ಡಿಕೆಶಿಗೆ ಸಿಎಂ ಸ್ಥಾನಕ್ಕಾಗಿ ಒಕ್ಕಲಿಗ ಮಠಾಧೀಶರ ಆಗ್ರಹ
News

ಡಿಕೆಶಿಗೆ ಸಿಎಂ ಸ್ಥಾನಕ್ಕಾಗಿ ಒಕ್ಕಲಿಗ ಮಠಾಧೀಶರ ಆಗ್ರಹ

May 15, 2023

ಬೆಂಗಳೂರು, ಮೇ 14-ಬೆಂಗಳೂರಿನ ವಿಜಯನಗರ ಆದಿಚುಂಚನಗಿರಿ ಮಠದಲ್ಲಿ ಒಕ್ಕಲಿಗ ಸ್ವಾಮೀಜಿಗಳು ಹಾಗೂ ಮುಖಂಡರ ಸಭೆ ನಡೆದಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ಸಭೆಯಲ್ಲಿ ಹಾಜರಿದ್ದ ಮಾಗಡಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಅವರಿಗೆ ಈ ಸಭೆಯ ನಿರ್ಣಯವನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ತಿಳಿಸುವಂತೆ ಸೂಚಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಆದಿಚುಂಚನಗಿರಿ ಶ್ರೀಗಳಾದ ನಿರ್ಮಲಾನಂದನಾಥ ಸ್ವಾಮೀಜಿ, ಇದು ಬ್ಯಾನರ್ ಇಲ್ಲದ ಕಾರ್ಯಕ್ರಮ. ಇಲ್ಲಿನ ವಿಷಯ ಏನು ಎಂಬುದು ಅಷ್ಟೇ ಮುಖ್ಯ ಎಂದರಲ್ಲದೆ, ನಮ್ಮವರೇ ವ್ಯಕ್ತಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷವನ್ನು ಮೇಲೆ ಎತ್ತಿ ಅಧಿಕಾರ ಹಿಡಿಯುವಂತೆ ಮಾಡಿದ್ದಾರೆ. ಸಂಪ್ರದಾಯದಂತೆ ಮನೆಯ ಯಜಮಾನ ಯಾರಿರುತ್ತಾರೋ ಅವರೇ ರಾಜ್ಯವನ್ನು ಮುನ್ನಡೆಸುತ್ತಾರೆ. ಹಾಗೆ ಮುನ್ನಡೆಸಿಕೊಂಡು ಹೋಗಿ ಎಂಬುದು ನಮ್ಮ ಆಶಯ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷರಾದವರೇ ಮುಖ್ಯ ಮಂತ್ರಿ ಆಗಬೇಕು ಎಂಬುದನ್ನು ಪರೋಕ್ಷವಾಗಿ ಹೇಳಿದರು.

ಎಲ್ಲಾ ಮಾನದಂಡಗಳನ್ನು ಆಧರಿಸಿ ಮುಖ್ಯಮಂತ್ರಿಯಾಗಲು ಡಿ.ಕೆ.ಶಿವಕುಮಾರ್ ಅರ್ಹರಾಗಿದ್ದಾರೆ. ಸೋನಿಯಾಗಾಂಧಿ, ಸಿದ್ದರಾಮಯ್ಯ ಮತ್ತು ಖರ್ಗೆ ಅವರೂ ಕೂಡ ಡಿಕೆಶಿ ಅವರಿಗೆ ಸಿಎಂ ಸ್ಥಾನ ಕೊಡುತ್ತಾರೆ ಎಂದು ಭಾವಿಸಿದ್ದೇವೆ. ಶ್ರಮ ಪಟ್ಟವರಿಗೆ ಫಲ ಸಿಗಬೇಕು. ಪಕ್ಷದ ಅಧ್ಯಕ್ಷರಾದವರನ್ನು ಮುಖ್ಯಮಂತ್ರಿ ಮಾಡಬೇಕು. ಹಾಗೆ ಮಾಡುತ್ತಾರೆ ಎಂದು ಭಾವಿಸುತ್ತೇವೆ. ಸಹಜವಾಗಿ ಡಿಕೆಶಿ ಅವರಿಗೆ ಸ್ಥಾನ ಸಿಗಲಿ. ನಾಳೆ ಅವರ ಹುಟ್ಟುಹಬ್ಬವಿದ್ದು, ಅವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಸಿಎಂ ಸ್ಥಾನ ಸಿಗಲಿ ಎಂದರು.

ಇದೇ ಸಮಯದಲ್ಲಿ ಮಾತನಾಡಿದ ಸ್ಪಟಿಕಪುರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ, ನಾವು ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರಿಗೆ ಹೇಗೆ ಬೆಂಬಲವಾಗಿ ನಿಂತೆವೋ ಅದೇ ರೀತಿ ಡಿ.ಕೆ.ಶಿವಕುಮಾರ್ ಅವರಿಗೂ ಕೂಡ ಬೆಂಬಲವಾಗಿ ನಿಲ್ಲಬೇಕು ಎಂದರು. ಎಸ್.ಎಂ.ಕೃಷ್ಣ ಅವರ ನಂತರ ನಮ್ಮ ಸಮುದಾಯಕ್ಕೆ ದೊಡ್ಡ ಆಡಳಿತಾವಧಿ ಸಿಕ್ಕಿಲ್ಲ. ಹೆಚ್.ಡಿ.ಕುಮಾರಸ್ವಾಮಿ ಮತ್ತು ಡಿ.ವಿ. ಸದಾನಂದಗೌಡರಿಗೆ ಅಲ್ಪಾವಧಿ ಅವಕಾಶ ಮಾತ್ರ ಸಿಕ್ಕಿದೆ. ಕುಮಾರಸ್ವಾಮಿ ಎರಡು ಅವಕಾಶಗಳಲ್ಲಿ ಜನರ ಮೇಲೆ ತೆರಿಗೆ ಹೇರದೇ ರೈತರ ಸಾಲ ಮನ್ನಾ ಮಾಡಿದ್ದರು. ಕೆಂಗಲ್ ಹನುಮಂತಯ್ಯ ಏಕೀಕರಣಕ್ಕಾಗಿ ಹೋರಾಟ ನಡೆಸಿದ್ದರು. ಬೆಂಗಳೂರಿಗೆ ಕಾವೇರಿ ನೀರು ತಂದಿದ್ದು ಹೆಚ್.ಡಿ. ದೇವೇ ಗೌಡರು. ಬೆಂಗಳೂರಿನ ಅಭಿವೃದ್ಧಿಗೆ ಎಸ್.ಎಂ.ಕೃಷ್ಣ ಸಾಕಷ್ಟು ಕೊಡುಗೆ ನೀಡಿದ್ದಾರೆ. ಸದಾನಂದಗೌಡ ಸಕಾಲ ಮತ್ತು ಎತ್ತಿನಹೊಳೆ ಯೋಜನೆ ಕೊಟ್ಟಿದ್ದಾರೆ. ಇಂತಹ ಶ್ರೇಷ್ಠ ಸಮು ದಾಯದಲ್ಲಿ ನಾವು ಹುಟ್ಟಿದ್ದೇವೆ. ಕುಮಾರಸ್ವಾಮಿ ಮುಖ್ಯಮಂತ್ರಿ ಯಾದಾಗ ಡಿಕೆಶಿ ಒಬ್ಬ ಕಾರ್ಯಕರ್ತನ ರೀತಿ ಕೆಲಸ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ
ನೋವು ಕೊಟ್ಟಷ್ಟು ಬೇರೆ ಯಾರಿಗಾದರೂ ಕೊಟ್ಟಿದ್ದರೆ ಅವರು ಭೂಮಿಯ ಮೇಲೆ ಇರುತ್ತಿರಲಿಲ್ಲ ಅನ್ನಿಸುತ್ತದೆ. ಡಿ.ಕೆ.ಶಿವಕುಮಾರ್ ಎಲ್ಲಾ ನೋವುಗಳನ್ನೂ ಉಂಡಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರಾಗೂ ಇದ್ದಾರೆ. ಇಷ್ಟೆಲ್ಲಾ ತ್ಯಾಗ ಮಾಡಿರುವ ಅವರಿಗೆ ಯಾಕೆ ಮುಖ್ಯಮಂತ್ರಿ ಸ್ಥಾನ ಕೊಡಬಾರದು ಎಂಬುದು ನಮ್ಮ ಪ್ರಶ್ನೆ. ಡಿಕೆಶಿ ಅವರನ್ನು ಮುಖ್ಯಮಂತ್ರಿ ಮಾಡಬೇಕು. ಇದು ಈ ಸಭೆಯ ನಿರ್ಣಯ. ಈ ನಿರ್ಣಯ ವನ್ನು ಶಾಸಕ ಬಾಲಕೃಷ್ಣ ಅವರು ಶಾಸಕಾಂಗ ಸಭೆಯಲ್ಲಿ ತಿಳಿಸಬೇಕು ಎಂದರು.

Translate »