಲ್ಲಿ ಸಿದ್ಧತಾ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ. ಅರ ಮನೆಯ ವಿದ್ಯುತ್ ದೀಪಾಲಂಕಾರದಲ್ಲಿ 15 ಸಾವಿರ ಬಲ್ಬ್‍ಗಳು ಪ್ರತಿ ವರ್ಷದಂತೆ ಈ ಬಾರಿಯೂ ಹಾನಿ ಗೀಡಾಗಿದ್ದವು. ಅವನ್ನು ಬದಲಿಸುವ ಕಾರ್ಯ 2 ವಾರದಿಂದ ನಡೆಯುತ್ತಿದ್ದು, ಈಗ ಅಂತಿಮ ಹಂತ ತಲುಪಿದೆ. ಅರಮನೆಯ ಮುಂಬದಿ ಗೋಡೆಯ ಬಲ್ಬ್‍ಗಳಲ್ಲಿ ಹಾನಿಗೀಡಾಗಿರುವ ಬಲ್ಬ್‍ಗಳನ್ನು ಬದಲಿಸುವುದಷ್ಟೇ ಬಾಕಿ ಇದೆ. ಬುಧವಾರ ಸಂಜೆಗೆ ಈ ಕಾರ್ಯ ಪೂರ್ಣಗೊಳ್ಳಲಿದೆ.

ಅರಮನೆ ಆವರಣದಲ್ಲಿನ ಉದ್ಯಾನಗಳು ಸೇರಿ ದಂತೆ ವಿವಿಧೆಡೆ ಅಲಂಕರಿಸಲು 6 ಸಾವಿರ ಕುಂಡ ಗಳಲ್ಲಿ ಬೆಳೆಸಿದ್ದ ಗಿಡಗಳು ಬಣ್ಣ ಬಣ್ಣದ ಹೂವಿಂದ ಕಂಗೊಳಿಸುತ್ತಿವೆ. ಅವನ್ನು ಅಲಂಕಾರಿಕವಾಗಿ ಜೋಡಿ ಸುವ ಕೆಲಸ ಆರಂಭವಾಗಿದೆ. ದಸರಾ ವೇಳೆ ಅರ ಮನೆಯ ಅಂದ ಹೆಚ್ಚಿಸಲು ಉದ್ಯಾನ ಹಾಗೂ ಅರಮನೆ ಪ್ರವೇಶ ದ್ವಾರದ ಬಳಿ ಹೂಕುಂಡಗಳನ್ನು ಜೋಡಿ ಸಿಟ್ಟು ಅಲಂಕರಿಸುವುದು ವಾಡಿಕೆ. ಪ್ರವಾಸಿಗರ ಆಕರ್ಷ ಣೆಗೆಂದೇ ಈ ಅಲಂಕಾರ ಕಾರ್ಯ ನಡೆಸಲಾಗುತ್ತದೆ.

ಕೆಲ ಸಂಪ್ರದಾಯಕ್ಕೆ ಕೊಕ್: ಆಯುಧಪೂಜೆ ದಿನ ನಡೆಯುತ್ತಿದ್ದ `ವಜ್ರಮುಷ್ಠಿ’ ಕಾಳಗವನ್ನು ಈ ಬಾರಿ ರದ್ದು ಮಾಡಲಾಗಿದೆ. ಜನಜಂಗುಳಿ ಹಾಗೂ ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲೆಂದೇ ಈ ಕ್ರಮ ಕೈಗೊಳ್ಳಲಾಗಿದೆ. ಖಾಸಗಿ ದರ್ಬಾರ್ ವೇಳೆಯ ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಾಲ್ಗೊಳ್ಳಲಿದ್ದು, ಪರಂಪರೆಯಂತೆ ಅರಮನೆಯ ಸೇವಕರು ಹಾಗೂ ಪುರೋಹಿತರು ಕೆಲವು ಆಚರಣೆ ವೇಳೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಕೈ ಹಿಡಿದು ಪೂಜಾ ವಿಧಾನದಲ್ಲಿ ಭಾಗಿಯಾಗುವ ಸಂಪ್ರದಾಯವಿದೆ. ಆದರೆ ಕೊರೊನಾ ಭಯದಿಂದಾಗಿ ಈ ಬಾರಿ ಖಾಸಗಿ ದರ್ಬಾರ್ ವೇಳೆ ಹಸ್ತಾಲಾಘವ, ದರ್ಬಾರ್ ಭಕ್ಷಿ ಆಚರಣೆ ಕೈಬಿಡಲಾಗಿದೆ.

ಹಿರಿಯರಿಗಿಲ್ಲ ಪ್ರವೇಶ: 60 ವರ್ಷ ಮೇಲ್ಪಟ್ಟ ಅರಮನೆ ಸಿಬ್ಬಂದಿ ಮತ್ತು ಪುರೋಹಿತರನ್ನು ಈ ಬಾರಿಯ ನವರಾತ್ರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದಂತೆ ಸೂಚನೆ ನೀಡಲಾಗಿದೆ. ವಾಡಿಕೆಯಂತೆ ದರ್ಬಾರ್ ವೇಳೆ ರಾಜಮನೆತನಕ್ಕೆ ಸೇರಿದ ಹಿರಿಯರು, ಅರಮನೆಯ ಹಿತೈಷಿಗಳು ವಿವಿಧೆಡೆಯಿಂದ ಬಂದು ಪಾಲ್ಗೊಳ್ಳುತ್ತಿದ್ದರು. ಅರಮನೆಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಈಗಾಗಲೇ ನಿರ್ಬಂಧ ಹೇರಲಾಗಿದೆ. ಈಗ ಇದರೊಟ್ಟಿಗೆ 60 ವರ್ಷ ಮೇಲ್ಪಟ್ಟವರ ಪ್ರವೇಶಕ್ಕೂ ಅವಕಾಶ ನೀಡದಿರಲು ನಿರ್ಧರಿಸಿರುವುದಾಗಿ ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದ್ದಾರೆ.

 

Translate »