ನಂಜನಗೂಡು, ಆ.2(ರವಿ)-ಶಾಲಾ ಆವರಣದಲ್ಲಿ ಮದ್ಯಪಾನ ಮಾಡುವುದು ಬೇಡ ಎಂದು ಬುದ್ಧಿವಾದ ಹೇಳಿದ ವಿಚಾರಕ್ಕೆ ಗುಂಪು ಘರ್ಷಣೆ ನಡೆದು ಓರ್ವ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ತಾಲೂಕಿನ ಮಂಡ್ರಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ. ಗ್ರಾಮದ ಮಹದೇವ (43) ಎಂಬುವರು ಹತ್ಯೆಗೀಡಾಗಿದ್ದು, ವಾಟರ್ ಮನ್ ಲಿಂಗಯ್ಯ (37), ಮೃತನ ಪುತ್ರ ಹೃತೀಕ್ ರೋಷನ್ (19) ಮತ್ತು ಲಿಂಗಯ್ಯ ಅವರ ಸಹೋದರಿಯ ಪುತ್ರ ಚಂದ್ರು (21) ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಲಿಂಗಯ್ಯ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದ್ದು,
ಹೃತೀಕ್ ರೋಷನ್ ಮತ್ತು ಚಂದ್ರು ಅವರನ್ನು ನಂಜನಗೂಡು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಡ್ರಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಪುಂಡರು ಮದ್ಯ ಸೇವನೆ ಮಾಡಿ ಗಲೀಜು ಮಾಡುತ್ತಿದ್ದರು. ಅಲ್ಲದೇ ಶಾಲೆಯ ಒಂದು ಕೊಠಡಿಯಲ್ಲಿ ಪಡಿತರ ಸಾಮಗ್ರಿಗಳನ್ನು ಇಟ್ಟಿದ್ದು, ಸ್ವಲ್ಪ ಇತ್ತ ಗಮನಹರಿಸಿ ಎಂದು ಶಾಲೆಯ ಮುಖ್ಯ ಶಿಕ್ಷಕರು ಗ್ರಾಮದ ವಾಟರ್‍ಮನ್ ಲಿಂಗಯ್ಯ ಅವರಿಗೆ ಹೇಳಿದ್ದರಂತೆ. ಶನಿವಾರ ಮಧ್ಯಾಹ್ನ ಅದೇ ಗ್ರಾಮದ ಮಹದೇವಸ್ವಾಮಿ (21), ನಂಜುಂಡಸ್ವಾಮಿ (20) ಮತ್ತು ಸೋಮ (23) ಎಂಬ ಯುವಕರು ಶಾಲಾ ಆವರಣದಲ್ಲಿ ಮದ್ಯಪಾನ ಮಾಡುತ್ತಿದ್ದುದನ್ನು ಕಂಡ ವಾಟರ್‍ಮನ್ ಲಿಂಗಯ್ಯ, ಶಾಲಾ ಆವರಣದಲ್ಲಿ ಮದ್ಯಪಾನ ಮಾಡದಂತೆ ಬುದ್ಧಿವಾದ ಹೇಳಿದ್ದಾರೆ. ಆದರೆ ಕಳೆದ ವರ್ಷ ಲಿಂಗಯ್ಯ ಅವರ ಸೋದರಿಯ ಪುತ್ರ ಚಂದ್ರು, ಅದೇ ಗ್ರಾಮದ ಯುವತಿಯನ್ನು ಪ್ರೀತಿಸಿದ್ದ ಕಾರಣ ಉಂಟಾಗಿದ್ದ ಘರ್ಷಣೆ ಬಗ್ಗೆ ಪ್ರಸ್ತಾಪಿಸಿ, ಮೂವರು ಯುವಕರು ಲಿಂಗಯ್ಯನವರ ಮೇಲೆ ಹಲ್ಲೆ ಮಾಡಿ ಕಳುಹಿಸಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಲಿಂಗಯ್ಯ ತನ್ನ ದೊಡ್ಡಪ್ಪ ಮಗ ಮಹದೇವ ಅವರಿಗೆ ಈ ವಿಷಯ ತಿಳಿಸಿದ್ದಾರೆ. ಲಿಂಗಯ್ಯ, ಮಹದೇವ, ಹೃತೀಕ್ ರೋಷನ್ ಮತ್ತು ಚಂದ್ರು ಅವರು ಶನಿವಾರ ರಾತ್ರಿ ಮಹದೇವಸ್ವಾಮಿ ಮನೆ ಬಳಿ ತೆರಳಿ ಹಲ್ಲೆ ವಿಚಾರವಾಗಿ ಪ್ರಶ್ನಿಸಿದ್ದಾರೆ ಎನ್ನಲಾಗಿದ್ದು, ಈ ವೇಳೆ ತಿರುಗಿ ಬಿದ್ದ ಮಹದೇವಸ್ವಾಮಿ, ನಂಜುಂಡಸ್ವಾಮಿ ಮತ್ತು ಸೋಮ ಅವರುಗಳು ಚಾಕುವಿನಿಂದ ಇರಿದು ಮಹದೇವ ಅವರನ್ನು ಹತ್ಯೆ ಮಾಡಿದ್ದ ಲ್ಲದೇ, ಉಳಿದ ಮೂವರ ಮೇಲೂ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಲಿಂಗಯ್ಯ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆಗೆ ದಾಖಲಿದ್ದು, ಹೃತೀಕ್ ರೋಷನ್ ಮತ್ತು ಚಂದ್ರುವನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗ್ರಾಮಕ್ಕೆ ಎಎಸ್‍ಪಿ ಶಿವಕುಮಾರ್, ಡಿವೈಎಸ್‍ಪಿ ಪ್ರಭಾಕರ ರಾವ್ ಶಿಂಧೆ, ಸರ್ಕಲ್ ಇನ್ಸ್‍ಪೆಕ್ಟರ್ ಲಕ್ಷ್ಮೀಕಾಂತ ತಳವಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ದೊಡ್ಡ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.