ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿಗೆ ನಾಳೆ ನ್ಯಾಕ್ ತಂಡ ಭೇಟಿ
ಮೈಸೂರು

ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿಗೆ ನಾಳೆ ನ್ಯಾಕ್ ತಂಡ ಭೇಟಿ

October 4, 2018

ಮೈಸೂರು:  ಮೈಸೂರಿನ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿಗೆ ಅ.5 ಮತ್ತು 6ರಂದು ನ್ಯಾಕ್ (National Accreditation and Assessment Council)ನ ಪೀರ್ ತಂಡ ಭೇಟಿ ನೀಡುತ್ತಿದ್ದು, ಶೈಕ್ಷಣಿಕ ಮತ್ತು ಮೂಲ ಸೌಕರ್ಯಗಳ ಗುಣಮಟ್ಟ ವನ್ನು ಮೌಲೀಕರಿಸಲಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಮರೀಗೌಡ ತಿಳಿಸಿದರು.

ಲಕ್ನೋ ಲೋಹಿಯಾ ಅವಾದ್ ವಿವಿ ಕುಲಪತಿ ಪ್ರೊ.ಎ.ಕೆ.ಮಿತ್ತಲ್, ಒಡಿಸ್ಸಾ ಭುವನೇಶ್ವರದ ಉತ್ಕಲ್ ವಿವಿ ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ಕ್ಷಿತಿ ಭೂಷಣ್‍ದಾಸ್, ಹಿಮಾಚಲ ಪ್ರದೇಶದ ಶಿಮ್ಲಾ ಗೋವಿಂದವಲ್ಲಭ್ ಪಂತ್ ಸ್ಮಾರಕ ಸರ್ಕಾರಿ ಸ್ನಾತಕೋತ್ತರ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಪಿ.ನೇಗಿ ಅವ ರನ್ನು ಒಳಗೊಂಡ ನ್ಯಾಕ್ ಸಮಿತಿ ಕಾಲೇಜಿಗೆ ಭೇಟಿ ನೀಡಲಿದೆ ಎಂದರು.

ನ್ಯಾಕ್ ಪೀರ್ ಸಮಿತಿಯು ಪಠ್ಯಕ್ರಮಗಳ ವಿನ್ಯಾಸ, ಪ್ರಸ್ತುತಿ, ಬೋಧನೆ, ಕಲಿಕೆ ಹಾಗೂ ಮೌಲ್ಯ ಮಾಪನ, ಮೂಲ ಸೌಕರ್ಯ, ಕಲಿಕಾ ಸಂಪನ್ಮೂಲಗಳ ಉನ್ನತೀಕರಣ, ಸಂಶೋಧನೆ, ಆವಿಷ್ಕಾರ ಮತ್ತು ವಿಸ್ತರಿಸುವಿಕೆ, ವಿದ್ಯಾರ್ಥಿ ಬೆಂಬಲಿಸುವಿಕೆ ಮತ್ತು ಪ್ರಗತಿ, ಆಡಳಿತ, ನಾಯಕತ್ವ ಮತ್ತು ನಿರ್ವಹಣೆ ಹಾಗೂ ಸಾಂಸ್ಥಿಕ ಮೌಲ್ಯಗಳು ಮತ್ತು ಅತ್ಯುನ್ನತ ಆಚ ರಣೆಗಳ ಕುರಿತಂತೆ ಗುಣಾತ್ಮಕ ಮಾನದಂಡಗಳ ಮೇಲೆ ಮೌಲ್ಯೀಕರಣ ಪ್ರಕ್ರಿಯೆ ನಡೆಸ ಲಿದೆ. ಕಾಲೇಜಿನಲ್ಲಿ ಶಿಕ್ಷಣದ ಮೌಲ್ಯಗಳನ್ನು ಎತ್ತಿ ಹಿಡಿಯುವ ಹಾಗೂ ಗುಣಾತ್ಮಕ ಕಲಿಕೆಗೆ ಅವಕಾಶ ನೀಡುವಂತಹ ಶಿಕ್ಷಕ ವೃಂದ ಹಾಗೂ ಎಲ್ಲಾ ಮೂಲಸೌಕರ್ಯಗಳ ಉನ್ನತೀ ಕರಣದಿಂದಾಗಿ 3ನೇ ಆವೃತ್ತಿಯಲ್ಲಿ ಉತ್ತಮ ಶ್ರೇಯಾಂಕವನ್ನು ನಿರೀಕ್ಷಿಸಲಾಗಿದೆ ಎಂದು ಆಶಿಸಿದರು. ಗೋಷ್ಠಿಯಲ್ಲಿ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಪ್ರೊ.ಹೆಚ್.ಜಿ.ಚಂದ್ರ ಶೇಖರ್, ನ್ಯಾಕ್ ಸಂಚಾಲಕ ಡಾ.ಶ್ರೀಹರ್ಷ, ಪ್ರೊ.ಬಿಎಂ.ಮಂಜುಳಾ ಉಪಸ್ಥಿತರಿದ್ದರು.

Translate »