ಉಪಸಮರ ಸಾಧನೆ ಹಿಂದೆಯೇ ‘ಆಪರೇಷನ್ ದೋಸ್ತ್’
ಮೈಸೂರು

ಉಪಸಮರ ಸಾಧನೆ ಹಿಂದೆಯೇ ‘ಆಪರೇಷನ್ ದೋಸ್ತ್’

November 9, 2018

ಬೆಂಗಳೂರು: ಉಪ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದಂತೆ ಬಿಜೆಪಿಯ ಐವರು ಶಾಸಕರು ಮೈತ್ರಿ ಸರ್ಕಾರದ ಪಕ್ಷಗಳಿಗೆ ಸೇರ್ಪಡೆಗೊಳ್ಳಲು ಮುಂದಾಗಿದ್ದಾರೆ.

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ವನ್ನು ಉರುಳಿಸಲು ಆಪರೇಷನ್ ಕಮಲಕ್ಕೆ ಮುಂದಾಗಿದ್ದ ಬಿಜೆಪಿಗೆ ಭಾರೀ ಹೊಡೆತ ನೀಡಲು ಆಪರೇಷನ್ ಜೆಡಿಎಸ್-ಕಾಂಗ್ರೆಸ್ ಜಂಟಿ ಕಾರ್ಯಾಚರಣೆ ಮೊದಲ ಹಂತದಲ್ಲೇ ಯಶಸ್ವಿಯಾ ಗುವ ಸಾಧ್ಯತೆ ಇದೆ. ಕುಮಾರಸ್ವಾಮಿ ತಮ್ಮ ಮಂತ್ರಿಮಂಡಲ ವಿಸ್ತರಣೆಗೂ ಮುನ್ನವೇ ಬಿಜೆಪಿ ಶಾಸಕರು ತಮ್ಮ ಸ್ಥಾನಕ್ಕೆ ರಾಜೀ ನಾಮೆ ನೀಡಿ, ತಮಗೆ ಅನುಕೂಲವಾಗುವ ಪಕ್ಷಗಳಿಗೆ ಸೇರ್ಪಡೆ ಯಾಗುತ್ತಿದ್ದಾರೆ. ಐವರಲ್ಲಿ ಇಬ್ಬರಿಗೆ ಮಂತ್ರಿ ಸ್ಥಾನದ ಅವಕಾಶ ನೀಡುವ ಸಾಧ್ಯತೆ ಇದ್ದು, ಉಳಿದವರಿಗೆ ಸಂಪುಟ ದರ್ಜೆಯ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳನ್ನು ನೀಡುವ ಮಾತುಕತೆಯೂ ಪೂರ್ಣಗೊಂಡಿದೆ. ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಜೆಡಿಎಸ್-ಕಾಂಗ್ರೆಸ್ ಆಪರೇಷನ್ ಹಿಂದೆ ಇದ್ದಾರೆ ಎಂದು ಹೇಳಲಾಗಿದೆ.

ಉಪ ಚುನಾವಣೆ ಮುಗಿಯುತ್ತಿದ್ದಂತೆ ಮೈತ್ರಿಕೂಟದ ಪಕ್ಷಗಳ ಶಾಸಕರು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಾರೆ. ನಮ್ಮ ಸರ್ಕಾರ ರಚನೆಗೆ ದಿನಗಳನ್ನು ಎಣಿಸಬೇಕು ಅಷ್ಟೇ ಎಂದು ಬಿಜೆಪಿ ನಾಯಕರು ಫಲಿತಾಂಶಕ್ಕೂ ಮುನ್ನ ನೀಡಿದ ಹೇಳಿಕೆಯ ಪರಿಣಾಮ ಇದು ಎನ್ನಲಾಗಿದೆ. ಆಪರೇಷನ್ ಕಮಲಕ್ಕೆ ಮುನ್ನವೇ ಮೈತ್ರಿಕೂಟ ಮೊದಲ ಬಾರಿಗೆ ಇಂತಹ ಕಾರ್ಯಾಚರಣೆಗೆ ಮುಂದಾಗಿದೆ. ಬಿಜೆಪಿ ತೊರೆದು, ಉಭಯ ಪಕ್ಷಗಳಿಗೆ ಸೇರ್ಪಡೆಗೊಳ್ಳುತ್ತಿರುವ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಸ್ವಂತ ಬಲದ ಮೇಲೆ ವಿಧಾನ ಸಭೆಗೆ ಆಯ್ಕೆಗೊಳ್ಳುವ ಮಟ್ಟಿಗೆ ಬಲಿಷ್ಠರಾಗಿದ್ದಾರೆ. ಅಲ್ಲದೆ ಉಪ ಚುನಾವಣೆಯಲ್ಲಿ ಮತದಾರರು ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿರುವುದರಿಂದ ಇನ್ನು ಬಿಜೆಪಿ ಸದ್ಯಕ್ಕೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಕಷ್ಟ. ನಾವು ಖಾಲಿ ವಿಧಾನಸಭಾ ಸದಸ್ಯರಾಗಿ ಉಳಿದುಕೊಳ್ಳುವ ಬದಲು ಕುಮಾರಸ್ವಾಮಿ ಸರ್ಕಾರದಲ್ಲಿ ಅಧಿಕಾರ ಪಡೆಯೋಣ ಎನ್ನುವ ಉದ್ದೇಶವೂ ಇದರ ಹಿಂದೆ ಇದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಉಭಯ ಪಕ್ಷಗಳ ಬೆಂಬಲದಿಂದ ಕಣಕ್ಕಿಳಿದರೆ ಮತ್ತೆ ವಿಧಾನಸಭೆ ಪ್ರವೇಶಿಸುತ್ತೇವೆ ಎಂಬ ದೂರ ದೃಷ್ಟಿಯನ್ನಿಟ್ಟುಕೊಂಡು

ಕಾಂಗ್ರೆಸ್-ಜೆಡಿಎಸ್ ಸೇರಲು ಈ ಶಾಸಕರು ಮುಂದಾಗಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಬಿಜೆಪಿ ನಾಯಕರು ಕುಮಾರಸ್ವಾಮಿ ಸರ್ಕಾರ ಪತನಗೊಳಿಸಿ, ಅಧಿಕಾರಕ್ಕೆ ಬರಲು ಕಾಂಗ್ರೆಸ್ ಇಲ್ಲವೆ ಜೆಡಿಎಸ್‍ನ 22 ಸದಸ್ಯರನ್ನು ಸದ್ಯದ ಪರಿಸ್ಥಿತಿಯಲ್ಲಿ ರಾಜೀ ನಾಮೆ ಕೊಡಿಸಬೇಕು. ಅವರು ಇಂತಹ ಕಾರ್ಯಾಚರಣೆಗೆ ಮುಂದಾಗುವುದಕ್ಕೂ ಮುನ್ನವೇ ಏಟಿಗೆ ಎದಿರೇಟು ನೀಡಲು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಮುಂದಾಗಿದ್ದಾರೆ. ಬಿಜೆಪಿ ತೊರೆಯುತ್ತಿರುವ ಸದಸ್ಯರ ಹೆಸರುಗಳನ್ನು ಉಭಯ ಪಕ್ಷದ ನಾಯಕರು ಅತ್ಯಂತ ಗೌಪ್ಯವಾಗಿಟ್ಟಿದ್ದು, ಮುಂದಿನ ವಾರದಲ್ಲಿ ಒಂದು ದಿನ ಏಕಾಏಕಿ ಅವರುಗಳು ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ವಿಧಾನಸಭೆಯಲ್ಲಿ ಬಹುಮತ ಗಳಿಸದಿದ್ದರೂ, ಕೇವಲ 38 ಸ್ಥಾನ ಗಳಿಸಿರುವ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ನಮಗೆ 104 ಸ್ಥಾನಗಳು ಲಭ್ಯವಿದ್ದರೂ, ಸರ್ಕಾರ ರಚಿಸಲು ಸಾಧ್ಯವಾಗುತ್ತಿಲ್ಲ. ಆಪರೇಷನ್ ಕಮಲದ ಮೂಲಕ ಬಲ ಪಡೆದು, ಸರ್ಕಾರ ರಚನೆ ಮಾಡಲೇಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪಣ ತೊಟ್ಟು ಹಲವು ಪ್ರಯತ್ನ ಮಾಡಿದ್ದರು. ಅದರಲ್ಲೂ ಎರಡು ಬಾರಿ ತುಂಬಾ ಸಮೀಪಕ್ಕೆ ತಲುಪಿ ವಿಫಲರಾಗಿದ್ದರು. ಉಪ ಚುನಾವಣೆ ಮುಗಿಯು ತ್ತಿದ್ದಂತೆ ಸರ್ಕಾರ ರಚನೆ ಮಾಡಲೇಬೇಕೆಂದು ಯಡಿಯೂರಪ್ಪ ಮತ್ತು ಬೆಂಬಲಿಗರು ನಿರ್ಧರಿಸಿದ್ದಲ್ಲದೆ, ಅದನ್ನು ಸಾರ್ವಜನಿಕವಾಗಿ ಘೋಷಣೆ ಮಾಡಿದ್ದರು.

ಆದರೆ ಉಪ ಚುನಾವಣೆಯಲ್ಲಿ ಅವರ ನಿರೀಕ್ಷೆಯಂತೆ ಫಲಿತಾಂಶ ಬರಲಿಲ್ಲ. ಇದ್ದ ಸ್ಥಾನವನ್ನು ಕಳೆದುಕೊಂಡಿದ್ದಲ್ಲದೆ, ಗೆದ್ದ ಒಂದು ಸ್ಥಾನದಲ್ಲೂ ಗೆಲುವಿನ ಅಂತರ ತೀವ್ರ ಕಡಿಮೆಯಾಯಿತು. ಮತದಾರರ ತೀರ್ಪಿನ ಅವಲೋಕನದಿಂದ ಹೊರ ಬರುವ ಮುನ್ನವೇ ಯಡಿಯೂರಪ್ಪಗೆ ದೊಡ್ಡ ಆಘಾತ ನೀಡಲು ಕಾಂಗ್ರೆಸ್-ಜೆಡಿಎಸ್ ಮುಂದಾಗಿದೆ. ಫಲಿತಾಂಶದ ನಂತರ ಮೈತ್ರಿ ಕೂಟದ ಪಕ್ಷಗಳ ಶಾಸಕರು ಬಿಜೆಪಿಗೆ ಜಿಗಿಯುವ ಸಾಹಸ ಮಾಡುವುದಿಲ್ಲ. ಇಂತಹ ಸನ್ನಿವೇಶವನ್ನು ಬಳಕೆ ಮಾಡಿಕೊಂಡು ಅವರ ಶಾಸಕರನ್ನೇ ಸೆಳೆಯುವ ಪ್ರಯತ್ನ ಇದಾಗಿದೆ.

Translate »