ಮೈಸೂರು ಪಾಲಿಕೆ ವ್ಯಾಪ್ತಿಯ ರೆವಿನ್ಯೂ  ಬಡಾವಣೆಗಳ ಸ್ವತ್ತುಗಳಿಗೆ `ಬಿ ಖಾತೆ’
ಮೈಸೂರು

ಮೈಸೂರು ಪಾಲಿಕೆ ವ್ಯಾಪ್ತಿಯ ರೆವಿನ್ಯೂ ಬಡಾವಣೆಗಳ ಸ್ವತ್ತುಗಳಿಗೆ `ಬಿ ಖಾತೆ’

January 18, 2022

ಮೈಸೂರು, ಜ.17(ಎಸ್‍ಬಿಡಿ)- ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಕಂದಾಯ(ರೆವಿನ್ಯೂ) ಬಡಾ ವಣೆಗಳಲ್ಲಿನ ಸ್ವತ್ತುಗಳಿಗೆ `ಬಿ-ಖಾತೆ’ ಮಾಡಿಕೊಡಲು ಸೋಮ ವಾರ ನಡೆದ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಬೆಂಗಳೂರು ಮಹಾನಗರ ಪಾಲಿಕೆ ಮಾದರಿಯಲ್ಲಿ ರೆವಿನ್ಯೂ ಬಡಾವಣೆಗಳ ಸ್ವತ್ತುಗಳಿಗೆ ಪ್ರತ್ಯೇಕವಾದ `ನಮೂನೆ-ಬಿ’(ಬಿ-ರಿಜಿಸ್ಟರ್) ಆಸ್ತಿ ವಹಿ ನಿರ್ವಹಿಸಿ, ಆಸ್ತಿ ಮಾಲೀಕರಿಗೆ `ಬಿ-ಖಾತೆ’ ಮಾಡಿಕೊಡುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಬಗ್ಗೆ ಇಂದಿನ ಕೌನ್ಸಿಲ್ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದ ಬಳಿಕ, ಸದಸ್ಯರು ವ್ಯಕ್ತಪಡಿಸಿದ ಸಲಹೆ-ಅಭಿಪ್ರಾಯಗಳನ್ನು ಕಾನೂನಾತ್ಮಕ ವಾಗಿ ಅಳವಡಿಸಿಕೊಂಡು, ಪಾಲಿಕೆ ವ್ಯಾಪ್ತಿಯ 61 ರೆವಿನ್ಯೂ ಬಡಾವಣೆಗಳ ಸಾವಿರಾರು ಆಸ್ತಿಗಳನ್ನು `ಬಿ-ರಿಜಿಸ್ಟರ್’ನಡಿ ತಂದು ಮುಂದಿನ ಕ್ರಮ ಕೈಗೊಳ್ಳಲು ಕೌನ್ಸಿಲ್ ಒಪ್ಪಿರುವುದಾಗಿ ಮೇಯರ್ ಸುನಂದಾ ಪಾಲನೇತ್ರ ಘೋಷಿಸಿದರು.

ಸಲಹೆ-ಅಭಿಪ್ರಾಯ: ಈ ಕಾರ್ಯಸೂಚಿ ಸಂಬಂಧ ಮೊದಲಿಗೆ ಮಾತನಾಡಿದ ಮಾಜಿ ಉಪಮೇಯರ್ ಶಾಂತಕುಮಾರಿ, ರೆವಿನ್ಯೂ ಬಡಾವಣೆ ನಿವಾಸಿಗಳು 40 ವರ್ಷದಿಂದ `ಬಿ-ಖಾತೆ’ ಗಾಗಿ ಕಾದಿದ್ದಾರೆ. ಆದರೆ ಹಿಂದೆ `ಹೋಲ್ಡರ್ ಖಾತೆ’ ನೀಡಿ, ಜನರಿಗೆ ವಂಚಿಸಿದಂತೆ ಇದೂ ಆಗಬಾರದು. ಮೊದಲು ಒಟ್ಟು ರೆವಿನ್ಯೂ ಬಡಾವಣೆ ಹಾಗೂ ಆಸ್ತಿಗಳ ಸಂಖ್ಯೆ ದಾಖಲಿಸುವ ಸರ್ವೆ ಆಗಬೇಕು. ಬಿ-ಖಾತೆಯ ನಂತರವೂ ದುಪ್ಪಟು ತೆರಿಗೆ ವಸೂಲಿ ಮಾಡಬಾರದು. ಕೆಲ ನಿಯಮಗಳನ್ನು ಅಳವಡಿಸಿ ಕೊಂಡು ನಿರ್ಣಯ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಎಂ.ಡಿ.ನಾಗರಾಜ್ ಮಾತನಾಡಿ, ತೆರಿಗೆ ದೃಷ್ಟಿಯಿಂದ ಮಾತ್ರ ಬಿ-ಖಾತೆ ಮಾಡಿಕೊಡುವುದರಿಂದ ಜನರಿಗೇನು ಪ್ರಯೋಜನ. ಬಿ-ಖಾತೆ ನೀಡುವುದರಿಂದ ಬ್ಯಾಂಕ್ ಸಾಲ ಸೌಲಭ್ಯ ಸಿಗುವು ದಿಲ್ಲ. ಬದಲಾಗಿ `ಎ-ಖಾತೆ’ ನೀಡುವ ಬಗ್ಗೆ ಪ್ರಯತ್ನ ಮುಂದು ವರೆಸುವುದು ಸೂಕ್ತ ಎಂದು ಅಭಿಪ್ರಾಯಿಸಿದರು. ಬಿ.ವಿ.ಮಂಜು ನಾಥ್ ಮಾತನಾಡಿ, ಎಕರೆಗಟ್ಟಲೆ ಜಮೀನಿಗೆ

ಎ-ಖಾತೆ ಮಾಡಿಕೊಟ್ಟಿರುತ್ತಾರೆ. ಈ ಬಗ್ಗೆ ಪರಿಶೀಲಿಸಿ, ನಕಲಿ ಖಾತೆಗಳನ್ನು ವಜಾ ಮಾಡಿದ ಬಳಿಕ ಬಿ-ಖಾತೆ ಮಾಡಿಕೊಡ ಬೇಕು. ನ್ಯಾಯಾಂಗದಲ್ಲಿ ಮೊಕದ್ದಮೆ ಇರುವ, ಸಂರಕ್ಷಣಾ ವಲಯ(ಬಫರ್ ಜೋನ್)ದಲ್ಲಿ ನಿರ್ಮಿಸಿರುವ ಮನೆ, ನಿವೇ ಶನಗಳನ್ನು ಬಿ-ರಿಜಿಸ್ಟರ್‍ನಲ್ಲಿ ಸೇರ್ಪಡೆ ಮಾಡಬಾರದು. ಈ ರೀತಿಯ ಕಾರಣಗಳಿಂದಲೇ ನಮ್ಮ ವಾರ್ಡ್‍ನಲ್ಲಿ 2.25 ಕೋಟಿ ರೂ. ಒಳಚರಂಡಿ ಕಾಮಗಾರಿಗೆ ತೊಡಕಾಯಿತು. ಪರಿಶೀಲನೆ ನಡೆಸಿದ ಮುಖ್ಯ ಇಂಜಿನಿಯರ್, ಕಾಮಗಾರಿ ಯನ್ನೇ ರದ್ದು ಮಾಡಿದರು ಎಂದು ಮುಂದಾಗಬಹುದಾದ ಸಮಸ್ಯೆಗಳ ಬಗ್ಗೆ ಮನದಟ್ಟು ಮಾಡಿದರು.

ಮಾಜಿ ಮೇಯರ್ ಆರಿಫ್ ಹುಸೇನ್, ರೆವಿನ್ಯೂ ಬಡಾವಣೆಗಳಲ್ಲಿ ಅತೀ ಬಡವರು ಹಾಗೂ ಶ್ರೀಮಂತರಿದ್ದಾರೆ. ಹಣವಂತರು ಹತ್ತಾರು ಮನೆಗಳನ್ನು ಕಟ್ಟಿ, ಬಾಡಿಗೆ ನೀಡಿರುತ್ತಾರೆ. ಇಂತಹ ಪ್ರಕರಣಗಳಲ್ಲಿ ಒಬ್ಬರ ಹೆಸರಿನಲ್ಲಿ ಹಲವು ಆಸ್ತಿಗಳಿಗೆ ಬಿ-ಖಾತೆ ನೀಡಬಹುದೇ?. ಬೆಂಗಳೂರಿನಲ್ಲಿ ಬಿ-ಖಾತೆಯನ್ನು ಎ-ಖಾತೆಯಾಗಿ ಪರಿವರ್ತಿಸು ವುದಾಗಿ ದಂಧೆ ನಡೆಯುತ್ತಿದೆ. ಅದು ಮೈಸೂರಿನಲ್ಲೂ ಆಗಬಹುದು. ಮುಖ್ಯಮಂತ್ರಿಗಳೇ `ಬಿ’ಯಿಂದ ಎ-ಖಾತೆಗೆ ಪರಿವರ್ತಿಸುವ ಭರವಸೆ ನೀಡಿದ್ದು, ಅದು ಕಾರ್ಯರೂಪಕ್ಕೆ ಬಂದ ನಂತರವೇ ನಾವು ನೇರವಾಗಿ `ಎ’ ಖಾತೆ ವ್ಯವಸ್ಥೆಯನ್ನೇ ಜಾರಿಗೊಳಿಸೋಣ ಎಂದರು.

ಪ್ರೇಮಾ ಶಂಕರೇಗೌಡ, ಪಾಲಿಕೆ ವ್ಯಾಪ್ತಿಯ ಎಲ್ಲಾ ಆಸ್ತಿಗಳನ್ನೂ ತೆರಿಗೆ ವ್ಯವಸ್ಥೆಯಡಿ ತರಬೇಕೆಂಬುದು ಒಳ್ಳೆಯ ವಿಚಾರ. ಈಗಲೂ ರೆವಿನ್ಯೂ ಬಡಾವಣೆಯ ಶೇ.70ರಷ್ಟು ಮಂದಿ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಬಿ-ಖಾತೆ ನಂತರ ದುಪಟ್ಟು ತೆರಿಗೆ ವಸೂಲಿ ಮಾಡಬಾರದು. ಅದರ ಆಧಾರದಲ್ಲಿ ಬ್ಯಾಂಕ್‍ನಿಂದ ಸಾಲ ಸೌಲಭ್ಯ ಸಿಗಬೇಕು, ಆಸ್ತಿ ಮಾಲೀಕರಿಗೆ ಸ್ವತ್ತಿನ ಭದ್ರತೆ ಸಿಗುವಂತಾಗಬೇಕು ಎಂದು ಸಲಹೆ ನೀಡಿದರು.

ಕೆ.ವಿ.ಶ್ರೀಧರ್, ಬಿಬಿಎಂಪಿ ಹೊರತುಪಡಿಸಿ ರಾಜ್ಯದ ಯಾವ ಪಾಲಿಕೆಯಲ್ಲೂ ಬಿ-ಖಾತೆ ವ್ಯವಸ್ಥೆಯಿಲ್ಲ. ಬಿ-ಖಾತೆ ನೀಡುವುದರಿಂದ ದುಪ್ಪಟ್ಟು ತೆರಿಗೆ ಪಾವತಿಸುವುದು ತಪ್ಪುವುದಿಲ್ಲ. ದಳ್ಳಾಳಿಗಳು, ಕೆಲ ಅಧಿಕಾರಿಗಳಿಗೆ ಹಣ ಮಾಡಲು ದಾರಿ ಮಾಡಿಕೊಟ್ಟಂ ತಾಗುತ್ತದೆ. 2020ರ ಮಾರ್ಚ್ 30ರ ಹಿಂದೆ ಮನೆ ನಿರ್ಮಿಸಿದವರಿಗೆ ಅನ್ವಯ ಎನ್ನುವು ದಾದರೆ ಈ ದಿನಾಂಕದ ನಂತರ ಮನೆ ನಿರ್ಮಿಸಿದವರ ಕತೆ ಏನು? ಎಂದು ಪ್ರಶ್ನಿಸಿದರು.

ಮಾಜಿ ಉಪಮೇಯರ್ ಷಫಿ, ಹಿಂದೆ `ಹೋಲ್ಡರ್ ಖಾತೆ’ಯಿಂದ ಬಹಳಷ್ಟು ಜನರಿಗೆ ಮೋಸ ಆಗಿದೆ. ಹಾಗಾಗದಂತೆ ಕ್ರಮ ವಹಿಸಿದರೆ ಬಿ-ಖಾತೆ ವ್ಯವಸ್ಥೆಗೆ ಎಲ್ಲಾ ಸದಸ್ಯರ ಸಹಮತವಿದೆ. ಹಾಗೆಯೇ ನೀರಿನ ಶುಲ್ಕ ಬಾಕಿ ಮೇಲಿನ ಬಡ್ಡಿ ಮನ್ನಾಗೆ ಕ್ರಮ ವಹಿಸಬೇಕು. ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಸಭೆಯಲ್ಲಿದ್ದ ಸಂಸದ ಪ್ರತಾಪ್ ಸಿಂಹ ಅವರಿಗೆ ಮನವಿ ಮಾಡಿದರು.

ಮಾಜಿ ಮೇಯರ್ ಅಯೂಬ್ ಖಾನ್ ಮಾತನಾಡಿ, ಬಿ-ಖಾತೆ ಲಕ್ಷಾಂತರ ಜನರ ಕನಸು. ಇದರಿಂದ ಸ್ವತ್ತು ನನ್ನದು ಎನ್ನುವ ಭದ್ರತೆ ಸಿಗುತ್ತದೆ. ಬ್ಯಾಂಕ್ ಸಾಲ ಸೌಲಭ್ಯವೂ ಸಿಗಬಹುದು ಎಂದರು. ಎಸ್‍ಬಿಎಂ ಮಂಜು, ನಿಯಮಬಾಹಿರವಾಗಿ ನಿರ್ಮಾಣ ವಾಗಿರುವ ರೆವಿನ್ಯೂ ಬಡಾವಣೆಗಳ ಸ್ವತ್ತುಗಳಿಗೆ ಬಿ-ಖಾತೆ ನೀಡದರೆ ಪಾಲಿಕೆಯಿಂದ ತಪ್ಪಾದಂತಾಗಬಹುದು. ಈ ಖಾತೆಯಿಂದ ಬ್ಯಾಂಕ್ ಸೌಲಭ್ಯ ದೊರಕುವುದಿಲ್ಲ ಎಂದರು.

Translate »