ಸಾರಿಗೆ ನೌಕರರು ಮುಷ್ಕರ ನಡೆಸುವ ಸಮಯ ಇದಲ್ಲ: ಹೈಕೋರ್ಟ್
News

ಸಾರಿಗೆ ನೌಕರರು ಮುಷ್ಕರ ನಡೆಸುವ ಸಮಯ ಇದಲ್ಲ: ಹೈಕೋರ್ಟ್

April 21, 2021

ಬೆಂಗಳೂರು, ಏ.20- ರಾಜ್ಯದಲ್ಲಿ ಕೋವಿಡ್ ಉಲ್ಬಣ ಆಗಿರುವಾಗ ಸಾರಿಗೆ ಸಂಸ್ಥೆ ನೌಕರರು ಮುಷ್ಕರ ಸರಿಯಲ್ಲ. ಮುಷ್ಕರಕ್ಕೆ ಇದು ಸಮಯವಲ್ಲ ಎಂದು ಪ್ರತಿಭಟನಾಕಾರರ ಕಿವಿ ಹಿಂಡಿರುವ ರಾಜ್ಯದ ಹೈಕೋರ್ಟ್, ಸಾರಿಗೆ ನೌಕರರು ತಮ್ಮ ಬೇಡಿಕೆ ಗಳನ್ನು ಕಾಯ್ದಿರಿಸಿಕೊಂಡು ಕರ್ತ ವ್ಯಕ್ಕೆ ಹಾಜರಾಗುತ್ತಾರೆಂಬ ವಿಶ್ವಾಸವಿದೆ ಎಂದು ಮಂಗಳವಾರ ಹೇಳಿದೆ.

ರಸ್ತೆ ಸಾರಿಗೆ ಸಂಸ್ಥೆ ನೌಕರರ ಕೂಟ, ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ವಾಯುವ್ಯ ಸಾರಿಗೆ, ಈಶಾನ್ಯ ಸಾರಿಗೆ ಸೇರಿ ಪ್ರತಿವಾದಿಗಳಿಗೆ ನೋಟಿಸ್ ನೀಡಲು ಆದೇಶಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ, ಮುಂದಿನ ವಿಚಾರಣೆ ಗುರುವಾರ ಬೆಳಿಗ್ಗೆ 11.40ಕ್ಕೆ ನಿಗದಿ ಮಾಡಿದೆ. ಸಾರಿಗೆ ನೌಕರರ ಮುಷ್ಕರದ ಸಂಬಂಧ ನ್ಯಾಯಾಲಯದ ಮಧ್ಯಸ್ಥಿಕೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಪೀಠ, `ಸಾರಿಗೆ ನೌಕರರ ಕೂಟದ ಬೇಡಿಕೆಗಳು ನ್ಯಾಯಸಮ್ಮತ ಎಂದುಕೊಂಡರೂ, ಕೋವಿಡ್ 2ನೇ ಅಲೆ ತೀವ್ರವಾಗಿರುವಾಗ ಮುಷ್ಕರ ಮುಂದುವರಿಸುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟಿತು.

ನೌಕರರ ಬೇಡಿಕೆ ನ್ಯಾಯಸಮ್ಮತ ಅಥವಾ ಇಲ್ಲ ಎಂಬುದು ಈಗ ವಿಷಯವಲ್ಲ. ಕೋವಿಡ್ ಉಲ್ಬಣ ಸಂದರ್ಭ ಮುಷ್ಕರ ನಡೆಸುವುದು ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗುತ್ತದೆ. ಕೋವಿಡ್ ಲಸಿಕೆ ಪಡೆಯಲು ಲಸಿಕಾ ಕೇಂದ್ರ ಗಳಿಗೆ ತೆರಳಲು ಸಾಕಷ್ಟು ಮಂದಿಗೆ ಸಾರಿಗೆ ಸಂಸ್ಥೆ ಬಸ್‍ಗಳ ಅಗತ್ಯವಿದೆ ಎಂದು ಪೀಠ ಹೇಳಿದೆ. ಒತ್ತಡದಲ್ಲಿರುವ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲತೆ ತಪ್ಪಿಸಬೇಕಿದೆ. ಹೀಗಾಗಿ, ಬೇಡಿಕೆಗಳ ಈಡೇರಿಕೆ ವಿಷಯದಲ್ಲಿ ಯಾವುದೇ ರಾಜೀ ಇಲ್ಲದೆ ಮುಷ್ಕರ ವಾಪಸ್ ಪಡೆಯುವ ಭರವಸೆಯೊಂದಿಗೆ ನ್ಯಾಯಾಲಯದ ಮುಂದೆ ಕೂಟ ಬರಲಿದೆ ಎಂದು ಆಶಿಸಿತು. ಸರ್ಕಾರಿ ನೌಕರರನ್ನಾಗಿ ಪರಿ ಗಣಿಸಬೇಕೆಂಬ ಕಾರ್ಯಸಾಧುವಲ್ಲದ ಬೇಡಿಕೆಯನ್ನು ನೌಕರರ ಕೂಟ ಮುಂದಿಟ್ಟಿದೆ. ಮುಷ್ಕರ ನಡೆಸುತ್ತಿರುವ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವಡಗಿ ತಿಳಿಸಿದರು.

Translate »