ಡಿಸೆಂಬರ್ ಅಂತ್ಯದವರೆಗೆ ಶಾಲೆ, ಪಿಯು ಕಾಲೇಜು ಆರಂಭವಿಲ್ಲ
ಮೈಸೂರು

ಡಿಸೆಂಬರ್ ಅಂತ್ಯದವರೆಗೆ ಶಾಲೆ, ಪಿಯು ಕಾಲೇಜು ಆರಂಭವಿಲ್ಲ

November 24, 2020

ಬೆಂಗಳೂರು, ನ.23(ಕೆಎಂಶಿ)-ಡಿಸೆಂ ಬರ್ ಅಂತ್ಯದವರೆಗೆ ಶಾಲೆ-ಪದವಿ ಪೂರ್ವ ಕಾಲೇಜುಗಳನ್ನು ಆರಂಭಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ತಿಳಿಸಿದ್ದಾರೆ.

ಶಾಲೆ ಆರಂಭಿಸುವ ಕುರಿತು ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಮುಖ್ಯಮಂತ್ರಿಯವರು, ಶಿಕ್ಷಣ ಮತ್ತು ಆರೋಗ್ಯ ತಜ್ಞರು ಸದ್ಯಕ್ಕೆ ಶಾಲೆಗಳನ್ನು ತೆರೆಯುವುದು ಬೇಡ ಎಂದು ಸರ್ಕಾರಕ್ಕೆ ವರದಿ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಶಾಲೆಗಳನ್ನು ಆರಂಭಿ ಸದಿರಲು ತೀರ್ಮಾನ ಕೈಗೊಳ್ಳಲಾಗಿದೆ. ಡಿಸೆಂಬರ್ ತಿಂಗಳಲ್ಲಿ ಮತ್ತೊಮ್ಮೆ ಸಭೆ ಸೇರಿ, ಚರ್ಚೆ ನಡೆಸಿ, ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಯಾವುದೇ ಸನ್ನಿವೇಶದಲ್ಲಿ ಕೋವಿಡ್ ಜಾಸ್ತಿಯಾಗಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶಾಲೆಗಳನ್ನು ಆರಂಭಿಸಿದರೆ, ಮಕ್ಕಳಿಗೆ ತೊಂದರೆಯಾಗಬಹುದು. ಹೀಗಾಗಿ ಒಮ್ಮತ ದಿಂದ ಇಂತಹ ತೀರ್ಮಾನ ಕೈಗೊಂಡಿ ದ್ದೇವೆ ಎಂದರು. ಇದಾದ ನಂತರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್, ಕೋವಿಡ್ ಸೋಂಕಿನ ಕಾರಣದಿಂದ 8 ತಿಂಗಳಿನಿಂದ ಮುಚ್ಚಿರುವ ಶಾಲೆಗಳನ್ನು ಮತ್ತೆ ಆರಂಭಿಸುವ
ಕುರಿತು ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಯಿತು. ತಜ್ಞರ ಶಿಫಾರಸ್ಸಿನಂತೆ ಡಿಸೆಂಬರ್ ಕೊನೆಯವರೆಗೂ ಶಾಲೆಗಳನ್ನು ತೆರೆಯುವುದಿಲ್ಲ. ಚಳಿಗಾಲವೂ ಆರಂಭವಾಗಿರುವುದರಿಂದ ಶಾಲೆಗಳನ್ನು ಆರಂಭಿಸು ವುದು ಸೂಕ್ತವಲ್ಲ ಎಂಬ ನಿರ್ಧಾರಕ್ಕೆ ಬರಲಾಯಿತು. ಡಾ.ಸುದರ್ಶನ್ ನೇತೃತ್ವದ ತಜ್ಞರ ಸಮಿತಿ ಡಿಸೆಂಬರ್ 3ನೇ ವಾರದಲ್ಲಿ ಮತ್ತೆ ಸಭೆ ಸೇರಿ, ಪರಿಸ್ಥಿತಿ ಅವಲೋಕಿಸಲಿದೆ.

ಪ್ರಸಕ್ತ ವರ್ಷ 1ರಿಂದ 8ನೇ ತರಗತಿವರೆಗೆ ಶಾಲೆಗಳನ್ನು ಆರಂಭಿಸುವ ಬಗ್ಗೆ ಯೋಚನೆ ಯನ್ನೇ ಮಾಡಿಲ್ಲ. ಅದಕ್ಕಿಂತ ಮೇಲಿನ ತರಗತಿಗಳನ್ನು ಆರಂಭಿಸುವ ಬಗ್ಗೆ ಮಾತ್ರ ಚಿಂತನೆ ನಡೆದಿತ್ತು. ಶಾಲೆಗಳನ್ನು ಆರಂಭಿಸುವ ಬಗ್ಗೆ ಎರಡು ರೀತಿಯ ಅಭಿಪ್ರಾಯಗಳು ಬಂದವು. ಆದರೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಂತಹ ತೀರ್ಮಾನ ಕೈಗೊಳ್ಳಲಾಗಿದೆ. 1ರಿಂದ 12ನೇ ತರಗತಿ ಮಕ್ಕಳಿಗೆ ಖಾಸಗಿ ಶಾಲೆಗಳು ಆನ್‍ಲೈನ್ ಮೂಲಕ ಶಿಕ್ಷಣ ನೀಡುತ್ತಿವೆ. ಸರ್ಕಾರಿ ಶಾಲಾ ಮಕ್ಕಳಿಗೆ ಡಿಡಿ ಚಂದನದ ಮೂಲಕ, ವಾಟ್ಸ್‍ಪ್, ಝೂಮ್ ಆಪ್ ಮೂಲಕ ಶಿಕ್ಷಣ ಒದಗಿಸಲಾಗುತ್ತಿದೆ ಎಂದರು. ಇದಲ್ಲದೆ, ಸರ್ಕಾರಿ ಶಾಲಾ ಮಕ್ಕಳಿಗೆ ಸ್ಥಳೀಯ ವಾಗಿ ಶಿಕ್ಷಣ ನೀಡಲು ಶಾಲಾ ಶಿಕ್ಷಕರು ಒಂದಲ್ಲ ಒಂದು ರೀತಿ ಪ್ರಯತ್ನ ಮಾಡುತ್ತಿದ್ದಾರೆ. ಆದರೂ ನಾವು ಎಂದಿನಂತೆ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಡಿಸೆಂಬರ್ ಅಂತ್ಯದ ವೇಳೆಗೆ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಪೂರ್ಣ ಪಠ್ಯವನ್ನು ನೀಡಲಾಗುವುದು. ಅಷ್ಟೇ ಅಲ್ಲದೆ, ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ಯಾವಾಗ ನಡೆಯುತ್ತವೆ ಎಂಬುದನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

ಇದರಿಂದ ವಿದ್ಯಾರ್ಥಿಗಳ ಓದಿನ ಕಡೆ ಗಮನಕೊಡಲು ಸಾಧ್ಯವಾಗುತ್ತದೆ. ಸರ್ಕಾರಿ ಶಾಲಾ ಮಕ್ಕಳಿಗೆ ಖಾಸಗಿ ಆನ್‍ಲೈನ್ ಮೂಲಕ ಶಿಕ್ಷಣ ದೊರಕಿಸುವ ಚಿಂತನೆ ನಡೆದಿದೆ. ಖಾಸಗಿ ಶಾಲೆಗಳು ಮೊದಲ ಹಂತದ ಬೋಧನಾ ಶುಲ್ಕ ವಸೂಲಿಗೆ ಅವಕಾಶ ನೀಡಲಾಗಿತ್ತು. ಎರಡನೇ ಹಂತದಲ್ಲಿ ಶುಲ್ಕ ಪಡೆಯಲು ಅನುಮತಿ ಕೋರಿದ್ದಾರೆ. ಈ ಬಗ್ಗೆ ಚರ್ಚೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುವುದೆಂದರು.

ಆರೋಗ್ಯ ಇಲಾಖೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸು: ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಡಿಸೆಂಬರ್‍ನಲ್ಲೂ ಶಾಲೆಗಳನ್ನು ತೆರೆಯುವುದು ಸೂಕ್ತವಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಸಮಿತಿ ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್ ಅಧ್ಯಕ್ಷತೆಯಲ್ಲಿ ನಡೆದ ಸಲಹಾ ಸಮಿತಿ ಸಭೆಯಲ್ಲಿ ಶಾಲೆಗಳನ್ನು ಪುನರಾರಂಭಿಸುವ ಕುರಿತು ಚರ್ಚೆ ಯಾಗಿದ್ದು, ಡಿಸೆಂಬರ್‍ನಲ್ಲಿ ಶಾಲೆ ತೆರೆಯುವುದು ಸೂಕ್ತವಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ಸೂಚನೆ ಮೇರೆಗೆ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆಸ್ಪತ್ರೆಗಳಲ್ಲೂ ಸೌಲಭ್ಯ ಹೆಚ್ಚಿಸಲಾಗಿದೆ. ಈಗ ಪ್ರತಿದಿನ ಸರಾಸರಿ 1,700ರಷ್ಟು ಕೋವಿಡ್ ಪ್ರಕರಣ ಗಳು ಪತ್ತೆಯಾಗುತ್ತಿವೆ. ಕಳೆದ 8 ತಿಂಗಳಲ್ಲಿ ಕೈಗೊಂಡ ನಾನಾ ಕ್ರಮಗಳ ಪರಿಣಾಮವಾಗಿ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಆದರೆ ದೆಹಲಿ, ಹರ್ಯಾಣ, ಗುಜರಾತ್ ಮೊದಲಾದ ರಾಜ್ಯಗಳಲ್ಲಿ ಸೋಂಕು ಹರಡುವಿಕೆ ವೇಗ ಪಡೆದಿದೆ ಎಂದು ಸಭೆಯಲ್ಲಿ ಚರ್ಚೆಯಾಗಿದೆ. ಚಳಿಗಾಲವೂ ಇರುವುದರಿಂದ ಕೋವಿಡ್ ಸೋಂಕು ಹರಡುವಿಕೆ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳು ತೀವ್ರವಾಗಿ ಬಾಧಿಸುತ್ತವೆ. ಸೆಪ್ಟೆಂಬರ್ ನಲ್ಲಿ ನಡೆದ ಸರ್ವೆ ಪ್ರಕಾರ, ರಾಜ್ಯದ ಕೆಲ ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ, ಡಿಸೆಂಬರ್‍ನಲ್ಲಿ ಶಾಲೆಗಳನ್ನು ಆರಂಭಿಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಸಭೆಯಲ್ಲಿ ಕೇಳಿಬಂದಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಅಭಿಪ್ರಾಯವನ್ನೇ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಡಿಸೆಂಬರ್ ಕೊನೆಯ ವಾರದಲ್ಲಿ ಕೋವಿಡ್ ಪರಿಸ್ಥಿತಿ ನೋಡಿಕೊಂಡು ಶಾಲೆಗಳನ್ನು ತೆರೆಯಲು ಮತ್ತೆ ನಿರ್ಧಾರ ಕೈಗೊಳ್ಳಬಹುದು ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಗಿದೆ.

 

 

Translate »