ಸಿದ್ದರಾಮಯ್ಯ ಶೋಷಿತ ವರ್ಗಗಳ ಆಶಾಕಿರಣ
ಮೈಸೂರು

ಸಿದ್ದರಾಮಯ್ಯ ಶೋಷಿತ ವರ್ಗಗಳ ಆಶಾಕಿರಣ

November 28, 2021

ಮೈಸೂರು,ನ.27(ಎಂಟಿವೈ)-ಇತ್ತೀಚಿನ ದಿನಗಳಲ್ಲಿ ರಾಜ ಕಾರಣದಲ್ಲಿ ತೋರಿಕೆಯೇ ಹೆಚ್ಚಾಗಿದೆ. ಮಾಜಿ ಸಿಎಂ ಸಿದ್ದ ರಾಮಯ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗದ ಹಿತಕಾಯುವಲ್ಲಿ ತೋರಿದ ಬದ್ಧತೆ ಬೇರೆ ಯಾವ ರಾಜ ಕಾರಣಿಗಳಿಂದಲೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಭವನದಲ್ಲಿ ಮೈಸೂರು ವಿವಿಯ ಎನ್.ರಾಚಯ್ಯ ಅಧ್ಯಯನ ಪೀಠ ಹಾಗೂ ರಾಜ್ಯಶಾಸ್ತ್ರ ಅಧ್ಯಯನ ಪೀಠದ ವತಿಯಿಂದ ಆಯೋಜಿಸಿದ್ದ `ಪೌರಬಂಧು’ ಕೃತಿ ಬಿಡುಗಡೆ ಸಮಾ ರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಶೋಷಿತ ವರ್ಗಗಳ ಆಶಾ ಕಿರಣ ಎಂದರು. ರಾಜ್ಯದಲ್ಲಿ ಈ ಹಿಂದೆ ಹಲವು ಸರ್ಕಾರಗಳು ಆಡಳಿತ ನಡೆಸಿವೆ. ಪ್ರತಿಯೊಂದು ಸರ್ಕಾರವೂ ಎಸ್‍ಸಿ-ಎಸ್ಟಿ ಅಭಿವೃದ್ಧಿಗೆ 5 ವರ್ಷದ ಆಡಳಿತಾವಧಿಯಲ್ಲಿ ಕೇವಲ 16 ಸಾವಿರ ಕೋಟಿ ರೂ. ಮಾತ್ರ ವೆಚ್ಚ ಮಾಡುತ್ತಿದ್ದವು. ಹಣ ಕಲ್ಯಾಣ ಕಾರ್ಯಕ್ರಮಕ್ಕೆ ಬಳಕೆಯಾಗದೆ ಇದ್ದರೆ ವಾಪಸ್ಸಾಗುತ್ತಿತ್ತು. ಇದನ್ನು ಅರಿತ ಸಿದ್ದರಾಮಯ್ಯ ಅವರು ತಾವು ಸಿಎಂ ಆಗಿದ್ದಾಗ ಈ ಹಣ ಯಾವುದೇ ಕಾರಣಕ್ಕೂ ಪೋಲಾಗದಂತೆ ಕಾನೂನು ರೂಪಿಸಿದರು. ಬಳಕೆಯಾಗದ ಹಣ ಮುಂದಿನ ವರ್ಷವೂ ಬಳಸಿಕೊಳ್ಳುವಂತೆ ದೇಶ ದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಹೊಸ ನೀತಿ ಯೊಂದನ್ನು ಜಾರಿಗೆ ತಂದರು. ಅಲ್ಲದೆ, ತಮ್ಮ 5 ವರ್ಷದ ಆಡಳಿತಾವಧಿಯಲ್ಲಿ 85 ಸಾವಿರ ಕೋಟಿ ರೂ. ಎಸ್‍ಸಿ, ಎಸ್ಟಿ ಅಭಿವೃದ್ಧಿಗೆ ವಿನಿಯೋಗಿಸಿದ್ದಾರೆ. ಇಂತಹ ಬದ್ಧತೆಯುಳ್ಳ ಕೆಲಸ ಯಾರಿಂದಲೂ ನಿರೀ ಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಪೌರಕಾರ್ಮಿಕರ ಹಿತವನ್ನೂ ಕಾಯುವ ಕೆಲಸವನ್ನು ನಿರಂತವಾಗಿ ಮಾಡಿಕೊಂಡು ಬಂದಿದ್ದಾರೆ. ಗುತ್ತಿಗೆ ಪದ್ಧತಿ ರದ್ದುಗೊಳಿಸುವುದು, ಖಾಯಂ ಮಾಡುವುದು, ಕನಿಷ್ಠ ವೇತನ, ಆರೋಗ್ಯ ಕಾಪಾಡುವುದು ಸೇರಿದಂತೆ ಹಲವು ಕಾರ್ಯಕ್ರಮ ವನ್ನೂ ಜಾರಿಗೊಳಿಸಿದ್ದಾರೆ. ತಮ್ಮ ಆಡಳಿತದ ವೇಳೆ ಪೌರ ಕಾರ್ಮಿಕರನ್ನು ಸಿಂಗಾಪುರಕ್ಕೆ ಕಳುಹಿಸಿ ಅಲ್ಲಿನ ಸ್ವಚ್ಛತಾ ಕ್ರಮದ ಬಗ್ಗೆ ಅಧ್ಯಯನ ನಡೆಸುವುದಕ್ಕೂ ಅವಕಾಶ ಮಾಡಿ ಕೊಟ್ಟರು. ಪೌರಕಾರ್ಮಿಕರ ವಿದೇಶ ಪ್ರವಾಸವನ್ನು ಅಂದು ಐಎಎಸ್ ಅಧಿಕಾರಿಗಳು ವಿರೋಧಿಸಿದ್ದರು. ಆಗ ಸಿದ್ದ ರಾಮಯ್ಯ ಅವರು ಅಧಿಕಾರಿಗಳು ಮಾತ್ರ ವಿದೇಶಿ ಪ್ರವಾಸ ಕೈಗೊಳ್ಳಬಹುದು. ಪೌರಕಾರ್ಮಿಕರ ಪ್ರವಾಸಕ್ಕೆ ಯಾಕೆ ವಿರೋ ಧಿಸುತ್ತೀರಾ ಎಂದು ಚಾಟಿ ಬೀಸುವ ಮೂಲಕ ಸಿಂಗಾಪುರದ ಪ್ರವಾಸದ ವ್ಯವಸ್ಥೆ ಮಾಡಿದ್ದರು ಎಂದು ಸ್ಮರಿಸಿದರು.

ಪೌರಕಾರ್ಮಿಕ ಜನಾಂಗದ ಮುಖಂಡರೂ, ಮಾಜಿ ಮೇಯರ್ ಆಗಿರುವ ನಾರಾಯಣ್ ಅವರ ಏಳಿಗೆಗೆ ಸಿದ್ದ ರಾಮಯ್ಯ ಅವರ ಕೊಡುಗೆ ಅಪಾರ. ಅವರ ಪ್ರತಿ ಯೊಂದು ಯಶಸ್ಸಿನ ಹೆಜ್ಜೆಯಲ್ಲೂ ಸಿದ್ದರಾಮಯ್ಯರ ಪಾತ್ರ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ನಾರಾಯಣ್ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ಮಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಮೈಸೂರು ವಿಶ್ವವಿದ್ಯಾನಿಲಯದ ಎನ್.ರಾಚಯ್ಯ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಹೆಚ್. ಬಿ.ಮಲ್ಲಿಕಾರ್ಜುನಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಎನ್.ರಾಚಯ್ಯ ಅಧ್ಯಯನ ಪೀಠ ಸ್ಥಾಪನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಕೊಡುಗೆ ಅಪಾರ. ಈ ಹಿಂದೆ ಜಂಬೂಸವಾರಿಯಲ್ಲಿ ಸಾಗುತ್ತಿದ್ದ ಆನೆ, ಕುದುರೆ ಹಾಕಿದ ಲದ್ದಿಯನ್ನು ಬಾಚುತ್ತಿದ್ದ ಪೌರಕಾರ್ಮಿಕ ಜನಾಂಗಕ್ಕೆ ಸೇರಿದ ನಾರಾಯಣ್ ಅವರನ್ನು ಮೇಯರ್ ಮಾಡಿ, ಅದೇ ಜಂಬೂಸವಾರಿ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುವಂತೆ ಮಾಡಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು.

Translate »