`ಸುಧರ್ಮಾ’ ಸಂಪಾದಕಿ ಜಯಲಕ್ಷ್ಮಿ, ಹಾಕಿ ಪಟು ಡಾ.ಎಂ.ಪಿ.ಗಣೇಶ್  ಸೇರಿದಂತೆ 119 ಮಂದಿಗೆ ರಾಷ್ಟ್ರಪತಿಗಳಿಂದ ಪದ್ಮ ಪ್ರಶಸ್ತಿ ಪ್ರದಾನ
News

`ಸುಧರ್ಮಾ’ ಸಂಪಾದಕಿ ಜಯಲಕ್ಷ್ಮಿ, ಹಾಕಿ ಪಟು ಡಾ.ಎಂ.ಪಿ.ಗಣೇಶ್ ಸೇರಿದಂತೆ 119 ಮಂದಿಗೆ ರಾಷ್ಟ್ರಪತಿಗಳಿಂದ ಪದ್ಮ ಪ್ರಶಸ್ತಿ ಪ್ರದಾನ

November 9, 2021

ನವದೆಹಲಿ, ನ. 8- ಮೈಸೂರಿನ ‘ಸುಧರ್ಮಾ’ ಸಂಸ್ಕøತ ಪತ್ರಿಕೆ ಸಂಪಾದಕಿ ಶ್ರೀಮತಿ ಕೆ.ಎಸ್. ಜಯಲಕ್ಷ್ಮಿ, ಕೊಡಗಿನ ಹಾಕಿ ಪಟು ಡಾ. ಮೊಳ್ಳೇರಾ ಪಿ. ಗಣೇಶ್ ಸೇರಿದಂತೆ ನಾಡಿನ 119 ಸಾಧಕರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ಸೋಮವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಕರ್ನಾಟಕಕ್ಕೆ ಎರಡು ಪದ್ಮಭೂಷಣ ಮತ್ತು 7 ಪದ್ಮಶ್ರೀ ಪ್ರಶಸ್ತಿಗಳು ಲಭಿಸಿದ್ದು, ಖ್ಯಾತ ವೈದ್ಯ ಡಾ. ಬಿ.ಎಂ. ಹೆಗ್ಡೆ, ಸಾಹಿತಿ ಚಂದ್ರಶೇಖರ ಕಂಬಾರ ಅವರಿಗೆ ಪದ್ಮ ಭೂಷಣ, ಮೈಸೂರಿನ ಸುಧರ್ಮಾ ಸಂಸ್ಕøತ ಪತ್ರಿಕೆ ಸಂಪಾದಕಿ ಕೆ.ಎಸ್. ಜಯಲಕ್ಷ್ಮಿ, ಕೊಡಗಿನ ಹಾಕಿಪಟು ಡಾ. ಮೊಳ್ಳೇರಾ ಪಿ. ಗಣೇಶ್, ಅಕ್ಷರ ಸಂತ ಹರೇಕಳ ಹಾಜಬ್ಬ, ಉದ್ಯಮಿ ವಿಜಯಾ ಸಂಕೇಶ್ವರ್, ಪರಿಸರ ಪ್ರೇಮಿ ತುಳಸಿ ಗೋವಿಂದೇಗೌಡ, ಮಂಜಮ್ಮ ಜೋಗತಿ, ರಂಗಸ್ವಾಮಿ ಲಕ್ಷ್ಮೀನಾರಾಯಣ ಕಶ್ಯಪ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇನ್ನುಳಿದಂತೆ ಕೇಂದ್ರದ ಮಾಜಿ ಸಚಿವರಾದ ಸುಷ್ಮಾ ಸ್ವರಾಜ್, ಜಾರ್ಜ್ ಫರ್ನಾಂಡಿಸ್, ಅರುಣ್ ಜೇಟ್ಲಿ, ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಮರಣೋ ತ್ತರವಾಗಿ ನೀಡಲಾದ ಪದ್ಮ ವಿಭೂಷಣ ಪ್ರಶಸ್ತಿಯನ್ನು ಅವರ ಕುಟುಂಬದವರು ಸ್ವೀಕರಿಸಿದರು. ಒಲಂಪಿಯನ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು, ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್, ನಿವೃತ್ತ ಏರ್ ಮಾರ್ಷಲ್, ಡಾ.ಪದ್ಮಾ ಬಂಡೋಪಾಧ್ಯಾಯ, ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ ಚಾನುಲಾಲ್ ಮಿಶ್ರಾ, ಬಾಲಿವುಡ್ ತಾರೆ ಕಂಗನಾ ರಣಾವತ್, ಗಾಯಕ ಅದ್ನಾನ್ ಸಮಿ, ಐಸಿ ಎಂಆರ್ ಮಾಜಿ ಮುಖ್ಯ ವಿಜ್ಞಾನಿ ಡಾ.ರಾಮನ್ ಗಂಗಾ ಖೇಡ್ಕರ್ ಸೇರಿದಂತೆ ಎಲ್ಲಾ 119 ಸಾಧಕರಿಗೂ ರಾಷ್ಟ್ರಪತಿ ಗಳು ಪದ್ಮ ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಕೆ.ಎಸ್.ಜಯಲಕ್ಷ್ಮಿ: ವಿಶ್ವದ ಏಕೈಕ ಸಂಸ್ಕøತ ಪತ್ರಿಕೆ `ಸುಧರ್ಮಾ’ ಸಂಪಾದಕಿ ಶ್ರೀಮತಿ ಕೆ.ಎಸ್.ಜಯಲಕ್ಷ್ಮೀ 2020ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ. 1970ರಲ್ಲಿ ವರದರಾಜ ಅಯ್ಯಂಗಾರ್ ಅವರು ಪ್ರಾರಂ ಭಿಸಿದ `ಸುಧರ್ಮಾ’ ಸಂಸ್ಕøತ ಪತ್ರಿಕೆಯನ್ನು 1990ರಲ್ಲಿ ಅವರ ನಿಧನದ ನಂತರ ಪುತ್ರ ಸಂಪತ್‍ಕುಮಾರ್ ಮತ್ತು ಸೊಸೆ ಕೆ.ಎಸ್.ಜಯಲಕ್ಷ್ಮಿ ಮುಂದುವರೆಸಿಕೊಂಡು ಬಂದರು. ಈ ದಂಪತಿಗೆ 2020ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ಇತ್ತೀಚೆಗೆ ಸಂಪತ್‍ಕುಮಾರ್ ನಿಧನರಾಗಿದ್ದು, ಅವರ ಪತ್ನಿ ಕೆ.ಎಸ್.ಜಯಲಕ್ಷ್ಮಿ ಪ್ರಶಸ್ತಿ ಸ್ವೀಕರಿಸಿದರು. ಇವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಮತ್ತು ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅಭಿನಂದಿಸಿದ್ದಾರೆ.

ಡಾ. ಎಂ.ಪಿ. ಗಣೇಶ್: ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಡಾ.ಮುಳ್ಳೇರಾ ಪಿ.ಗಣೇಶ್ ಕೊಡಗಿನ ಸುಂಟಿ ಕೊಪ್ಪದವರಾಗಿದ್ದು, ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದ ಇವರು, ಆರಂಭದಲ್ಲಿ ಫುಟ್ಬಾಲ್ ಆಟಗಾರರಾಗಿದ್ದರು. ನಂತರ ಸೇನೆಯಲ್ಲಿ ಹಾಕಿ ಆಟಗಾರರಾಗಿ ರೂಪುಗೊಂಡು ದೇಶವನ್ನು ಪ್ರತಿನಿಧಿಸಿದ್ದರು. 1971ರ ವಿಶ್ವಕಪ್‍ನಲ್ಲಿ ಭಾರತ ಕಂಚಿನ ಪದಕ ಪಡೆದಾಗ, 1972ರ ಮ್ಯೂನಿಚ್ ಒಲಿಂಪಿಕ್ಸ್ ನಲ್ಲಿ ಭಾರತ ಕಂಚಿನ ಪದಕ ಹಾಗೂ 1973ರಲ್ಲಿ ಆರ್ಮಸ್ಟರ್ ಡಾಮ್ ವಿಶ್ವಕಪ್‍ನಲ್ಲಿ ಬೆಳ್ಳಿ ಪದಕ ಪಡೆದ ಭಾರತ ತಂಡದಲ್ಲಿ ಗಣೇಶ್ ಅವರು ಇದ್ದರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‍ಸಿಎ) ಸಿಇಓ ಆಗಿ ಕಾರ್ಯನಿರ್ವಹಿಸಿದ್ದ ಇವರು, ಪ್ರಸ್ತುತ ನವದೆಹಲಿಯ ಸಾಯಿ ನ್ಯಾಷನಲ್ ಹಾಕಿ ಅಕಾಡೆಮಿ ಸಿಇಓ ಆಗಿದ್ದಾರೆ.

Translate »