ಮೈಸೂರು, ಜೂ.25(ಎಂಕೆ)- ಉದ್ಘಾ ಟನೆ ದಿನವೇ 1 ಗ್ಲಾಸ್ ಕುಡಿಯುವ ನೀರು ಬರಲಿಲ್ಲ… ಮನೆ ಮುಂದೆಯೇ ಘಟಕವಿದ್ದರೂ ನೀರಿಗಾಗಿ ಅಲೆದಾಟ ತಪ್ಪುತ್ತಿಲ್ಲ… ಜನರ ತೆರಿಗೆ ದುಡ್ಡನ್ನು ಹಾಳು ಮಾಡುವುದೆಂದರೆ ಹೀಗೆ ತಾನೇ?…
ಮೈಸೂರಿನ ಶಾರದಾದೇವಿನಗರದ 2ನೇ ಹಂತದ 1ನೇ ಕ್ರಾಸ್‍ನಲ್ಲಿರುವ ಪಾರ್ಕ್ ಆವರಣದಲ್ಲಿ ಆರ್.ಧರ್ಮಸೇನ 2017-18ನೇ ಸಾಲಿನ ವಿಧಾನ ಪರಿಷತ್ ಸದಸ್ಯರ ಅನುದಾನದಡಿ 11.25 ಲಕ್ಷ ರೂ. ವೆಚ್ಚ ದಲ್ಲಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಗೊಂಡು 3-4 ತಿಂಗಳಿಗೇ ನಿರುಪಯುಕ್ತವಾಗಿದೆ!
ಲಕ್ಷಾಂತರ ರೂ. ಹಣ ಖರ್ಚು ಮಾಡಿ ನಿರ್ಮಿಸಿದ ಕುಡಿಯುವ ನೀರಿನ ಘಟಕ ಸಂಪೂರ್ಣ ಹಾಳಾಗಿದ್ದು, ಕಿಟಕಿ ಗಾಜು ಒಡೆದಿವೆ, ನೀರಿನ ಪೈಪ್‍ಗಳು ಮುರಿದು ಬಿದ್ದಿವೆ. ನೀರಿನ ಘಟಕ ಪಾರ್ಕ್‍ನ ಒಳ ಭಾಗದಲ್ಲಿ ರುವುದರಿಂದ ಉದುರಿದ ಮರದ ಎಲೆಗಳು ಹಾಗೂ ಕಸದ ರಾಶಿಯಿಂದಾಗಿ ತಿರುಗಾ ಡುವುದಕ್ಕೂ ಹಿಂಜರಿಯುವ ಸ್ಥಿತಿ ಇದೆ.
ಬಿಂದಿಗೆ ನೀರೂ ಬಂದಿಲ್ಲ: ಮೈಸೂರಿನ ಪ್ರಮುಖ ಬಡಾವಣೆಗಳಲ್ಲಿ ಶಾರದಾದೇವಿ ನಗರವೂ ಒಂದಾಗಿದ್ದು, ಸಾವಿರಾರು ಜನರು ಇಲ್ಲಿ ವಾಸವಿದ್ದಾರೆ. ಇಲ್ಲಿನ ನಿವಾಸಿಗಳು ಇಂದಿಗೂ ಕುಡಿಯುವ ನೀರಿಗಾಗಿ ಬೇರೆ ಬಡಾವಣೆಗಳಿಗೆ ಅಲೆದಾಟ ತಪ್ಪಿಲ್ಲ. ಕಳೆದ ವರ್ಷ ಶುದ್ಧ ಕುಡಿಯುವ ನೀರಿನ ಘಟಕದ ಕಾಮಗಾರಿ ಪೂರ್ಣಗೊಂಡು ಮಾರ್ಚ್ ತಿಂಗಳಿನಲ್ಲಿ ಉದ್ಘಾಟನೆ ಗೊಂಡಿದ್ದರೂ ಒಂದು ಬಿಂದಿಗೆಯಷ್ಟು ನೀರೂ ಬಂದಿಲ್ಲ ಎಂದು ಸ್ಥಳಿಯ ನಿವಾಸಿ ಸುಬ್ರಹ್ಮಣ್ಯ ‘ಮೈಸೂರು ಮಿತ್ರ’ನಲ್ಲಿ ದೂರಿದರು.
ನಮ್ಮ ಮನೆಯ ಮುಂದೆಯೇ ನೀರಿನ ಘಟಕ ವಿದ್ದರೂ ಬೇರೆ ಬಡಾವಣೆಗೆ ನೀರಿನ ಕ್ಯಾನ್ ಹಿಡಿದು ಹೋಗಬೇಕಾಗಿದೆ. ಉದ್ಘಾಟನೆಯ ದಿನ ಘಟಕದ ಸ್ವಿಚ್ ಆನ್ ಮಾಡಿದಾಗ ಶುದ್ಧ ನೀರಿನ ಬದಲಾಗಿ ಮಾಮೂಲಿ ನೀರೇ ಬಂತು. ಸಾರ್ವಜನಿಕ ರಿಗಾಗಿ ಮಾಡುವ ಕಾಮಗಾರಿಗಳದ್ದೆಲ್ಲಾ ಇದೇ ರೀತಿ ಅಲ್ಲವೇ? ಎಂದು ಬೇಸರ ವ್ಯಕ್ತಪಡಿಸಿದರು.
ಜನರ ದುಡ್ಡಲ್ಲವೇ: ಇದು ಜನರ ತೆರಿಗೆ ದುಡ್ಡಲ್ಲವೇ, ಅವರ ಸ್ವಂತದ್ದೇನೂ ಅಲ್ಲ ವಲ್ಲ. ಸಾರ್ವಜನಿಕರ ಕಣ್ಣಿಗೆ ಮಣ್ಣೆರಚುವ ಕೆಲಸವೆಂದರೆ ಇದೇ. ತಮ್ಮ ಫೋಟೊ ಹಾಕಿಸಿಕೊಂಡು ತೋರಿಸಲಷ್ಟೇ ಅಭಿವೃದ್ಧಿ ಹೆಸರಿನಲ್ಲಿ ಈ ರೀತಿ ಕಳಪೆ ಕಾಮಗಾರಿ ಗಳನ್ನು ಮಾಡಿಸಿ, ಜನರ ಕಷ್ಟವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ ಎಂದು ನಿವಾಸಿ ಬಸವರಾಜು ಬೇಸರ ವ್ಯಕ್ತಪಡಿಸಿದರು. ನೀರಿನ ಘಟಕ ಸರಿಪಡಿಸಿ ಎಂದು ಐದಾರು ಬಾರಿ ಎಂಎಲ್‍ಸಿ ಆರ್.ಧರ್ಮಸೇನ ಹಾಗೂ ಸ್ಥಳೀಯ ನಗರ ಪಾಲಿಕೆ ಸದಸ್ಯ ರಿಗೂ ಮನವಿ ಮಾಡಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ. ಲಾಕ್‍ಡೌನ್ ಸಂದರ್ಭ ನೀರಿಗಾಗಿ ಪರದಾಡುವಂತಾಗಿತ್ತು. ಶಾರದಾ ದೇವಿನಗರದಿಂದ ರಾಮಕೃಷ್ಣನಗರ, ಬೋಗಾದಿ, ಕುವೆಂಪುನಗರ ಇನ್ನಿತರೆಡೆ ಖಾಲಿ ಕ್ಯಾನ್ ಹಿಡಿದು ಅಲೆದಾಡಿದ್ದೇವೆ ಎಂದು ಅಳಲು ತೋಡಿಕೊಂಡರು.