ಮೈಸೂರು, ಮೇ 14 (ಆರ್‍ಕೆ, ಎಂಟಿವೈ) -ಕೊರೊನಾ ಸಂಕಷ್ಟದಿಂದ ಮುಕ್ತವಾಗುತ್ತಿ ರುವ ಮೈಸೂರಿನಲ್ಲಿ ಸಹಜ ಸ್ಥಿತಿ ನಿರ್ಮಾಣ ವಾಗಿದ್ದು, ಸುಮಾರು 50 ದಿನಗಳ ನಂತರ ಪೂರ್ಣ ಪ್ರಮಾಣದ ವಾಣಿಜ್ಯ ವಹಿವಾಟು ಆರಂಭಗೊಂಡಿದೆ. ಕೊರೊನಾ ವೈರಸ್ ಸೋಂಕು ಹರಡದಂತೆ ಲಾಕ್‍ಡೌನ್ ನಿರ್ಬಂಧ ವಿಧಿಸಿದ್ದರಿಂದ ಅಗತ್ಯ ವಸ್ತುಗಳ ಮಾರಾಟ ಹೊರತು ಪಡಿಸಿ, ಅಗತ್ಯವಲ್ಲದ ವಸ್ತುಗಳ ವ್ಯಾಪಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಮೇ 3ರಿಂದ ನಗರದ ಪ್ರಮುಖ 91 ವಾಣಿಜ್ಯ ಮಾರ್ಗಗಳ ಹೊರತುಪಡಿಸಿ, ಉಳಿದೆಲ್ಲೆಡೆ ಎಲ್ಲಾ ರೀತಿಯ ಮಳಿಗೆಗಳನ್ನೂ ತೆರೆದು ವ್ಯಾಪಾರ ನಡೆಸಲು ಅವಕಾಶ ನೀಡಲಾಗಿತ್ತು. ವಾಣಿಜ್ಯ ಮಾರ್ಗಗಳಿಗೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಿ, ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ವ್ಯಾಪಾರಕ್ಕೆ ಅವಕಾಶ ನೀಡಿ, ಪಾಲಿಕೆ ಆಯುಕ್ತ ಗುರುದತ್ ಹೆಗಡೆ ನಿನ್ನೆಯಷ್ಟೇ(ಬುಧವಾರ) ಆದೇಶಿಸಿದ್ದರು.
ಈ ಹಿನ್ನೆಲೆಯಲ್ಲಿ ನಗರದ ಎಲ್ಲಾ ರೀತಿಯ ಅಂಗಡಿ ಮಳಿಗೆಗಳಲ್ಲಿ ವ್ಯಾಪಾರ ವಹಿ ವಾಟು ಆರಂಭವಾಗಿದೆ. 53 ದಿನಗಳಿಂದ ಅಂಗಡಿ ಬಳಿ ಸುಳಿಯಲಾರದೆ ಕಂಗಾಲಾ ಗಿದ್ದ ವ್ಯಾಪಾರಿಗಳು, ಇಂದು ಬೆಳಿಗ್ಗೆಯೇ ಅಂಗಡಿ ಬಳಿ ಧಾವಿಸಿ, ಶುಚಿಗೊಳಿಸಿ, ಸಂಭ್ರಮದಿಂದ ವ್ಯಾಪಾರ ಆರಂಭಿಸಿದರು. ಡಿ.ದೇವರಾಜ ಅರಸು ರಸ್ತೆ, ಸಯ್ಯಾಜಿ ರಾವ್ ರಸ್ತೆ, ಅಶೋಕ ರಸ್ತೆ, ಕೆ.ಟಿ.ಸ್ಟ್ರೀಟ್, ಜೆಎಲ್‍ಬಿ ರಸ್ತೆ, ನ್ಯೂ ಕಾಂತರಾಜ ಅರಸ್ ರಸ್ತೆ, ವಿ.ವಿ. ಮೊಹಲ್ಲಾದ ಟೆಂಪಲ್ ರಸ್ತೆ, ಕಾಳಿದಾಸ ರಸ್ತೆ, ಹೆಬ್ಬಾಳಿನ ಸೂರ್ಯ ಬೇಕರಿ ಸರ್ಕಲ್ ರಸ್ತೆ, ಮಹಾತ್ಮ ಗಾಂಧಿ ಜೋಡಿ ರಸ್ತೆ, ಚಾಮರಾಜ ಜೋಡಿ ರಸ್ತೆ ಹಾಗೂ ಇತರ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಬಹು ತೇಕ ಎಲ್ಲಾ ಬಗೆಯ ಅಂಗಡಿಗಳು ತೆರೆದಿ ದ್ದವು. ಮೊದಲ ದಿನ ಎಂದಿನಂತೆ ಗ್ರಾಹಕರು ಬಾರದಿದ್ದರೂ ಬದುಕಿನ ಬಂಡಿ ಪುನರ್ ಚಾಲನೆಗೊಂಡ ಸಂತಸ ವ್ಯಾಪಾರಿಗಳಲ್ಲಿ ಕಾಣುತ್ತಿತ್ತು. ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿರುವ ಇರ್ವಿನ್ ರಸ್ತೆಯಲ್ಲಿ ಹೊಸ ದಾಗಿ ನಿರ್ಮಿಸಿಕೊಂಡಿರುವ ಬೆರಳೆಣಿಕೆ ಯಷ್ಟು ಮಳಿಗೆಗಳು ಮಾತ್ರ ತೆರೆದಿದ್ದವು. ಪ್ರಮುಖ ವಾಣಿಜ್ಯ ಕೇಂದ್ರಗಳಾದ ಕೆ.ಆರ್. ವೃತ್ತ, ಮಕ್ಕಾಜಿ ಚೌಕ, ಗಾಂಧಿ ಚೌಕ ಸೇರಿ ದಂತೆ ಎಲ್ಲಾ ಪ್ರಮುಖ ವೃತ್ತಗಳ ವ್ಯಾಪಾರ ವಹಿವಾಟು ಕೂಡ ಸಹಜ ಸ್ಥಿತಿಗೆ ಮರಳಿತ್ತು.
ಲೇಖನ ಸಾಮಗ್ರಿ, ಚಿಲ್ಲರೆ ಅಂಗಡಿ, ಕಬ್ಬಿ ಣದ ಅಂಗಡಿ, ಹಾಸಿಗೆ ದಿಂಬು ಮಾರಾ ಟದ ಅಂಗಡಿಗಳು, ಟೀ ಶಾಪ್, ಬಟ್ಟೆ ಅಂಗಡಿಗಳು, ಪ್ಲಾಸ್ಟಿಕ್ ಅಂಗಡಿಗಳು, ಪಾತ್ರೆ ಅಂಗಡಿಗಳು, ಶಾಮಿಯಾನ, ವಾಚ್ ಅಂಗಡಿ, ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ ಉಪಕರಣಗಳ ಅಂಗಡಿಗಳು, ಮೊಬೈಲ್ ಕರೆನ್ಸಿ ರೀಚಾರ್ಜಿಂಗ್ ಸೆಂಟರ್‍ಗಳು, ಬೇಕರಿ ಸೇರಿದಂತೆ ಇನ್ನಿತರ ಎಲ್ಲಾ ರೀತಿಯ ಅಂಗಡಿಗಳ ಬಾಗಿಲು ತೆರೆದಿದ್ದು, ಈವರೆಗೆ ಬೇಕಾದ ವಸ್ತುಗಳು ಸಿಗದೆ ಪರಿತಪಿಸುತ್ತಿದ್ದ ಸಾರ್ವಜನಿಕರು ಗುರುವಾರ ಬೆಳಿಗ್ಗೆಯಿಂದಲೇ ವಾಣಿಜ್ಯ ಕೇಂದ್ರಗಳತ್ತ ಮುಖ ಮಾಡಿದ್ದರು. ಅಶೋಕ ರಸ್ತೆಯ ಹಲವು ಚಿನ್ನಾಭರಣ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿ ಕಂಡು ಬಂದಿತು. ರಂಜಾನ್ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಟ್ಟೆ ಅಂಗಡಿಗಳಲ್ಲೂ ಒಂದಷ್ಟು ಗ್ರಾಹಕರು ಕಂಡುಬಂದರು. ಇನ್ನು ಮುಂದೆ ಹೆಚ್ಚು ಗ್ರಾಹಕರು ಆಗಮಿಸುತ್ತಾರೆಂಬ ನಿರೀಕ್ಷೆಯಲ್ಲಿ ವ್ಯಾಪಾರಿಗಳಿದ್ದಾರೆ. ಕೋವಿಡ್-19 ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರೊಂದಿಗೆ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಿದೆ. ಅಂಗಡಿಗಳ ಮಾಲೀಕರೂ ತಮ್ಮ ಗ್ರಾಹಕರಿಗೆ ಎಚ್ಚರಿಕಾ ಕ್ರಮ ಅನುಸರಿಸುವಂತೆ ಕಿವಿಮಾತು ಹೇಳಿ, ವ್ಯಾಪಾರ ಮಾಡುತ್ತಿದ್ದಾರೆ. ನಗರದೆಲ್ಲೆಡೆ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಈವರೆಗೆ ಅಲ್ಲಲ್ಲಿ ರಸ್ತೆಗೆ ಹಾಕಲಾಗಿದ್ದ ಬ್ಯಾರಿಕೇಡ್‍ಗಳನ್ನು ಪೊಲೀಸರು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ದ್ವಿಚಕ್ರ ವಾಹನ, ಕಾರುಗಳು, ಸರಕು ಸಾಗಾಣಿಕೆ ವಾಹನಗಳ ಸಂಚಾರ ಮಾಮೂಲಿ ದಿನಗಳಿಗಿಂತಲೂ ಹೆಚ್ಚಾಗಿ ಕಂಡು ಬಂದಿತು. ದೇವರಾಜ ಅರಸು ರಸ್ತೆಯಲ್ಲಿ ಅದಾಗಲೇ ಪಾರ್ಕಿಂಗ್ ಸಮಸ್ಯೆ ಕಾಣಿಸಿ ಕೊಂಡಿತ್ತು. ಮುಂಜಾಗ್ರತೆ ಕ್ರಮ ವಹಿಸುವಂತೆ ಪೊಲೀಸರು ಆಗಾಗ್ಗೆ ಮೈಕ್‍ನಲ್ಲಿ ಅನೌನ್ಸ್ ಮಾಡುತ್ತಿದ್ದರು. ಒಟ್ಟಾರೆ 91 ವಾಣಿಜ್ಯ ರಸ್ತೆಗಳಲ್ಲಿನ ಅಂಗಡಿಗಳಿಗೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಿರುವುದರಿಂದ ಮೈಸೂರು ನಗರದಲ್ಲಿ ವ್ಯಾಪಾರ ವಹಿವಾಟು ಚಟುವಟಿಕೆಗಳು ಗರಿಗೆದರಿದ್ದು, ಜನರ ಚಲನವಲನ ಹಾಗೂ ಚಟುವಟಿಕೆಗಳು ಚುರುಕುಗೊಂಡಿವೆ.
ಲಾಕ್‍ಡೌನ್ ನಿರ್ಬಂಧ ಸಡಿಲಗೊಳ್ಳುತ್ತಿದ್ದಾಗ್ಯೂ ಸರ್ಕಾರಿ ಆಸ್ಪತ್ರೆಗಳು, ನಗರ ಸಮು ದಾಯ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೊರತು ಪಡಿಸಿ ಯಾವುದೇ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂ, ಕ್ಲಿನಿಕ್‍ಗಳು ಹಾಗೂ ಡಯಾ ಗ್ನೋಸ್ಟಿಕ್ ಸೆಂಟರ್‍ಗಳಲ್ಲಿ ಪೂರ್ಣ ಪ್ರಮಾಣದ ವೈದ್ಯಕೀಯ ಸೇವೆ ಆರಂಭವಾಗಿಲ್ಲ. ತುರ್ತು ಚಿಕಿತ್ಸೆಯನ್ನು ಹೊರತುಪಡಿಸಿ ಯಾವುದೇ ಹೊರರೋಗಿ ವಿಭಾಗ ಅಥವಾ ಶಸ್ತ್ರಚಿಕಿತ್ಸೆ (ಆಪರೇಷನ್)ಗಳನ್ನು ಮಾಡುತ್ತಿಲ್ಲ. ಶೇ.40ರಿಂದ 45ರಷ್ಟು ಖಾಸಗಿ ಆಸ್ಪತ್ರೆಗಳು ಮಾತ್ರ ಓಪಿಡಿಗಳನ್ನು ತೆರೆದಿದ್ದು, ಉಳಿದವರು ಕೊರೊನಾ ವೈರಸ್ ಹರಡುವ ಭೀತಿಯಿಂದ ಸೇವೆಯನ್ನು ಆರಂಭಿಸದಿರುವುದು ಕಂಡು ಬಂದಿತು. ಇನ್ನು ಉಳಿದಂತೆ ಸಲೂನ್‍ಗಳು, ಬ್ಯೂಟಿ ಪಾರ್ಲರ್‍ಗಳು, ಸ್ಪಾಗಳು, ಸಿನಿಮಾ ಹಾಲ್‍ಗಳು, ಧಾರ್ಮಿಕ ಸ್ಥಳಗಳು, ಬಸ್ ಸಂಚಾರ, ಆಟೋ, ಓಲಾ, ಊಬರ್ ಮುಂತಾದವುಗಳು ಕಾರ್ಯ ನಿರ್ವಹಿಸಲು ಇನ್ನು ಅವಕಾಶ ನೀಡಿಲ್ಲವಾದ್ದರಿಂದ ಅವುಗಳ ಸೇವೆ ಎಂದಿನಂತೆ ಸ್ತಬ್ಧಗೊಂಡಿವೆ. ಹೋಟೆಲ್‍ಗಳಲ್ಲಿ ಆಹಾರ ಪದಾರ್ಥ ಗಳನ್ನು ಪಾರ್ಸೆಲ್ ಕೊಡುತ್ತಿದ್ದಾರೆಯೇ ಹೊರತು, ಸ್ಥಳದಲ್ಲೇ ಸೇವಿಸಲು ಅವಕಾಶ ಕಲ್ಪಿಸಿಲ್ಲ. ಕೊರೊನಾ ವೈರಸ್ ಹರಡುವ ಭೀತಿಯಿಂದಾಗಿ ಇನ್ನೂ ಕೆಲವು ಸಾಮೂಹಿಕ ಸೇವೆ ಒದಗಿಸುವ ಸಂಸ್ಥೆಗಳಿಗೆ ಗ್ರೀನ್ ಸಿಗ್ನಲ್ ದೊರೆತಿಲ್ಲ.
ಅಂಗಡಿಗಳು ಓಪನ್: ಮಾಲೀಕರು ಹೇಳಿದ್ದು
ಕಳೆದ 50 ದಿನಗಳಿಂದ ಮನೆಯಲ್ಲಿಯೇ ಲಾಕ್ ಆಗಿದ್ದ ನಮಗೆ ಇಂದಿನಿಂದ ಅಂಗಡಿ ತೆರೆಯಲು ಅವಕಾಶ ಸಿಕ್ಕಿದ್ದು ತುಂಬಾ ಖುಷಿಯಾಗಿದೆ. ಪ್ರತಿದಿನ ಬೆಳಿಗ್ಗೆ 10 ಗಂಟೆಯ ವೇಳೆಗೆ ಅಂಗಡಿ ತೆಗೆಯುತ್ತಿದ್ದೆ. ಇಂದು ಬೆಳಿಗ್ಗೆ 7.30ಕ್ಕೆ ಬಂದು ಅಂಗಡಿ ತೆರೆದೆ. 12 ಗಂಟೆ ವೇಳೆಗೆ 6 ಸಾವಿರಕ್ಕೂ ಹೆಚ್ಚು ರೂ. ವ್ಯಾಪಾರ ನಡೆದಿದೆ. ಜನರಿಗೆ ಮೊಬೈಲ್ ಅಕ್ಸೆಸರಿಸ್ ಬಹಳ ಮುಖ್ಯವಿದ್ದುದರಿಂದಲೇ ಅಂಗಡಿ ತೆರೆಯುತ್ತಿದ್ದಂತೆ ಬಂದು ವ್ಯಾಪಾರ ಮಾಡಿದ್ದಾರೆ. ಅಂಗಡಿ ತೆರೆಯಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಪಾಲಿಕೆ, ಪೊಲೀಸ್ ಇಲಾಖೆಗೆ ಕೃತಜ್ಞತೆಗಳು. ಅಂಗಡಿ ತೆರೆಯಲು ಅವಕಾಶ ಸಿಕ್ಕಿತೆಂದು ಅಂಗಡಿ ಮಾಲೀಕರಾಗಲೀ, ಗ್ರಾಹಕರಾಗಲೀ, ಮೈಸೂರಿನ ಜನರಾಗಲೀ ಕೊರೊನಾ ವೈರಸ್ ಬಗ್ಗೆ ಎಚ್ಚರ ತಪ್ಪಬಾರದು. ಮೈಸೂರಿನಲ್ಲಿ ಕೊರೊನಾ ಸೋಂಕು ಹರಡದಂತೆ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಮುನ್ನೆಚ್ಚರಿಕೆ ವಹಿಸಬೇಕು.
– ಸಂಪತ್ತು, ಮೊಬೈಲ್ ಪರಿಕರಗಳ ಮಾರಾಟಗಾರ, ಕೆ.ಟಿ.ಸ್ಟ್ರೀಟ್.
ಲಾಕ್‍ಡೌನ್ ಮುಗಿದಿಲ್ಲ. ಆದರೂ ಮೈಸೂರಿನಲ್ಲಿ ಯಾವುದೇ ಕೊರೊನಾ ಪ್ರಕರಣ ಕಂಡು ಬರದ ಕಾರಣ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗೆಂದು ನಾವು ಬೇಕಾಬಿಟ್ಟಿಯಾಗಿ ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇದ್ದರೆ ಕೊರೊನಾ ಮತ್ತೊಮ್ಮೆ ಬಂದೀತು. ಎಚ್ಚರಿಕೆ ಇರಲಿ.
-ಕೈಲಾಸ್‍ಮೂರ್ತಿ, ರೆಡಿಮೇಡ್ ಬಟ್ಟೆ ವ್ಯಾಪಾರಿ, ನ್ಯೂ ಕಾಂತರಾಜ ಅರಸ್ ರಸ್ತೆ,
ಅಂಗಡಿ ಇವತ್ತು ತೆಗೆದಿದ್ದೇನೆ. ಕಷ್ಟಪಟ್ಟು ದುಡಿದು ಜೀವನ ನಡೆಸುವ ನಮಗೆ ಲಾಕ್‍ಡೌನ್ ಸಂದರ್ಭದಲ್ಲಿ ಎಲ್ಲರಿಗೂ ಆದಂತೆಯೇ ನಮಗೂ ತೊಂದರೆಯಾಯಿತು. ಆದರೆ ಇಂದಿನಿಂದ ಅಂಗಡಿ ತೆಗೆಯಲು ಅವಕಾಶ ಸಿಕ್ಕಿದ್ದು ಸಂತೋಷವಾಗಿದೆ. ಮನೆಯಲ್ಲೇ ಕುಳಿತು ಬೇಜಾರಾಗಿತ್ತು. ಜೊತೆಗೆ ಆರ್ಥಿಕವಾಗಿಯೂ ತೊಂದರೆಯಾ ಯಿತು. ಈಗ ಇಂದಿನಿಂದ ಅಂಗಡಿ ತೆಗೆಯಲು ಅವಕಾಶ ಸಿಕ್ಕಿದೆ. ಆದರೆ, ಬಟ್ಟೆ ಹೊಲಿಸುವ ಗ್ರಾಹಕರ ನಿರೀಕ್ಷೆಯಲ್ಲಿದ್ದೇನೆ. – ಉಮೇಶ್ ಹೆಬ್ಬಾರೆ, ಟೈಲರ್, ಮಕ್ಕಾಜಿ ಚೌಕ
ನಮ್ಮದು ಬಡ ಕುಟುಂಬ. ಕೆಲಸ ಮಾಡಿಯೇ ಜೀವನ ಸಾಗಿಸಬೇಕು. 2 ತಿಂಗಳಿಂದ ಕುಟುಂಬ ನಿರ್ವಹಣೆಗೆ ಬಹಳ ಸಮಸ್ಯೆಯಾಗಿತ್ತು. ಅಂಗಡಿ ತೆರೆಯುವ ವಿಷಯ ತಿಳಿದು ತಮ್ಮನಿಂದ ಡ್ರಾಪ್ ತೆಗೆದುಕೊಂಡು ಕೆಲಸಕ್ಕೆ ಬಂದಿದ್ದೇನೆ. 8ನೇ ಕ್ಲಾಸ್ ಅಷ್ಟೇ ಓದಿರೋದು. ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವುದು ಬಿಟ್ಟರೆ ನಮಗೆ ಬೇರೇನೂ ಗೊತ್ತಿಲ್ಲ. ಬಡವರ ಪಾಡು ಹೇಳತೀರದು.
-ಭಾಗ್ಯ, ಬಟ್ಟೆ ಅಂಗಡಿ ಉದ್ಯೋಗಿ
ವಹಿವಾಟು ಆರಂಭಿಸಿದ ಚಿನ್ನಾಭರಣ ಮಳಿಗೆಗಳು
ಮೈಸೂರು,ಮೇ14 (ಆರ್‍ಕೆ)-ಕೋವಿಡ್-19 ಲಾಕ್‍ಡೌನ್ ನಿರ್ಬಂಧ ದಿಂದಾಗಿ ಮಾರ್ಚ್ 20ರಿಂದ ಬಂದ್ ಆಗಿದ್ದ ಮೈಸೂರಿನ ಚಿನ್ನಾಭರಣ ಮಾರಾಟ ಮಳಿಗೆಗಳಲ್ಲಿ ಇಂದಿನಿಂದ ವ್ಯಾಪಾರ ಪುನಾರಂಭಗೊಂಡಿದೆ.
ಎಲ್ಲಾ ಚಿನ್ನಾಭರಣ ಮಾರಾಟ ಮಳಿಗೆ ಗಳಲ್ಲಿ ಸ್ಯಾನಿಟೈಸ್, ಫ್ಯೂಮಿಗೇಷನ್ ಮಾಡ ಲಾಗಿದ್ದು, ಸಾಮಾಜಿಕ ಅಂತರ ಕಾಯ್ದು ಕೊಂಡು ವ್ಯಾಪಾರಿಗಳು ವಹಿವಾಟಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಶರಾಫ್ ವರ್ತ ಕರ ಸಂಘದ ಅಧ್ಯಕ್ಷ ಸಿ.ಎಸ್.ಅಮರ ನಾಥ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.
ಮೈಸೂರು ನಗರದಲ್ಲಿನ ಎಲ್ಲಾ 750 ಚಿನ್ನಾಭರಣ ಅಂಗಡಿಗಳು ಇಂದು ಬಾಗಿಲು ತೆರೆದು ಸ್ವಚ್ಛಗೊಳಿಸಿಕೊಂಡು ಚಿನ್ನ ಮತ್ತು ಬೆಳ್ಳಿ ಆಭರಣಗಳ ದಾಸ್ತಾನು ಪರಿಶೀಲಿಸಿಕೊಂಡು ವ್ಯಾಪಾರಕ್ಕೆ ಅಣಿ ಮಾಡಿಕೊಂಡಿದ್ದಾರೆ. ಆದರೆ ಮೊದಲ ದಿನವಾದ ಇಂದು ವ್ಯಾಪಾರ ಅಷ್ಟಕ್ಕಷ್ಟೇ. ಲಾಕ್‍ಡೌನ್ ನಿರ್ಬಂಧ ಮುಂದುವರಿದಿರು ವುದರಿಂದ ಜನರು ಮುಕ್ತವಾಗಿ ಓಡಾಡು ತ್ತಿಲ್ಲವಾದ್ದರಿಂದ ಇನ್ನೂ ವ್ಯಾಪಾರ ವಹಿವಾಟು ಪೂರ್ಣ ಪ್ರಮಾಣದಲ್ಲಿ ಆರಂಭವಾಗಲು ಕಾಲಾವಕಾಶ ಬೇಕಾಗುತ್ತದೆ ಎಂದರು.
ಚಿನ್ನ ಹಾಗೂ ಬೆಳ್ಳಿ ಧಾರಣೆಯಲ್ಲಿ ತುಸು ಕಡಿಮೆಯಾಗಿದ್ದು, ಇಂದಿನ ಮೈಸೂರು ಬೋರ್ಡ್ ಬೆಲೆಯು 1 ಗ್ರಾಂ 22ಕೆ ಚಿನ್ನದ ಬೆಲೆ 4,316 ರೂ.ಗಳಿದ್ದು, ಗೋಲ್ಡ್ ಬೈಬ್ಯಾಕ್ 22ಕೆ 4,096 ರೂ.ಗಳಿದೆ. ಜಿಎಸ್‍ಟಿ ಯೊಂದಿಗೆ ಗ್ರಾಂ ಚಿನ್ನದ ಬೆಲೆಯು 4,780 ರೂ. ಹಾಗೂ ಜಿಎಸ್‍ಟಿರಹಿತ 4,641 ರೂ. ಗಳಾಗಿದೆ. ಬೆಳ್ಳಿ ಧಾರಣೆ ಪ್ರತೀ ಗ್ರಾಂಗೆ 44.20 ರೂ. ಇದೆ. ಅಂಗಡಿ ತೆರೆದಿರುವ ಬಗ್ಗೆ ನಾವು ಗ್ರಾಹಕರಿಗೆ ದೂರವಾಣಿ ಮೂಲಕ ತಿಳಿಸುತ್ತಿದ್ದೇವೆ. ಈಗ ಶೇ.50 ರಷ್ಟು ಸಿಬ್ಬಂದಿ ಮಾತ್ರ ಕೆಲಸಕ್ಕೆ ಹಾಜ ರಾಗುತ್ತಿದ್ದು, ಮುಂದೆ ಹಂತಹಂತವಾಗಿ ವ್ಯಾಪಾರ ಪೂರ್ಣ ಪ್ರಮಾಣದಲ್ಲಿ ನಡೆ ಯಲಿದೆ ಎಂದು ನಿರೀಕ್ಷಿಸುತ್ತಿದ್ದೇವೆ ಎಂದೂ ಅಮರನಾಥ ತಿಳಿಸಿದರು.