ಅರಸು ಬಳಗಗಳ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ
ಮೈಸೂರು

ಅರಸು ಬಳಗಗಳ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ

June 5, 2019

ಮೈಸೂರು: ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯನ್ನು ಮಂಗಳವಾರ ಅರಸು ಬಳಗಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಆಚರಿಸಲಾಯಿತು.

ಮೈಸೂರಿನ ತ್ಯಾಗರಾಜ ರಸ್ತೆಯ ಅರಸು ಮಂಡಳಿ ಸಂಘದಲ್ಲಿ ಹಮ್ಮಿಕೊಂಡಿದ್ದ ಜಯಂತಿ ಕಾರ್ಯಕ್ರಮ ದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಚಿತ್ರಪಟಕ್ಕೆ ಪುಷ್ಪಾ ರ್ಚನೆ ಸಲ್ಲಿಸುವ ಮೂಲಕ ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ಉದ್ಘಾಟನೆ ನೆರವೇರಿಸಿ ದರು. ಅಲ್ಲದೆ, ಈ ಆವರಣದಿಂದ ಹಮ್ಮಿಕೊಂಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಚಿತ್ರಪಟದ ಮೆರವಣಿಗೆಗೂ ಎಸ್.ಎ.ರಾಮದಾಸ್ ಚಾಲನೆ ನೀಡಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಚಿತ್ರಪಟ ಇರಿಸಿದ್ದ ಸಾರೋಟು ವಾಹನವು ಡೊಳ್ಳು ಕುಣಿತ, ಪೂಜಾ ಕುಣಿತ, ತಮಟೆ, ನಗಾರಿ ಮೊದಲಾದ ಕಲಾತಂಡ ಗಳೊಂದಿಗೆ ಸಯ್ಯಾಜಿರಾವ್ ರಸ್ತೆ ಮಾರ್ಗವಾಗಿ ಕೆಆರ್ ವೃತ್ತ ತಲುಪಿ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಮೆರವಣಿಗೆ ಜೊತೆಗೂಡಿ ಕಲಾಮಂದಿರ ತಲುಪಿತು.

ಅರಸು ಮಂಡಳಿ ಸಂಘದ ಅಧ್ಯಕ್ಷ ಹೆಚ್.ಡಿ.ನವೀನ್ ರಾಜೇ ಅರಸ್, ಹೆಚ್‍ಡಿ ಕೋಟೆ ತಾಲೂಕು ಘಟಕದ ಅಧ್ಯಕ್ಷ ಎಸ್.ಲಿಂಗರಾಜೇ ಅರಸ್, ಶ್ರೀರಾಮ ಸೇವಾ ಅರಸು ಸಂಘದ ಅಧ್ಯಕ್ಷ ಲಕ್ಷ್ಮೀಕಾಂತರಾಜೇ ಅರಸ್, ಅರಸು ಮಂಡಳಿ ಸಹಕಾರ ಸಂಘದ ಅಧ್ಯಕ್ಷ ಎ.ಎಸ್.ಭರತ್, ಅರಸು ಯುವ ಜನ ವೇದಿಕೆ ಅಧ್ಯಕ್ಷ ಅರವಿಂದರಾಜೇ ಅರಸ್, ಮುಖಂಡ ಜಯಪಾಲರಾಜೇ ಅರಸ್ ಮತ್ತಿತರರು ಹಾಜರಿದ್ದರು.

ಅರಸು ಎಜುಕೇಷನ್ ಟ್ರಸ್ಟ್: ನಜರ್‍ಬಾದಿನ ಜಯಚಾಮರಾಜ ಅರಸು ಎಜುಕೇಷನ್ ಟ್ರಸ್ಟ್ ಹಾಗೂ ವಾಣಿವಿಲಾಸ ಅರಸು ಶಿಕ್ಷಣ ಸಂಸ್ಥೆಗಳ ವತಿಯಿಂದ ಸಂಸ್ಥೆ ಆವರಣದಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಶಾರದಾ ವಿದ್ಯಾಮಂದಿರದ ಪಿಯು ಕಾಲೇಜು ಉಪನ್ಯಾಸಕ ಎನ್.ಧನಂಜಯ ಮಾತನಾಡಿ, ಇಂದಿನ ರಾಜಕಾರಣಕ್ಕೆ ನಾಲ್ವಡಿ ಅವರು ದಾರಿದೀಪವಾಗಿದ್ದಾರೆ. ಅಭಿವೃದ್ಧಿಯ ದೂರದೃಷ್ಟಿಕೋನದಲ್ಲಿ ನಾಲ್ವಡಿ ಉತ್ತಮ ಆಡಳಿತ ನೀಡಿದರು. ಆದರೆ ಇಂದಿನ ಪ್ರಜಾಪಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಹದಗೆಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು. ಅರಸು ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಮಹೇಶ್ ಎನ್.ಅರಸ್ ಅಧ್ಯಕ್ಷತೆ ವಹಿಸಿದರು. ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

Translate »