ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳಿಂದಲೂ ನದಾಫ್,  ಪಿಂಜಾರ್, ಮನ್ಸೂರಿ, ದೂದೇಕುಲ ಕಡೆಗಣನೆ
ಮೈಸೂರು

ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳಿಂದಲೂ ನದಾಫ್,  ಪಿಂಜಾರ್, ಮನ್ಸೂರಿ, ದೂದೇಕುಲ ಕಡೆಗಣನೆ

January 11, 2021

ಮನ್ಸೂರಿ ಸಂಘದ ಕಪ್ಪಗಲ್ ರಸೂಲ್ ಸಾಬ್ ಬೇಸರ

ಮೈಸೂರು,ಜ.10(ವೈಡಿಎಸ್)-ನದಾಫ್, ಪಿಂಜಾರ್, ಮನ್ಸೂರಿ, ದೂದೇಕುಲ ಸಮುದಾಯ ದಲ್ಲಿ ಕಡುಬಡವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಯಾವ ಸರ್ಕಾರಗಳು ಅಧಿಕಾರಕ್ಕೆ ಬಂದರೂ ಕಡೆಗಣಿಸುತ್ತಿವೆ ಎಂದು ಮನ್ಸೂರಿ ಸಂಘದ ಅಧ್ಯಕ್ಷ ಕಪ್ಪಗಲ್ ರಸೂಲ್ ಸಾಬ್ ಬೇಸರ ವ್ಯಕ್ತಪಡಿಸಿದ್ದಾರೆ. ಮೈಸೂರು ಮೆಜೆಸ್ಟಿಕ್ ಕನ್ವೆನ್ಷನ್‍ಹಾಲ್‍ನಲ್ಲಿ ಅಖಿಲ ಕರ್ನಾಟಕ ಜಮಾತ ಏ ಮನ್ಸೂರ್ ಹಾಗೂ ಆಲ್ ಇಂಡಿಯಾ ರಿ ಜಮಾಯತ್ ಉಲ್ ಮನ್ಸೂರ್ ವತಿಯಿಂದ ಶನಿವಾರ ಆಯೋಜಿಸಿದ್ದ `ನದಾಫ, ಪಿಂಜಾರ ಸಮುದಾಯದ ಮೈಸೂರು ಜಿಲ್ಲಾ ಘಟಕ ಮತ್ತು ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ 35 ಲಕ್ಷ ಜನಸಂಖ್ಯೆ ಇರುವ ನದಾಫ್, ಪಿಂಜಾರ್, ಮನ್ಸೂರಿ, ದೂದೇ ಕುಲ ಸಮುದಾಯವನ್ನು ಸರ್ಕಾರಗಳು ಕಡೆಗಣಿಸುತ್ತಿವೆ. 1994ರಲ್ಲಿ ಸಿ.ಎಸ್.ದ್ವಾರಕ ನಾಥ ಅವರು ಜನಾಂಗದ ಬಗ್ಗೆ ಅಧ್ಯಯನ ನಡೆಸಿ ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸು ವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರೂ ಪ್ರಯೋಜನವಾಗಿಲ್ಲ. ಈ ಸಮುದಾಯಗಳ ಜನರು ಇಂದಿಗೂ ಊರೂರು ಅಲೆದು ಹಾಸಿಗೆ, ದಿಂಬು, ಹಗ್ಗ ನೇಯ್ದು ಜೀವನ ಸಾಗಿಸುತ್ತಿದ್ದಾರೆ. ಹಾಗಾಗಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಒತ್ತಾಯಿಸಿದರು

ಅಖಿಲ ಕರ್ನಾಟಕ ಜಮಾತ ಏ ಮನ್ಸೂರ್ ಅಧ್ಯಕ್ಷ ಕೆ.ಎಂ.ಜಮೀರ್ ಮಾತನಾಡಿ, ಸಮುದಾಯದ ಅಭಿವೃದ್ಧಿಗೆ ನಿಗಮ ಮಂಡಳಿ ಸ್ಥಾಪಿಸುವಂತೆ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸ ಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇದೇ ವೇಳೆ ಸಮುದಾಯದ ಬಡ ಕುಟುಂಬ ಗಳಿಗೆ ಉಚಿತ ಹೊಲಿಗೆ ಯಂತ್ರವನ್ನು ರಾಜ್ಯಾಧ್ಯಕ್ಷ ಕೆ.ಎಂ.ಜಮೀರ್ ನೇತೃತ್ವದಲ್ಲಿ ವಿತರಿಸಲಾಯಿತು. ಆಲ್ ಇಂಡಿಯಾ ರಿ ಜಮಾಯ ಉಲ್ ಮನ್ಸೂರ್ ಅಧ್ಯಕ್ಷ ಅಮನ್ ಕೊಡಗಲ್ಲಿ, ಸಾಹಿತಿ ಎಂ.ಆರ್.ನದಾಫ್, ಯುವ ಘಟಕ ಅಧ್ಯಕ್ಷ ಸೈಫ್ ಉಲ್ಲಾ, ಪ್ರಧಾನ ಕಾರ್ಯದರ್ಶಿ ಗೌಸ್ ಪಾಷಾ, ಮುಜಾಹಿದ್ ಪಾಷಾ ಮತ್ತಿತರರಿದ್ದರು.

Translate »