ಬಿಜೆಪಿಗೆ ಯಡಿಯೂರಪ್ಪ ಮತಗಳು ಬೇಕು… ಆದರೆ ಯಡಿಯೂರಪ್ಪ ಬೇಕಿಲ್ಲ?
ಅಂಕಣಗಳು, ಬಿಚ್ಚು ನುಡಿ

ಬಿಜೆಪಿಗೆ ಯಡಿಯೂರಪ್ಪ ಮತಗಳು ಬೇಕು… ಆದರೆ ಯಡಿಯೂರಪ್ಪ ಬೇಕಿಲ್ಲ?

April 29, 2018

– ವಿಕ್ರಂ ಮುತ್ತಣ್ಣ

ಇಡೀ ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಬಿ.ಎಸ್. ಯಡಿಯೂರಪ್ಪ ನವರನ್ನು ಅವರ ಸ್ವಪಕ್ಷೀಯರೇ ಮತ್ತೊಮ್ಮೆ ಕಾಲೆಳೆಯುತ್ತಿದ್ದಾರೆಯೇ ಎಂಬ ಅನುಮಾನ ಇತ್ತೀಚಿನ ಬೆಳವಣಿಗೆಗಳಿಂದ ಮೂಡುತ್ತಿದೆ.

ಯಾವಾಗ ಯಡಿಯೂರಪ್ಪನವರು ಕರ್ನಾಟಕ ಬಿಜೆಪಿಯ ಪಕ್ಷಾತೀತ ಸಮೂಹ ನಾಯಕರಾದರೋ, ಅಂದಿನಿಂದಲೂ ಬಿಜೆಪಿ ಹೈಕಮಾಂಡ್‍ಗೆ ‘ಯಡಿಯೂರಪ್ಪ ಸನ್ನಿ’ (Yeddyurappa phobia) ಶುರುವಾಗಿದ್ದು, ಅದು ಇನ್ನೂ ಮುಂದುವರೆದಿದೆ.

ಲೋಕಾಯುಕ್ತ ವರದಿಯನ್ನು ಮುಂದಿಟ್ಟುಕೊಂಡು, ಬಿಜೆಪಿ ಹೈಕಮಾಂಡ್ 2011ರಲ್ಲಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸುವ ಮೂಲಕ ಕಟ್ಟಿ ಹಾಕಿತು.

ಬಿ.ಎಸ್. ಯಡಿಯೂರಪ್ಪನವರನ್ನು ಕೆಳಗಿಳಿಸುವಾಗ, UPA-II ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ತಮಗೆ ನೈತಿಕ ಬಲ ಬೇಕಿದೆ ಎಂದು ಆಗ ಬಿಜೆಪಿ ಹೈಕಮಾಂಡ್ ಸಮಜಾಯಿಷಿ ನೀಡಿತ್ತು.

ಆದರೆ, ಅದೇ ಸಮಯದಲ್ಲಿ ಭ್ರಷ್ಟಚಾರದ ಸುಳಿಯಲ್ಲಿ ಸಿಲುಕಿದ್ದ ಅಂದಿನ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ರವರ ಮೇಲೆ ಬಿಜೆಪಿಯು ಮುಗಿಬೀಳದಿದ್ದುದು ಎಲ್ಲರಿಗೂ ಒಂದು ರೀತಿಯ ಆಶ್ಚರ್ಯ, ಅನುಮಾನಕ್ಕೆ ಕಾರಣವಾಗಿತ್ತು. ಅಂದ ಹಾಗೆ, ಶುಂಗ್ಲು ಆಯೋಗವು CWG ಹಗರಣದಲ್ಲಿ ಶೀಲಾ ದೀಕ್ಷಿತ್‍ರನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. ಬಿಜೆಪಿಯು ಕೇವಲ ವರದಿಯೊಂದರ ಆಧಾರದ ಮೇಲೆ ತನ್ನ ಮುಖ್ಯಮಂತ್ರಿಯನ್ನು ಕೆಳಗಿಳಿಸುವುದಕ್ಕೆ ಮುಂದಾದ ಸಂದರ್ಭದಲ್ಲಿ, ಇದೇ ಮಾನದಂಡವನ್ನು ಭ್ರಷ್ಟಾಚಾರದ ಸುಳಿಯಲ್ಲಿ ಸಿಕ್ಕ ಪ್ರಮುಖ ವಿರೋಧ ಪಕ್ಷದ ನಾಯಕರ ವಿಚಾರದಲ್ಲಿ ಅನುಸರಿಸಲಿಲ್ಲ ? !

ಹಾಗಾಗಿ, ಈ ಬೆಳವಣಿಗೆಗಳಿಂದ ಒಂದಂತು ಸ್ಪಷ್ಟ ಯಡಿ ಯೂರಪ್ಪನವರ ಜನಪ್ರಿಯತೆ ಬಗ್ಗೆ ಬಿಜೆಪಿ ಹೈಕಮಾಂಡ್ ಆತಂಕಗೊಂಡು, ಅವರನ್ನು ನಿಸ್ತೇಜಗೊಳಿಸಲು ಮುಂದಾ ಯಿತು ಎಂಬುದು. ಈ ಸಂದರ್ಭದಲ್ಲಿ, ಯಡಿಯೂರಪ್ಪನವರೂ ತಮ್ಮ ಕೆಲವೊಂದು ಎಡವಟ್ಟು ನಿರ್ಧಾರಗಳಿಂದ, ಬಿಜೆಪಿ ಹೈಕಮಾಂಡ್ ತನ್ನ ದಾರಿ ಸುಗಮಗೊಳಿಸಿಕೊಳ್ಳಲು ಕಾರಣರಾದರು.

ನಂತರ ಹೈಕೋರ್ಟ್ ಯಡಿಯೂರಪ್ಪನವರನ್ನು ನಿರ್ದೋಷಿ ಎಂದು ಘೋಷಿಸಿದರೂ, ಅಂದಿನ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿ, ಯಡಿಯೂರಪ್ಪ ಅವರನ್ನು ಮತ್ತೆ ಗಾದಿಗೇರಿ ಸಲು ನಿರಾಕರಿಸಿದರು. ಈ ವೇಳೆ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಒಬ್ಬ ಆಸೆಬುರುಕ ವಯಸ್ಸಾದ ವ್ಯಕ್ತಿ ಎಂದು ತಿಳಿದಿದ್ದಿರಬೇಕು. ಯಡಿಯೂರಪ್ಪನವರೂ ಸಹ ಮೊದಲು ಖುರ್ಚಿಗಾಗಿ ಹಠ ಹಿಡಿದು, ತದನಂತರ ದೆಹಲಿಗೆ ಹೋಗು ವುದಿಲ್ಲ ಎಂದು ಶಪಥ ಮಾಡಿದರೂ ಸಹ ಮತ್ತೆ ದೆಹಲಿಗೆ ತೆರಳಿ, ಅಲ್ಲಿಂದ ಬರಿಗೈಲಿ ವಾಪಸ್ಸು ಬಂದರು. ಕೆಲ ಕಾಲದ ನಂತರ ಹೈಕಮಾಂಡ್ ತಾನು ಹೇಳಿದಂತೆ ಯಡಿಯೂರಪ್ಪ ನವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಿತು. ಪಕ್ಷಕ್ಕೋಸ್ಕರ ಅಹರ್ನಿಶಿ ದುಡಿದು, ಪಕ್ಷವನ್ನು ಅಧಿಕಾರಕ್ಕೆ ತಂದ ನಾಯಕ ನೊಬ್ಬನನ್ನು ನಡೆಸಿಕೊಳ್ಳುವ ರೀತಿಯೇ ಇದು?

ಅಮಿತ್‍ಶಾರವರು ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರಲ್ಲ. ಆದರೆ ಈ ಕೆಲಸ ಮಾಡಿದ್ದು ಸನ್ಮಾನ್ಯ ಯಡಿ ಯೂರಪ್ಪ ನವರು. ಆದರೆ ಇದೀಗ, ಬರೀ ಉತ್ತರ ಭಾರತದ ವರಿಂದಲೇ ತುಂಬಿಹೋಗಿರುವ ಬಿಜೆಪಿ ಹೈಕಮಾಂಡ್, ಯಡಿಯೂರಪ್ಪನವರ ಶ್ರಮವನ್ನು ಬಳಸಿಕೊಂಡು, ತಾನು ಫಲ ಉಣ್ಣುವುದಕ್ಕೆ ತನ್ನದೇ ದಾಳಗಳನ್ನು ಉರಿಳಿಸತೊಡಗಿದೆ.

ಹೌದು, ಬಿಜೆಪಿಗೆ ಸಿ.ಟಿ. ರವಿ, ಡಿ,ವಿ. ಸದಾನಂದಗೌಡ, ಆರ್. ಅಶೋಕ್, ಕೆ.ಎಸ್. ಈಶ್ವರಪ್ಪ ಮತ್ತು ಜಗದೀಶ್ ಶೆಟ್ಟರ್ ರಂತಹ ರಾಜ್ಯ ನಾಯಕರ್ಯಾರೂ ಮತ ಸೆಳೆಯುವ ಸಮೂಹ ನಾಯಕರಲ್ಲ. ಅಲ್ಲದೇ ಅನಂತ ಕುಮಾರ್‍ರಂತಹವರು ಕನಿಷ್ಟ ಪಕ್ಷ, ನಾಯಕರೂ ಅಲ್ಲ, ಇಂತಹವರು ಕೇವಲ ದಿಲ್ಲಿಯಲ್ಲಿ ಕೂತು ಆಟವಾಡುವವರಾಗಿದ್ದಾರೆ.

ಹಾಗಿದ್ದಲ್ಲಿ, ಬಿಜೆಪಿ ಹೈಕಮಾಂಡ್‍ಗೆ ಯಡಿಯೂರಪ್ಪ ಸನ್ನಿ ಏಕೆ ಇರಬೇಕು? ಕಾಂಗ್ರೆಸ್‍ನಲ್ಲಿರುವಂತೆ, ಮುಖ್ಯಮಂತ್ರಿ ಯೊಬ್ಬ, ನಮ್ಮ ಸಿದ್ಧರಾಮಯ್ಯ ಮತ್ತು ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೈ.ಎಸ್. ರಾಜಶೇಖರ್ ರೆಡ್ಡಿ (ದಿವಂಗತ) ಯಂತೆ ತನ್ನಷ್ಟಕ್ಕೆ ತಾನೇ ಬೆಳೆದು ಕಾಂಗ್ರೆಸ್ ಹೈಕಮಾಂಡ್‍ಗೆ ಸೆಡ್ಡು ಹೊಡೆಯುವಂತಹ ಪರಿಸ್ಥಿತಿ ಬಿಜೆಪಿಗೆ ಬರಬಾರ ದೆನ್ನುವುದೇ? ಒಂದು ರೀತಿಯಲ್ಲಿ, ಬಿಜೆಪಿಯೂ ಸಹ ಹಳೇ ಕಾಂಗ್ರೆಸ್‍ನ ಪಳೆಯುಳಿಕೆಯಂತೆ ಕಾಣುತ್ತಿದೆ. ಏಕೆಂದರೆ, ಪ್ರಸ್ತುತ ಬಿಜೆಪಿ, ದೆಹಲಿಯಲ್ಲಿ ಕುಳಿತಿರುವ ಗುಜರಾತ್‍ನ ದೊಡ್ಡ ಮನುಷ್ಯನೊಬ್ಬನ ಮಾತು ಕೇಳಬೇಕಾದಂತಹ ಪರಿಸ್ಥಿತಿಯನ್ನು ತಂದು ಕೊಂಡಿದೆ.

ಗುಜರಾತ್‍ನ ಎಂಪಿಯೊಬ್ಬರು ಈಗ ರಾಜ್ಯದ ಎಲ್ಲಾ ನಿರ್ಧಾರ ಗಳನ್ನು ಕೈಗೊಳ್ಳುತ್ತಿರುವಾಗ ಬಹಳಷ್ಟು ಸಂದರ್ಭದಲ್ಲಿ, ಬಹಳಷ್ಟು ಕನ್ನಡಿಗರು ಮಾತನಾಡುವ ‘ಕನ್ನಡಿಗನ ಹೆಮ್ಮೆ’ (Kannada Pride) ಎಲ್ಲಿ ಅಡಗಿ ಕುಳಿತಿದೆ ಎಂದು ಕೇಳಬೇಕಾಗುತ್ತದೆ. ಹೌದು ಯಡಿಯೂರಪ್ಪ ನವರು ತಮ್ಮ ಮಗ ಬಿ.ವೈ. ವಿಜಯೇಂದ್ರನಿಗೆ ಪಕ್ಷದ ಟಿಕೆಟ್ ಕೇಳಿದರು. ಏನೀಗ? ಯಾಕೆ, ಟಿಕೆಟ್ ಕೇಳಬಾರದ? ವಿಜಯೇಂದ್ರ ಸ್ಫರ್ಧಿಸುವುದರಿಂದ, ವರುಣಾದಲ್ಲಿ ಹಾಲಿ ಮುಖ್ಯಮಂತ್ರಿ ಪುತ್ರ ಮತ್ತು ಮಾಜಿ ಮುಖ್ಯಮಂತ್ರಿಯ ಪುತ್ರರ ನಡುವೆ ಒಳ್ಳೆ ಸ್ಪರ್ಧೆ ಏರ್ಪಡುತ್ತಿತ್ತು. ಈ ಕದನದಲ್ಲಿ ವಿಜಯೇಂದ್ರ ಗೆಲ್ಲುವ ಸೂಚನೆಗಳೂ ಇದ್ದವು.

ಬಿಜೆಪಿಯು ತನ್ನ ನಾಯಕರ ಕುಟುಂಬ ಸದಸ್ಯರಿಗೆ ಟಿಕೆಟ್ ಇಲ್ಲ ಎಂಬ ನೀತಿಗೆ ಅಂಟಿಕೊಂಡಿದ್ದಲ್ಲಿ, ಜರ್ನಾಧನ ರೆಡ್ಡಿಯ ಕುಟುಂಬ ಮತ್ತು ಅವರ ಆಪ್ತರಿಗೆ ಬರೋಬ್ಬರಿ ಏಳು ಟಿಕೆಟ್ ನೀಡಿರುವ ಔಚಿತ್ಯವಾದರೂ ಏನು? ಬಿಜೆಪಿ ಕೇಂದ್ರ ನಾಯಕರು ವಿಜಯೇಂದ್ರರವರ ನಾಮಪತ್ರಕ್ಕೆ ಕೆಂಪು ಬಾವುಟ ತೋರಿಸಿದ್ದು, ಯಡಿಯೂರಪ್ಪನವರಿಗಾದ ಅಪಮಾನವೆಂದೇ ಹೇಳಬಹದು.

ವರುಣಾದಲ್ಲಿ ವಿಜಯೇಂದ್ರರವರು ಚುನಾವಣಾ ಪ್ರಚಾರ ಮಾಡುತ್ತಿರುವಂತೆಯೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯ ಪ್ರವಾಸ ಕೈಗೊಂಡಿದ್ದರು. ಆಗ ಶಾ ಏನೂ ಹೇಳಲಿಲ್ಲ. ಹಾಗಾಗಿ ಬಹಳಷ್ಟು ಜನರು ಶಾರವರು ವಿಜಯೇಂದ್ರರವರನ್ನು ಅಭ್ಯರ್ಥಿಯೆಂದು ಒಪ್ಪಿಕೊಂಡಿದ್ದಾರೆಂದೇ ಭಾವಿಸಿದರು. ಆದರೆ ವಿಜಯೇಂದ್ರರು ನಾಮಪತ್ರ ಸಲ್ಲಿಸಲು ಹೊರಡುವ ಕೆಲವೇ ನಿಮಿಷಗಳ ಮುಂಚೆ ಅವರು ನಾಮಪತ್ರ ಸಲ್ಲಿಸುವು ದನ್ನು ತಡೆ ಹಿಡಿಯಲಾಯಿತು. ಹೀಗೆ ಮಾಡುವ ಮೂಲಕ ಯಡಿಯೂರಪ್ಪನವರಿಗೆ ಪಕ್ಷದಲ್ಲಿ ಯಾವುದೇ ಕಿಮ್ಮತ್ತಿಲ್ಲ ಎಂದು ರಾಜ್ಯದ ಇತರ ನಾಯಕರಿಗೆ ಸಂದೇಶ ರವಾನಿಸಲಾಯಿತೇ?

ಬಿಜೆಪಿಯು ಯಡಿಯೂರಪ್ಪನವರನ್ನು ನಡೆಸಿಕೊಂಡ ರೀತಿಯು ಕೇವಲ ಅವರೊಬ್ಬರಿಗೆ ಮಾತ್ರ ಅಪಮಾನವಾಗಿ ರದೆ, ಯಡಿಯೂರಪ್ಪ ಅವರ ಜಾತಿ, ವೀರಶೈವ-ಲಿಂಗಾಯಿತರಿಗೂ ಆದ ಅಪಮಾನವೇ ಸರಿ. ಯಾಕೆಂದರೆ ಈ ಸಮುದಾಯದ ಪ್ರಸ್ತುತ ಪಕ್ಷಾತೀತ ನಾಯಕರೆಂದರೆ ಯಡಿಯೂರಪ್ಪ ಮಾತ್ರ.

ವಿಜಯೇಂದ್ರಗೆ ಟಿಕೆಟ್ ತಪ್ಪಿಸಿ, ಅಪಮಾನವಾದ್ದರಿಂದ, ವರುಣಾ ಕ್ಷೇತ್ರದಲ್ಲಿನ ಲಿಂಗಾಯತ ಮತದಾರರಿಗೆ whatsapp ಮೂಲಕ ಬಿಜೆಪಿಗೆ ಮತ ಹಾಕದೇ, ನೋಟಾ ಗುಂಡಿ (NOTA Button) ಒತ್ತಿ, ಬಿಜೆಪಿಗೆ ಪಾಠ ಕಲಿಸಿ ಎಂಬ ಸಂದೇಶ ರವಾನೆಯಾಗುತ್ತಿರುವುದು ಆಶ್ಚರ್ಯಕರವಾಗಿಯೇನೂ ಕಾಣುತ್ತಿಲ್ಲ.

ಇದಕ್ಕೆ ಮುಖ್ಯಮಂತ್ರಿ ಖುರ್ಚಿಗೆ ಲಿಂಗಾಯತ ಸಮು ದಾಯದ ಜಾತಕ ಹೊಂದದೇ ಇರುವುದೇ ಕಾರಣವಿರಬಹುದೇ? ರಾಜ್ಯ ರಾಜಕೀಯ ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದರೆ, ಲಿಂಗಾಯಿತ ಮುಖ್ಯಮಂತ್ರಿಗಳು ನಿರಾಳ ವಾಗಿ 5 ವರ್ಷಗಳ ಪೂರ್ಣಾವಧಿ ಆಳುವ ಭಾಗ್ಯ ದೊರಕಿಲ್ಲದಿರುವುದನ್ನು ನಾವು ಕಾಣಬಹುದು. ಇಲ್ಲಿಯವರೆಗೆ 8 ಜನ ಲಿಂಗಾಯತ ನಾಯಕರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದು, ಯಾರೊಬ್ಬರೂ ತಮ್ಮ ಪೂರ್ಣಾವಧಿಯನ್ನು ಪೂರೈಸಲು ಆಗಲಿಲ್ಲ.

ಎಸ್. ನಿಜಲಿಂಗಪ್ಪನವರು ರಾಜ್ಯದ ಮೊದಲ ಲಿಂಗಾಯತ ಮುಖ್ಯಮಂತ್ರಿ ಯಾಗಿದ್ದು, ಇಂದಿರಾ ಗಾಂಧಿಯವರೊಂದಿಗಿನ ಸಂಘರ್ಷದಿಂದಾಗಿ ಅವರನ್ನು ಸಿಎಂ ಕಚೇರಿಯಿಂದ ಹೊರ ಹಾಕಲಾಯಿತು.

ನಿಜಲಿಂಗಪ್ಪನವರ ನಂತರ ಬಂದವರು ಬಿ.ಡಿ.ಜತ್ತಿ ಮತ್ತು ಎಸ್. ಆರ್. ಕಂಠಿ. ಅವರದು ಅಲ್ಪಾವಧಿ ಆಳ್ವಿಕೆ. ತದನಂತರ ವಿರೇಂದ್ರ ಪಾಟೀಲರು ಮುಖ್ಯಮಂತ್ರಿಯಾದರು. ಮೊದಲು ಅವಧಿಯಲ್ಲಿ ಅವರಿಗೆ ಸಿಕ್ಕ ಅವಕಾಶ ಅಲ್ಪಕಾಲ. ಎರಡನೇ ಅವಧಿಯಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷ ರಾಜೀವ್‍ಗಾಂಧಿ ಯವರೊಂದಿಗಿನ ಸಂಘರ್ಷದಿಂದ ಆಗಲೂ ಅಲ್ಪ ಅವಧಿ ಯಲ್ಲಿ ಅಧಿಕಾರದಿಂದ ಕೆಳಗಿಳಿದರು.

ಎಸ್.ಆರ್ ಬೊಮ್ಮಾಯಿ ಅಧಿಕಾರ ಹಿಡಿದರೂ, ಕೆಲವೇ ತಿಂಗಳುಗಳ ನಂತರ ಅವರು ಸಹ ಕುರ್ಚಿ ಕಳೆದುಕೊಳ್ಳಬೇಕಾಯಿತು. 1996ರಲ್ಲಿ ಜೆ.ಹೆಚ್. ಪಟೇಲರು ಮುಖ್ಯಮಂತ್ರಿಯಾ ದರು. ಅವರಿಗೂ ಸ್ವತಂತ್ರವಾಗಿ ಅಧಿಕಾರ ನಡೆಸಲು ಅಡೆತಡೆ, ಇರುಸು ಮುರಿಸು ಪರಿಸ್ಥಿತಿ. ಕೊನೆಗೆ 1999ರ ಚುನಾವಣೆಯಲ್ಲಿ ಹೀನಾಯ ಸೋಲನ್ನು ಕಂಡು, ನಿರ್ಗಮಿಸಿದರು.

ಇದಾದ 12 ವರ್ಷಗಳ ನಂತರ, ಅಂದರೆ 2008ರಲ್ಲಿ, ಯಡಿಯೂರಪ್ಪ ನವರ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು. ಇದು ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಬಿಜೆಪಿ ಸರ್ಕಾರವಾಗಿದ್ದು, ಆದರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ನಿರಾಳವಾಗಿ ಕಾರ್ಯ ನಿರ್ವಹಿಸಲು ಅವಕಾಶ ಸಿಗಲಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವಂತಹ ವಿಚಾರ. ರಾಜ್ಯ ಕಂಡ ಕಡೆಯ ಲಿಂಗಾಯತ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕೇವಲ 304 ದಿವಸಗಳ ಆಡಳಿತ ನಡೆಸಿ, ಖುರ್ಚಿಯಿಂದ ಕೆಳಗಿಳಿದರು.

ಇದೀಗ ಯಡಿಯೂರಪ್ಪನವರು ಮತ್ತೆ ಮುಖ್ಯಮಂತ್ರಿ ಗಾದಿಗೇರಲು ತಯಾರಾಗುತ್ತಿದ್ದಂತೆ, ಅದೇ ಹಳೆಯ ಶಾಪ (Jinx) ಅವರನ್ನು ಕಾಡುತ್ತಿರುವಂತಿದೆ. ಏಕೆಂದರೆ, ಯಡಿ ಯೂರಪ್ಪನವರು ಬಿಜೆಪಿಗೆ ಬಹುಮತ ಬರದಿದ್ದಲ್ಲಿ, ಅಧಿಕಾರವನ್ನು ಜೆಡಿಎಸ್ ಜೊತೆ ಹಂಚಿಕೊಳ್ಳಬೇಕಾಗಬಹುದು. ಇದೇ ಜೆಡಿಎಸ್ ಹಿಂದೆ ಬಿಜೆಪಿಯ ಕಾಲೆಳೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಆದರೆ, ಬಿಜೆಪಿಯು ತನ್ನ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಂದು, ಅಮಿತ್ ಶಾರವರು ಯಡಿಯೂರಪ್ಪನವರ ವಯಸ್ಸು, ಭ್ರಷ್ಟಾಚಾರ ಪ್ರಕರಣ ಅಥವಾ ಇನ್ನಿತರ ಪ್ರಕರಣಗಳನ್ನು ಮುಂದಿಟ್ಟುಕೊಂಡು ಅವರಿಗೆ ತಡೆಯೊಡ್ಡಿ, ಸಂತೋಷ್ ಜಿ ಅಥವಾ ಅನಂತಕುಮಾರ್‍ರನ್ನು ಮುಖ್ಯಮಂತ್ರಿ ಮಾಡಿದರೆ, ರಾಜ್ಯದ ಹಿಂದಿನ ಚರಿತ್ರೆ ಪುನರಾವರ್ತನೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

1994ರಲ್ಲಿ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಗಾದಿಯನ್ನು ಹೆಚ್.ಡಿ. ದೇವೇಗೌಡರಿಂದ ಕಸಿಯಲುಯತ್ನಿಸುತ್ತಿದ್ದಾರೆ ಎಂದು ಗೊತ್ತಾದ ತಕ್ಷಣ, ವಿಧಾನಸೌಧದ ಮುಂದೆ ನೆರೆದಿದ್ದ ಜನಸ್ತೋಮ ಭಾರೀ ಕೋಲಾಹಲವನ್ನೇ ಸೃಷ್ಟಿಸಿ, ನೆರೆದಿದ್ದ ಜನರು ರಾಮಕೃಷ್ಣ ಹೆಗಡೆಯವರತ್ತ ಚಪ್ಪಲಿಯನ್ನು ತೂರಿದರು.

ಇಲ್ಲಿ ಯಡಿಯೂರಪ್ಪನವರಿಗಿರುವ ಒಂದು ಅನಾನುಕೂಲ ವೆಂದರೆ ಅವರಿಗೆ ಬಿಜೆಪಿ ಹೈಕಮಾಂಡ್‍ನಲ್ಲಿ ತಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಬಹುದಾದ ಯಾವುದೇ ನಾಯಕರಿಲ್ಲ ದಿರುವುದು. ಬಿಜೆಪಿ ಹೈಕಮಾಂಡ್‍ನ ಭಾಗವಾದ ಅನಂತ ಕುಮಾರ್‍ರವರು, ಮುಖ್ಯಮಂತ್ರಿ ಖುರ್ಚಿಯನ್ನು ಗಿಟ್ಟಿಸಿಕೊಳ್ಳಲು ಅನೇಕ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಅನಂತ ಕುಮಾರ್ ರವರ ದಾಳಗಳನ್ನು ಗಮನಿಸುತ್ತಿದ್ದ್ದರೆ, ಈ ತಂತ್ರಗಳು ಇನ್ನೂ ಮುಂದುವರೆಯುವ ಎಲ್ಲಾ ಸೂಚನೆಗಳು ಕಾಣಸಿಗುತ್ತವೆ.

ಕರ್ನಾಟಕದಲ್ಲಿ ಬಿಜೆಪಿ ಬೀಜವನ್ನು ಬಿತ್ತಿದವರು ಬಂಗಾರಪ್ಪ ನವರು ಎಂದು ಹೇಳಬಹುದಾದರೂ, ಅದನ್ನು ಉಳಿಸಿ, ಬೆಳೆಸಿದವರು ಯಡಿಯೂರಪ್ಪನವರು ಎಂಬುದನ್ನು ಬಿಜೆಪಿ ಹೈಕಮಾಂಡ್ ಮರೆಯಬಾರದು. ಹಾಗಾಗಿ ರಾಜ್ಯದಲ್ಲಿ ಮತ್ತೆ ಕಮಲ ಅರಳಬೇಕಾದರೆ, ಬಿಜೆಪಿ ನಾಯಕರು ಯಡಿಯೂರಪ್ಪ ನವರನ್ನು ಲಘುವಾಗಿ ಕಾಣುವುದನ್ನು ಮೊದಲು ನಿಲ್ಲಿಸಬೇಕು. ಇಲ್ಲದಿದ್ದರೆ, ಬಿಜೆಪಿಯು ನಿರಂತರವಾಗಿ ಜೆಡಿಎಸ್ ಆಶ್ರಯ ಅನಿವಾರ್ಯವಾಗಬಹುದು. ಈ ಈ ಆಶ್ರಯ 2007ರಲ್ಲಿ ಆದಂತೆ ಕುತ್ತಾಗಲೂಬಹುದು.

e-mail: [email protected]

Translate »