ಒಮಿಕ್ರಾನ್ ಭೀತಿ
News

ಒಮಿಕ್ರಾನ್ ಭೀತಿ

November 28, 2021

ಬೆಂಗಳೂರು, ನ.27(ಕೆಎಂಶಿ)-ಕೋವಿಡ್‍ನ ಹೊಸ ರೂಪಾಂ ತರಿ ಒಮಿಕ್ರಾನ್ ವೈರಾಣುವಿನ ಹರಡುವಿಕೆಗೆ ಸಂಬಂ ಧಿಸಿದಂತೆ ಎಲ್ಲ ಬಗೆಯ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ. ಕೋವಿಡ್ ಲಸಿಕೆಯನ್ನು ಎಲ್ಲರೂ ಪಡೆಯುವುದರೊಂದಿಗೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದಕ್ಷಿಣ ಆಫ್ರಿಕಾ, ಬೋಟ್ಸ್ವಾನ, ಇಸ್ರೇಲ್, ಹಾಂಗ್‍ಕಾಂಗ್ ಮೊದಲಾದ ದೇಶಗಳಲ್ಲಿ ಕಳೆದೊಂದು ವಾರದಿಂದ ಕೋವಿಡ್ ಹೊಸ ರೂಪಾಂತರಿ ವೈರಾಣು ಕಾಣಿಸಿದೆ. ಆದರೆ ರಾಜ್ಯದಲ್ಲಿ ಎಲ್ಲೂ ಇದು ಕಂಡು ಬಂದಿಲ್ಲ. ಇದಕ್ಕಾಗಿ ನಿನ್ನೆ ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮ ವಹಿಸಲು ಮಾರ್ಗಸೂಚಿ ರೂಪಿಸಿ ಬಿಡುಗಡೆ ಮಾಡಲಾಗಿದೆ. ಹೊಸ ವೈರಾಣು ಕಂಡುಬಂದಿರುವ ದೇಶ ಗಳಿಂದ ರಾಜ್ಯದ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಕೋವಿಡ್ ವರದಿ ತಂದಿದ್ದರೂ ಕೂಡ, ಅವರಿಗೆ ಆರ್‍ಟಿಪಿಸಿಆರ್ ಪರೀಕ್ಷೆ ಮಾಡಲಾಗುವುದು. ಅವರಿಗೆ ನೆಗೆಟಿವ್ ಬಂದರೆ ಮನೆಯಲ್ಲೇ ಒಂದು ವಾರ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುವುದು. ಈ ಸಮಯದಲ್ಲಿ ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗು ವುದು. 7 ದಿನಗಳ ಬಳಿಕ ಮತ್ತೆ ಪರೀಕ್ಷೆ ಮಾಡಲಾಗುವುದು. ಅವರಿಗೆ ರೋಗದ ಲಕ್ಷಣ ಕಂಡುಬಂದರೆ ಆಸ್ಪತ್ರೆಗೆ ದಾಖಲಿಸಲಾಗುವುದು. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು. ವಿಮಾನ ನಿಲ್ದಾಣಗಳಲ್ಲಿ ಕ್ರಮ ವಹಿಸುವ ಬಗ್ಗೆ ಮಾರ್ಗಸೂಚಿ ನೀಡಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳನ್ನೂ ಅಲ್ಲಿ ನಿಯೋಜಿಸಲಾಗಿದೆ. ಹೊಸ ವೈರಾಣು ಹರಡುವ ವೇಗ ಹೆಚ್ಚಿದೆ. ಆದರೆ ಇದರ ತೀವ್ರತೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆತಂಕಪಡಬೇಕಿಲ್ಲ. ಎಲ್ಲರೂ ಎರಡು ಡೋಸ್ ಕೊರೊನಾ ಲಸಿಕೆ ಪಡೆಯ ಬೇಕು ಎಂದರು.

Translate »