ಮೈಸೂರು, ಆ.17(ಆರ್‍ಕೆ)-ಆಫ್ಘಾನಿಸ್ಥಾನ್‍ನಲ್ಲಿ ಉಂಟಾಗಿರುವ ಅರಾಜಕತೆ ಯಿಂದ ಆತಂಕಗೊಂಡಿರುವ ಆಫ್ಘಾನ್ ವಿದ್ಯಾರ್ಥಿಗಳಿಗೆ ಮೈಸೂರು ವಿಶ್ವವಿದ್ಯಾ ನಿಲಯದ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಅಭಯ ನೀಡಿದ್ದಾರೆ.
ಆಫ್ಘಾನಿಸ್ಥಾನ್‍ನಲ್ಲಿ ನಡೆಯುತ್ತಿರುವ ಹಿಂಸಾಕೃತ್ಯದಿಂದ ಭಯಭೀತರಾಗಿರುವ ಮೈಸೂರು ವಿಶ್ವವಿದ್ಯಾನಿಲಯದ 90 ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ ಅವರು, ನಿಮ್ಮ ಪೋಷಕರಂತೆ ನಾವು ನಿಮ್ಮನ್ನು ನೋಡಿಕೊಳ್ಳುತ್ತೇವೆ, ಚಿಂತಿಸದೇ ವಿದ್ಯಾಭ್ಯಾಸ ಮುಂದುವರಿಸಿ ಎಂದರು.
ತಮ್ಮ ಕಚೇರಿಗೆ ಇಂದು ಆಫ್ಘಾನಿ ವಿದ್ಯಾರ್ಥಿಗಳನ್ನು ಕರೆಸಿಕೊಂಡಿದ್ದ ಅವರು, ಇಲ್ಲಿ ನೀವು ವ್ಯಾಸಂಗ ಮಾಡಲು, ವಾಸ್ತವ್ಯಕ್ಕೆ ಏನೂ ತೊಂದರೆಯಾಗದ ಹಾಗೆ ನಮ್ಮ ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ನಿಮ್ಮ ಪೋಷಕರನ್ನೂ ದೂರವಾಣಿ ಮೂಲಕ ಸಂಪರ್ಕಿಸಿ, ಆತ್ಮಸ್ಥೈರ್ಯ ತುಂಬುತ್ತೇವೆ. ಅಲ್ಲದೆ, ವೀಸಾ ಮುಗಿದಿರುವ ವಿದ್ಯಾರ್ಥಿಗಳಿಗೆ ಅವಧಿ ವಿಸ್ತರಣೆ ಬಗ್ಗೆ ಸಂಬಂಧಿಸಿದ ಇಲಾಖೆಯೊಂದಿಗೆ ಮಾತುಕತೆ ನಡೆಸುತ್ತೇವೆ ಎಂದು ಕುಲಪತಿಗಳು ಧೈರ್ಯ ಹೇಳಿದರು.
ನಿಮ್ಮ ಪದವಿ ವ್ಯಾಸಂಗ ಮುಗಿಯುವವರೆಗೆ ಇಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಮೈಸೂರು ವಿಶ್ವವಿದ್ಯಾನಿಲಯವು ನಿಮ್ಮ ಜೊತೆ ಇರುತ್ತದೆ. ನಾವು ನಿಮ್ಮ ಪೋಷಕರಂತೆ ಸಕಲ ಸೌಲಭ್ಯ ಒದಗಿಸುತ್ತೇವೆ. ಆತಂಕ ಬೇಡ, ಓದಿನ ಕಡೆ ಗಮನಹರಿಸಿ ಎಂದು ಪ್ರೊ. ಹೇಮಂತ್‍ಕುಮಾರ್ ಸಲಹೆ ನೀಡಿದರು.