ಮೈಸೂರು, ಜು.23(ಆರ್‍ಕೆ)-ಸಿಬ್ಬಂದಿ ಯೊಬ್ಬರಲ್ಲಿ ಕೊರೊನಾ ದೃಢಪಟ್ಟಿರುವ ಹಿನ್ನೆಲೆ ನಜರ್‍ಬಾದಿನಲ್ಲಿರುವ ನಗರ ಪೊಲೀಸ್ ಆಯುಕ್ತರ ನೂತನ ಕಟ್ಟಡದ ಸಾಮಾನ್ಯ ವಿಭಾಗವನ್ನು ಸೀಲ್‍ಡೌನ್ ಮಾಡಲಾಗಿದೆ.
ಡೆಪ್ಯೂಟೇಷನ್ ಮೇಲೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬರಿಗೆ ಕೋವಿಡ್ ಪಾಸಿಟಿವ್ ಬಂದಿರುವುದರಿಂದ ಅವರನ್ನು ಕೋವಿಡ್ ಕೇರ್ ಸೆಂಟರ್‍ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಆ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸಹ ನೌಕರರನ್ನು ಮನೆಯಲ್ಲೇ ಪ್ರತ್ಯೇಕವಾಗಿ ರುವಂತೆ ಸೂಚಿಸಲಾಗಿದೆ.
ಸೋಂಕು ದೃಢಪಟ್ಟಿರುವುದು ತಿಳಿಯು ತ್ತಿದ್ದಂತೆಯೇ ನಗರ ಪೊಲೀಸ್ ಆಯುಕ್ತರ ಕಚೇರಿ ನೂತನ ಕಟ್ಟಡದ ಜನರಲ್ ಬ್ರಾಂಚ್ ಅನ್ನು ಮಾತ್ರ ಸೀಲ್‍ಡೌನ್ ಮಾಡಿ, ಇಡೀ ಕಟ್ಟಡವನ್ನು ಸ್ಯಾನಿಟೈಸ್ ಮಾಡಲಾಯಿತು. ಕಟ್ಟಡದ ಉಳಿದ ಶಾಖೆಗಳ ಕಚೇರಿ, ಹಳೇ ಕಟ್ಟಡಗಳ ಎಲ್ಲಾ ಕಚೇರಿ ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕರು ಅಗತ್ಯವಿದ್ದಲ್ಲಿ ಮಾತ್ರ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಲು ಬರಬೇಕು. ಉಳಿದಂತೆ ದೂರವಾಣಿ ಮೂಲಕ ಸಂಪರ್ಕಿಸುವಂತೆ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.