ಪಿಗ್ಮಿ ಕಲೆಕ್ಟರ್‍ಗಳ ದೋಚುತ್ತಿದ್ದ  ಐವರು ಸುಲಿಗೆಕೋರರ ಸೆರೆ
ಮೈಸೂರು

ಪಿಗ್ಮಿ ಕಲೆಕ್ಟರ್‍ಗಳ ದೋಚುತ್ತಿದ್ದ ಐವರು ಸುಲಿಗೆಕೋರರ ಸೆರೆ

November 28, 2021

ಮೈಸೂರು,ನ.27(ಆರ್‍ಕೆ)-ಪಿಗ್ಮಿ ಕಲೆಕ್ಟರ್ ಗಳಿಂದ ಹಣ ಮತ್ತು ಮೊಬೈಲ್ ದೋಚುತ್ತಿದ್ದ ಬೆಂಗಳೂರಿನ ಮೂವರು ಸೇರಿದಂತೆ ಐವರು ಸುಲಿಗೆಕೋರರ ಗ್ಯಾಂಗ್ ಅನ್ನು ಕೃತ್ಯ ನಡೆದ 24 ಗಂಟೆಯೊಳಗೆ ಬಂಧಿಸುವಲ್ಲಿ ಉದಯಗಿರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೈಸೂರಿನ ಎನ್.ಆರ್. ಮೊಹಲ್ಲಾ, ಶಿವಾಜಿ ರಸ್ತೆಯ ನಯಾಜ್ ಪಾಷಾ ಮಗ ಸಲೀಂ ಪಾಷಾ ಅಲಿಯಾಸ್ ಸಲೀಂ (25), ಎಜೆ ಬ್ಲಾಕ್ 2ನೇ ಕ್ರಾಸ್ ನಿವಾಸಿ ಫೈರೋಜ್ ಖಾನ್ ಮಗ ಪಾಜಿಲ್ ಖಾನ್ ಅಲಿಯಾಸ್ ಪಾಜಿಲ್(26), ಬೆಂಗಳೂ ರಿನ ಅಂಜನಾಪುರದ ಆವಲಹಳ್ಳಿ 1ನೇ ಕ್ರಾಸ್ ನಿವಾಸಿ ಸೈಯದ್ ಇಮ್ತಿಯಾಜ್ ಮಗ ಸೈಯದ್ ರಿಯಾಜ್ ಅಲಿಯಾಸ್ ಬಾಬಾ (30), ಆವಲ ಹಳ್ಳಿ 7ನೇ ಕ್ರಾಸ್ ನಿವಾಸಿ ಜಬೀವುಲ್ಲಾ ಅವರ ಮಗ ಸೈಫ್ ಅಲಿ(25) ಹಾಗೂ ಇಮ್ತಿಯಾಜ್ ಪಾಷಾ ಮಗ ಸೈಯದ್ ನಯಾಜ್ ಅಲಿಯಾಸ್ ನಯಾಜ್ (26) ಬಂಧಿತ ಸುಲಿಗೆಕೋರರು.

ಆರೋಪಿಗಳಿಂದ 43,500 ರೂ. ನಗದು, ಮೊಬೈಲ್, ಕೃತ್ಯಕ್ಕೆ ಬಳಸಿದ್ದ ಡ್ರ್ಯಾಗನ್, ದೊಣ್ಣೆ, 2 ದ್ವಿಚಕ್ರ ವಾಹನಗಳು ಸೇರಿ ಒಟ್ಟು 2 ಲಕ್ಷ ರೂ. ಬೆಲೆಬಾಳುವ ಮಾಲನ್ನು ಉದಯಗಿರಿ ಠಾಣೆ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. (i) ನವೆಂಬರ್ 23ರಂದು ಸಂಜೆ 7.30ರ ಸಮಯದಲ್ಲಿ ಎನ್.ಆರ್. ಮೊಹಲ್ಲಾದ ಗಣೇಶನಗರ 5ನೇ ಕ್ರಾಸ್ ನಿವಾಸಿ ರಂಗಣ್ಣನ ಮಗ ರವಿ, ಪಿಗ್ಮಿ ಹಣ ಸಂಗ್ರಹಕ್ಕೆ ಹೋಗುತ್ತಿದ್ದಾಗ ಅಲ್ಲಿನ ಅಂಬಾ ಭವಾನಿ ದೇವಸ್ಥಾನ ರಸ್ತೆಯಲ್ಲಿ ಅಡ್ಡಗಟ್ಟಿದ ಐವರು ಯುವಕರು, ಆತನ ಹೋಂಡಾ ಡಿಯೋ ಸ್ಕೂಟರ್ ಡಿಕ್ಕಿಯಲ್ಲಿದ್ದ 10,000 ರೂ. ನಗದು ದೋಚಿ ಪರಾರಿಯಾಗಿದ್ದರು.

(ii) ದಟ್ಟಗಳ್ಳಿಯ ಕೆಇಬಿ ಕಾಲೋನಿ ನಿವಾಸಿ ನಾಗರಾಜನ ಮಗ ನಾಗೇಶ, ಹಣ ಸಂಗ್ರಹಿಸಿ ಕೊಂಡು ಹಲೀಂನಗರದಲ್ಲಿ ಹೋಗುತ್ತಿದ್ದಾಗ ನವೆಂಬರ್ 24ರಂದು ರಾತ್ರಿ 8.30 ಗಂಟೆಯಲ್ಲಿ ಈ ಆರೋಪಿಗಳು ಆತನ ಅಡ್ಡಗಟ್ಟಿ 20,000 ರೂ. ನಗದು ಹಾಗೂ ಮೊಬೈಲ್ ಫೋನ್ ಕಿತ್ತು ಕೊಂಡು ಪರಾರಿಯಾಗಿದ್ದರು.

(iii) ನವೆಂಬರ್ 23ರಂದು ಸಂಜೆ 5 ಗಂಟೆ ಯಲ್ಲಿ ರೈಲ್ವೇ ಬಡಾವಣೆಯ ಶಿವ ಮಾದಪ್ಪನ ಮಗ ಸ್ವಾಮಿ, ಸ್ನೇಹಿತ ಮುನಿ ರೆಡ್ಡಿ ಜೊತೆ ಹಣ ಸಂಗ್ರಹಿಸಿಕೊಂಡು ಸಾತಗಳ್ಳಿ ಬಡಾವಣೆಯಲ್ಲಿ ಹೋಗುತ್ತಿದ್ದಾಗ ಎರಡು ಸ್ಕೂಟರ್‍ಗಳಲ್ಲಿ ಬಂದ ಐವರು ಸುಲಿಗೆಕೋರರು ಅಡ್ಡಗಟ್ಟಿ, ದೊಣ್ಣೆ ತೋರಿಸಿ 12,000 ರೂ. ನಗದು ದರೋಡೆ ಮಾಡಿದ್ದರು.

(iv) ಅದೇ ರೀತಿ ಗಾಯತ್ರಿಪುರಂ ನಿವಾಸಿ ಅರ್ಚುಸ್ವಾಮಿ ಮಗ ಗಣೇಶನನ್ನು ನ.23ರಂದು ಬೆಳಿಗ್ಗೆ 9.30 ಗಂಟೆಯಲ್ಲಿ ಉದಯಗಿರಿಯ ಕೂಬಾ ಮಸೀದಿ ಪಕ್ಕದ ರಸ್ತೆಯಲ್ಲಿ ಅಡ್ಡಗಟ್ಟಿದ ಈ ಐವರ ತಂಡವು, 10,000 ರೂ. ಹಣ ಸುಲಿದು ಪರಾರಿಯಾಗಿತ್ತು. ಈ ಕುರಿತು ಉದಯ ಗಿರಿ ಮತ್ತು ಎನ್.ಆರ್. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಎರಡೇ ದಿನದಲ್ಲಿ 4 ಕಡೆ ದರೋಡೆ ಮಾಡಿದ್ದ ಡಕಾಯಿತರ ಪತ್ತೆಗಾಗಿ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಉದಯಗಿರಿ ಠಾಣೆ ಇನ್‍ಸ್ಪೆಕ್ಟರ್ ಪಿ.ಕೆ.ರಾಜು ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದ್ದರು.

ಅದರಂತೆ ಕಾರ್ಯಾಪ್ರವೃತ್ತರಾದ ಪೊಲೀಸರು, ಪ್ರಕರಣ ನಡೆದ 24 ಗಂಟೆಯೊಳಗಾಗಿ ನವೆಂ ಬರ್ 26ರಂದು ಮುಂಜಾನೆ ದರೋಡೆಕೋರ ರಾದ ಸಲೀಂ ಪಾಷಾ, ಪಾಜಿಲ್ ಖಾನ್, ಸಯ್ಯದ್ ರಿಯಾಜ್, ಸೈವ್ ಹಾಗೂ ಸಯ್ಯದ್ ನಯಾಜ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳ ಪಿಗ್ಮಿ ಕಲೆಕ್ಟರ್‍ಗಳನ್ನೇ ಗುರಿಯಾಗಿಸಿ ಕೊಂಡು, ಹೆದ ರಿಸಿ-ಬೆದರಿಸಿ ಹಣ ಕಿತ್ತು ಐಷಾರಾಮಿ ಜೀವನ ನಡೆಸುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಬಂಧಿತರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಡಿಸಿಪಿ ಗೀತಾ ಪ್ರಸನ್ನ ಅವರ ಮಾರ್ಗದರ್ಶನ ಹಾಗೂ ದೇವರಾಜ ಉಪವಿಭಾಗದ ಎಸಿಪಿ ಎಂ.ಎನ್.ಶಶಿಧರ ಉಸ್ತುವಾರಿಯಲ್ಲಿ ನಡೆದ ಪತ್ತೆ ಕಾರ್ಯಾಚರಣೆಯಲ್ಲಿ ಉದಯಗಿರಿ ಠಾಣೆ ಇನ್‍ಸ್ಪೆಕ್ಟರ್ ಪಿ.ಕೆ.ರಾಜು, ಸಬ್ ಇನ್‍ಸ್ಪೆಕ್ಟರ್ ಗಳಾದ ಸುನಿಲ್, ನಾಗರಾಜ್ ನಾಯಕ, ಸಿಬ್ಬಂದಿ ಗಳಾದ ಶಂಕರ್, ಸಮೀರ್ ಪಾಟಿಲ್, ಸಿದ್ಧಿಕ್ ಅಹಮದ್, ಸೋಮಶೇಖರ್, ಮೋಹನ ಕುಮಾರ್, ಶಿವರಾಜಪ್ಪ, ಕುಮಾರ್ ಪಾಲ್ಗೊಂಡಿ ದ್ದರು. ಈ ಪತ್ತೆ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಪ್ರಶಂಸಿಸಿದ್ದಾರೆ.

Translate »