ಲಿಂಗಾಂಬುದಿ ಕೆರೆಯಲ್ಲಿ ಭಾರೀ ನೀರು ಸಂಗ್ರಹ: ಎಚ್ಚರಿಕಾ ಕ್ರಮವಾಗಿ ಕಾಲುವೆ ಮೂಲಕ ನೀರು ಹೊರಕ್ಕೆ
ಮೈಸೂರು

ಲಿಂಗಾಂಬುದಿ ಕೆರೆಯಲ್ಲಿ ಭಾರೀ ನೀರು ಸಂಗ್ರಹ: ಎಚ್ಚರಿಕಾ ಕ್ರಮವಾಗಿ ಕಾಲುವೆ ಮೂಲಕ ನೀರು ಹೊರಕ್ಕೆ

November 18, 2021

ಮೈಸೂರು, ನ.17(ಎಂಟಿವೈ)- ಮೈಸೂರಿ ನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿ ರುವ ಮಳೆಯಿಂದಾಗಿ ಹಲವು ಬಡಾವಣೆ ಗಳಲ್ಲಿ ನೀರು ನುಗ್ಗಿ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ. ಮತ್ತೊಂದೆಡೆ ಕೆರೆ-ಕಟ್ಟೆಗಳು ತುಂಬಿ ಅಂತರ್ಜಲ ಹೆಚ್ಚುವ ಆಶಾ ದಾಯಕ ವಾತಾವರಣವೂ ನಿರ್ಮಾಣವಾಗಿದೆ.

ಆದರೆ, ‘ಅತಿಯಾದರೆ ಅಮೃತವೂ ವಿಷ’ ಎಂಬಂತೆ ಲಿಂಗಾಂಬುದಿ ಕೆರೆ ತುಂಬಿದ್ದು, ಅಪಾಯದ ಮಟ್ಟ ಮೀರುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಕೆರೆ ಸಂರಕ್ಷಣೆ ಹಾಗೂ ಕೆರೆಯ ಕೆಳ ಭಾಗದಲ್ಲಿರುವ ಬಡಾವಣೆಗಳಲ್ಲಿ ಉಂಟಾಗ ಬಹುದಾದ ಅನಾಹುತ ತಪ್ಪಿಸುವ ಸಲುವಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಅಧಿಕಾರಿಗಳು ಕೆರೆಯ ಕೋಡಿ ಬಳಿ ಜೆಸಿಬಿ ಬಳಸಿ ಸಣ್ಣ ಕಾಲುವೆಯೊಂದನ್ನು ನಿರ್ಮಾಣ ಮಾಡುವ ಮೂಲಕ ಹೆಚ್ಚುವರಿ ನೀರು ಹೊರ ಹಾಕಲು ಕ್ರಮ ಕೈಗೊಂಡಿದ್ದಾರೆ.

ಸುಮಾರು 200 ಎಕರೆಯಷ್ಟು ವಿಸ್ತೀರ್ಣ ವಿರುವ ಲಿಂಗಾಂಬುದಿ ಕೆರೆಯಲ್ಲಿ ಅಪಾಯ ಮಟ್ಟ ಮೀರಿ ನೀರು ತುಂಬಿದರೆ ಕೆರೆ ದಂಡೆ ಒಡೆದು ಹೋಗಿ ಬಡಾವಣೆಗಳಿಗೆ ನೀರು ನುಗ್ಗುವ ಅಪಾಯವಿರುತ್ತದೆ. ಅಲ್ಲದೇ, ಕೆರೆಯಲ್ಲಿ ಸಂಗ್ರಹವಾದ ನೀರೆಲ್ಲಾ ಹರಿದು ಹೋಗುವುದರ ಜೊತೆಗೆ ಕೆರೆ ದಂಡೆಯನ್ನು ಪುನನಿರ್ಮಾಣ ಮಾಡಬೇಕಾದ ಪರಿಸ್ಥಿತಿಯೂ ನಿರ್ಮಾಣವಾ ಗುತ್ತದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕೋಡಿ ಬಳಿ ಸಣ್ಣ ಕಾಲುವೆ ತೋಡಿ, ಹೆಚ್ಚುವರಿ ನೀರನ್ನು ಹೊರ ಬಿಟ್ಟು ಕೆರೆ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂಬುದು ಅಧಿಕಾರಿಗಳ ವಾದ.

ಆದರೆ, ಅಧಿಕಾರಿಗಳ ಈ ಕ್ರಮಕ್ಕೆ ಬೇರೊಂದು ರೀತಿಯ ವ್ಯಾಖ್ಯಾನಗಳು ಸಾರ್ವಜನಿಕ ವಲಯ ದಲ್ಲಿ ಕೇಳಿ ಬರುತ್ತಿದೆ. ಲಿಂಗಾಂಬುದಿ ಕೆರೆಯ ಪೂರ್ವ ದಿಕ್ಕಿನಲ್ಲಿರುವ ಸರ್ವೆ ನಂಬರ್ 20ರಲ್ಲಿ ಕೋಡಿ ಇದೆ. ಕೆರೆಯಲ್ಲಿ ನೀರು ತುಂಬಿದ ನಂತರ ಕೋಡಿ ಬೀಳುತ್ತದೆ. ಆದರೆ, ಕೆರೆ ಸಂಪೂರ್ಣ ವಾಗಿ ತುಂಬಿ ಕೋಡಿ ಬೀಳುವ ಮುನ್ನವೇ ಜೆಸಿಬಿ ಬಳಸಿ ಕಾಲುವೆ ತೋಡಿ ನೀರನ್ನು ಹೊರ ಬಿಡಬೇಕಾದ ಅವಶ್ಯಕತೆ ಏನು? ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿ ಬಂದಿದೆ.

ಕೆರೆ ತುಂಬಿರುವುದರಿಂದ ಅದರ ಹಿನ್ನೀರು ಕೆರೆಗೆ ಹೊಂದಿಕೊಂಡಿರುವ ಜಮೀನು ಹಾಗೂ ತೋಟಗಳಿಗೆ ಒತ್ತರಿಸಿದೆ. ಈ ತೋಟ ಹಾಗೂ ಜಮೀನು ಪ್ರಭಾವಿ ವ್ಯಕ್ತಿಗಳಿಗೆ ಸೇರಿದ್ದಾಗಿದ್ದು, ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತರೆ ಅಲ್ಲಿನ ಬೆಳೆಗೆ ತೊಂದರೆಯಾ ಗುತ್ತದೆ ಎಂಬ ಕಾರಣದಿಂದಾಗಿ ಪ್ರಭಾವಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ನಾಲೆ ತೋಡಿದ್ದಾರೆ ಎಂಬುದು ಸಾರ್ವಜನಿಕರ ಆರೋಪ. ಮುಡಾ ಅಧಿಕಾರಿಗಳ ಈ ಕ್ರಮದಿಂದಾಗಿ ಕೆರೆಯ ಕೆಳ ಭಾಗದಲ್ಲಿರುವ ಅಪರ್ಣಾ ಲೇಔಟ್, ವೀರರಾಜ ಅರಸ್ ಲೇಔಟ್, ಕೆಎಸ್‍ಆರ್‍ಟಿಸಿ ಲೇಔಟ್, ಎಸ್‍ಪಿಎನ್ ಕ್ಲೇವ್ ಸೇರಿದಂತೆ ಕೆಳ ಬಡಾವಣೆಗಳಲ್ಲಿನ ಮನೆಗಳಿಗೆ ನೀರು ನುಗ್ಗುವ ಆತಂಕವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಈ ಬಡಾವಣೆಗಳ ಮನೆಗಳಲ್ಲಿ ಶೀತದ ವಾತಾವರಣ ಹೆಚ್ಚಾಗಿದ್ದು, ಮಕ್ಕಳು ಹಾಗೂ ಹಿರಿಯ ನಾಗರಿಕರು ಪರದಾಡುತ್ತಿದ್ದಾರೆ. ಇನ್ನು ಕಾಲುವೆ ತೋಡಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದರೆ, ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ ಎಂಬುದು ನಿವಾಸಿಗಳ ಆತಂಕ. ಈ ಸಂಬಂಧ ‘ಮೈಸೂರು ಮಿತ್ರ’ ಜೊತೆ ಮಾತನಾಡಿದ ಸ್ಥಳೀಯರು, ಕೆರೆ ದಡದ ಹೊಲದಲ್ಲಿ ತುಂಬಿದ್ದ ನೀರನ್ನು ಯುಜಿಡಿ ಮಾರ್ಗಕ್ಕೆ ಹರಿಯಲು ಬಿಟ್ಟಿದ್ದಾರೆ. ಇದರಿಂದಾಗಿ ಬಡಾವಣೆಗಳಲ್ಲಿನ ಮನೆಗಳ ಯುಜಿಡಿ ಬ್ಲಾಕ್ ಆಗಿದೆ. ಎಲ್ಲೆಡೆ ಯುಜಿಡಿ ಉಕ್ಕಿ ಹರಿಯುತ್ತಿದೆ. ರಸ್ತೆಗಳು ನೀರಿನಿಂದ ಆವೃತ್ತವಾಗಿವೆ. ಕಳೆದ ವಾರ ಜಿಲ್ಲಾಧಿಕಾರಿಗಳು ಭೇಟಿ ನೀಡಿ, ಮಳೆ ನೀರಿನಿಂದ ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಮುಡಾ ಅಧಿಕಾರಿಗಳು ರಸ್ತೆ ಪಕ್ಕ ಚರಂಡಿಯಂತೆ ತೋಡಿ ವಾಪಸ್ಸಾಗಿದ್ದರು. ಇದರಿಂದಾಗಿ ಸಮಸ್ಯೆ ಪೂರ್ಣ ಪ್ರಮಾಣದಲ್ಲಿ ನಿವಾರಣೆಯಾಗಿಲ್ಲ. ಇದರ ಜೊತೆಗೆ ಕೆರೆ ಕೋಡಿಕಟ್ಟೆ ಬಳಿ ತೋಡಿರುವ ನಾಲೆಯಿಂದ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದರೆ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ ಎಂದು ಹೇಳಿದರು.

ಈ ಸಂಬಂಧ ‘ಮೈಸೂರು ಮಿತ್ರ’ ಜೊತೆ ಮಾತನಾಡಿದ ಕೆಲವು ಸ್ಥಳೀಯ ಪರಿಸರವಾದಿಗಳು, ಲಿಂಗಾಂಬುದಿ ಕೆರೆ ಸಂರಕ್ಷಣೆ ಬಗ್ಗೆ ಇಷ್ಟು ದಿನ ಮೌನವಾಗಿದ್ದ ಮುಡಾ ಅಧಿಕಾರಿಗಳು, ಈಗ ಕೆರೆ ಕೋಡಿಕಟ್ಟೆ ಬಳಿ ಕಾಲುವೆ ತೋಡಿರುವುದು ಅಚ್ಚರಿ ಉಂಟು ಮಾಡಿದೆ. ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆಯಾಗಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ಬೆಳಗ್ಗೆ ಕೋಡಿ ಕಟ್ಟೆ ಒಡೆಯುವುದಿಲ್ಲ ಎಂದು ಸ್ಥಳೀಯರಿಗೆ ಭರವಸೆ ನೀಡಿದ್ದ ಅಧಿಕಾರಿಗಳು, ಸಂಜೆ ಜೆಸಿಬಿ ತಂದು ಕಾಲುವೆ ತೋಡಿದ್ದಾರೆ ಎಂದು ಆರೋಪಿಸಿದ್ದಾರೆ.

Translate »