ಚಿಕ್ಕಬಳ್ಳಾಪುರ: ರಾಜ್ಯಾದ್ಯಂತ ವಾರದಲ್ಲಿ ಒಂದು ದಿನ ಕೋವಿಡ್ ಲಸಿಕೆ ಉತ್ಸವ ಆಯೋಜಿಸಲಾಗುವುದು. ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದಕ್ಕೆ ಚಾಲನೆ ನೀಡುವರು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರು ಶನಿವಾರ ಹೇಳಿದ್ದಾರೆ. ಶಿಡ್ಲಘಟ್ಟ ತಾಲೂಕಿನ ಸಾದಲಿ ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆ.೨೭ರವರೆಗೆ ಒಟ್ಟು ೪ ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. `ನಾನು ಮತ್ತು ಮುಖ್ಯಮಂತ್ರಿ ಅವರು ಕೇಂದ್ರ ಆರೋಗ್ಯ ಸಚಿವರನ್ನು ಇತ್ತೀಚೆಗೆ ಭೇಟಿ ಮಾಡಿ ರಾಜ್ಯಕ್ಕೆ ನಿತ್ಯ ೫ ಲಕ್ಷಕ್ಕಿಂತಲೂ ಹೆಚ್ಚು ಡೋಸ್ ಕೋವಿಡ್ ಲಸಿಕೆ ಪೂರೈಸುವಂತೆ ಮನವಿ ಮಾಡಿಕೊಂಡಿದ್ದೇವೆAದು ಹೇಳಿದ್ದಾರೆ. ಪ್ರತಿ ದಿನ ಕನಿಷ್ಠ ೫ ಲಕ್ಷ ಡೋಸ್ ಲಸಿಕೆ ನೀಡುವ ಗುರಿ ಹೊಂದಿ ದ್ದೇವೆ. ವಾರದಲ್ಲಿ ಒಂದು ದಿನ ಲಸಿಕೆ ಉತ್ಸವ ಸಂಘಟಿಸಿ ಅಂದು ೧೫ರಿಂದ ೨೦ ಲಕ್ಷ ಡೋಸ್ ಲಸಿಕೆ ನೀಡುವ ಗುರಿ ಇದೆ’ ಎಂದು ಹೇಳಿದರು. ರಾಜ್ಯಕ್ಕೆ ವಿದೇಶಗಳಿಂದ ಬರುವವರು ಮೊದಲು ಇಳಿಯುವುದೇ ಬೆಂಗಳೂರಿನಲ್ಲಿ. ಆದ್ದರಿಂದ ಲಸಿಕೆ ನೀಡುವ ವಿಚಾರದಲ್ಲಿ ಬೆಂಗಳೂರಿಗೆ ಪ್ರಾಮುಖ್ಯತೆ ನೀಡುತ್ತಿದ್ದೇವೆ. ಬೆಂಗಳೂರಿನಲ್ಲಿ ಒಟ್ಟು ೧.೨೦ ಕೋಟಿ ಜನಸಂಖ್ಯೆ ಇದೆ. ಇದರಲ್ಲಿ ಮಕ್ಕಳನ್ನು ಹೊರತುಪಡಿಸಿದರೆ ೮೦ ಲಕ್ಷ ಜನರು ಲಸಿಕೆ ಪಡೆಯಬಹುದು. ಈಗಾಗಲೇ ಇಲ್ಲಿ ೧ ಕೋಟಿ ಡೋಸ್ ಲಸಿಕೆ ನೀಡಿದ್ದೇವೆ. ಬೆಂಗಳೂರಿನ ಕೊಳೆಗೇರಿಗಳಲ್ಲಿ ಲಸಿಕೆಯನ್ನು ಆಂದೋಲನದ ರೀತಿಯಲ್ಲಿ ನೀಡಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.