ವಾರಕ್ಕೆ ಒಂದು ದಿನವಾದ್ರೂ ಮದ್ಯ ಬೇಕು
ಚಾಮರಾಜನಗರ

ವಾರಕ್ಕೆ ಒಂದು ದಿನವಾದ್ರೂ ಮದ್ಯ ಬೇಕು

May 1, 2020

ಚಾಮರಾಜನಗರ, ಏ.30(ಎಸ್‍ಎಸ್)- ಮದ್ಯದಂಗಡಿಗಳು ಮುಚ್ಚಿರುವುದರಿಂದ ಕಳ್ಳಭಟ್ಟಿ ದಂಧೆ ಹೆಚ್ಚಾಗಿದೆ. ಮದ್ಯ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವುದ ರಿಂದ ಗ್ರೀನ್‍ಝೋನ್ ಇರುವ ಕಡೆಗಳಲ್ಲಿ ವಾರಕ್ಕೆ ಒಂದು ದಿನವಾದರೂ ಎಣ್ಣೆ ಅಂಗಡಿಗಳನ್ನು ತೆರೆಯುವಂತೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಸರ್ಕಾವರನ್ನು ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಪುಟ್ಟರಂಗಶೆಟ್ಟಿ, ವೈನ್‍ಸ್ಟೋರ್ಸ್‍ಗಳನ್ನು ಮುಚ್ಚಿರುವುದರಿಂದ ಸರ್ಕಾರಕ್ಕೆ ಲಾಸ್ ಆಗುತ್ತಿದೆ. ಮದ್ಯ ಮಾರಾಟ ದಂಧೆ ಯಾಗಿದೆ. ದಿನವೂ ಕುಡಿಯಲೇ ಬೇಕು ಎನ್ನುವವರು 10 ಪಟ್ಟು ಹೆಚ್ಚು ಹಣ ನೀಡಿ ಕುಡಿಯುತ್ತಿದ್ದಾರೆ. ಲೋಕಲ್ ಡ್ರಿಂಕ್ಸ್‍ಗೆ 400 ರೂ., 500 ರೂ. ಪಡೆಯಲಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಗಳಿಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಅಬಕಾರಿ ಇಲಾಖೆ ಡಿಸಿಗೆ ಪತ್ರ ಬರೆದಿದ್ದೇನೆ ಎಂದರು.

ಮದ್ಯದಂಗಡಿಗಳನ್ನು ಸೀಜ್ ಮಾಡಿದಾಗ ವೀಡಿಯೋ ಮಾಡಿಸಲಾಯಿತಾ? ಅಂಗಡಿಯಲ್ಲಿದ್ದ ಸ್ಟಾಕ್‍ಗಳನ್ನು ಲೆಕ್ಕ ಪಡೆಯಲಾಯಿತಾ? ಮದ್ಯದ ದಂಧೆ ಪ್ರಾರಂಭವಾದಾಗ ಪರಿಶೀಲಿಸಿದ್ದೀರಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಹಸಿರು ವಲಯ (ಗ್ರೀನ್‍ಝೋನ್)ದ ಕಡೆಗಳಲ್ಲಿ ವಾರಕ್ಕೆ ಒಮ್ಮೆಯಾ ದರೂ ಮದ್ಯದಂಗಡಿ ತೆರೆದರೆ ಕಳ್ಳಭಟ್ಟಿ ದಂಧೆ ನಿಲ್ಲುತ್ತದೆ. ಮದ್ಯವನ್ನು ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಪ್ಪಿಸ ಬಹುದು ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಸರ್ಕಾರಕ್ಕೆ ಸಲಹೆ ನೀಡಿದರು. ಮಹಿಳೆಯರು ಮದ್ಯದಂಗಡಿ ಬೇಡ ಎನ್ನುತ್ತಾರೆ, ಆದರೆ ಕೆಲವು ಕಡೆಗಳಲ್ಲಿ ಕಳ್ಳಭಟ್ಟಿ ತಯಾರಿಸುವುದು ಮಹಿಳೆಯರೇ ಆಗಿದ್ದಾರೆ ಎಂದು ಕಿಡಿಕಾರಿದ ಪುಟ್ಟರಂಗಶೆಟ್ಟಿ, ಈಗ ಸರ್ಕಾರ ಕಷ್ಟದಲ್ಲಿದೆ, ಖಜಾನೆಯಲ್ಲಿ ದುಡ್ಡಿಲ್ಲ ಎಂದರು.

Translate »