ಮೈಸೂರಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಸ್‍ಪಿಪಿಐ, ಪಕ್ಷೇತರರು ಪಾದಯಾತ್ರೆ ಮೂಲಕ ಮತಯಾಚನೆ
ಮೈಸೂರು

ಮೈಸೂರಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಸ್‍ಪಿಪಿಐ, ಪಕ್ಷೇತರರು ಪಾದಯಾತ್ರೆ ಮೂಲಕ ಮತಯಾಚನೆ

April 28, 2018

ಮೈಸೂರು:  ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಹಾಗೂ ಪಕ್ಷೇತರರು ಶುಕ್ರವಾರ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದರು. ಬಿರು ಬಿಸಿಲಿನಲ್ಲೂ ಬೆವರು ಸುರಿಸಿ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮತದಾರರ ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಕೃಷ್ಣರಾಜ ಕ್ಷೇತ್ರ: ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಎಸ್.ಎ.ರಾಮದಾಸ್, ಶುಕ್ರವಾರ 15ನೇ ವಾರ್ಡ್ ವ್ಯಾಪ್ತಿಯ ವಿವೇಕಾನಂದನಗರದ ವಿವೇಕಾನಂದ ವೃತ್ತದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಇಂದಿನ ಪಾದಯಾತ್ರೆಗೆ ಚಾಲನೆ ನೀಡಿದರು. ಬಳಿಕ ವಿವೇಕಾನಂದ ವೃತ್ತದ ಸುತ್ತಲಿನ ಪ್ರದೇಶದಲ್ಲಿ ಪಾದಯಾತ್ರೆ ನಡೆಸಿ ಮತ ಯಾಚಿಸಿದರು. ಸಂಜೆಯ ನಂತರ ಶ್ರೀರಾಂಪುರ ಬಡಾವಣೆಯ ವಿವಿಧ ಪ್ರದೇಶಗಳಲ್ಲಿ ಪಾದಯಾತ್ರೆ ನಡೆಸಿದರು. ಈ ಸಂದರ್ಭದಲ್ಲಿ ಕಾರ್ಪೊರೇಟರ್‍ಗಳಾದ ಸೀಮಾಪ್ರಸಾದ್, ವನಿತಾ ಪ್ರಸನ್ನ, ಜಗದೀಶ್, ಮುಖಂಡರಾದ ಪ್ರಸಾದ್, ಶಶಿಕಿರಣ್, ಮೋಹನ್, ಗಿರೀಶ್, ಉಮೇಶ್, ಮನು ಹೊಯ್ಸಳ, ಮನೋಸ್,ದಾಸಇನ್ನಿತರರು ಪಾಲ್ಗೊಂಡಿದ್ದರು.

ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಎ.ರಾಮದಾಸ್ ವಿವೇಕಾನಂದನಗರದ ವಿವಿಧ ಕಡೆಗಳಲ್ಲಿ ಮತಯಾಚನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಾದಯಾತ್ರೆ ಸಂದರ್ಭದಲ್ಲಿ ತಾವು ಹೋದ ಕಡೆಯಲ್ಲೆಲ್ಲಾ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜನರು ಆದರದಿಂದ ಬರಮಾಡಿಕಕೊಂಡು ಮತ ನೀಡುವ ಭರವಸೆ ನೀಡುತ್ತಿದ್ದಾರೆ. ಕಳೆದ ಬಾರಿ ಕೆಜೆಪಿ-ಬಿಜೆಪಿ ಅಭ್ಯರ್ಥಿಗಳಿದ್ದರಿಂದ ನಮ್ಮ ಮತಗಳು ವಿಭಜನೆಗೊಂಡಿದ್ದರಿಂದ ಸೋಲುಂಟಾಗಿತ್ತು. ಈ ಬಾರಿ ಪರಿಸ್ಥಿತಿ ಬದಲಾಗಿದೆ. ಭಾರೀ ಅಂತರದಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು.

ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಎಂ.ಕೆ.ಸೋಮಶೇಖರ್ ಕ್ಷೇತ್ರ ವ್ಯಾಪ್ತಿಯ ಇಟ್ಟಿಗೆಗೂಡು ಸುತ್ತಮುತ್ತಲಿನ ಪ್ರದೇಶದಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೂ ತೆರಳಿ ಕರಪತ್ರ ನೀಡಿ ಮತಯಾಚಿಸಿದರು. ಈ ಸಂದರ್ಭದಲ್ಲಿ ನಗರಪಾಲಿಕೆ ಮಾಜಿ ಸದಸ್ಯ ಸತ್ಯಪ್ಪ, ಮುಖಂಡರಾದ ಸಿದ್ದಲಿಂಗಣ್ಣ, ಬ್ಲಾಕ್ ಅಧ್ಯಕ್ಷ ಸೋಮಶೇಖರ್ ಇನ್ನಿತರರು ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಅವರು, ಇಟ್ಟಿಗೆಗೂಡು ವ್ಯಾಪ್ತಿಯಲ್ಲಿ ಒಳಚರಂಡಿ 1.5 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ. ಅರಮನೆ ಎದುರಿನ ರಸ್ತೆಯನ್ನು ವಿಶಾಲ ರಸ್ತೆಯಾಗಿ ಪರಿವರ್ತಿಸಿದ್ದು, ಈ ವ್ಯಾಪ್ತಿಯ ಶೆ.85-90ರಷ್ಟು ಸಮಸ್ಯೆ ಪರಿಹರಿಸಲಾಗಿದೆ. ಅಲ್ಲದೆ ಮೃಗಾಲಯದ ಬಳಿ ಎಲ್ಲರ ಮನೆಗಳ ಮುಂದೆ ವಾಹನಗಳು ನಿಲ್ಲುತ್ತಿದ್ದ ಬಗ್ಗೆ ನಿವಾಸಿಗಳು ಹಾಗೂ ಅಂಗಡಿಗಳವರಿಂದ ದೂರುಗಳಿದ್ದ ಹಿನ್ನೆಲೆಯಲ್ಲಿ ದೊಡ್ಡಕೆರೆ ಮೈದಾನದಲ್ಲಿ ಮೃಗಾಲಯಕ್ಕೆ ಬರುವ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿಕೊಡಲಾಯಿತು. ಇದರಿಂದ ನಿವಾಸಿಗಳಿಗೆ, ವ್ಯಾಪಾರಸ್ತರು ಹಾಗೂ ಸಾರ್ವಜನಿಕರ ಓಡಾಟಕ್ಕೆ ಆಗುತ್ತಿದ್ದ ಸಮಸ್ಯೆ ಪರಿಹಾರವಾದಂತಾಗಿದೆ. ಇದನ್ನು ಮನಗಂಡು ಈ ಭಾಗದ ಜನತೆ ಮತ್ತೊಮ್ಮೆ ತಮಗೆ ಆಶೀರ್ವದಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಎಂ.ಕೆ.ಸೋಮಶೇಖರ್, ಇಟ್ಟಿಗೆಗೂಡು ಸುತ್ತಮುತ್ತ ಪಾದಯಾತ್ರೆ ಮೂಲಕ ಮತ ಯಾಚಿಸಿದರು.

ಜೆಡಿಎಸ್ ಅಭ್ಯರ್ಥಿ, ನಗರಪಾಲಿಕೆ ಸದಸ್ಯ ಕೆ.ವಿ.ಮಲ್ಲೇಶ್ ಅವರು ವಿದ್ಯಾರಣ್ಯಪುರಂ ವ್ಯಾಪ್ತಿಯ ಹಲವು ಕಡೆ ಪಾದಯಾತ್ರೆ ನಡೆಸಿ, ಮತಯಾಚಿಸಿದರು. ಈ ವೇಳೆ ಬಿಜೆಪಿ ಮುಖಂರಾದ ಹೆಚ್.ವಿ.ರಾಜೀವ್ ಅವರ ಮನೆಗೂ ತೆರಳಿ, ಬೆಂಬಲ ಕೋರಿದರು.

ಚಾಮರಾಜ ಕ್ಷೇತ್ರ: ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ವಾಸು, ಕೆ.ಟಿ.ಸ್ಟ್ರೀಟ್‍ನ ಅಕ್ಕಿ ಚೌಕ ಸುತ್ತಮುತ್ತ ಪಾದಯಾತ್ರೆ ಮೂಲಕ ಮತ ಯಾಚಿಸಿದರು. ಅವರೊಂದಿಗೆ ಮಾಜಿ ಮೇಯರ್‍ಗಳಾದ ಬಿ.ಕೆ.ಪ್ರಕಾಶ್, ಮೊದಾಮಣ ಇನ್ನಿತರರು ಇದ್ದರು.

ಚಾಮರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಾಸು ಕೆ.ಟಿ.ಸ್ಟ್ರೀಟ್, ಅಕ್ಕಿ ಚೌಕ ಸುತ್ತಮುತ್ತ ಮತಯಾಚಿಸಿದರು. ಮಾಜಿ ಮೇಯರ್‍ಗಳಾದ ಬಿ.ಕೆ.ಪ್ರಕಾಶ್, ಮೋದಾಮಣಿ ಇನ್ನಿತರರು ಚಿತ್ರದಲ್ಲಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಪ್ರೊ.ಕೆ.ಎಸ್.ರಂಗಪ್ಪ ಮಂಡಿಮೊಹಲ್ಲಾ ವ್ಯಾಪ್ತಿಯ ಹಲವು ರಸ್ತೆಗಳಲ್ಲಿ ಮತಯಾಚಿಸಿದರು. ಹಲವು ಕಡೆಗಳಲ್ಲಿ ಮತದಾರರು ಅವರಿಗೆ ಭವ್ಯ ಸ್ವಾಗತ ನೀಡಿ ಮತ ನೀಡುವ ಭರವಸೆ ನೀಡುತ್ತಿದ್ದರು. ನಗರಪಾಲಿಕೆ ಸದಸ್ಯರಾದ ಎಸ್‍ಬಿಎಂ ಮಂಜು, ರಮಣ ಇನ್ನಿತರರು ಉಪಸ್ಥಿತರಿದ್ದರು.

ಚಾಮರಾಜ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಪ್ರೊ.ಕೆ.ಎಸ್.ರಂಗಪ್ಪ, ಮಂಡಿಮೊಹಲ್ಲಾ ವ್ಯಾಪ್ತಿಯಲ್ಲಿ ಪಾದಯಾತ್ರೆ ಮೂಲಕ ಮತ ಯಾಚಿಸಿದರು. ಪಾಲಿಕೆ ಸದಸ್ಯ ಎಸ್‍ಬಿಎಂ ಮಂಜು, ರಮಣಿ ಇತರರು ಇದ್ದಾರೆ.

ಪಕ್ಷೇತರ ಅಭ್ಯರ್ಥಿ ಕೆ.ಹರೀಶ್‍ಗೌಡ ಅವರು, ಒಂಟಿಕೊಪ್ಪಲ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಒಂಟಿಕೊಪ್ಪಲ್‍ನ 10 ಅಡ್ಡರಸ್ತೆಗಳಲ್ಲಿಯೂ ಪಾದಯಾತ್ರೆ ಮೂಲಕ ಮತ ಯಾಚಿಸಿದರು. ಮಂಡಿಮೊಹಲ್ಲಾದ ಸುಲ್ತಾನ್ ಪಾರ್ಕ್ ರಸ್ತೆಯಲ್ಲಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಅಬ್ಬಾಸ್, ಸೈಫ್, ಇಬ್ರಾಹಿಂ, ಫರತ್, ವಿಜಿ, ಕುಮಾರ್, ಮಹೇಶ್ ಇನ್ನಿತರರು ಹಾಜರಿದ್ದರು.

ನರಸಿಂಹರಾಜ ಕ್ಷೇತ್ರ: ನರಸಿಂಹರಾಜ ಬಿಜೆಪಿ ಅಭ್ಯರ್ಥಿ, ನಗರಪಾಲಿಕೆ ಸದಸ್ಯ ಎಸ್.ಸತೀಶ್ (ಸಂದೇಶ್ ಸ್ವಾಮಿ) ಅವರು ಶುಕ್ರವಾರ ಪಕ್ಷದ ಮುಖಂಡರು, ಬೆಂಬಲಿಗರೊಂದಿಗೆ ವೀರನಗೆರೆ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, 41ನೇ ವಾರ್ಡ್‍ನ ವೀರನಗೆರೆ ಹಾಗೂ 44ನೇ ವಾರ್ಡ್‍ನ ಬನ್ನಿಮಂಟಪ, ಹನುಮಂತನಗರ , ವ್ಯಾಪ್ತಿಯಲ್ಲಿ ಪಾದಯಾತ್ರೆ ಮೂಲಕ ಮತಯಾಚಿಸಿದರು. ಈ ಸಂದರ್ಭದಲ್ಲಿ ಸಂಸದ ಪ್ರತಾಪ್‍ಸಿಂಹ, ಪಾಲಿಕೆ ಸದಸ್ಯ ನಂದೀಶ್ ಪ್ರೀತಂ, ಸು.ಮುರಳಿ ಇನ್ನಿತರರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

ಎಸ್‍ಡಿಪಿಐ ಅಭ್ಯರ್ಥಿ ಅಬ್ದುಲ್ ಮಜಿದ್, ಮಂಡಿಮೊಹಲ್ಲಾದ ವಿವಿಧ ರಸ್ತೆಗಳಲ್ಲಿ ಪಾದಯಾತ್ರೆ ಮೂಲಕ ಮತಯಾಚಿಸಿದರು. ಇವರೊಂದಿಗೆ ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್, ರಾಜ್ಯ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, ಉಪಾಧ್ಯಕ್ಷ ದೇವನೂರು ಪುಟ್ಟಸ್ವಾಮಯ್ಯ, ನಗರಪಾಲಿಕೆ ಸದಸ್ಯ ಎಸ್.ಸ್ವಾಮಿ, ಮುಖಂಡರಾದ ಪ್ರಥಮ ಚಕ್ರವರ್ತಿ, ಚೇತನ್, ಆಲೂರು ಮಲ್ಲಣ್ಣ ಇನ್ನಿತರರು ಭಾಗವಹಿಸಿದ್ದರು.

ನರಸಿಂಹರಾಜ ಕ್ಷೇತ್ರದ ನೂರಾರು ಕಾಂಗ್ರೆಸ್ ಮತ್ತು ಬಿಜೆಪಿ ಮಹಿಳಾ ಕಾರ್ಯಕರ್ತರು ಶುಕ್ರವಾರ ಉದಯಗಿರಿಯ ಆರ್.ಕೆ.ಕನ್ವೆನ್ಷನ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಅಜೀಜ್ ಅವರ ಸಮ್ಮುಖದಲ್ಲಿ ಜೆಡಿಎಸ್‍ಗೆ ಸೇರ್ಪಡೆಯಾದರು.

ಚಾಮುಂಡೇಶ್ವರಿ ಕ್ಷೇತ್ರ: ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಶಾಸಕ ಜಿ.ಟಿ.ದೇವೇಗೌಡ ಅವರು ಶುಕ್ರವಾರ ಮೈಸೂರಿನ ನ್ಯಾಯಾಲಯದ ಆವರಣದ ಬಾರ್ ಅಸೋಸಿಯೇಷನ್‍ಗೆ ತೆರಳಿ ವಕೀಲರ ಮತಯಾಚಿಸಿದರು.

ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಶಾಸಕ ಜಿ.ಟಿ.ದೇವೇಗೌಡ ಅವರು ಮೈಸೂರಿನ ನ್ಯಾಯಾಲಯದ ಆವರಣದಲ್ಲಿನ ಬಾರ್ ಅಸೋಸಿಯೇಷನ್‍ಗೆ ತೆರಳಿ, ವಕೀಲರ ಮತ ಯಾಚಿಸಿದರು.

ಕಾಂಗ್ರೆಸ್ ಅಭ್ಯರ್ಥಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಕ್ಷೇತ್ರದಲ್ಲಿ ಆಯಾ ಭಾಗದ ಮುಖಂಡರು ಮನೆ ಮನೆಗೆ ಪಾದಯಾತ್ರೆಯಲ್ಲಿ ತೆರಳಿ ಮತ ಯಾಚಿಸುತ್ತಿದ್ದಾರೆ. ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ನೇತೃತ್ವದಲ್ಲಿ ರಾಮಕೃಷ್ಣನಗರ ಇ ಅಂಡ್ ಎಫ್ ಬ್ಲಾಕ್, ಕನಕದಾಸನಗರ, ದಟ್ಟಗಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾದಯಾತ್ರೆ ಕೈಗೊಂಡು ಮತಯಾಚಿಸಿದರು. ಇವರೊಂದಿಗೆ ಪಕ್ಷದ ಮುಖಂಡರಾದ ಬಿಎಸ್‍ಎನ್‍ಎಲ್ ಮಾದೇಗೌಡ, ಬಸವೇಗೌಡ, ಚಂದ್ರು, ಯಶವಂತ್, ಹರೀಶ್, ಕೊಪ್ಪಲ್ ದಿನೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಹೋದಲ್ಲೆಲ್ಲಾ ಜನರೇ ಸಿದ್ದರಾಮಯ್ಯ ಪರ ಮಾತುಗಳಾಡುತ್ತಿದ್ದರು. ಅನ್ನಭಾಗ್ಯ, ವಿದ್ಯಾಸಿರಿ, ಕ್ಷೀರಭಾಗ್ಯ ಸೇರಿದಂತೆ ಇನ್ನಿತರ ಯೋಜನೆಗಳನ್ನು ನೀಡಿರುವ ಸಿದ್ದರಾಮಯ್ಯರ ಪರ ಒಲವು ಎಲ್ಲಡೆ ವ್ಯಕ್ತವಾಗುತ್ತಿದೆ ಎಂದು ಮಂಜುಳಾ ಮಾನಸ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ನೇತೃತ್ವದಲ್ಲಿ ಹಲವು ಮುಖಂಡರು ರಾಮಕೃಷ್ಣನಗರ ಇ ಅಂಡ್ ಎಫ್ ಬ್ಲಾಕ್, ಕನಕದಾಸನಗರ ಇನ್ನಿತರ ಕಡೆಗಳಲ್ಲಿ ಪಾದಯಾತ್ರೆ ಮೂಲಕ ಸಿದ್ದರಾಮಯ್ಯ ಪರ ಮತಯಾಚಿಸಿದರು.

Translate »