ಇಂದು ನಮೋ ಕಪ್ ಚದುರಂಗ ಪಂದ್ಯಾವಳಿ
ಮೈಸೂರು

ಇಂದು ನಮೋ ಕಪ್ ಚದುರಂಗ ಪಂದ್ಯಾವಳಿ

November 28, 2021

ಮೈಸೂರು, ನ.27(ಪಿಎಂ)- ಬಿಜೆಪಿ ಮೈಸೂರು ನಗರ ಯುವ ಮೋರ್ಚಾ ವತಿಯಿಂದ ನವೆಂಬರ್ 28ರಂದು ನಮೋ ಕಪ್ ಮುಕ್ತ ಚದುರಂಗ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಮೋರ್ಚಾದ ನಗರಾಧ್ಯಕ್ಷ ಎಂ.ಜೆ.ಕಿರಣ್‍ಗೌಡ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣದೊಂದಿಗೆ ಕ್ರೀಡೆಗೂ ಉತ್ತೇಜನ ನೀಡಬೇಕು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರ (ನಮೋ) ಹೆಸರಿನಲ್ಲಿ ಫಸ್ಟ್ ಮೂವ್ ಚೆಸ್ ಟ್ರಸ್ಟ್‍ನ ಸಹಯೋಗದೊಂದಿಗೆ ಈ ಚದುರಂಗ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಪಂದ್ಯಾವಳಿ ನಡೆಯಲಿದ್ದು, ನಾಳೆ (ಭಾನುವಾರ) ಬೆಳಗ್ಗೆ 9ಕ್ಕೆ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ಅಜಿತ್ ಹೆಗ್ಡೆ ಪಂದ್ಯಾವಳಿ ಉದ್ಘಾಟಿಸಲಿದ್ದಾರೆ. ಅತಿಥಿಯಾಗಿ ಚೆಸ್ ಪಟು ಗ್ರ್ಯಾಂಡ್ ಮಾಸ್ಟರ್ ತೇಜ್‍ಕುಮಾರ್ ಪಾಲ್ಗೊಳ್ಳಲಿದ್ದಾರೆ. ಬಿಜೆಪಿ ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸ, ವಿಭಾಗ ಪ್ರಭಾರಿ ಮೈ.ವಿ.ರವಿಶಂಕರ್, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಧೀರಜ್‍ಪ್ರಸಾದ್, ಜಯಶಂಕರ್ ಮತ್ತಿತರರು ಉಪಸ್ಥಿತ ರಿರುವರು ಎಂದು ತಿಳಿಸಿದರು. ಫಸ್ಟ್ ಮೂವ್ ಚೆಸ್ ಟ್ರಸ್ಟ್‍ನ ಅಧ್ಯಕ್ಷ ರವಿಕಿರಣ್ ಮಾತನಾಡಿ, ಈಗಾಗಲೇ ನಮ್ಮ ವಾಟ್ಸಪ್ ಗ್ರೂಪ್ ಮೂಲಕ ಚೆಸ್ ಪಟುಗಳನ್ನು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಸಂಘಟಿಸಿದ್ದು, 80ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪಟುಗಳಿಗೆ ತಲಾ 500 ರೂ. ನೋಂದಣಿ ಶುಲ್ಕ ನಿಗದಿ ಮಾಡಲಾಗಿದೆ ಎಂದರು.

ಮುಕ್ತ ವಿಭಾಗ, 8 ವರ್ಷದೊಳಗೆ, 10 ವರ್ಷ ದೊಳಗೆ ಮತ್ತು 13 ವರ್ಷದೊಳಗೆ ಸೇರಿದಂತೆ ನಾಲ್ಕು ವಿಭಾಗಗಳಲ್ಲಿ ಪಂದ್ಯಾವಳಿ ನಡೆಯಲಿದೆ. ಮುಕ್ತ ವಿಭಾಗದಲ್ಲಿ 10 ಸ್ಥಾನಗಳಿಗೆ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ ಕ್ರಮವಾಗಿ 4 ಸಾವಿರ ರೂ, 3 ಸಾವಿರ ರೂ., 2,500 ರೂ., 2 ಸಾವಿರ ರೂ., 1,500 ರೂ., 1,300 ರೂ., 1,200 ರೂ., 900 ರೂ., 800 ರೂ., 700 ರೂ.ಗಳ ನಗದು ಬಹುಮಾನ ನೀಡಲಾಗುವುದು. ಉಳಿದ ಮೂರು ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಐವರು ಬಾಲಕರು ಮತ್ತು ಐವರು ಬಾಲಕಿಯರಿಗೆ ಟ್ರೋಫಿ ನೀಡಲಾಗುವುದು ಎಂದು ವಿವರಿಸಿ ದರು. ಯುವ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ಸಂತೋಷ್‍ಕುಮಾರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »