ಮೈಸೂರಿನಲ್ಲಿ ರಾಷ್ಟ್ರೀಯ ಕರಾಟೆ ಪಂದ್ಯಾವಳಿ ಆರಂಭ
ಮೈಸೂರು

ಮೈಸೂರಿನಲ್ಲಿ ರಾಷ್ಟ್ರೀಯ ಕರಾಟೆ ಪಂದ್ಯಾವಳಿ ಆರಂಭ

August 26, 2018
  • ಚಾಮುಂಡಿವಿಹಾರ ಒಳಾಂಗಣದಲ್ಲಿ ನಡೆಯುತ್ತಿರುವ ಸ್ಪರ್ಧೆ
  • ವಿವಿಧ ರಾಜ್ಯಗಳ ಸಾವಿರಕ್ಕೂ ಹೆಚ್ಚು ಕರಾಟೆ ಪಟುಗಳ ಭಾಗಿ

ಮೈಸೂರು:  ಮೈಸೂರು ಚಾಮುಂಡಿ ವಿಹಾರ ಒಳಾಂಗಣದಲ್ಲಿ ಶನಿವಾರ ಆರಂಭವಾದ ಎರಡು ದಿನಗಳ ಮಾಬುನಿ ಕಪ್-2018 ಕರಾಟೆ ಪಂದ್ಯಾವಳಿಯಲ್ಲಿ ವಿವಿಧ ರಾಜ್ಯಗಳ ಸಾವಿರಕ್ಕೂ ಹೆಚ್ಚು ಮಂದಿ ಕರಾಟೆ ಪಟುಗಳು ಪಾಲ್ಗೊಂಡಿದ್ದು, ವಿವಿಧ ವಯೋಮಾನದ ವಿಭಾಗಗಳಲ್ಲಿ ಸೆಣಸಾಡಲಿದ್ದಾರೆ.

ಆಲ್ ಇಂಡಿಯಾ ಶಿಟೊ ರಿಯು ಕರಾಟೆ – ಡು ಯೂನಿಯನ್‍ನ ಮೈಸೂರು ಘಟಕ ಆಯೋಜಿಸಿರುವ ಕರಾಟೆ ಪಂದ್ಯಾವಳಿಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳು ಒಳಗೊಂಡಂತೆ ದೆಹಲಿ, ಉತ್ತರ ಪ್ರದೇಶ, ಗುಜರಾತ್, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ, ಮಧ್ಯಪ್ರದೇಶ, ಒಡಿಸ್ಸಾ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಕರಾಟೆ ಪಟುಗಳು ಆಗಮಿಸಿದ್ದಾರೆ. ಅಖಲ ಭಾರತ ಮಟ್ಟದ ಚಾಂಪಿಯನ್ ಶಿಪ್ ಟ್ರೋಫಿಯೊಂದಿಗೆ ಮುಂಬರುವ ದಿನಗಳಲ್ಲಿ ಇಂಡೋನೇಷಿಯಾದಲ್ಲಿ ನಡೆಯಲಿರುವ ಏಷ್ಯಾ-ಫೆಸಿಪಿಕ್ ಕರಾಟೆ ಪಂದ್ಯಾವಳಿಗೆ ಅರ್ಹ ಪಟುಗಳ ಆಯ್ಕೆಯೂ ಈ ಪಂದ್ಯಾವಳಿಯಲ್ಲಿಯೇ ನಡೆಯುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕರಾಟೆ ಪಟುಗಳು ಆಗಮಿಸಿದ್ದಾರೆ.

ಪಂದ್ಯಾವಳಿಗಾಗಿ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಎಂಟು ಅಂಕಣಗಳನ್ನು ಸಿದ್ದಪಡಿಸಿ ಕಥ(ಪ್ರದರ್ಶನ) ಮತ್ತು ಕಮಿತೆ(ಫೈಟ್) ವಿಭಾಗದಲ್ಲಿ ಸ್ಪರ್ಧೆ ನಡೆಸಲಾಗುತ್ತಿದೆ. ಈ ಪಂದ್ಯಾವಳಿಯಲ್ಲಿ ನಾಲ್ಕು ವರ್ಷದಿಂದ 50 ವರ್ಷ ಮೇಲ್ಪಟ್ಟ ಪಟುಗಳು ಪಾಲ್ಗೊಂಡಿದ್ದಾರೆ. ನಾಲ್ಕರಿಂದ 8 ವರ್ಷದೊಳಗಿನವರಿಗಾಗಿ ಕಥ ವಿಭಾಗದಲ್ಲಿ ಸ್ಪರ್ಧೆ ನಡೆಸಲಾಯಿತು. ಇದರಲ್ಲಿ ಮಕ್ಕಳು ತಾವು ಕಲಿತಿರುವ ಕರಾಟೆಯ ವಿವಿಧ ಮಜಲುಗಳ ಭಂಗಿಗಳನ್ನು ಪ್ರದರ್ಶಿಸಿ, ಗಮನ ಸೆಳೆದರು. 8 ವರ್ಷ ಮೇಲ್ಪಟ್ಟ ಪಟುಗಳಿಗೆ ಕಮಿತೆ ವಿಭಾಗದಲ್ಲಿ ಪರಸ್ಪರ ಕಾದಾಡುವ ಸ್ಪರ್ಧೆ ನಡೆಸಲಾಯಿತು. ಸಮಯ ನಿಗಧಿ ಮಾಡಿ ನಡೆಸಿದ ಕಾದಾಟದಲ್ಲಿ ಹೆಚ್ಚು ಅಂಕಗಳಿಸಿದ ಪಟುಗಳನ್ನು ವಿಜಯಿ ಎಂದು ಘೋಷಿಸಲಾಯಿತು.

ಇಂದು ಬೆಳಿಗ್ಗೆ ಆರಂಭವಾದ ಮಾಬುನಿ ಕಪ್ ಕರಾಟೆ ಪಂದ್ಯಾವಳಿಯಲ್ಲಿ ಎಪಿಎಸ್‍ಕೆಎಫ್ ಅಧ್ಯಕ್ಷ ಮಲೇಷಿಯಾದ ಹಿರಿಯ ಕರಾಟೆ ಮಾಸ್ಟರ್ ಜಾರ್ಜ್ ಟಾನ್, ಸಲಹೆಗಾರ ಸಿಂಗಾಪುರದ ಕರಾಟೆ ಮಾಸ್ಟರ್ ಟಿ.ಎಸ್.ವಾಂಗ್, ಎಸ್‍ಪಿಆರ್ ಡಿಸ್ಟಲರೀಸ್ ವ್ಯವಸ್ಥಾಪಕ ಸಿಮಂತ್‍ಕುಮಾರ್, ಆಲ್ ಇಂಡಿಯಾ ಶಿಟೊ ರಿಯು ಕರಾಟೆ -ಡು ಯೂನಿಯನ್ ಅಧ್ಯಕ್ಷ ಅರುಣ್ ಮಾಚಯ್ಯ, ಪಂದ್ಯಾವಳಿ ಸಮಿತಿಯ ಅಧ್ಯಕ್ಷ ಎನ್.ಶಂಕರ್, ತಾಂತ್ರಿಕ ಸಮಿತಿಯ ಅಧ್ಯಕ್ಷ ಸಸಿಧರನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »