ಇನ್ನು ಲೋಡ್ ಮರಳು  10ರಿಂದ 15 ಸಾವಿರಕ್ಕೆ ಲಭ್ಯ
News

ಇನ್ನು ಲೋಡ್ ಮರಳು 10ರಿಂದ 15 ಸಾವಿರಕ್ಕೆ ಲಭ್ಯ

November 9, 2021

ಬೆಂಗಳೂರು,ನ.8(ಕೆಎಂಶಿ)-ಜನಸಾಮಾನ್ಯರಿಗೆ ಇನ್ನು ಮುಂದೆ ಸುಲಭವಾಗಿ ಮತ್ತು ಕಡಿಮೆ ದರದಲ್ಲಿ ಮರಳು ದೊರಕಿಸಲು ರಾಜ್ಯ ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡು ಹೊಸ ಮರಳು ನೀತಿ ಜಾರಿಗೊಳಿಸಿದೆ.

ನದಿ ಪಾತ್ರದಿಂದ ನಗರ ಮತ್ತು ಪಟ್ಟಣ ಪ್ರದೇಶದ ಜನರಿಗೆ ಪ್ರತಿ ಟನ್‍ಗೆ 700 ರೂ., ಗ್ರಾಮೀಣ ಭಾಗ ದವರಿಗೆ ಪ್ರತಿ ಟನ್‍ಗೆ 300 ರೂ. ದರ ನಿಗದಿಪಡಿಸಿದೆ.

ಗ್ರಾಹಕರು ಪ್ರಸ್ತುತ ಪ್ರತಿ ಟನ್ ಮರಳಿಗೆ 4000ದಿಂದ 5000 ರೂ. ನೀಡಿದರೂ ಉತ್ತಮ ಮರಳು ದೊರೆಯು ತ್ತಿರಲಿಲ್ಲ. ಇನ್ನು ಮುಂದೆ ನದಿ ಪಾತ್ರದ ಮರಳೇ ಕಡಿಮೆ ಹಾಗೂ ಸುಲಭವಾಗಿ ಲಭ್ಯವಾಗಲಿದೆ. ನಗರ ಮತ್ತು ಪಟ್ಟಣ ಪ್ರದೇಶದ ಜನತೆ ಮನೆಯಲ್ಲೇ ಕುಳಿತು ಆನ್‍ಲೈನ್ ಮೂಲಕ ಮರಳು ಖರೀದಿ ಮಾಡಬಹು ದಾಗಿದೆ. ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ, ಮರಳಿ ಗಾಗಿ ಇನ್ನು ಮುಂದೆ ಅಲೆದಾಡ ಬೇಕಿಲ್ಲ, ಪಂಚಾಯತ್ ಮಟ್ಟದಲ್ಲಿ ಇಲ್ಲವೇ ನದಿ ಪಾತ್ರದಲ್ಲಿ ಮರಳು ಗಾರಿಕೆಗೆ ಅವಕಾಶ ಮಾಡಿಕೊಟ್ಟಿ ದ್ದೇವೆ. ನಗರ ಪ್ರದೇಶದವರಿಗೆ ನದಿ ಪಾತ್ರದ ಪ್ರತಿ ಟನ್ ಮರಳಿಗೆ 700 ರೂ. ದರ, ಗ್ರಾಮೀಣ ಜನತೆಗೆ ಪಂಚಾಯತ್ ಮಟ್ಟದಲ್ಲಿ ಪ್ರತಿ ಟನ್‍ಗೆ 300 ರೂ. ದರ ನಿಗದಿಪಡಿಸಲಾಗಿದೆ. ಸರ್ಕಾ ರದ ಈ ನಿರ್ಧಾರದಿಂದ ಇನ್ನು ಮುಂದೆ ಮರಳನ್ನು ಸುಲಭ ವಾಗಿ ಪಡೆಯಬಹುದಲ್ಲದೆ, ಪ್ರತಿ ಲಾರಿ ಲೋಡ್‍ಗೆ ಈಗ ತೆರಬೇಕಾಗಿರುವ 50,000ರಿಂದ 60,000 ರೂ. ಬದಲು 10,000ರಿಂದ 15,000 ರೂ.ಗೆ
ಮರಳು ಲಭ್ಯವಾಗಲಿದೆ. ಹೊರ ರಾಜ್ಯಗಳಿಗೆ ಮರಳು ಸಾಗಣೆ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. ಪ್ರತಿ ಜಿಲ್ಲೆಯಲ್ಲೂ ಮರಳು ಪ್ರಾಧಿಕಾರ ರಚನೆಗೊಳ್ಳಲಿದ್ದು, ಪ್ರಾಧಿಕಾರ ಮರಳು ಲಭ್ಯತೆ ಹಾಗೂ ಮರಳುಗಾರಿಕೆಗೆ ಸೂಚನೆ ಹೊರಡಿಸಲಿದೆ.

ಸರ್ಕಾರಿ ನಿಯಮಾವಳಿ ಅಡಿ ಗುತ್ತಿಗೆದಾರರು ಮರಳುಗಾರಿಕೆ ಮಾಡಿ ನಿಗದಿ ಪಡಿಸಿರುವ ದರದಲ್ಲಿ ಗ್ರಾಹಕರಿಗೆ ಮಾರಾಟ ಮಾಡಬೇಕು ಮತ್ತು ಸರ್ಕಾರಕ್ಕೆ ರಾಯಲ್ಟಿ ಪಾವತಿಸಬೇಕು. ಪಂಚಾಯತ್ ಮಟ್ಟದಲ್ಲಿ ಸರ್ಕಾರಕ್ಕೆ ಪಾವತಿ ಯಾಗುವ ರಾಯಲ್ಟಿಯಲ್ಲಿ ಶೇ.50ರಷ್ಟು ಸ್ಥಳೀಯ ಪಂಚಾ ಯತ್‍ಗಳಿಗೆ ನೀಡಲಾಗುವುದು. ಇದರಲ್ಲಿ ಶೇ.25ರಷ್ಟನ್ನು ಸಂಪರ್ಕ ರಸ್ತೆ ಕಲ್ಪಿಸುವ ಪಂಚಾಯತ್‍ಗಳಿಗೆ ಒದಗಿಸಲಾಗುವುದು ಎಂದರು. ಕರಾವಳಿ ತೀರ ಪ್ರದೇಶದಲ್ಲಿ ಯಂತ್ರಗಳನ್ನು ಬಳಸಿ ಮರಳುಗಾರಿಕೆ ನಡೆಸುವುದು ಪರಿಸರಕ್ಕೆ ಹಾನಿಕರ ಎಂಬ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ಮಾನವರ ಮೂಲಕವೇ ಮರಳು ತೆಗೆಯುವುದನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ. ಮರಳುಗಾರಿಕೆ ಸಂಪೂರ್ಣವಾಗಿ ಯಾವ ಪ್ರದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ತೆಗೆಯಬೇಕು ಎಂಬುದನ್ನು ಆಯಾ ಜಿಲ್ಲೆಗಳಿಂದ ವರದಿ ತರಿಸಿಕೊಳ್ಳಲಾಗುವುದು ಎಂದರು. ರಾಜ್ಯ ಸರ್ಕಾರ ಉಪಖನಿಜ ನೀತಿಗೆ ತಿದ್ದುಪಡಿ ಮಾಡಲಾಗಿದ್ದು, ಈವರೆಗೂ 10ರಿಂದ 15 ವರ್ಷ ಮಾತ್ರ ಗುತ್ತಿಗೆ ನೀಡಲಾಗುತ್ತಿತ್ತು, ಇನ್ನು ಮುಂದೆ 50 ವರ್ಷ ಗುತ್ತಿಗೆ ನೀಡಲು ತಿದ್ದುಪಡಿ ಮಾಡಿದ್ದೇವೆ ಎಂದರು.

Translate »