ಮೈಸೂರಿನ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್‍ನ ಪ್ರತಿ ಕೇಂದ್ರದಲ್ಲಿ 200 ಮಂದಿ ಪರೀಕ್ಷೆ ಗುರಿ
ಮೈಸೂರು

ಮೈಸೂರಿನ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್‍ನ ಪ್ರತಿ ಕೇಂದ್ರದಲ್ಲಿ 200 ಮಂದಿ ಪರೀಕ್ಷೆ ಗುರಿ

August 26, 2020

ಮೈಸೂರು, ಆ.25(ಎಂಟಿವೈ)- ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣದಿಂದಾಗಿ ಆರೋಗ್ಯ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದುದರಿಂದ ಆಗಸ್ಟ್ 20ರಿಂದ ಸ್ಥಗಿತಗೊಂಡಿದ್ದ ಸ್ವ್ಯಾಬ್ ಟೆಸ್ಟ್ ಮಂಗಳವಾರದಿಂದ ಒಂಭತ್ತು ಸ್ಥಳಗಳಲ್ಲಿ ಪುನಾರಂಭಗೊಂಡಿದೆ.

ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಪೂರ್ಣ ಪ್ರಮಾಣದಲ್ಲಿ ಆರಂಭ ವಾಗಿದ್ದು, ಪ್ರತಿಕೇಂದ್ರದಲ್ಲೂ ನೂರಾರು ಮಂದಿ ಸ್ವಯಂ ಪ್ರೇರಣೆಯಿಂದ ಪರೀಕ್ಷೆ ಮಾಡಿಸಿಕೊಳ್ಳಲು ಸಾಲುಗಟ್ಟಿದ್ದರು.

ಮಂಗಳವಾರ ಬೆಳಗ್ಗಿನಿಂದ ಮಾನಸಗಂಗೋತ್ರಿಯ ಬಯಲು ರಂಗಮಂದಿರ, ಹೆಬ್ಬಾಳಿನ ಸಿಐಟಿಬಿ ಛತ್ರ, ಪುರಭವನ, ಉದಯ ಗಿರಿ ಕ್ಯೂಬ ಪಬ್ಲಿಕ್ ಶಾಲೆ, ಕೆಸರೆ 3ನೇ ಹಂತದ ನಾಗಲಿಂಗೇಶ್ವರ ದೇವಾಲಯದ ಬಳಿ, ಕುರುಬಾರಹಳ್ಳಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ, ಕೃಷ್ಣಮೂರ್ತಿಪುರಂನಲ್ಲಿರುವ ಮಕ್ಕಳಕೂಟ, ಜೆ.ಪಿ.ನಗರದ ಪಿಹೆಚ್‍ಸಿ ಸೇರಿದಂತೆ ವಿವಿಧೆಡೆ ರ್ಯಾಪಿಡ್ ಆ್ಯಂಟಿ ಜೆನ್ ಟೆಸ್ಟ್ ಆರಂಭಿಸಲಾಗಿದೆ. ಕೆ.ಆರ್.ಆಸ್ಪತ್ರೆ, ಕೋವಿಡ್ ಆಸ್ಪತ್ರೆ ಯಲ್ಲೂ ಗಂಟಲು ದ್ರವ ಪರೀಕ್ಷೆ ನಡೆಯುತ್ತಿದೆ. ಪ್ರತಿಕೇಂದ್ರದಲ್ಲೂ ದಿನಕ್ಕೆ 200 ಮಂದಿಗೆ ಗಂಟಲುದ್ರವ ಪರೀಕ್ಷೆ ಮಾಡಲಾಗುತ್ತಿದೆ.

ದ್ವಿಗುಣ ಸಾಧ್ಯತೆ: ತಾಲೂಕು ಕೇಂದ್ರಗಳಲ್ಲೂ ಸ್ವ್ಯಾಬ್‍ಟೆಸ್ಟ್, ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ನಡೆಯುತ್ತಿರುವುದರಿಂದ ನಾಳೆಯಿಂದ ಮೈಸೂರು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಮೂಲ ತಿಳಿಸಿದೆ.

ಜ್ವರ, ಕೆಮ್ಮು, ನೆಗಡಿ ಇರುವವರು, ಟ್ರಾವೆಲ್ ಹಿಸ್ಟರಿ ಉಳ್ಳವರು, ಸೋಂಕಿತರ ಸಂಪರ್ಕಿತರು, ಅವರ ಕುಟುಂಬ ಸದಸ್ಯರು ಸ್ವ್ಯಾಬ್ ಟೆಸ್ಟ್‍ಗೆ ಮುಂದಾಗುತ್ತಿದ್ದಾರೆ. ಆ್ಯಂಟಿಜೆನ್ ಟೆಸ್ಟ್‍ನಲ್ಲಿ ಸ್ವ್ಯಾಬ್ ಸ್ಯಾಂಪಲ್ ನೀಡಿದ 15 ನಿಮಿಷದಲ್ಲೇ ಫಲಿತಾಂಶ ಪ್ರಕಟವಾಗುತ್ತಿದೆ.

ಎರಡು ಕೌಂಟರ್: ಸಿಐಟಿಬಿ ಛತ್ರ, ಪುರಭವನದ ಆವರಣದ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಕೇಂದ್ರದಲ್ಲಿ ಎರಡು ಕೌಂಟರ್ ತೆರೆಯಲಾಗಿದೆ. ಪರೀಕ್ಷೆಗೆ ಒಳಗಾಗುವವರ ಹೆಸರು, ವಯಸ್ಸು, ವಿಳಾಸ, ಮೊಬೈಲ್ ಸಂಖ್ಯೆ ದಾಖಲಿಸಲು ಪ್ರತಿ ಕೌಂಟರ್‍ನಲ್ಲಿ ಇಬ್ಬರನ್ನು ನಿಯೋಜಿಸಲಾಗಿದೆ.

ಓಟಿಪಿ ಕಳುಹಿಸಲು ಮತ್ತು ಪರಿಶೀಲಿಸಲು ಇಬ್ಬರು ಸಿಬ್ಬಂದಿ, ಸ್ವ್ಯಾಬ್ ಸ್ಯಾಂಪಲ್ ಸಂಗ್ರಹಿಸಲು ಪಿಪಿಇ ಕಿಟ್ ಧರಿಸಿದ ಇಬ್ಬರು ಪ್ರಯೋಗಾಲಯ ಸಿಬ್ಬಂದಿ, ಅದನ್ನು ಆ್ಯಂಟಿಜೆನ್ ಟೆಸ್ಟ್ ಕಿಟ್‍ನಲ್ಲಿ ಪರೀಕ್ಷಿಸಿ, ಫಲಿತಾಂಶ ಪರಿಶೀಲಿಸಲು ತಲಾ ಇಬ್ಬರು ಪ್ರಯೋ ಗಾಲಯದ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಒಂದೊಂದು ಕೌಂಟರ್‍ನಲ್ಲಿ ಏಳು ಮಂದಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ. ನಾಲ್ವರು ಲ್ಯಾಬ್ ಟೆಕ್ನಿಷಿಯನ್‍ಗಳು ಮಾತ್ರ ಪಿಪಿಇ ಕಿಟ್ ಧರಿಸಿ ಸೇವೆ ಸಲ್ಲಿಸುತ್ತಿದ್ದಾರೆ.

Translate »