ಮೈಸೂರು, ಅ.11(ಎಂಟಿವೈ)- ಪದೇ ಪದೆ ರಸ್ತೆ ನಿಯಮ ಉಲ್ಲಂಘಿಸುತ್ತಲೇ ಇರುವ, ದಂಡ ವಿಧಿಸಿ ಮನೆಗೆ ನೋಟಿಸ್ ಕಳುಹಿಸಿದರೂ ದಂಡ ಪಾವತಿಸದೇ ತಪ್ಪಿಸಿ ಕೊಳ್ಳುವ ಚಾಲಾಕಿ ವಾಹನ ಮಾಲೀಕರಿಗೆ ತಕ್ಕ ಪಾಠ ಕಲಿಸಲು ಮೈಸೂರಿನ ಸಂಚಾರ ಪೊಲೀಸರು ಈಗ ಭಿನ್ನ ಮಾರ್ಗ ತುಳಿದಿ ದ್ದಾರೆ. ಸಂಚಾರ ಪೊಲೀಸರನ್ನು ದೂರದಿಂ ದಲೇ ಕಂಡು ಮಾರ್ಗ ಬದಲಿಸುತ್ತಿದ್ದ, ನೋಟಿಸ್ ಕೊಟ್ಟರೂ ದಂಡ ಕಟ್ಟದೇ ತಪ್ಪಿಸಿ ಕೊಳ್ಳುತ್ತಿದ್ದ ವಾಹನ ಸವಾರರನ್ನು ನಗರ ಸಂಚಾರ ಪೊಲೀಸರು ಆರ್‍ಟಿಒ ಕಚೇರಿ, ವಿಮಾ ಕಂಪನಿ ಕಚೇರಿ, ಎಮಿಷನ್ ಟೆಸ್ಟ್ ಕೇಂದ್ರಗಳ ಬಳಿ ಕಾದುನಿಂತು ಹಿಡಿದ ದಂಡ ಕಟ್ಟಿಸಿಕೊಳ್ಳುತ್ತಿದ್ದಾರೆ. ಈ ಹೊಸ ಪ್ರಯೋಗದಲ್ಲಿ ಬಹುತೇಕ ಯಶಸ್ಸು ಕಂಡಿರುವ ಟ್ರಾಫಿಕ್ ಪೊಲೀಸ್, ಈವರೆಗೆ 941 ಪ್ರಕರಣಗಳಿಂದ 1,89,400 ರೂ. ದಂಡ ವಸೂಲಿ ಮಾಡಿದ್ದಾರೆ. ಕಳೆದ ಕೆಲ ದಿನಗಳಿಂದ ಮೈಸೂರಲ್ಲಿ ವಾಹನ ತಪಾಸಣಾ ಕಾರ್ಯ ಕಟ್ಟುನಿಟ್ಟಾಗಿ ನಡೆಯುತ್ತಿದೆ. ಹೆಲ್ಮೆಟ್, ಮಾಸ್ಕ್ ಧರಿಸದ, ಸಿಗ್ನಲ್ ಜಂಪ್, ಒನ್‍ವೇ, ಟ್ರಿಬಲ್ ರೈಡ್, ಸರಿಯಾದ ದಾಖಲೆ ಪತ್ರಗಳಿರದ ಹಾಗೂ ಥರ್ಡ್ ಪಾರ್ಟಿ ವಿಮೆ ಇಲ್ಲದ ವಾಹನ ಸವಾರರಿಗೆ ದಂಡ ವಿಧಿಸುತ್ತಿದ್ದಾರೆ. ಹಳೆ ಪ್ರಕರಣಗಳಿಗೆ ದಂಡ ಪಾವತಿಸದೆ ಕಣ್ತಪ್ಪಿಸಿ ಓಡಾಡುತ್ತಿದ್ದ ವಾಹನ ಸವಾರರ ಚಾಲಾಕಿತನಕ್ಕೂ ಪೆಟ್ಟು ನೀಡುತ್ತಿದ್ದಾರೆ. ಅತೀ ಹೆಚ್ಚು ಪ್ರಕರಣಗಳಲ್ಲಿ ದಂಡ ಪಾವತಿಸಬೇಕಾದ ವಾಹನಗಳ ಮಾಲೀಕರ ಮನೆ ಬಾಗಿಲಿಗೇ ತೆರಳಿ ದಂಡ ವಸೂಲಿ ಮಾಡುತ್ತಿದ್ದ ನಗರ ಸಂಚಾರ ಪೊಲೀಸರು, ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ದುಸ್ವಪ್ನವಾಗಿದ್ದರು. ದಂಡ ಪಾವತಿಸುವುದನ್ನು ತಪ್ಪಿಸಿಕೊಳ್ಳಲು ವಾಹನ ಸವಾರರು ಚಾಪೆ ಕೆಳಗೆ ನುಸುಳಿದರೆ, ಪೊಲೀಸರು ರಂಗೋಲೆ ಕೆಳಗೆ ನುಸುಳುವಂತೆ ಹೊಸ ಹೊಸ ಮಾರ್ಗಗಳನ್ನು ಹುಡುಕಿ ತಪ್ಪದೇ ದಂಡ ವಸೂಲಿ ಮಾಡುತ್ತಿದ್ದಾರೆ. ಎಎಸ್‍ಐ, ಕಾನ್‍ಸ್ಟೇಬಲ್‍ಗಳು ನಗರದ ವಿವಿಧ ರಸ್ತೆಗಳ ಆಯಕಟ್ಟಿನ ಸ್ಥಳಗಳಲ್ಲಿ ವಾಹನ ತಪಾಸಣೆ ಮಾಡಿ ದಂಡ ಕಟ್ಟಿಸಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ವಾಯುಮಾಲಿನ್ಯ ಪರೀಕ್ಷೆಗೆಂದು ಎಮಿಷನ್ ಟೆಸ್ಟ್ ಸೆಂಟರ್‍ಗೆ ಬರುವ, ವಿಮೆ ಮಾಡಿಸಲು ವಿಮಾ ಕಂಪನಿಗೆ ತೆರಳುವ ಹಾಗೂ ಎಫ್‍ಸಿ, ಮಾಲೀಕತ್ವ ವರ್ಗಾ ವಣೆಗೆಂದು ಆರ್‍ಟಿಒ ಕಚೇರಿಗೆ ಬರುವ ವಾಹನ ಮಾಲೀಕರನ್ನು ಹಿಡಿದು ದಂಡ ಬಾಕಿ ಮೊತ್ತವನ್ನು ವಸೂಲಿ ಮಾಡಲು ಓರ್ವ ಎಎಸ್‍ಐ ಹಾಗೂ ಇಬ್ಬರು ಸಿಬ್ಬಂದಿಯ ತಂಡ ರಚಿಸಲಾಗಿದೆ. ಹೊಗೆ ಪರೀಕ್ಷೆ, ವಿಮೆ ಹಾಗೂ ಎಫ್‍ಸಿಗೂ ಮುನ್ನ ಬಾಕಿ ದಂಡ ಪಾವತಿಸಿದರಷ್ಟೇ ಮುಂದಿನ ಹಂತಕ್ಕೆ ವಾಹನ ಕೊಂಡೊಯ್ಯಲು ಸಾಧ್ಯ ಎನ್ನುವಂತೆ ಮಾಡಲಾಗಿದೆ. ಈ ಹಂತದಲ್ಲೂ ದಂಡ ಕಟ್ಟದೇ ತಪ್ಪಿಸಿಕೊಂಡರೆ ಪೊಲೀಸರು ಕಡೆಯ ಮಂತ್ರವಾಗಿ ವಾಹನವನ್ನೇ ವಶಕ್ಕೆ ತೆಗೆದುಕೊಳ್ಳಲಿದ್ದಾರೆ.