ಮೈಸೂರಿನ ಕೆಆರ್, ಚಾಮರಾಜ, ಜಯಚಾಮರಾಜ ವೃತ್ತ ವೈಭವಕ್ಕೆ ಚ್ಯುತಿ: ಅಧಿಕಾರಿಗಳಿಗಿಲ್ಲ ಅರಿವು
ಮೈಸೂರು

ಮೈಸೂರಿನ ಕೆಆರ್, ಚಾಮರಾಜ, ಜಯಚಾಮರಾಜ ವೃತ್ತ ವೈಭವಕ್ಕೆ ಚ್ಯುತಿ: ಅಧಿಕಾರಿಗಳಿಗಿಲ್ಲ ಅರಿವು

May 10, 2022

ಇವು ಬರೀ ವೃತ್ತಗಳಲ್ಲ ಮೈಸೂರಿನ ಪರಂಪರೆ, ಸೌಂದರ್ಯ ಬಿಂಬಿಸುವ ತಾಣಗಳಲ್ಲವೇ?
ಮೈಸೂರು, ಮೇ ೯(ಎಸ್‌ಬಿಡಿ)- ಮೈಸೂರು ನಗರ ಹೃದಯ ಭಾಗದಲ್ಲಿನ ಪ್ರಮುಖ ಮೂರು ವೃತ್ತಗಳಿಗೆ ತುರ್ತು ದುರಸ್ತಿ ಕಾರ್ಯದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ನಗರ ಪಾಲಿಕೆ ತಕ್ಷಣವೇ ಕ್ರಮ ವಹಿಸಬೇಕಿದೆ.
ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಚಾಮ ರಾಜ ಒಡೆಯರ್ ಹಾಗೂ ಜಯಚಾಮರಾಜ ಒಡೆಯರ್ ಸ್ಮರಣಾರ್ಥ ನಗರದ ಹೃದಯ ಭಾಗದಲ್ಲಿ ಅದೂ ಅರಮನೆ ಆಜುಬಾಜಲ್ಲಿ ಅವರ ಪ್ರತಿಮೆ ಸಹಿತ ವೃತ್ತಗಳನ್ನು ನಿರ್ಮಿಸ ಲಾಗಿದೆ. ಆದರೆ ನಗರ ಪಾಲಿಕೆ ನಿರ್ವಹಣೆಯಲ್ಲಿನ ವೈಫಲ್ಯ, ಅಧಿಕಾರಿಗಳ ನಿರ್ಲಕ್ಷö್ಯ, ಜನಪ್ರತಿನಿಧಿಗಳ ಅಸಡ್ಡೆ, ಸಾರ್ವಜನಿ ಕರ ಬೇಜವಾಬ್ದಾರಿಯಿಂದ ಈ ಮೂರು ವೃತ್ತಗಳ ಸುಭದ್ರತೆ ಹಾಗೂ ಸೌಂದರ್ಯ ಹಾಳಾಗುತ್ತಿದೆ. ಮೂರು ವೃತ್ತಗಳು ವಿರೂಪವಾಗಿದ್ದು, ದುರಸ್ತಿಗೆ ತುರ್ತು ಕ್ರಮ ಕೈಗೊಳ್ಳದಿದ್ದರೆ ಮತ್ತಷ್ಟು ದುಸ್ಥಿತಿಗೀಡಾಗಲಿವೆ.

ಮೇಲ್ಛಾವಣ ಗೆ ದುರಸ್ತಿ ಅವಶ್ಯ: ದೇವರಾಜ ಅರಸು ರಸ್ತೆ, ಆಲ್ಬರ್ಟ್ ವಿಕ್ಟರ್ ರಸ್ತೆ, ಸಯ್ಯಾಜಿರಾವ್ ಹಾಗೂ ನ್ಯೂ ಸಯ್ಯಾಜಿ ರಾವ್ ರಸ್ತೆಗಳು ಸಂಧಿಸುವ ಸ್ಥಳದಲ್ಲಿರುವ ಕೃಷ್ಣರಾಜ ವೃತ್ತ (ಕೆ.ಆರ್.ಸರ್ಕಲ್) ನಗರದ ಹೆಗ್ಗುರುತು. ಆದರೆ ವೃತ್ತದ ಗೋಪುರ ಮೇಲ್ಛಾವಣ ಯ ಒಂದು ಭಾಗದಲ್ಲಿ ಗಾರೆಯ ಪ್ಲಾಸ್ಟರಿಂಗ್ ಕಳಚಿ ಬಿದ್ದಿದೆ. ತಕ್ಷಣವೇ ದುರಸ್ತಿ ಮಾಡದಿದ್ದರೆ ಮತ್ತಷ್ಟು ಪ್ಲಾಸ್ಟರಿಂಗ್ ಉದುರಿ ಬಿದ್ದು, ವೃತ್ತದ ಸೌಂದರ್ಯ ಹಾಳಾಗುವುದರ ಜೊತೆಗೆ ಗೋಪುರಕ್ಕೂ ಹಾನಿಯಾಗುತ್ತದೆ. ಕಳೆದ ದಸರಾ ಸಂದರ್ಭ ದಲ್ಲೂ ಮೇಲ್ಛಾವಣ ಗಾರೆ ಕಳಚಿತ್ತಾದರೂ ಸೌಂದರ್ಯೀಕರ ಣದ ವೇಳೆ ಇದರ ದುರಸ್ತಿಯನ್ನೂ ಮಾಡಿದ್ದರು. ಹೀಗೆ ಪದೇ ಪದೆ ಮೇಲ್ಛಾವಣ ದುರಸ್ತಿಗೆ ಕಾರಣ ತಿಳಿದು ಪರಿಣಾಮಕಾರಿ ಪರಿಹಾರೋಪಾಯ ಕೈಗೊಳ್ಳಬೇಕಿದೆ.

ಕಳಚಿವೆ ಅಲಂಕಾರಿಕ ಕಂಬಗಳು: ಅರಮನೆ ಉತ್ತರ ದ್ವಾರದ ಬಳಿ ಅಶೋಕ ರಸ್ತೆ ಹಾಗೂ ಆಲ್ಬರ್ಟ್ ವಿಕ್ಟರ್ ರಸ್ತೆ ಕೂಡುವ ಸ್ಥಳದಲ್ಲಿರುವ ಚಾಮರಾಜ ಒಡೆಯರ್ ವೃತ್ತದ ಸೌಂದರ್ಯಕ್ಕೆ ಕುತ್ತು ಬಂದಿದೆ. ಚಾಮರಾಜ ಒಡೆಯರ್ ಪ್ರತಿಮೆ ಇರುವ ಪೀಠದ ಸುತ್ತಲಿನ ತಡೆ ಗೋಡೆ ಮಾದರಿ ಹಾಳಾ ಗಿದೆ. ಹಲವು ಅತ್ಯಾಕರ್ಷಕ ಅಲಂಕಾರಿಕ ಕಲ್ಲುಕಂಬಗಳು ಮುರಿದು ಬಿದ್ದಿವೆ. ಕಂಬಗಳ ಮೇಲಿನ ಕಲ್ಲು ಹಾಸುಗಳೂ ನೆಲಕ್ಕುರುಳಿವೆ. ದಸರಾ ಮೆರವಣ ಗೆ ವೀಕ್ಷಣೆಗೆ ಈ ವೃತ್ತದಲ್ಲಿ ಜನ ಕಿಕ್ಕಿರಿದಿದ್ದ ಪರಿಣಾಮ ಒಂದು ಭಾಗ ದಲ್ಲಿ ಕಲ್ಲು ಕಂಬಗಳು ಕಳಚಿ ದ್ದವು. ಇದೀಗ ಅದರ ಸಮೀಪದಲ್ಲೇ ಮತ್ತಷ್ಟು ಕಳಚಿ ಬಿದ್ದಿವೆ. ಚೆಲ್ಲಾಪಿಲ್ಲಿ ಯಾಗಿ ಬಿದ್ದಿರುವ ಅಲಂಕಾರಿಕ ಕಲ್ಲು ಕಂಬಗಳು ವ್ಯವಸ್ಥೆಯ ನಿರ್ಲಕ್ಷö್ಯತೆಗೆ ಸಾಕ್ಷಿಯಾಗಿವೆ. ಗೋಪುರದ ಒಂದು ಭಾಗದಲ್ಲಿ ಬಾಕ್ಸ್ ಮಾದರಿಗೆ ಅಳವಡಿಸಿರುವ ಚಪ್ಪಟೆ ಕಲ್ಲು ಬಿದ್ದು ಹೋಗಿದೆ. ಶೀಘ್ರ ದುರಸ್ತಿ ಕಾರ್ಯ ನಡೆಸದಿದ್ದರೆ ಇನ್ನಷ್ಟು ಅಲಂಕಾರಿಕ ಕಂಬಗಳು, ಹಾಸುಗಳು ನೆಲಕ್ಕುರುಳುವ ಸಾಧ್ಯತೆ ಇದೆ.

ಹೊಸ ವೃತ್ತಕ್ಕೆ ರಿಪೇರಿ: ಆರು ರಸ್ತೆಗಳು ಸಂದಿಸುವ ಹಾರ್ಡಿಂಜ್ ಸರ್ಕಲ್‌ನಲ್ಲಿ ಜಯಚಾಮರಾಜ ಒಡೆಯರ್ ಪ್ರತಿಮೆ ಸಹಿತ ಸುಂದರ ವೃತ್ತವನ್ನು ನಿರ್ಮಿಸಿ ಐದಾರು ವರ್ಷಗಳಷ್ಟೇ ಕಳೆದಿವೆ. ಆರಂಭದಲ್ಲಿ ನಮ್ಮ ಮೈಸೂರು ಫೌಂಡೇಶನ್ ನಿರ್ವಹಣೆ ಮಾಡಿತ್ತಾದರೂ ಕೆಲ ವರ್ಷಗಳ ಹಿಂದೆ ಆ ಜವಾಬ್ದಾರಿ ನಗರ ಪಾಲಿಕೆ ಹೆಗಲಿಗೇರಿದೆ. ಈ ನಡುವೆ ನಿರ್ಮಾಣದ ವೇಳೆ ನಿರ್ಲಕ್ಷö್ಯ ತೋರಿರುವ ಪರಿಣಾಮ ಗ್ರಾನೈಟ್‌ಗಳು ಕಳಚಿ ಬೀಳುತ್ತಿವೆ. ಪ್ರತಿಮೆಯ ಪೀಠದ ನಾಲ್ಕು ಭಾಗದಲ್ಲಿ ಅಲಂಕಾರಿಕವಾಗಿ ಪಟ್ಟಿ ಮಾದರಿಯಲ್ಲಿ ಅಳವಡಿಸಿರುವ ಗ್ರಾನೈಟ್ ಅಲ್ಲಲ್ಲಿ ತುಂಡಾಗಿವೆ. ಪೀಠ ಹಾಗೂ ಗೋಪುರ ನಡುವಿನ ಕಂಬಗಳ ಬುಡದಲ್ಲೂ ಇದೇ ದುಸ್ಥಿತಿ ಇದೆ. ಈಗಲೂ ಪ್ಯಾಚ್ ಮಾಡುವ ಕೆಲಸ ನಡೆಯುತ್ತಲೇ ಇದೆ.

ಗೋಪುರದಿಂದ ತೊಟ್ಟಿಕ್ಕುವ ನೀರು: ಜಯಚಾಮರಾಜ ಒಡೆಯರ್ ವೃತ್ತದ ಗೋಪುರದ ಸುರಕ್ಷತೆ ಬಗ್ಗೆಯೂ ಗಮನ ಹರಿಸಬೇಕಿದೆ. ಗೋಪುರದಿಂದ ೨-೩ ಕಡೆ ನೀರು ತೊಟ್ಟಿಕ್ಕುತ್ತಿದೆ. ಮಳೆ ನೀರು ಗೋಪುರದಲ್ಲಿ ನಿಲ್ಲದಂತೆ ವ್ಯವಸ್ಥೆ ಮಾಡಿರದ ಕಾರಣ ಅಲ್ಲಿ ನೀರು ಸಂಗ್ರಹವಾಗುತ್ತಿದೆ ಎಂದು ತಿಳಿದುಬಂದಿದೆ.

ನೀರು ತೊಟ್ಟಿಕ್ಕುವ ಜಾಗದಲ್ಲಿ ಗೋಪುರ ವಸ್ತಿ ಹಿಡಿದಂತೆ ಕಾಣುತ್ತಿದೆ. ಇನ್ನು ವೃತ್ತದಲ್ಲಿ ಅಳವಡಿಸಿರುವ ಚೆಂಡು ಮಾದರಿ ವಿದ್ಯುತ್ ದೀಪಗಳು ಮುರಿದು ಬಿದ್ದಿವೆ. ಒಂದೇ ಒಂದು ವಿದ್ಯುತ್ ದೀಪವೂ ಬೆಳಗದ ಕಾರಣ ರಾತ್ರಿ ವೇಳೆ ವೃತ್ತ ಕಗ್ಗತ್ತಲಲ್ಲಿ ಮುಳುಗಿರುತ್ತದೆ. ಆಗಾಗ ವಾಹನಗಳ ಬೆಳಕಿನಿಂದ ಮಾತ್ರ ಒಡೆಯರ್ ಪ್ರತಿಮೆ ದರ್ಶನವಾಗಬೇಕಷ್ಟೆ. ವೃತ್ತದ ಆವರಣದಲ್ಲಿ ಆಳೆತ್ತರಕ್ಕೆ ಬೆಳೆದಿರುವ ಗಿಡಗಳು ನೀರಿಲ್ಲದೆ ಒಣಗಿ ಹೋಗಿವೆ. ಒಟ್ಟಾರೆ ಈ ವೃತ್ತ ಅಧ್ವಾನದ ಗೂಡಾಗಿದೆ.

ನಿರ್ವಹಣೆ-ಭದ್ರತೆ ಇಲ್ಲ: ಈ ವೃತ್ತಗಳ ದುಸ್ಥಿತಿಗೆ ನಿರ್ವಹಣೆ ಕೊರತೆ ಹಾಗೂ ಭದ್ರತೆ ಒದಗಿಸದಿರುವುದು ಪ್ರಮುಖ ಕಾರಣವಾಗಿದೆ. ವೃತ್ತಗಳ ಸ್ಥಿತಿ-ಗತಿಯನ್ನು ಆಗಾಗ್ಗೆ ಗಮನಿಸಿ, ನಿಯಮಿತ ನಿರ್ವಹಣೆ ಮಾಡುವುದು ಅವಶ್ಯ. ಹಾಗೆಯೇ ಭದ್ರತಾ ಸಿಬ್ಬಂದಿ ನಿಯೋಜಿಸುವುದು, ಸಿಸಿಟಿವಿ ಕ್ಯಾಮರಾ ಅಳವಡಿಸುವುದು ಅನಿವಾರ್ಯ. ವೃತ್ತಗಳಲ್ಲಿ ಪ್ರಿ-ವೆಡ್ಡಿಂಗ್ ಚಿತ್ರೀಕರಣ, ಜನರ ಅನಗತ್ಯ ಓಡಾಟವನ್ನು ನಿರ್ಬಂಧಿಸಬೇಕು. ಇಲ್ಲವಾದರೆ ವೃತ್ತಗಳು ಹಾಳಾಗಿ ಸಾರ್ವಜನಿಕರ ಹಣ ವ್ಯರ್ಥವಾಗುವುದಲ್ಲದೆ, ಸ್ಮರಣ Ãಯ ಕೊಡುಗೆ ನೀಡಿರುವ ಮಹಾರಾಜರಿಗೂ ಅಪಮಾನ ಮಾಡಿದಂತಾಗುತ್ತದೆ.

ಹಣ ಮೀಸಲಿಡಬೇಕು: ಜಯಚಾಮರಾಜ ಒಡೆಯರ್ ವೃತ್ತವನ್ನು ನಿರ್ಮಿಸಿರುವ ಸಂಸ್ಥೆಯವರಿಗೇ ರಿಪೇರಿ ಮಾಡಿಸುತ್ತಿದ್ದಾರೆ. ಚಾಮರಾಜ ಒಡೆಯರ್ ವೃತ್ತದ ಅಲಂ ಕಾರಿಕ ಕಲ್ಲುಕಂಬ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಕೃಷ್ಣರಾಜ ವೃತ್ತದ ಮೇಲ್ಛಾವಣ ರಿಪೇರಿಗೂ ಕ್ರಮ ವಹಿಸಲಾಗುವುದು ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ವೃತ್ತಗಳ ನಿರ್ವಹಣೆಗೆ ಹಣ ಮೀಸಲಿಡಲು ಪಾಲಿಕೆಗೆ ಸಾಧ್ಯವಾಗಿಲ್ಲ. ದಸರಾ ವೇಳೆ ನಗರದ ಸೌಂದರ್ಯೀಕರಣಕ್ಕೆ ಸರ್ಕಾರ ನೀಡುವ ಅನುದಾನದಲ್ಲೇ ವೃತ್ತಗಳ ದುರಸ್ತಿಯನ್ನೂ ಮಾಡಿಸುತ್ತಿದ್ದರು. ಆದರೆ ಕೊರೊನಾ ಕಾರಣದಿಂದ ೨ ವರ್ಷ ಆ ಅನುದಾನವೂ ಸಿಗಲಿಲ್ಲ. ಹೀಗೆ ಯಾವುದೋ ಹಣವನ್ನು ನೆಚ್ಚಿಕೊಳ್ಳದೆ ಪಾಲಿಕೆ ಬಜೆಟ್‌ನಲ್ಲೇ ಪ್ರಮುಖ ವೃತ್ತಗಳ ನಿರ್ವಹಣೆಗೆ ಅನುದಾನ ಮೀಸಲಿಡುವುದು ಒಳ್ಳೆಯದು ಎಂದು ಪ್ರಜ್ಞಾವಂತರು ಹೇಳಿದ್ದಾರೆ.

Translate »