ಸೂರಜ್‍ಕುಂಡ್: ಬಾಲಿವುಡ್ ನಟಿ ಶ್ರೀದೇವಿ ಅವರ ನಿಗೂಢ ಸಾವಿನ ನೆನಪು ಮಾಸುವ ಮುನ್ನವೇ ಅದೇ ಘಟನೆ ಹೋಲುವ ಇನ್ನೊಂದು ದುರಂತ ಸಂಭವಿಸಿದೆ. ಹರಿಯಾಣ ಸೂರಜ್‍ಕುಂಡ್‍ನ ಹೋಟೆಲ್ ತಾಜ್ ವಿವಾಂತಾದಲ್ಲಿ ಅನಿವಾಸಿ ಭಾರತೀಯ ಮಹಿಳೆಯ ದೇಹವೊಂದು ಸ್ನಾನದ ಟಬ್‍ನಲ್ಲಿ ಪತ್ತೆಯಾಗಿದೆ. ಅಮೆರಿಕದ ನ್ಯೂಜೆರ್ಸಿಯಲ್ಲಿ ಉದ್ಯಮಿಯಾಗಿರುವ ಅರುಣ್ ಅವರ ಪತ್ನಿ ಋತು ಕುಮಾರ್ ತಾವು ತಂಗಿದ್ದ ಐಷಾರಾಮಿ ಹೋಟೆಲ್‍ನ ಸ್ನಾನದ ಟಬ್‍ನಲ್ಲಿ ಬಿದ್ದು ಶವವಾಗಿದ್ದಾರೆ. ಗ್ರೇಟರ್ ಕೈಲಾಸ್‍ನ ನಿವಾಸಿಯಾದ ಅರುಣ್ ಅವರ ಪತ್ನಿ ತಾಜ್ ವಿವಾಂತಾದ ಕೊಠಡಿ ಸಂಖ್ಯೆ 631ರಲ್ಲಿ ತಂಗಿದ್ದರು. 22 ಏಪ್ರಿಲ್‍ನಿಂದಲೂ ಆಕೆ ಇದೇ ಕೊಠಡಿಯಲ್ಲಿದ್ದರು. ಗುರುವಾರ ಮಧ್ಯಾಹ್ನದಿಂದ ಆಕೆ ಕುಟುಂಬದವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇದರಿಂದಾಗಿ ಆತಂಕಗೊಂಡ ಋತು ಅವರ ಸೋದರಿ ಹೋಟೆಲ್‍ಗೆ ಧಾವಿಸಿದ್ದಾರೆ. ಅಲ್ಲಿ ಕೊಠಡಿಯನ್ನು ಪರಿಶೀಲಿಸಿದ ವೇಳೆ ಋತು ಬಾತ್‍ಟಬ್‍ನಲ್ಲಿ ಬಿದ್ದು ಮೃತಪಟ್ಟಿರುವುದು ತಿಳಿದು ಬಂದಿದೆ. 26ರ ಗುರುವಾರ ಹೋಟೆಲ್ ಸಿಬ್ಬಂದಿಗಳಿಗೆ ಕರೆ ಮಾಡಿದ್ದ ಋತು ನನಗೆ ಯಾರೂ ತೊಂದರೆ ಮಾಡಬೇಡಿ, ವೇಟರ್‍ಗಳನ್ನು ಕಳುಹಿಸಬೇಡಿ, ಕರೆಗಳನ್ನು ನಿರ್ಬಂಧಿಸಿ ಎಂದು ಸೂಚಿಸಿದ್ದರು. ಕೊಠಡಿಯಲ್ಲಿ ಯಾವುದೇ ಡೆತ್‍ನೋಟ್ ಪತ್ತೆಯಾಗಿಲ್ಲ.