ಎರಡು ಹೆಚ್ಚುವರಿ ಹಾಸ್ಟೆಲ್ ಕಟ್ಟಡ ನಿರ್ಮಿಸಲು ಮೈಸೂರು ವಿವಿ ಚಿಂತನೆ
ಮೈಸೂರು

ಎರಡು ಹೆಚ್ಚುವರಿ ಹಾಸ್ಟೆಲ್ ಕಟ್ಟಡ ನಿರ್ಮಿಸಲು ಮೈಸೂರು ವಿವಿ ಚಿಂತನೆ

February 26, 2021

ಮೈಸೂರು, ಫೆ.25(ಆರ್‍ಕೆ)-ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾ ದಂತೆ ಮೈಸೂರು ವಿಶ್ವವಿದ್ಯಾನಿಲಯದ ಹಾಸ್ಟೆಲ್ ಗಳಿಗೂ ಬೇಡಿಕೆ ದ್ವಿಗುಣವಾಗುತ್ತಿದೆ.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಒಟ್ಟು 1,29,000 ವಿದ್ಯಾರ್ಥಿಗಳು ವಿವಿಧ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಪ್ರತೀ ವರ್ಷ ಸುಮಾರು 26,000 ಮಂದಿ ಪದವಿ ಪಡೆಯುತ್ತಿದ್ದಾರೆ ಎಂದು ಕುಲಪತಿ ಪ್ರೊ. ಜಿ.ಹೇಮಂತಕುಮಾರ್ ತಿಳಿಸಿದ್ದಾರೆ.

ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಂದ ಹೆಚ್ಚು ಬೇಡಿಕೆ ಇರುವಂತೆಯೇ ವಸತಿ ನಿಲಯಗಳ ಅಗತ್ಯವಿದೆ. ಪ್ರಸ್ತುತ ಗಂಗೋತ್ರಿಯಲ್ಲಿರುವ 17 ಹಾಸ್ಟೆಲ್‍ಗಳು, ಹಾಸನ, ಮಂಡ್ಯ, ಚಾಮ ರಾಜನಗರ ಜಿಲ್ಲೆಗಳಲ್ಲಿನ ತಲಾ ಒಂದೊಂದು ಹಾಸ್ಟೆಲ್‍ಗಳಲ್ಲಿ ಒಟ್ಟು 3,200 ಮಂದಿ ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳ ಬೇಡಿಕೆಗೆ ತಕ್ಕಂತೆ ನಮ್ಮಲ್ಲಿ ಹಾಸ್ಟೆಲ್ ಕಟ್ಟಡಗಳಿಲ್ಲ ಎಂದು ತಿಳಿಸಿದರು.

ಅದಕ್ಕಾಗಿ ಸಮಾಜ ಕಲ್ಯಾಣ ಇಲಾಖೆಗೆ ಅನುದಾನ ಕೊಡು ವಂತೆ ಕೇಳಿದ್ದೇವೆ. ಕನಿಷ್ಠ 5 ಎಕರೆ ವಿಸ್ತೀರ್ಣದ ಸಿಎ ನಿವೇಶನ ಕ್ಕಾಗಿ ಮುಡಾಗೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಣ ಮತ್ತು ಜಾಗ ದೊರೆತರೆ ಇನ್ನೂ ಎರಡು ಹಾಸ್ಟೆಲ್ ಕಟ್ಟಡ ನಿರ್ಮಿಸಲು ತಯಾರಿ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಕಳೆದ 5 ವರ್ಷದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಸಂಖ್ಯೆ ದ್ವಿಗುಣವಾಗಿದೆ. ಬೇಡಿಕೆಗೆ ತಕ್ಕಂತೆ ವಿದ್ಯಾರ್ಥಿನಿಲಯ ಒದಗಿಸುವ ಅಗತ್ಯವಿದೆ. ಅದಕ್ಕೆ ಬೇಕಾದ ಸಿಬ್ಬಂದಿ, ಮೂಲ ಸೌಲಭ್ಯವನ್ನು ಒದಗಿಸಲು ಸಿದ್ಧತೆ ಮಾಡು ತ್ತಿದ್ದೇವೆ ಎಂದು ಅವರು ತಿಳಿಸಿದರು.

ಮಾ.13ರಿಂದ ಪರೀಕ್ಷೆ: ಮಾರ್ಚ್ 13ರಿಂದ ಬಿಎ, ಬಿಕಾಂ, ಬಿಎಸ್ಸಿ ದ್ವಿತೀಯ ಮತ್ತು ಅಂತಿಮ ವರ್ಷದ ಪದವಿ ಪರೀಕ್ಷೆಗಳು ಆರಂಭವಾಗಲಿದ್ದು, ಏಪ್ರಿಲ್ ಮೊದಲ ವಾರ ಪೂರ್ಣಗೊಳ್ಳಲಿದೆ. ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಿ, ಮುಂಜಾಗ್ರತಾ ಕ್ರಮದೊಂದಿಗೆ ಪರೀಕ್ಷೆ ಮುಗಿಸಿದ ತಕ್ಷಣವೇ ಮುಂದಿನ ವರ್ಷದ ತರಗತಿಗಳನ್ನು ಆರಂಭಿಸುತ್ತೇವೆ ಎಂದರು.

ಮಾರ್ಚ್ ಅಂತ್ಯದಲ್ಲಿ ಘಟಿಕೋತ್ಸವ: ಮಾರ್ಚ್ ಕಡೇ ವಾರದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವಕ್ಕೆ ಸಿದ್ಧತೆ ನಡೆಸುತ್ತಿದ್ದು, ಗೌರವ ಡಾಕ್ಟರೇಟ್ ನೀಡುವ ಸಂಬಂಧ ಸಮಿತಿ ರಚನೆಗೆ ರಾಜ್ಯಪಾಲರ ಅನುಮತಿ ಕೋರಿದ್ದೇವೆ ಎಂದು ಪ್ರೊ.ಹೇಮಂತಕುಮಾರ್ ತಿಳಿಸಿದರು.

Translate »