ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ಮೇರೆಗೆ ರಾಜ್ಯದ ಗಡಿಯಲ್ಲಿ ಕಟ್ಟೆಚ್ಚರ
ಮೈಸೂರು

ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ಮೇರೆಗೆ ರಾಜ್ಯದ ಗಡಿಯಲ್ಲಿ ಕಟ್ಟೆಚ್ಚರ

June 28, 2021

ಮೈಸೂರು, ಜೂ.27(ಎಂಟಿವೈ)-ರೂಪಾಂತರಿ ಡೆಲ್ಟಾ ಪ್ಲಸ್ ವೈರಸ್ ಪತ್ತೆ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್ ನೀಡಿರುವ ಎಚ್ಚರಿಕೆಯ ಮೇರೆಗೆ ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಉಭಯ ರಾಜ್ಯಗಳ ಗಡಿ ಬಾವಲಿ ಚೆಕ್ ಪೋಸ್ಟ್‍ನಲ್ಲಿ ಆರ್‍ಟಿಪಿಸಿಆರ್ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ರಾಜ್ಯ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ.

ತೀವ್ರ ಸ್ವರೂಪದ ದುಷ್ಪರಿಣಾಮ ಬೀರುತ್ತಿರುವ ರೂಪಾಂ ತರಿ ಡೆಲ್ಟಾ ಪ್ಲಸ್ ವೈರಸ್ ವೇಗವಾಗಿ ಹರಡುತ್ತಿದ್ದು, ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದ್ದರೆ, ಜನರಲ್ಲಿ ಆತಂಕ ಮೂಡಿಸಿದೆ. ಈ ಹಿನ್ನೆಲೆ ಡೆಲ್ಟಾಪ್ಲಸ್ ಪತ್ತೆಯಾಗಿರುವ ಕರ್ನಾ ಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಗುಜರಾತ್, ಹರಿಯಾಣ, ಪಂಜಾಬ್ ಮತ್ತು ಜಮ್ಮು-ಕಾಶ್ಮೀರ್ ರಾಜ್ಯಗಳ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಡೆಲ್ಟಾ ಪ್ಲಸ್ ವೈರಸ್ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರಿಗೆ ಕೇಂದ್ರದ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್ ಬರೆದಿರುವ ಪತ್ರದ ಮೇರೆಗೆ ನೆರೆ ರಾಜ್ಯದ ಗಡಿ ಯಲ್ಲಿ ತೀವ್ರ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿರುವು ದರಿಂದ ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಿದೆ.

ಮೈಸೂರು-ಹೆಚ್.ಡಿ.ಕೋಟೆ-ಬಾವಲಿ-ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಉಭಯ ರಾಜ್ಯಗಳ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪ್ರಸ್ತುತ ನೆರೆ ರಾಜ್ಯಗಳಿಗೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ ಹಣ್ಣು-ತರಕಾರಿ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಸಾಗಾಟಕ್ಕೆ ವಿನಾಯಿತಿ ನೀಡಲಾಗಿದೆ. ಕೇವಲ ಸರಕು ವಾಹನಗಳಷ್ಟೇ ಉಭಯ ರಾಜ್ಯಗಳ ನಡುವೆ ಸಂಚರಿಸು ತ್ತಿರುವುದರಿಂದ ಕೇರಳದಿಂದ ಹೆಚ್.ಡಿ.ಕೋಟೆ ಮಾರ್ಗವಾಗಿ ಕರ್ನಾಟಕ ಪ್ರವೇಶಿಸುವವರ ಮೇಲೆ ಬಾವಲಿ ಚೆಕ್‍ಪೋಸ್ಟ್ ನಲ್ಲಿಯೇ ತಪಾಸಣೆಗೊಳಪಡಿಸಲಾಗುತ್ತಿದೆ.
ನೆಗೆಟಿವ್ ವರದಿ ಕಡ್ಡಾಯ: ಹಣ್ಣು-ತರಕಾರಿ, ದಿನಸಿ ಸೇರಿ ದಂತೆ ಸರಕು ಸಾಗಾಣಿಕೆಯ ವಾಹನಗಳ ಚಾಲಕರು, ಕ್ಲೀನರ್ ಸೇರಿದಂತೆ ಯಾರೇ ಬಂದರೂ 24 ಗಂಟೆಯೊಳಗೆ ಪ್ರಕಟವಾಗಿರುವ ಆರ್‍ಟಿಪಿಸಿಆರ್ ನೆಗೆಟಿವ್ ವರದಿಯನ್ನು ಬಾವಲಿ ಚೆಕ್‍ಪೋಸ್ಟ್‍ನಲ್ಲಿ ತೋರಿಸಬೇಕು. ಬಾವಲಿ ಚೆಕ್‍ಪೋಸ್ಟ್‍ನಲ್ಲಿ ಡಿ.ಬಿ.ಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರ ಶುಶ್ರೂಷಕಿ ಸಿ.ಮಮತಾ, ಆಶಾ ಕಾರ್ಯಕರ್ತೆ ಮಂಜುಳಾ, ಅಂಗನವಾಡಿ ಕಾರ್ಯಕರ್ತೆ ಎಂ.ಪುಷ್ಪಾ ಒಳಗೊಂಡ ಆರೋಗ್ಯ ಕಾರ್ಯಕರ್ತರು ತಪಾಸಣಾ ಕಾರ್ಯದಲ್ಲಿ ತೊಡಗಿದ್ದು, ಕರುಣಾ ಟ್ರಸ್ಟ್ ಆರೋಗ್ಯ ಕಾರ್ಯಕರ್ತರಿಗೆ ನೆರವಾಗುತ್ತಿದೆ. ಅಲ್ಲದೇ ಈ ತಂಡದಲ್ಲಿ ಪೊಲೀಸ್ ಸಿಬ್ಬಂದಿ, ಅರಣ್ಯ ಸಿಬ್ಬಂದಿಯೂ ಇರುವುದರಿಂದ ಗಡಿ ದಾಟುವ ಮುನ್ನವೇ ಚೆಕ್‍ಪೋಸ್ಟ್ ಬಳಿ ವಾಹನ ನಿಲ್ಲಿಸಿ, ವಾಹನದಲ್ಲಿರುವವರು ಆರೋಗ್ಯ ಕಾರ್ಯಕರ್ತರ ಕೌಂಟರ್ ಬಳಿ ಬಂದು ತಮ್ಮ ಹೆಸರು, ಮೊಬೈಲ್ ಸಂಖ್ಯೆ, ಎಲ್ಲಿಂದ ಎಲ್ಲಿಗೆ ಹೋಗುತ್ತಿರುವ ಬಗ್ಗೆ ಮಾಹಿತಿಯನ್ನು ನಮೂದಿಸಬೇಕು. ಅಲ್ಲದೇ ಆರ್‍ಟಿಪಿಸಿಆರ್ ನೆಗೆಟಿವ್ ವರದಿಯನ್ನು ತೋರಿಸಬೇಕು. ನೋಂದಣಿ ಮಾಡಿಕೊಂಡ ನಂತರವಷ್ಟೇ ಗಡಿ ದಾಟಲು ಅವಕಾಶ ನೀಡಲಾಗುತ್ತದೆ. ಯಾರು ನೆಗೆಟಿವ್ ವರದಿ ತೋರಿಸುವುದಿಲ್ಲವೋ ಅಂತಹವರನ್ನು ಮುಲಾಜಿಲ್ಲದೇ ವಾಪಸ್ ಕಳುಹಿಸಲಾಗುತ್ತದೆ.

ಪ್ರಯಾಣಿಕರ ವಾಹನಗಳಿಗೆ ಸದ್ಯಕ್ಕೆ ಅನುಮತಿ ಇಲ್ಲ: ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಕಡಿಮೆ ಇರುವುದರಿಂದ ಅನ್‍ಲಾಕ್ ನಿಯಮ ವನ್ನು ಜಾರಿಗೊಳಿಸಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿನಾಯಿತಿ ನೀಡಲಾಗಿದೆ. ಅಂತರ ಜಿಲ್ಲಾ ಪ್ರಯಾಣಕ್ಕೂ ಅವಕಾಶ ದೊರೆತಿದ್ದರೂ, ಅಂತರ ರಾಜ್ಯದ ಓಡಾಟಕ್ಕೆ ಬ್ರೇಕ್ ಬಿದ್ದಿದೆ. ನೆರೆ ರಾಜ್ಯಗಳಿಂದ ಪ್ರವಾಸಿಗರು ಬರುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. ಜಿಲ್ಲಾ ಕೇಂದ್ರಗಳಿಗೆ ಸಾರಿಗೆ ಸಂಸ್ಥೆಗಳ ಬಸ್ಸುಗಳ ಸಂಚಾರ ಇದ್ದರೂ, ಅಂತರ ರಾಜ್ಯಗಳ ಪ್ರಯಾಣಕ್ಕೆ ಇನ್ನೂ ಗ್ರೀನ್ ಸಿಗ್ನಲ್ ನೀಡಲಾಗಿಲ್ಲ. ಒಂದು ವೇಳೆ ಉಭಯ ರಾಜ್ಯಗಳ ನಡುವೆ ಸಾರಿಗೆ ಸಂಸ್ಥೆ ಬಸ್ ಸಂಚಾರ ಆರಂಭವಾದರೂ, ಪ್ರಯಾಣಿಕರು ಕಡ್ಡಾಯವಾಗಿ ಆರ್‍ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಹೊಂದಿರಬೇಕೆಂಬ ನಿಯಮ ಜಾರಿಗೊಳಿಸುವ ನಿರೀಕ್ಷೆ ಇದೆ.

Translate »