ಮೈಸೂರಿನ ಸಂಘ ಪರಿವಾರದ ಹಿರಿಯ ನಾಯಕರಿಗೆ ಸ್ವತಃ ಕರೆ ಮಾಡಿ ಆರೋಗ್ಯ ವಿಚಾರಿಸಿದ ಮೋದಿ
ಮೈಸೂರು

ಮೈಸೂರಿನ ಸಂಘ ಪರಿವಾರದ ಹಿರಿಯ ನಾಯಕರಿಗೆ ಸ್ವತಃ ಕರೆ ಮಾಡಿ ಆರೋಗ್ಯ ವಿಚಾರಿಸಿದ ಮೋದಿ

April 27, 2020

ಮೈಸೂರು,ಏ.26(ಎಂಟಿವೈ)- ಮೈಸೂರಿನ ಸಂಘ ಪರಿವಾರದ ಹಿರಿಯ ನಾಯ ಕರು ಹಾಗೂ ಪಾಲಿಕೆ ಮಾಜಿ ಸದಸ್ಯರೂ ಆದ ಎನ್.ಆರ್.ಚಂದ್ರಶೇಖರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಧ್ಯಾಹ್ನ ಕರೆ ಮಾಡಿ ಕುಶಲೋಪರಿ ವಿಚಾರಿಸಿ ದರಲ್ಲದೆ, ಪಕ್ಷ ಸಂಘಟನೆಗೆ ಶ್ರಮಿಸಿದ್ದನ್ನು ಗುಣಗಾನ ಮಾಡಿದ್ದಾರೆ.

ಮೈಸೂರಿನ ವಿದ್ಯಾರಣ್ಯಪುರಂ 4ನೇ ಮೇನ್, 9ನೇ ಕ್ರಾಸ್ ನಿವಾಸಿ ಎನ್.ಆರ್.ಚಂದ್ರಶೇಖರ್(77) ಅವರ ಮೊಬೈಲ್‍ಗೆ ಭಾನುವಾರ ಮಧ್ಯಾಹ್ನ ದೆಹಲಿಯ ಪ್ರಧಾನಿ ಕಚೇರಿಯಿಂದ ಕರೆ ಮಾಡಿ, ಮೋದಿಯವರು ನಿಮ್ಮೊಂ ದಿಗೆ ಮಾತನಾಡಬೇಕು ಸಮಯ ನೀಡುವಿರಾ? ಎಂದು ಕೇಳಿದ್ದಾರೆ. ಇದರಿಂದ ಆಶ್ಚರ್ಯಚಕಿತರಾದ ಚಂದ್ರಶೇಖರ್, ಪ್ರಧಾನಿ ಕಚೇರಿಯಿಂದಲೇ ಕರೆ ಬಂದಿರುವುದನ್ನು ಖಚಿತಪಡಿಸಿಕೊಂಡ ನಂತರ ಮಾತನಾಡುವುದಾಗಿ ಒಪ್ಪಿಗೆ ಸೂಚಿಸಿದ್ದಾರೆ. ಬಳಿಕ 10 ನಿಮಿಷದ ನಂತರ ಪ್ರಧಾನಿ ನರೇಂದ್ರ ಮೋದಿ ಅವರೇ ಕರೆ ಮಾಡಿ ಹಿಂದಿ ಹಾಗೂ ಇಂಗ್ಲಿಷ್‍ನಲ್ಲಿ ಮೂರು ನಿಮಿಷ ಮಾತನಾಡಿ ಕುಶಲೋ ಪರಿ ವಿಚಾರಿಸಿದ್ದಾರೆ. ನಿಮ್ಮಂತ ಹಿರಿಯರು ಜನಸಂಘ, ಆರ್‍ಎಸ್‍ಎಸ್ ಹಾಗೂ ಬಿಜೆಪಿಗೆ ಫಲಾಪೇಕ್ಷೆಯಿಲ್ಲದೆ ದುಡಿದ ಫಲವಾಗಿ ನನಗೆ ಇಂದು ಇಂತಹ ಮಹೋನ್ನತ ಹುದ್ದೆ ಸಿಕ್ಕಿದೆ. ನಿಮ್ಮಂತಹ ಹಿರಿಯರ ಆಶೀರ್ವಾದ ನನ್ನ ಮೇಲಿರಲಿ ಎಂದರು ಎಂದು ಚಂದ್ರಶೇಖರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಅಲ್ಲದೆ ತುರ್ತು ಪರಿಸ್ಥಿತಿಯಲ್ಲಿ ನನ್ನ ಸೇವೆ, ನನ್ನ ಆರೋಗ್ಯ ವಿಚಾರಣೆ, ಪಾಲಿಕೆ ಸದಸ್ಯನಾಗಿದ್ದಾಗ ಮಾಡಿದ ಕೆಲಸಗಳ ಬಗ್ಗೆಯೂ ಮಾಹಿತಿ ಪಡೆದು ಸಂತೋಷ ಪಟ್ಟಿರುವುದಾಗಿ ಹೇಳಿದರು. ಇದಕ್ಕೆ ಪ್ರತಿಯಾಗಿ ನಾನು ಪ್ರಧಾನಿಯೊಂದಿಗೆ ಮಾತಾ ನಾಡುತ್ತಿರುವುದಕ್ಕೆ ಸಂತೋಷವಾಗಿದೆ. ಇನ್ನು ಮುಂದೆ ನೀವು ಏನೇ ಆದೇಶ ಮಾಡಿದರೂ ವಿನಮ್ರದಿಂದ ಪಾಲಿಸುತ್ತೇನೆ ಎಂದು ಹೇಳಿದೆ. ಅದಕ್ಕೆ ಮೋದಿ ಅವರು, ಪಕ್ಷ ಸಂಘಟನೆಯಲ್ಲಿ ತೊಡಗಿರುವ ಯುವ ಜನರಿಗೆ ನೀವು ಸ್ಪೂರ್ತಿಯಾಗಬೇಕು ಎಂದು ಸಲಹೆ ನೀಡಿದರು ಎಂದು ಚಂದ್ರಶೇಖರ್ ವಿವರಿಸಿದರು.

2000-05ರಲ್ಲಿ ಅಂದಿನ 9ನೇ ವಾರ್ಡ್‍ನಿಂದ (ವಿದ್ಯಾರಣ್ಯಪುರಂ) ಬಿಜೆಪಿ ಅಭ್ಯರ್ಥಿಯಾಗಿ ಪಾಲಿಕೆಗೆ ಆಯ್ಕೆಯಾಗಿದ್ದರು.

 

 

Translate »