ಕೇರಳದಲ್ಲಿ ಹೊಸ ನ್ಯೂರೋ ವೈರಸ್ ಪತ್ತೆ
ಮೈಸೂರು

ಕೇರಳದಲ್ಲಿ ಹೊಸ ನ್ಯೂರೋ ವೈರಸ್ ಪತ್ತೆ

November 18, 2021

ಮೈಸೂರು,ನ.17(ಎಂಟಿವೈ)- ಕೇರಳದ ವೈಯ್ನಾಡಲ್ಲಿ ನ್ಯೂರೋ ಎಂಬ ಹೊಸ ವೈರಸ್ ಪತ್ತೆಯಾಗಿ ರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಗಡಿ ಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಆದರೆ ನ್ಯೂರೋ ವೈರಸ್ ಮಾರಣಾಂತಿಕವಲ್ಲ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕೆ.ಹೆಚ್. ಪ್ರಸಾದ್ ತಿಳಿಸಿದ್ದಾರೆ.

ಕೊರೊನಾ, ನಿಪಾ, ಡೆಲ್ಟಾ ಸೇರಿ ದಂತೆ ಹೊಸ ಹೊಸ ವೈರಸ್‍ಗಳು ಕೇರಳದಲ್ಲೇ ಕಾಣಿಸಿಕೊಳ್ಳುತ್ತಿರುವುದು ಆತಂಕ ಸೃಷ್ಟಿಸಿದೆ. ಇದೀಗ ಹೊಸ ದಾಗಿ ಪತ್ತೆಯಾದ ವೈರಸ್ ನ್ಯೂರೋ ಕೇರಳದ ವೈರಸ್‍ಗಳ ಪಟ್ಟಿಗೆ ಸೇರ್ಪಡೆ ಗೊಂಡಿದೆ. ಇದರಿಂದ ಕೇರಳ-ಕರ್ನಾಟಕ ಗಡಿ ಜಿಲ್ಲೆ ಹೆಚ್.ಡಿ.ಕೋಟೆ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಗಡಿ ಯಂಚಿನ ಗ್ರಾಮ ಹಾಗೂ ಹಾಡಿಗಳ ಜನರಲ್ಲಿ ಹೊಸ ವೈರಸ್‍ನ ಭೀತಿ ಹೆಚ್ಚಾಗಿದೆ.

ಕೇರಳದ ವೈಯ್ನಾಡಿನಲ್ಲಿರುವ ಪಶುವೈದ್ಯಕೀಯ ಕಾಲೇಜಿನ 13 ವಿದ್ಯಾರ್ಥಿ ಗಳಲ್ಲಿ ನ್ಯೂರೋ ವೈರಸ್ ಸೋಂಕು ದೃಢ ಪಟ್ಟಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರ ಸ್ವರೂಪದಲ್ಲಿ ಕೊರೊನಾ ವೈರಸ್ ಕೇರಳವನ್ನು ಕಾಡಿದ್ದು, ಚೇತರಿಸಿ ಕೊಳ್ಳುತ್ತಿದ್ದ ಸಂದರ್ಭದಲ್ಲಿ ಹೊಸ ನ್ಯೂರೋ ವೈರಸ್ ಕೇರಳ ಜನರ ನಿದ್ದೆಗೆಡಿ ಸಿದೆ. ಈಗಾಗಲೇ ಕೇರಳದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಅಲ್ಲದೆ, ನ್ಯೂರೋ ವೈರಸ್ ಹೇಗೆ ಹರಡುತ್ತದೆ ಎಂದು ಸಂಶೋ ಧನೆ ನಡೆಸಲಾಗಿದ್ದು, ಗಾಳಿ ಹಾಗೂ ಸ್ಪರ್ಶದಿಂದ ಸೋಂಕು ಹರಡುವುದಿಲ್ಲ ಎಂದು ಖಚಿತವಾಗಿರುವುದರಿಂದ ನಿವಾರಣೆಯಾಗಿದೆ.

ಏನದು ನ್ಯೂರೋ ವೈರಸ್: ಹರ್ಭೋ ವೈರಸ್ ಫ್ಯಾಮಿಲಿಗೆ ಸೇರಿರುವ ನ್ಯೂರೋ ವೈರಸ್ ಇತರೆ ವೈರಸ್‍ನಂತೆ ಮಾರಕ ವಲ್ಲ. ಸ್ಪರ್ಶ ಹಾಗೂ ಗಾಳಿಯಲ್ಲಿ ಹರಡದೇ ಇರುವುದು ಆರೋಗ್ಯ ಇಲಾಖೆ ಮಾತ್ರ ವಲ್ಲದೆ ಜನರಲ್ಲೂ ಸಮಧಾನ ತಂದಿದೆ. ಸ್ಪರ್ಶದಿಂದ ಹರಡುವ ವೈರಸ್ ಆಗಿದ್ದರೆ ದುಷ್ಪರಿಣಾಮ ಬೀರುತ್ತಿತ್ತು. ಆದರೆ ಈ ವೈರಸ್ ಕಲುಷಿತ ನೀರಿನಿಂದ ಹರಡುವುದರಿಂದ ಹಾಗೂ ಮಾರಣಾಂತಿಕವಲ್ಲದ ಕಾರಣ ನ್ಯೂರೋ ವೈರಸ್ ತಗುಲಿದರೂ ಪ್ರಾಣ ಹಾನಿ ಸಂಭವಿಸುವುದಿಲ್ಲ. ಇದರಿಂದಾಗಿಯೇ ಜನರು ಆತಂಕ ಪಡದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಜನರಿಗೆ ಅಭಯ ನೀಡುತ್ತಿದ್ದಾರೆ.

ಭಯ ಬೇಡ: ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಹೆಚ್.ಪ್ರಸಾದ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಕೇರಳದಲ್ಲಿ ನ್ಯೂರೋ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಗಡಿ ಭಾಗದ ಗ್ರಾಮಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. ಅಲ್ಲದೆ ಬಾವಲಿ ಚೆಕ್‍ಪೋಸ್ಟ್ ಮೂಲಕ ಮೈಸೂರು ಜಿಲ್ಲೆ ಪ್ರವೇಶಿಸುವ ಎಲ್ಲಾ ಪ್ರಯಾಣಿಕರನ್ನು ಆರೋಗ್ಯ ಕಾರ್ಯಕರ್ತರು ವೈರಸ್‍ನ ಗುಣ ಲಕ್ಷಣವಾದ ವಾಂತಿ, ಭೇದಿಯಾಗುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದರು. ನ್ಯೂರೋ ವೈರಸ್ ತಗುಲಿರುವ ವ್ಯಕ್ತಿಯ ಮಲ-ಮೂತ್ರ ಸೇರಿದ ನೀರನ್ನು ಕುಡಿಯುವುದರಿಂದ ಹಾಗೂ ಸೋಂಕಿತ ವ್ಯಕ್ತಿ ತಿಂದ ತಿನಿಸನ್ನು ತಿನ್ನುವುದರಿಂದ ವೈರಸ್ ಹರಡುತ್ತದೆ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಶುದ್ಧ ನೀರನ್ನೇ ಕುಡಿಯಲು ಬಳಸುವುದರಿಂದ ಹಾಗೂ ಕಾಯಿಸಿದ ನೀರನ್ನೇ ಹೆಚ್ಚು ಜನರು ಬಳಸುತ್ತಿರುವುದರಿಂದ ನ್ಯೂರೋ ವೈರಸ್ ಹರಡುವಿಕೆ ಆತಂಕ ಕಡಿಮೆ ಇದೆ. ಇನ್ನು ನ್ಯೂರೋ ವೈರಸ್ ಇರುವವರು ನಮ್ಮೊಂದಿಗೆ ಇದ್ದರೂ ಅವರಿಂದ ವೈರಸ್ ಹರಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಕೇರಳದ ವೈಯ್ನಾಡಲ್ಲಿ ಕಳೆದ 2-3 ದಿನದ ಹಿಂದಷ್ಟೇ ಹೊಸ ವೈರಸ್ ಪತ್ತೆಯಾಗಿರುವುದರಿಂದ ಇನ್ನು ಆ ವೈರಸ್ ಬಗ್ಗೆ ಹೆಚ್ಚಿನ ಅಧ್ಯಯನ ನಡೆದಿಲ್ಲ. ಈಗಷ್ಟೇ ತಜ್ಞರು ಪರಿಶೀಲಿಸುತ್ತಿದ್ದಾರೆ. ರಾಜ್ಯ ಆರೋಗ್ಯ ಇಲಾಖೆಯಿಂದ ಇನ್ನು ಯಾವ ಮಾರ್ಗಸೂಚಿಯೂ ಬಂದಿಲ್ಲ. ಆದರೂ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜನರು ಆತಂಕಕ್ಕೆ ಒಳಗಾಗದಂತೆ ಮನವಿ ಮಾಡಿದರು.

ಕೇರಳದಲ್ಲೇ ಹೊಸ ವೈರಸ್ ಪತ್ತೆ ಏಕೆ: ಕೇರಳದಲ್ಲೇ ಹೊಸ ವೈರಸ್ ಪತ್ತೆಯಾಗು ತ್ತಿರುವುದು ಹಲವರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಇದುವರೆಗೆ ಪತ್ತೆಯಾದ ಹಲವು ವೈರಸ್‍ಗಳಲ್ಲಿ ಬಹುತೇಕ ಮೊದಲ ಬಾರಿಗೆ ಪತ್ತೆಯಾಗಿರುವುದು ಕೇರಳದಲ್ಲೇ. ಈಗ ನ್ಯೂರೋ ವೈರಸ್ ಪತ್ತೆಯಾಗಿರುವುದೂ ಕೇರಳದ ವೈಯ್ನಾಡಲ್ಲಿ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಹೆಚ್‍ಓ ಡಾ.ಕೆ.ಹೆಚ್.ಪ್ರಸಾದ್, ಕೇರಳದಲ್ಲಿ ವಾತಾವರಣ ವಿಭಿನ್ನವಾಗಿದೆ. ಅಲ್ಲದೆ ವಿದೇಶದಿಂದಲೂ ಬಂದು ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಒಂದೆಡೆ ಸಮುದ್ರ, ಮತ್ತೊಂದು ಕಡೆ ಒಣ ಪ್ರದೇಶ ಸೇರಿದಂತೆ ಮಿಶ್ರ ವಾತಾವರÀಣ ವಿರುವುದರಿಂದ ಕೇರಳದಲ್ಲಿ ವೈರಸ್ ಪತ್ತೆಯಾಗುತ್ತಿವೆ ಎಂದು ವಿವರಿಸಿದರು. ಬೇರೆ ವೈರಸ್‍ಗಳ ರೂಟ್ ಬೇರೆ, ನ್ಯೂರೋ ವೈರಸ್ ರೂಟ್ ಬೇರೆ. ಡೆಂಗ್ಯೂ ಇದ್ದವರಿಗೆ ಈ ವೈರಸ್ ಬಂದರೆ ಪರಿಣಾಮ ಹೆಚ್ಚಾಗುತ್ತದೆ. ಬೇರೆ ವೈರಸ್‍ನಂತೆ ಭಯ ಬೇಡ. ಸ್ಪರ್ಶದಿಂದ ಬರುವ ವೈರಸ್ ಬರುವುದಾಗಿದ್ದರೆ ಸ್ವಲ್ಪ ಆತಂಕ ಇರುತ್ತಿತ್ತು ಎಂದರು.

Translate »