ಚಾಮುಂಡಿಬೆಟ್ಟದ ಪೌರಕಾರ್ಮಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ
ಮೈಸೂರು

ಚಾಮುಂಡಿಬೆಟ್ಟದ ಪೌರಕಾರ್ಮಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ

April 19, 2020
  • ಚಾಮುಂಡಿಬೆಟ್ಟ ಗ್ರಾಪಂ ಅಧ್ಯಕ್ಷೆ ಗೀತಾ ಸ್ಪಷ್ಟನೆ

ಮೈಸೂರು, ಏ.18(ಎಸ್‍ಬಿಡಿ)- ಮೈಸೂರಿನ ಚಾಮುಂಡಿಬೆಟ್ಟದ ಪೌರಕಾರ್ಮಿಕರ ಕಾಲೋನಿ ನಿವಾಸಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ಚಾಮುಂಡಿಬೆಟ್ಟ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗೀತಾ ಸ್ಪಷ್ಟಪಡಿಸಿದ್ದಾರೆ.

ಪೌರಕಾರ್ಮಿಕರ ಕಾಲೋನಿ ಕುಟುಂಬಗಳಿಗೆ ಪಡಿತರ ಚೀಟಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಬಿಪಿಎಲ್ ಹೊಂದಿರುವ 14 ಕುಟುಂಬಗಳಿಗೆ ಶ್ರೀ ಮಹಾಬಲಾದ್ರಿ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಆಹಾರ ಪದಾರ್ಥ ವಿತರಿಸಲಾಗಿದೆ. ಮಹಿಷಾಸುರ ಪ್ರತಿಮೆ ಬಳಿ ವ್ಯಾಪಾರಿಗಳ ತೆರವು ಮಾಡಿದ ಬಳಿಕ, ಪೌರಕಾರ್ಮಿಕರ ಕಾಲೋನಿಯ ಗೋಪಮ್ಮ, ವಿಜಯಕುಮಾರ್, ಮಹೇಶ್ ಹಾಗೂ ಮಾಣಿಕ್ಯಂ ಅವರಿಗೆ ಪರ್ಯಾಯ ಮಳಿಗೆ ಕಲ್ಪಿಸಿ, ಹಂಚಿಕೆ ಪತ್ರ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ವೇತನ ನೀಡಿಲ್ಲ: ಗ್ರಾಪಂನ ಒಂಭತ್ತು ಮಂದಿ ಪೌರಕಾರ್ಮಿಕರನ್ನು ಸರ್ಕಾರದ ಮಾನದಂಡದಡಿ ಜಿಲ್ಲಾ ಪಂಚಾಯ್ತಿಯಿಂದ ಅನುಮೋದನೆ ಮಾಡಬೇಕಿದೆ. ಅಗತ್ಯಕ್ಕಿಂತ ಹೆಚ್ಚುವರಿ ಪೌರಕಾರ್ಮಿಕರಿದ್ದು, ವೇತನ ನೀಡುವುದರಲ್ಲಿ ವ್ಯತ್ಯಯವಾಗಿದೆ. ಗ್ರಾಪಂಗೆ ಯಾವುದೇ ಆದಾಯದ ಸಂಪನ್ಮೂಲವಿಲ್ಲ. ಲಾಕ್‍ಡೌನ್‍ನಿಂದ ವ್ಯಾಪಾರ ವಹಿವಾಟು ಬಂದ್ ಆಗಿರುವುದರಿಂದ ಮಳಿಗೆಗಳ ತೆರಿಗೆ ಹಾಗೂ ಮನೆ ಕಂದಾಯ ವಸೂಲಿ ಮಾಡಲಾಗದ ಕಾರಣ ಪೌರಕಾರ್ಮಿಕರಿಗೆ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ವೇತನ ನೀಡಲು ಸಾಧ್ಯವಾಗಿಲ್ಲ. ಆದರೆ ಇಎಫ್‍ಎಂಎಸ್ ಮೂಲಕ ವೇತನ ಪಾವತಿಗೆ ಮೇಲಧಿಕಾರಿಗಳ ಅನುಮೋದನೆ ಕೋರಲಾಗಿದೆ. ಕೊರೊನಾ ಭೀತಿ ಇರುವುದರಿಂದ ಕಾರ್ಮಿಕರಿಗೆ ಮಾಸ್ಕ್, ಗ್ಲೌಸ್, ಸೋಪನ್ನು ವಿತರಿಸಲಾಗಿದೆ ಎಂದು ಗೀತಾ ಸ್ಪಷ್ಟೀಕರಣ ನೀಡಿದ್ದಾರೆ.

Translate »