ಜಲಭಾರ ಶಾಸ್ತ್ರವನ್ನಾಧರಿಸಿ ಕೆಆರ್‍ಎಸ್ ಅಣೆಕಟ್ಟೆ ನಿರ್ಮಿಸಿದ ನಾಲ್ವಡಿ ಗುಣಗಾನ
ಮೈಸೂರು

ಜಲಭಾರ ಶಾಸ್ತ್ರವನ್ನಾಧರಿಸಿ ಕೆಆರ್‍ಎಸ್ ಅಣೆಕಟ್ಟೆ ನಿರ್ಮಿಸಿದ ನಾಲ್ವಡಿ ಗುಣಗಾನ

June 5, 2019

ಮೈಸೂರು: ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕೆಆರ್‍ಎಸ್ ಅಣೆಕಟ್ಟನ್ನು ಕಟ್ಟಿಸಿದ್ದೆ ರೋಚಕ ಪತ್ತೇದಾರಿ ಕಾದಂಬರಿಯಂತೆ. ಪ್ರತಿಯೊಂದು ಹಂತ ದಲ್ಲಿಯೂ ಮಹತ್ವ ನಿರ್ಣಯದೊಂದಿಗೆ ಜಲಭಾರ ಶಾಸ್ತ್ರದ ಅಡಿಯಲ್ಲಿ ಅಣೆಕಟ್ಟನ್ನು ಕಟ್ಟಿಸಿದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಎಸ್.ರಂಗರಾಜು ಹೇಳಿದರು.

ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ, ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತೋತ್ಸವ ಸಮಿತಿ ಹಾಗೂ ಅರಸು ಬಳಗಗಳ ಒಕ್ಕೂ ಟದ ಸಂಯುಕ್ತಾಶ್ರಯದಲ್ಲಿ ಹಮ್ಮಿ ಕೊಂಡಿದ್ದ ‘ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ’ ಅಂಗವಾಗಿ ನಡೆದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬಿಜಾಪುರದ ಆದಿಲ್ ಶಾಹಿ ಅನುಸರಿ ಸುತ್ತಿದ್ದ ಜಲಭಾರ ಶಾಸ್ತ್ರದ ಅನ್ವಯದಂತೆ ಕನ್ನಂಬಾಡಿ ಅಣೆಕಟ್ಟನ್ನು ಕಟ್ಟಲಾಗಿದೆ. ನಾವು ಅಣೆಕಟ್ಟಿನಿಂದ ಹೊರಬರುವ ನೀರಿನ ರಭಸವನ್ನು ನೋಡಿ ಸಂತೋಷ ಪಡುತ್ತೇವೆ. ಆದರೆ, ನೀರನ್ನು ತಡೆಯಲು ಮಾಡಲಾಗಿ ರುವ ವ್ಯವಸ್ಥೆ ನಿಜಕ್ಕೂ ರೋಚಕ ಎಂದರು.

ಕನ್ನಂಬಾಡಿ ಅಣೆಕಟ್ಟನ್ನು ಕಟ್ಟಲು ಅರೆದ ಸುಣ್ಣದ ಗಾರೆ, ಕಲ್ಲು ಮತ್ತು ಅಗತ್ಯ ಕಬ್ಬಿಣ ವನ್ನು ಬಳಸಲಾಗಿದೆಯೇ ಹೊರತು ಸಿಮೆಂಟ್ ಬಳಸಿಲ್ಲ. ಇಂದಿಗೂ ಎಲ್ಲಾದರು ಸಣ್ಣ ಸಣ್ಣ ಬಿರುಕುಗಳು ಕಂಡುಬಂದರೆ ಅರೆದ ಸುಣ್ಣದ ಗಾರೆಯನ್ನೇ ಬಳಸಲಾಗುತ್ತಿದೆ ಎಂದು ತಿಳಿಸಿದರು.

ಕೆಆರ್‍ಎಸ್ ಅಣೆಕಟ್ಟನ್ನು ಕಟ್ಟಲು ಹಣ ಕೊರತೆ ಎದುರಾದಾಗ ಪ್ರಜೆಗಳ ಹಿತಕಾ ಯುವ ದೃಷ್ಟಿಯಿಂದ ಒಡವೆಗಳನ್ನು ಮಾರಿ ಹಣ ಸಂದಾಯ ಮಾಡಿದ ದೇಶದ ಏಕೈಕ ರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್. ಅಣೆಕಟ್ಟನ್ನು ಕಟ್ಟುವಾಗ ಸಂಭವಿಸಿದ ಪ್ರವಾಹಕ್ಕೆ ತುತ್ತಾದ ಕನ್ನಂಬಾಡಿಯ ಜನರಿಗೆ ಪುನರ್‍ವಸತಿಯನ್ನು ಕಲ್ಪಿಸುವ ಮೂಲಕ ಒಡೆಯರು ನಾಡಿನ ಸಮಸ್ತ ಜನರ ನೆಚ್ಚಿನ ದೊರೆಯಾದರು ಎಂದು ಬಣ್ಣಿಸಿದರು.

ಕಾವೇರಿ ನದಿಗೆ ಕರ್ನಾಟಕದಲ್ಲಿಯೇ 98 ಉಪನದಿಗಳು ಸೇರುತ್ತವೆ. ಆದರೆ, ಇಲ್ಲಿನವರೆಗೆ ಆಗಿರುವ ನೀರಿನ ಹಂಚಿಕೆ ಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಜತೆಗೆ ಕೆಆರ್‍ಎಸ್ ಅಣೆಕಟ್ಟಿನ ಇತಿಹಾಸವನ್ನು ತಿಳಿಯದವರು ಡಿಸ್ನಿಲ್ಯಾಂಡ್ ಮಾಡಲು ಹೊರಟಿದ್ದಾರೆ ಎಂದು ವಿಷಾದಿಸಿದರು.

‘ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಶೈಕ್ಷಣಿಕ ಪ್ರಗತಿ’ ಕುರಿತು ನಿವೃತ್ತ ಪ್ರಾಧ್ಯಾಪಕಿ ಡಾ.ಬಿ.ವಿ.ಸುಧಾಮಣಿ ಮಾತ ನಾಡಿ, 18ನೇ ವಯಸ್ಸಿಗೆ ಪಟ್ಟಕ್ಕೆ ಬಂದರೂ ಸಮಾಜ ಸಮಗ್ರ ಅಭಿ ವೃದ್ಧಿಯ ದೂರದೃಷ್ಟಿಯನ್ನು ನಾಲ್ವಡಿ ಕೃಷ್ಣರಾಜ ಒಡೆಯರು ಹೊಂದಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೆ ಸೃಷ್ಟಿಸಿದ ಅವರು, ಆಧುನಿಕ ಶಿಕ್ಷಣ ದೊಂದಿಗೆ ಸಾಂಪ್ರದಾಯಿಕ ಶಿಕ್ಷಣ ಪದ್ಧತಿ ಯನ್ನು ಕಡೆಗಣಿಸದೆ ಸಮನ್ವಯತೆಯನ್ನು ಕಾಪಾಡಿದರು ಎಂದರು.

ತಮ್ಮ ಮೊದಲ ಪ್ರಜಾಪ್ರತಿನಿಧಿ ಭಾಷಣ ದಲ್ಲಿಯೇ ವಿದ್ಯೆಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ. ಸರ್ವರಿಗೂ ಶಿಕ್ಷಣ ದೊರಕ ಬೇಕು. ಶಿಕ್ಷಣ ಪಡೆಯುವುದು ವ್ಯಕ್ತಿತ್ವ ವಿಕಸನ ಹಾಗೂ ಕೌಶಲ್ಯ ವೃದ್ಧಿಗಾಗಿ ಎಂದಿ ದ್ದರು. ಈ ನಿಟ್ಟಿನಲ್ಲಿ ಎಲ್ಲಾ ಪ್ರಕಾರದ ಶಿಕ್ಷಣ ವ್ಯವಸ್ಥೆಯನ್ನು ತಮ್ಮ ರಾಜ್ಯದಲ್ಲಿ ಸ್ಥಾಪಿಸಿದ ಕೀರ್ತಿ ಕೃಷ್ಣರಾಜ ಒಡೆ ಯರ್‍ಗೆ ಸಲ್ಲುತ್ತದೆ ಎಂದು ನುಡಿದರು.

ಬಳಿಕ ನಾಲ್ವಡಿ ಸೋಷಿಯಲ್ ಕಲ್ಚ ರಲ್ ಅಂಡ್ ಎಜುಕೇಷನಲ್ ಟ್ರಸ್ಟ್ ವತಿ ಯಿಂದ ‘ದಿ ಹಿಸ್ಟರಿ ಆಫ್ ನಾಲ್ವಡಿ’ ನಾಟಕ ಪ್ರದರ್ಶನ ಮಾಡಲಾಯಿತು. ಕಾರ್ಯ ಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹನೂರು ಚನ್ನಪ್ಪ, ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸ್, ಮೈಸೂರು ವಿವಿ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಗುರು ಸಿದ್ದಯ್ಯ, ಪತ್ರಕರ್ತ ಈಚನೂರು ಕುಮಾರ್, ಜಿಲ್ಲಾ ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ ಉಪಸ್ಥಿತರಿದ್ದರು.

Translate »