ಏಪ್ರಿಲ್ ಮಾಸದಲ್ಲಿ ತೆರಿಗೆ ಪಾವತಿಗೆ ನೀಡುವ  ಶೇ.5ರಷ್ಟು ವಿನಾಯಿತಿ ಇನ್ನೂ 3 ತಿಂಗಳಿಗೆ ವಿಸ್ತರಿಸಿ
ಮೈಸೂರು

ಏಪ್ರಿಲ್ ಮಾಸದಲ್ಲಿ ತೆರಿಗೆ ಪಾವತಿಗೆ ನೀಡುವ ಶೇ.5ರಷ್ಟು ವಿನಾಯಿತಿ ಇನ್ನೂ 3 ತಿಂಗಳಿಗೆ ವಿಸ್ತರಿಸಿ

April 20, 2021

ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಒತ್ತಾಯ
ಮೈಸೂರು,ಏ.19(ಪಿಎಂ)- ಕೋವಿಡ್ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಪ್ರಸಕ್ತ ಸಾಲಿನಿಂದ ಶೇ.15ರಷ್ಟು ಹೆಚ್ಚಿಸಿರುವ ಆಸ್ತಿ ತೆರಿಗೆಯನ್ನು ಈ ಬಾರಿ ಕೈಬಿಡುವುದು ಒಳ್ಳೆಯದು. ಜೊತೆಗೆ ಪ್ರತಿ ವರ್ಷ ಏಪ್ರಿಲ್ ಮಾಸದಲ್ಲಿ ತೆರಿಗೆ ಪಾವತಿಗೆ ನೀಡುವ ಶೇ.5ರಷ್ಟು ವಿನಾಯಿತಿ ಯನ್ನು ಹೆಚ್ಚುವರಿಯಾಗಿ ಇನ್ನೂ ಮೂರು ತಿಂಗಳಿಗೆ ವಿಸ್ತರಿಸಬೇಕು ಎಂದು ಆಗ್ರಹಿಸಿದ ಮಾಜಿ ಮೇಯರ್ ಬಿ.ಎಲ್.ಭೈರಪ್ಪ, ತೆರಿಗೆ ಸಂಗ್ರಹ ಸಂಬಂಧ ಆಸ್ತಿಗಳ ಸಮೀಕ್ಷೆ ಕಾರ್ಯವನ್ನು ಇನ್ಫೋಸಿಸ್ ಸಂಸ್ಥೆ ಮೂಲಕ ಮಾಡಿಸಬೇಕೆಂದು ಒತ್ತಾಯಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಜನರಲ್ಲಿ ಆರ್ಥಿಕ ಸಮಸ್ಯೆ ಎದುರಾಗಿದೆ. ಹೀಗಾಗಿ ಕಳೆದ ಸಾಲಿನಂತೆ ಈ ಬಾರಿಯೂ ಮೂರು ತಿಂಗಳ ಕಾಲ ಅವಕಾಶ ನೀಡಬೇಕು. ಅಲ್ಲದೆ, ಕೋವಿಡ್ ಸಂಕಷ್ಟದ ಕಾರಣ ಶೇ.15ರಷ್ಟು ತೆರಿಗೆ ಹೆಚ್ಚಳವನ್ನು ಮುಂದಿನ ಸಾಲಿಗೆ ಮುಂದೂಡುವ ಸಂಬಂಧ ಪರಿಶೀಲಿಸಬೇಕು ಎಂದು ಕೋರಿದರು.

ಆಸ್ತಿಗಳ ಸಮೀಕ್ಷೆ ವ್ಯವಸ್ಥಿತವಾಗಿ ಮಾಡಿಲ್ಲ. ಈ ಕಾರಣಕ್ಕೆ ತೆರಿಗೆ ನಿರ್ಧರಿಸುವಲ್ಲಿ ಹಲವು ವ್ಯತ್ಯಾಸಗಳಾಗುತ್ತಿವೆ. ಹೀಗಾಗಿ ಆಸ್ತಿಗಳ ಸಮೀಕ್ಷೆ ಕಾರ್ಯವನ್ನು ಇನ್ಫೋಸಿಸ್ ಸಂಸ್ಥೆ ಮೂಲಕ ಮಾಡಿಸಲು ಪಾಲಿಕೆ ಕ್ರಮ ವಹಿಸಬೇಕು. ಇದರಿಂದ ನಿಖರವಾಗಿ ಆಸ್ತಿಗಳ ಅಳತೆ ಸಾಧ್ಯವಾಗಲಿದೆ. ಈ ಸಂಸ್ಥೆ ಮೂಲಕ ಸಮೀಕ್ಷೆ ಮಾಡಿಸಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರಲ್ಲದೆ, ಸಾವಿರ ಚದರ ಅಡಿ ನಿವೇಶನ ದಲ್ಲಿ ಮನೆ ಹೊರತಾಗಿ ಉಳಿಕೆ ಜಾಗಕ್ಕೂ ತೆರಿಗೆ ವಿಧಿಸಲು ಮುಂದಾಗಲಾಗಿದೆ. ಇದು ಗಾಳಿ-ಬೆಳಕಿಗೆ ತೆರಿಗೆ ಕಟ್ಟಿದಂತೆ. ಇದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ತೆರಿಗೆ ಹೆಚ್ಚಳ ಮಾಡದಿದ್ದರೆ ಅನುದಾನ ನೀಡುವುದಿಲ್ಲ ಎಂದು ಸರ್ಕಾರ ಬೆದರಿಕೆ ಹಾಕಿದೆ. ಹೀಗಾಗಿ ಪಾಲಿಕೆ ಸದಸ್ಯರು ಒಲ್ಲದ ಮನಸ್ಸಿನಿಂದ ಒಪ್ಪಿಕೊಳ್ಳಬೇಕಾಯಿತು ಎಂದು ಮಾಜಿ ಮೇಯರ್ ಹಾಗೂ ಪಾಲಿಕೆ ಸದಸ್ಯ ಅಯೂಬ್ ಖಾನ್ ಹೇಳಿಕೆ ನೀಡಿದ್ದಾರೆ. ಇದು ಸರಿಯಲ್ಲ. ಏಕೆಂದರೆ ವಿಧಾನಸಭೆಗೆ ಅಧಿಕಾರ ಇರುವಂತೆಯೇ ಸ್ಥಳೀಯ ಸಂಸ್ಥೆಯಾಗಿ ಪಾಲಿಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಲು ಅವಕಾಶವಿದೆ. ಹೀಗಾಗಿ ತೆರಿಗೆ ಹೆಚ್ಚಳದ ಕ್ರಮ ಸಂಬಂಧ ಮರು ಪರಿಶೀಲನೆಗೆ ಆಗ್ರಹಿಸಬಹುದಿತ್ತು ಎಂದು ಹೇಳಿದರು. ಮುಖಂಡ ಕೃಷ್ಣಮೂರ್ತಿ ಗೋಷ್ಠಿಯಲ್ಲಿದ್ದರು.

Translate »