ಎನ್‍ಟಿಎಂ ಶಾಲೆ ಉಳಿಸಿ, ತೈಲ ದರ ಇಳಿಸಿ, ವಿದ್ಯಾರ್ಥಿಗಳಿಗೆ ಲಸಿಕೆ, ಮೇಕೆದಾಟು ಯೋಜನೆಗಾಗಿ ಪ್ರತಿಭಟನೆ
ಮೈಸೂರು

ಎನ್‍ಟಿಎಂ ಶಾಲೆ ಉಳಿಸಿ, ತೈಲ ದರ ಇಳಿಸಿ, ವಿದ್ಯಾರ್ಥಿಗಳಿಗೆ ಲಸಿಕೆ, ಮೇಕೆದಾಟು ಯೋಜನೆಗಾಗಿ ಪ್ರತಿಭಟನೆ

July 8, 2021

ಮೈಸೂರು, ಜು.7(ಆರ್‍ಕೆಬಿ)-ಎನ್‍ಟಿಎಂ ಶಾಲೆಯೂ ಉಳಿಯಲಿ, ವಿವೇಕ ಸ್ಮಾರಕವೂ ನಿರ್ಮಾಣವಾಗಲಿ, ತೈಲ ದರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಗಟ್ಟಿ, ವಿದ್ಯಾರ್ಥಿಗಳಿಗೆ ಎರಡು ಡೋಸ್ ಲಸಿಕೆ ನೀಡುವವರೆಗೆ ತರಗತಿ, ಪರೀಕ್ಷೆಗಳನ್ನು ನಡೆಸಬಾರದು, ಮೇಕೆದಾಟು ಯೋಜನೆ ಕಾರ್ಯಗತಗೊಳಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಬುಧವಾರ ಮೈಸೂರಿನಲ್ಲಿ ಪ್ರತ್ಯೇಕ ಪ್ರತಿಭಟನೆಗಳನ್ನು ನಡೆಸಿದವು.
ಎನ್‍ಟಿಎಂ ಶಾಲೆ ಉಳಿಸಿ, ವಿವೇಕ ಸ್ಮಾರಕವನ್ನೂ ನಿರ್ಮಿಸಲಿ ಎನ್‍ಟಿಎಂ ಶಾಲೆ ಉಳಿಸಿ, ವಿವೇಕ ಸ್ಮಾರಕವನ್ನು ನಿರ್ಮಿಸಲಿ ಎಂದು ಆಗ್ರಹಿಸಿ ಭಾರತೀಯ ವಿದ್ಯಾರ್ಥಿ ಸಂಘ (ಬಿವಿಎಸ್) ಕಾರ್ಯಕರ್ತರು ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಎನ್‍ಟಿಎಂ ಶಾಲೆ ಎದುರು ಪ್ರತಿಭಟನೆ ನಡೆಸಿದರು.

ಬಿವಿಎಸ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಗತಿಪರ ಚಿಂತಕ ಪ.ಮಲ್ಲೇಶ್, ಕನ್ನಡ ಕ್ರಿಯಾ ಸಮಿತಿಯ ಸ.ರ. ಸುದರ್ಶನ, ಮಾಜಿ ಮೇಯರ್ ಪುರುಷೋತ್ತಮ್, ಸೋಸಲೆ ಸಿದ್ದರಾಜು, ಡಾ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿ ಭಟನೆಯಲ್ಲಿ ಯಾವುದೇ ಕಾರಣಕ್ಕೂ ಐತಿಹಾಸಿಕ ಎನ್‍ಟಿಎಂ ಶಾಲೆಯನ್ನು ಕೆಡವಲು ಅವಕಾಶ ನೀಡಬಾರದು. ಶಾಲೆಯೂ ಉಳಿದು, ವಿವೇಕ ಸ್ಮಾರಕವೂ ನಿರ್ಮಾಣವಾಗಲಿ ಎಂದು ಆಗ್ರಹಿಸಿದರು. ಇದಕ್ಕೆ ವಿರುದ್ಧವಾಗಿ ನಡೆದುಕೊಂಡರೆ ವಿವಿಧ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಬೇಕಾಗು ತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ರೈತಸಂಘದ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಜಿ.ಪಿ.ಬಸವರಾಜು, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ನಿವೃತ್ತ ಪ್ರಾಧ್ಯಾಪಕ ಪಿ.ವಿ.ನಂಜರಾಜ ಅರಸು, ಕರ್ನಾಟಕ ಕಾವಲುಪಡೆ ರಾಜ್ಯಾಧ್ಯಕ್ಷ ಮೋಹನ್‍ಕುಮಾರ್‍ಗೌಡ, ಪ್ರಭುಸ್ವಾಮಿ, ಮುಖಂಡರಾದ ಅರವಿಂದ ಶರ್ಮ, ಯಮುನಾ, ಬೋಗಾದಿ ಸಿದ್ದೇಗೌಡ, ಗಣೇಶ್‍ಮೂರ್ತಿ, ಬೆಟ್ಟೇಗೌಡ, ಹೊಸಳ್ಳಿ ಶಿವು, ಸಿದ್ದಲಿಂಗಪ್ಪ, ಬಿ.ಪಂಪಾಪತಿ ಇನ್ನಿತರರು ಉಪಸ್ಥಿತರಿದ್ದರು.

Translate »