ಸಿಎಂ ಕುಟುಂಬ ಖಾಸಗಿ ವಿಮಾನದಲ್ಲಿ ಮಾರಿಷಸ್ ಪ್ರವಾಸ: ಯತ್ನಾಳ್ ‘ಯಕ್ಷಪ್ರಶ್ನೆ!’
ಮೈಸೂರು

ಸಿಎಂ ಕುಟುಂಬ ಖಾಸಗಿ ವಿಮಾನದಲ್ಲಿ ಮಾರಿಷಸ್ ಪ್ರವಾಸ: ಯತ್ನಾಳ್ ‘ಯಕ್ಷಪ್ರಶ್ನೆ!’

February 16, 2021

ಬೆಂಗಳೂರು, ಫೆ.15(ಕೆಎಂಶಿ)-ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬ ಖಾಸಗಿ ವಿಮಾನದಲ್ಲಿ ಮಾರಿಷಸ್‍ಗೆ ಹೋಗಿದ್ದಾದರೂ ಏತಕ್ಕೆ, ಅಲ್ಲಿ ಹಣ ಹೂಡಲು ಹೋಗಿದ್ದರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ. ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಬಿಜೆಪಿ ವರಿಷ್ಠರು ಶೋಕಾಸ್ ನೋಟೀಸ್ ಜಾರಿ ಮಾಡಿದ್ದರೂ ಅದನ್ನು ಕ್ಯಾರೆ ಎನ್ನದ ಯತ್ನಾಳ್, ಮುಖ್ಯಮಂತ್ರಿ ವಿರುದ್ಧ ಇಂದೂ ಹರಿಹಾಯ್ದಿ ದ್ದಾರೆ. ಯಡಿಯೂರಪ್ಪ ಕುಟುಂಬದವರು ಆಡಳಿತದಲ್ಲಿ ಹಸ್ತಕ್ಷೇಪ ಮಾಡಿ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಟ್ಟಿದ್ದಾರೆ ಎಂಬ ಆರೋಪಗಳ ಮಧ್ಯೆಯೇ, ಇವರ ಕುಟುಂಬ ಮಾರಿಷಸ್‍ಗೆ ಹೋಗಿದ್ದಾದರೂ ಏಕೆ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಮುಕ್ತವಾಗಿ ಕೆಲಸ ಮಾಡಲು ಪುತ್ರ ಬಿ.ವೈ.ವಿಜಯೇಂದ್ರ ಅವಕಾಶ ಮಾಡಿಕೊಡುತ್ತಿಲ್ಲ. ಅವರು ತಂದೆಯ ಹೆಸರನ್ನು ಹಾಳು ಮಾಡುತ್ತಿದ್ದಾರೆ. ಕುಟುಂಬದ ಹಸ್ತಕ್ಷೇಪದಿಂದಲೇ ಮುಖ್ಯ ಮಂತ್ರಿ ಅವರೂ ಬದಲಾಗಲಿದ್ದಾರೆ. ವಿಜಯೇಂದ್ರ ಅವರ ಕೈಕಾಲು ಒತ್ತುವವರಿಗೆ ನಿಗಮ -ಮಂಡಳಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಪಕ್ಷದ ನಿಷ್ಠಾವಂತರನ್ನು ಕಡೆಗಣಿಸಿದ್ದಾರೆ. ತಮಗೆ ಆಗದವರ ವಿರುದ್ಧ ಅಪಪ್ರಚಾರ ನಡೆಸಲು ವಿಜಯೇಂದ್ರರ ಬಳಿ ನಕಲಿ ಸಿಡಿ ತಯಾರಿಸುವ ದೊಡ್ಡ ಗುಂಪೇ ಇದೆ. ಯಡಿಯೂರಪ್ಪ ಪ್ರತಿಪಕ್ಷದ ನಾಯಕರಾಗಿದ್ದಾಗ, ಗನ್‍ಮ್ಯಾನ್ ಹೊರತುಪಡಿಸಿ, ಅವರ ಕುಟುಂಬದವರ್ಯಾರೂ ಹತ್ತಿರ ಸುಳಿಯುತ್ತಿರಲಿಲ್ಲ, ಅವರು ಸಿಎಂ ಆಗುತ್ತಿದ್ದಂತೆ ಇಡೀ ಕುಟುಂಬ ನಿವಾಸ ಸೇರಿಬಿಟ್ಟಿದೆ. ಯಡಿಯೂರಪ್ಪ ಪಕ್ಷ ಕಟ್ಟುವಾಗ ಅವರ ಕಾರಿಗೆ ನಾನು ಪೆಟ್ರೋಲ್ ಹಾಕಿಸಿದ್ದೇನೆ. ಆದರೆ, ಮುಖ್ಯಮಂತ್ರಿ ಆದ ನಂತರ ಪುತ್ರ ವ್ಯಾಮೋಹ ಪರಾಕಾಷ್ಠೆ ತಲುಪಿದೆ ಎಂದು ಯತ್ನಾಳ್ ದೂರಿದ್ದಾರೆ.

 

Translate »